ADVERTISEMENT

ನುಡಿ ಬೆಳಗು: ದಯೆಯಿಲ್ಲದ ಧರ್ಮವು ಆವುದಯ್ಯ?

ರೇಣುಕಾ ನಿಡಗುಂದಿ
Published 10 ಅಕ್ಟೋಬರ್ 2025, 0:08 IST
Last Updated 10 ಅಕ್ಟೋಬರ್ 2025, 0:08 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ವಾರಾಣಸಿಯಲ್ಲಿ ಒಂದೆರಡು ತಿಂಗಳ ಹಿಂದೆ ನಡೆದ ಘಟನೆಯಿದು. 45 ವಯಸ್ಸಿನ ಪ್ಯಾರೇಲಾಲ್ ಲಕ್ವಾಗ್ರಸ್ಥರಾಗಿದ್ದು ಅವರ ಜೀವನೋಪಾಯದ ಹೊಣೆ 22 ವರ್ಷದ ಮಗ ಶಿವಪೂಜನನ ಮೇಲಿತ್ತು. ಮಗ ಈಗ ಟ್ರ್ಯಾಕ್ಟರ್ ನಡೆಸುವುದನ್ನೂ ಕಲಿತು ಠಾಕೂರರ ಬಳಿ ಇಟ್ಟಂಗಿ ಭಟ್ಟಿಗೆ ಮಣ್ಣು ಹಾಕುವ ಕೆಲಸವನ್ನು ಮಾಡತೊಡಗಿದ್ದ. ಅವನಿಗೆ ಮದುವೆಯನ್ನೂ ಗೊತ್ತುಮಾಡಿದ್ದರು. ಮದುವೆಯ ಔತಣಕ್ಕಾಗಿ 100 ಕೆಜಿ. ಕಟ್ಟಿಗೆಯನ್ನೂ ಖರೀದಿಸಿದ್ದ ಪ್ಯಾರೇಲಾಲ್.

ಒಂದು ಸುತ್ತಿಗೆ 25 ರೂಪಾಯಿಯಂತೆ ಇಪ್ಪತ್ತು ಸುತ್ತು ಟ್ರ್ಯಾಕ್ಟರ್ ಓಡಿಸಿದಾಗ ಅವನಿಗೆ ಸಿಗುತ್ತಿದ್ದುದು ಬರೀ 500 ರುಪಾಯಿಗಳು. ಮಣ್ಣಿನ ಲೋಡಿಂಗ್ ಕೆಲಸ ರಾತ್ರಿ ನಡೆಯುವುದರಿಂದ, ಟ್ರಾಕ್ಟರ್ ಮಾಲೀಕರು ಅವನನ್ನು ಇಡೀ ರಾತ್ರಿ ಕೆಲಸ ಮಾಡಿಸಿದರು. ಬೆಳಿಗ್ಗೆ 6ರ ಹೊತ್ತಿಗೆ, ಹಸಿವಾಗಿದ್ದ ಕಾರಣ ಊಟಕ್ಕೆ ಬಿಡಿ ಎಂದು ಕೇಳಿದರೂ, ಮಾಲೀಕರು ಇನ್ನೊಂದು ಸುತ್ತು ಹೊಡೆಯಲು ಹೇಳಿದರು. ಅದೇ ಸುತ್ತು ಅವನ ಜೀವನದ ಕೊನೆಯ ಸುತ್ತಾಯಿತು. ಹಸಿವು ನಿದ್ದೆಯಿಂದ ಬಸವಳಿದಿದ್ದ ಶಿವಪೂಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ. ಮದುವೆಗೆ ಖರೀದಿಸಿದ್ದ ಕಟ್ಟಿಗೆಯನ್ನು ಮಗನ ಚಿತೆಗೆ ಬಳಸಬೇಕಾಗಿದ್ದು ದುರಂತ.

ADVERTISEMENT

ಹೀಗೆ 15 ದಿನದಲ್ಲಿ ಇಬ್ಬರು ಯುವಕರು ಬೇರೆ ಬೇರೆ ಸಂದರ್ಭಗಳಲ್ಲಿ ಮರಣಹೊಂದಿದರು. ಎರಡೂ ಘಟನೆಗಳಲ್ಲಿ ಸಾಮ್ಯವೆಂದರೆ, ಇಬ್ಬರೂ ಯುವಕರು ಟ್ರ್ಯಾಕ್ಟರ್ ಮೂಲಕ ಇಟ್ಟಿಗೆಯ ಭಟ್ಟಿಯಲ್ಲಿ ಮಣ್ಣು ಹೊರುವ ಕೆಲಸ ಮಾಡುತ್ತಿದ್ದರು. ಶಿವಪೂಜನ ತನ್ನ ಮದುವೆಗೆ ಹಣ ಸೇರಿಸಲು ರಾತ್ರಿ ಟ್ರ್ಯಾಕ್ಟರ್ ಓಡಿಸುತ್ತಿದ್ದ. ಇನ್ನೊಬ್ಬ ಮಾಲೀಕರಿಂದ ಸಾಲ ಪಡೆದಿದ್ದರಿಂದ ಅದನ್ನು ತೀರಿಸಲು ದಿನರಾತ್ರಿ ಟ್ರ್ಯಾಕ್ಟರ್ ಓಡಿಸುತ್ತಿದ್ದ. ಮೂಸಹರ್ ಬನವಾಸಿ ಸಮುದಾಯದ ಈ ಇಬ್ಬರು ಯುವಕರು ಬಡತನದೊಂದಿಗೆ ಹೋರಾಡುತ್ತಾ ಕುಟುಂಬದ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದರು.

ಇವು ಕೇವಲ ಘಟನೆಗಳಲ್ಲ. ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ. ಚಂದ್ರ, ಮಂಗಳ ಗ್ರಹಗಳನ್ನು ತಲುಪಿರುವ ಭಾರತದಂತಹ ಅಭಿವೃದ್ಧಿ ಹೊಂದಿದ ದೇಶದಲ್ಲಿ ಈಗಲೂ ಕೆಲವೆಡೆ ಬಡವರು ಒಂದು ಹೊತ್ತಿನ ಊಟಕ್ಕೂ ಬಡಿದಾಡಬೇಕಾದ ಸ್ಥಿತಿಯಿದೆ. ಇಲ್ಲದವರನ್ನು ಶೋಷಿಸುವ, ಅವರನ್ನು ಹುಳು ಹುಪ್ಪಟೆಗಳಿಗಿಂತಲೂ ಕಡೆಯಾಗಿ ಕಾಣುವ ದೊಡ್ಡ ಮನುಷ್ಯರಿದ್ದಾರೆ. ಬಡವರು, ದುರ್ಬಲರು. ಶಕ್ತಿಶಾಲಿಗಳ ಎದುರು ನಿಲ್ಲಲು ಸಾಧ್ಯವಿಲ್ಲ. ಅವರು ಸತ್ತರೂ ಯಾರಿಗೂ ನೋವು ಆಗುವುದಿಲ್ಲ.

ಇಂತಹ ದಯೆಯಿಲ್ಲದ ಜನರನ್ನು ಕುರಿತೇ ಬಸವಣ್ಣನವರು ‘ದಯೆಯಿಲ್ಲದ ಧರ್ಮವು ಆವುದಯ್ಯ’ ಎಂದು ನುಡಿದಿದ್ದಾರೆ. ಸಕಲ ಜೀವಾತ್ಮರಿಗೆ ಲೇಸ ಬಯಸುವವನೇ ಕುಲಜ ಎಂದು ಅರಿತು ನಡೆಯಲಾರದವರನ್ನು ದೇವರೂ ಮೆಚ್ಚುವುದಿಲ್ಲ ಅಲ್ಲವೇ?

ಯುವಕ ಹಸಿವು ಎಂದಾಗ ಅವನಿಗೆ ಊಟಕ್ಕೆ ಬಿಡುವು ಕೊಟ್ಟಿದ್ದರೂ ಸಾಕಿತ್ತು. ಕತ್ತೆಯಂತೆ ರಾತ್ರಿಯಿಡೀ ದುಡಿಸಿಕೊಳ್ಳದೇ ತಮ್ಮಂತೆ ಅವರೂ ಮನುಷ್ಯರು ಎಂದು ದೊಡ್ದಮನಸ್ಸು ಮಾಡಿದ್ದರೂ ಸಾಕಿತ್ತು.

ಮಾನವ ಜೀವನದಲ್ಲಿ ಕರುಣೆ ಒಂದು ಶಾಶ್ವತ ಮೂಲ್ಯ. ಕ್ರಿಸ್ತ, ಬುದ್ಧ, ಗಾಂಧಿ– ಎಲ್ಲರೂ ಕರುಣೆಯನ್ನೇ ಬೋಧಿಸಿದರು. ಧರ್ಮದ ಮೂಲವನ್ನು ದಯೆಯಲ್ಲಿ ಕಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.