ADVERTISEMENT

ನುಡಿ ಬೆಳಗು: ಭಾರತದ ಅಸ್ಮಿತೆ

ದೀಪಾ ಹಿರೇಗುತ್ತಿ
Published 4 ಏಪ್ರಿಲ್ 2024, 0:25 IST
Last Updated 4 ಏಪ್ರಿಲ್ 2024, 0:25 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಒಂದು ದಿನ ಮದರ್‌ ಥೆರೆಸಾ ಅವರಲ್ಲಿಗೆ ಓರ್ವ ವ್ಯಕ್ತಿ ಬಂದು ಹೇಳಿದ: ‘ಮದರ್‌, ನಮ್ಮ ಮನೆಯ ಹತ್ತಿರ ಒಂದು ಕುಟುಂಬವಿದೆ, ಅವರಿಗೆ ಎಂಟು ಮಕ್ಕಳು. ನನಗನಿಸುವ ಹಾಗೆ ಅವರು ಕೆಲವು ದಿನಗಳಿಂದ ಉಪವಾಸ ಇದ್ದಾರೆ. ಏನಾದರೂ ಸಹಾಯ ಮಾಡದಿದ್ದರೆ ಪರಿಸ್ಥಿತಿ ಕಷ್ಟವಾಗಬಹುದು’.

ತಕ್ಷಣ ಮದರ್‌ ಥೆರೆಸಾ ಅಕ್ಕಿಯ ಚೀಲ ತೆಗೆದುಕೊಂಡು ಆ ವ್ಯಕ್ತಿ ಹೇಳಿದ ಸ್ಥಳಕ್ಕೆ ಹೋದರು. ಅಕ್ಕಿಯನ್ನು ನೋಡಿ ಆ ಮನೆಯ ಮಕ್ಕಳು ಹಾಗೂ ತಾಯಿಯ ಬಾಡಿದ ಮುಖಗಳು ಅರಳಿದವು, ಕಣ್ಣುಗಳು ಹೊಳೆದವು. ಧನ್ಯವಾದ ಹೇಳಿದ ತಾಯಿ ತಕ್ಷಣ ಅಕ್ಕಿಯನ್ನು ಎರಡು ಪಾಲು ಮಾಡಿ ಒಂದು ಪಾಲನ್ನು ಅಲ್ಲೇ ಇಟ್ಟು ಮತ್ತೊಂದು ಪಾಲನ್ನು ತೆಗೆದುಕೊಂಡು ಲಗುಬಗೆಯಿಂದ ಹೊರಗೆ ಹೋದರು. ಕೆಲ ನಿಮಿಷಗಳ ನಂತರ ಆಕೆ ವಾಪಾಸು ಬಂದಾಗ ಮದರ್‌ ಎಲ್ಲಿ ಹೋಗಿದ್ದೆಂದು ವಿಚಾರಿಸಿದರು. ಆಗ ಆ ತಾಯಿ, ‘ಅವರು ಕೂಡ ಹಸಿದುಕೊಂಡಿದ್ದಾರಲ್ಲ’ ಎಂದರು.

ADVERTISEMENT

ಏನೆಂದು ನೋಡಿದರೆ ತಮ್ಮ ಪಕ್ಕದ ಮನೆಯವರು ಹಸಿದಿದ್ದರೆಂದು ಗೊತ್ತಿದ್ದ ಆ ತಾಯಿ ಅಕ್ಕಿಯಲ್ಲಿ ಅರ್ಧಭಾಗವನ್ನು ಅವರಿಗೆ ತೆಗೆದುಕೊಂಡು ಹೋಗಿ ಕೊಟ್ಟಿದ್ದರು. ಆಕೆ ಅಕ್ಕಿ ಕೊಟ್ಟಿದ್ದು ತನಗೆ ವಿಶೇಷವೆನಿಸಲಿಲ್ಲ, ಆದರೆ ತಾನು ಹೊಟ್ಟೆಗಿಲ್ಲದೇ ಉಪವಾಸ ನರಳುತ್ತಿದ್ದ ಸಂದರ್ಭದಲ್ಲಿಯೂ ಪಕ್ಕದ ಮನೆಯವರು ಹಸಿದಿದ್ದಾರೆ ಎಂದು ಯೋಚನೆ ಮಾಡಿದಳಲ್ಲ ಅದು ವಿಶೇಷ ಎಂದು ಮದರ್‌ ಥೆರೆಸಾ ಒಂದು ಕಾರ್ಯಕ್ರಮದಲ್ಲಿ ಹೇಳುತ್ತಿದ್ದರು. 

ಈ ಘಟನೆಯಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಮದರ್‌ ತೆರೆಸಾ ಸಹಾಯ ಮಾಡಲು ಹೋಗಿದ್ದ ಕುಟುಂಬ ಹಿಂದೂಗಳದ್ದಾಗಿತ್ತು. ಕ್ರೈಸ್ತ ಸಹೋದರಿಯಿಂದ ಸಹಾಯ ಪಡೆದ ಹಿಂದೂ ಮಹಿಳೆ ಅಕ್ಕಿ ಪಾಲು ಮಾಡಿ ತೆಗೆದುಕೊಂಡು ಹೋಗಿದ್ದು ತಮ್ಮ ಪಕ್ಕದ ಮನೆಯ ಮುಸ್ಲಿಂ ಕುಟುಂಬಕ್ಕಾಗಿ. ನಮ್ಮ ಭಾರತ ದೇಶದ ಸೌಂದರ್ಯವಿರುವುದೇ ಇಂತಹ ಸಂಗತಿಗಳಲ್ಲಿ.

ಇಂತಹ ಸಾವಿರಾರು ಘಟನೆಗಳು ನಮ್ಮ ದೇಶದ ಮೂಲೆಮೂಲೆಯಲ್ಲಿ ಕಾಣಸಿಗುತ್ತವೆ. ಶತಶತಮಾನಗಳಿಂದ ನಮ್ಮ ದೇಶದ ಜನರು ವೈವಿಧ್ಯದಲ್ಲಿ ಏಕತೆ ಎಂಬ ಮಾತನ್ನು ಬದುಕುತ್ತಿದ್ದಾರೆ. ಭಾಷೆ, ನಂಬಿಕೆ, ಸಂಸ್ಕೃತಿ, ಆಹಾರ ಪದ್ಧತಿ, ಉಡುಪು ಇತ್ಯಾದಿ ಭಿನ್ನತೆಗಳ ಜತೆಜತೆಯೇ ಸೌಹಾರ್ದಯುತವಾಗಿ ಬಾಳುತ್ತಿರುವುದು ನಮ್ಮ ದೇಶದ ವೈಶಿಷ್ಟ್ಯ. ಸಂಕಷ್ಟದ ಸಂದರ್ಭದಲ್ಲಿ ನಾವು ಹೇಗೆ ಒಗ್ಗೂಡುತ್ತೇವೆಂಬುದಕ್ಕೆ ಬ್ರಿಟಿಷರ ಇನ್ನೂರು ವರ್ಷಗಳ ನಿಷ್ಕರುಣೆಯ ಆಡಳಿತವನ್ನು ಎಲ್ಲರೂ ಒಂದಾಗಿ ವಿರೋಧಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಅತಿದೊಡ್ಡ ಉದಾಹರಣೆಯಾಗಿದೆ. ವೈವಿಧ್ಯದ ಚೆಲುವು ಮತ್ತು ಏಕತೆಯ ಶಕ್ತಿಯೇ ಭಾರತದ ಅಸ್ಮಿತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.