ADVERTISEMENT

ನುಡಿ ಬೆಳಗು–113 | ಧನಕನಕ ಸಂಪತ್ತಲ್ಲ!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 20 ಜನವರಿ 2025, 1:20 IST
Last Updated 20 ಜನವರಿ 2025, 1:20 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಐಶ್ವರ್ಯ ಮೂಲ ಲಿಂಗಾರ್ಚನೆ. ಐಶ್ವರ್ಯ ಬರಬೇಕು ಎಂದರೆ ಪೂಜೆ ಮಾಡಬೇಕು ಎನ್ನುತ್ತಾರೆ ಶರಣರು. ‘ಅಯ್ಯೋ, ನಾವು ಎಷ್ಟು ಪೂಜೆ ಮಾಡಿದ್ದೇವೆ. ಆದರೂ ಐಶ್ವರ್ಯ ಬಂದಿಲ್ಲ’ ಎಂದು ಕೇಳ್ತೀರಿ. ಸಂಪತ್ತು ಎಂದರೆ ಯಾವುದು? ಯಾವುದು ನಮಗೆ ಆಪತ್ತು ತರೋದಿಲ್ಲ ಅದು ಸಂಪತ್ತು. ನಮ್ಮ ಸಂಪತ್ತು ನಮಗೆ ಆಪತ್ತು ತಂದಿದೆ. ಒಂದಿಷ್ಟು ಬಂಗಾರ ಹಾಕಿಕೊಂಡು ರಾತ್ರಿ ನಿರ್ಭೀತಿಯಿಂದ ನಡೀತೀರೇನು? ಬಂಗಾರ ನಮ್ಮ ಜೀವಕ್ಕೇ ಮುಳುವಾಗಬಹುದು. ಲಿಂಗಾರ್ಚನೆ ಎಂದರೆ ಯಾವುದೋ ಗುಡಿಯಲ್ಲಿರುವ ಕಲ್ಲು ಲಿಂಗಗಳಿಗೆ ಪೂಜೆ ಮಾಡುವುದಲ್ಲ. ಅಲ್ಲಮಪ್ರಭುಗಳು ಹೇಳುತ್ತಾರೆ, ‘ಲಿಂಗವೆಂಬುದು ಅನಂತದ ಹೆಸರೋ ಗುಹೇಶ್ವರದೆಂಬುದೇನು’ ಅಂತ. ಲಿಂಗ ಅಂದರೆ, ಈ ಅನಂತ ವಿಶ್ವ. ನಮ್ಮ ಕಣ್ಣಿಗೆ ತೋರುವುದೆಲ್ಲವೂ ಲಿಂಗ. ಐಶ್ವರ್ಯ ಗಳಿಸೋದಕ್ಕೆ ಮುಂಚೆ ನಮಗೆ ಬಡತನ ಯಾಕೆ ಬಂತು ಎನ್ನುವುದನ್ನು ತಿಳಕೋಬೇಕು. ನಮಗೆ ಯಾಕೆ ಬಡತನ ಬಂತು ಅಂದರೆ, ನಮ್ಮ ಮುಂದೆ ಇರುವುದೆಲ್ಲವೂ ಸಂಪತ್ತು ಎನ್ನುವುದು ನಮಗೆ ಗೊತ್ತಾಗದೇ ಇರುವುದರಿಂದ ನಮಗೆ ಬಡತನ ಬಂತು. ಬೆಳ್ಳಿ, ಬಂಗಾರ, ದುಡ್ಡು ಇದ್ದರಷ್ಟೇ ಸಂಪತ್ತು ಎಂದು ನಾವು ತಿಳಿದುಕೊಂಡಿರುವುದರಿಂದ ನಮಗೆ ಬಡತನ ಬಂದೈತಿ. ಚಿತ್ತಶುದ್ಧದಲ್ಲಿ ಕಾಯಕವ ಮಾಡುವ ಶರಣಂಗೆ ಎತ್ತೆತ್ತ ನೋಡಿದರಲ್ಲಿ ಲಕ್ಷ್ಮಿ ತಾನಾಗಿರ್ಪಳು. ಕಾಯಕವನ್ನು ಮಾಡುವವನು ಎಲ್ಲದರಲ್ಲಿಯೂ ಸಂಪತ್ತು ಕಾಣುತ್ತಾನೆ. ಭೂಮಿ ಸಂಪತ್ತು. ಗಾಳಿ, ಬೆಳಕು, ನೀರು, ಮಾತು, ತಂದೆ ತಾಯಿ ಎಲ್ಲವೂ ಸಂಪತ್ತು. ಸಂಪತ್ತು ಯಾವುದು ಎಂದು ಗುರುತಿಸುವಲ್ಲಿ ನಾವು ಸೋತಿದ್ದೇವೆ ಅಷ್ಟೆ.

ಒಬ್ಬ ಮಹಾರಾಜ ಇದ್ದ. ಅವನು ಒಂದು ಯುದ್ಧದಲ್ಲಿ ಸಾಕಷ್ಟು ಸುಸ್ತಾಗಿದ್ದ. ಅವನಿಗೆ ಸಾಯುವ ಕಾಲ ಬಂತು. ಆಗ ಒಂದು ಹನಿ ನೀರು ಸಿಕ್ಕಿರಲಿಲ್ಲ. ಅದೇ ಹೊತ್ತಿಗೆ ಒಬ್ಬ ಕೈಯಲ್ಲಿ ನೀರಿನ ಲೋಟ ಇಟ್ಟುಕೊಂಡು ಕುಳಿತಿದ್ದು ಕಂಡು ಅವನಿಗೆ ‘ನೀರು ಕೊಡು’ ಎಂದು ಕೇಳಿದ. ಅದಕ್ಕೆ ಆ ವ್ಯಕ್ತಿ, ‘ನಾನು ನೀರು ಕೊಟ್ಟರೆ ನೀನು ನನಗೆ ಏನು ಕೊಡ್ತಿ?’ ಎಂದು ಕೇಳಿದ. ‘ನೀನು ಅರ್ಧ ಲೋಟ ನೀರು ಕೊಟ್ಟರೆ ನಾನು ನಿನಗೆ ನನ್ನ ಅರ್ಧ ರಾಜ್ಯವನ್ನೇ ಕೊಡ್ತೇನೆ’ ಎಂದ ಮಹಾರಾಜ. ಅದಕ್ಕೆ ಆ ವ್ಯಕ್ತಿ ‘ನೀರು ಕೊಡಲ್ಲ’ ಎಂದ. ‘ನೀನು ನೀರು ಕೊಡದೇ ಇದ್ದರೆ ನಾನು ಸತ್ತೇ ಹೋಗ್ತೀನಿ. ನೀನು ನೀರು ಕೊಟ್ಟರೆ ನನ್ನ ಜೀವಮಾನದಲ್ಲಿ ನಾನು ಗಳಿಸಿದ ರಾಜ್ಯ, ಸಂಪತ್ತು ಎಲ್ಲವನ್ನೂ ನಿನಗೇ ಕೊಡ್ತೀನಿ’ ಅಂದ ಮಹಾರಾಜ. ಆಗ ಆ ವ್ಯಕ್ತಿ ‘ನೀನು ಜೀವಮಾನದಲ್ಲಿ ಗಳಿಸಿದ ಎಲ್ಲ ಆಸ್ತಿಪಾಸ್ತಿಗಿಂತ, ರಾಜ್ಯಗಳಿಗಿಂತ, ಧನಕನಕಗಳಿಗಿಂತ ಅರ್ಧ ಲೋಟ ನೀರು ಹೆಚ್ಚು ಬೆಲೆ ಬಾಳುತ್ತದೆ’ ಎಂದ. ಹೌದು ನೀರು ಸಂಪತ್ತು. ತುಂಗಭದ್ರಾ ನದಿ ಹರೀತಿರತೈತಿ. ಅದಕ್ಕೆ ಭದ್ರಾದಲ್ಲಿ ಡ್ಯಾಂ ಕಟ್ಟಿದರೆ ಭದ್ರಾ ಡ್ಯಾಂ ಅಂತಾರೆ. ಮುನಿರಾಬಾದ್‌ನಲ್ಲಿ ಡ್ಯಾಂ ಕಟ್ಟಿದರೆ, ಮುನಿರಾಬಾದ್ ಡ್ಯಾಂ ಅಂತಾರೆ. ಅಂದರೆ ನದಿ ಯಾರದ್ದೂ ಅಲ್ಲ. ಯಾವ ಊರಲ್ಲಿ ಅದು ಹರಿಯುತ್ತಿರುತ್ತದೆಯೋ ಅದು ಅಲ್ಲಿಯದೇ ಆಗಿರುತ್ತದೆ. ಹಾಗೆಯೇ ಹಣವೂ ಕೂಡ. ಯಾರ ಜೇಬಿನಲ್ಲಿ ಇರುತ್ತದೆಯೋ ಅದು ಅವರದ್ದೇ ಆಗಿರುತ್ತದೆ. ಧನಕನಕ ಎಂದೂ ಸಂಪತ್ತಲ್ಲ ಅನ್ನೋದನ್ನು ತಿಳಕೋಬೇಕು ಮನುಷ್ಯ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.