ನುಡಿ ಬೆಳಗು
ಒಬ್ಬ ಭಕ್ತನಿಗೆ ಅವನ ಆಸೆ ಈಡೇರಿತ್ತು. ಅದಕ್ಕೆ ಅವನು ತನ್ನ ಕುಲದೇವರ ಪ್ರತಿಮೆಯನ್ನು ಮಾಡಿಸಿದ್ದ. ಒಂದು ಕೆ.ಜಿ. ಬಂಗಾರ ಖರ್ಚು ಮಾಡಿ ಪ್ರತಿಮೆ ಮಾಡಿದ್ದ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದ. ಆದರೂ ಅವನಿಗೆ ಅದು ಸುಂದರ ಕಾಣುತ್ತಿಲ್ಲ. ಏನೋ ಕೊರತೆ ಇದೆ ಅನ್ನಿಸಿತು. ಅದಕ್ಕೆ ಏನು ಮಾಡಬೇಕು ಎಂದು ಯೋಚಿಸಿದ. ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಸಿದ್ಧಪಡಿಸಿದ ಮೂರ್ತಿ ಚೆನ್ನಾಗಿ ಕಾಣಲು ಒಂದು ರೂಪಾಯಿ ಕೊಟ್ಟು ತಂದ ಗುಲಾಬಿ ಹೂವನ್ನು ದೇವರ ತಲೆಯ ಮೇಲೆ ಇಟ್ಟ. ಆಗ ಅದು ಸುಂದರವಾಗಿ ಕಾಣಿಸಿತು. ಬಂಗಾರಕ್ಕೆ ಒಂದು ಕೋಟಿ, ಹೂವಿಗೆ ಒಂದು ರೂಪಾಯಿ. ದೇವರೇ ತನ್ನ ತಲೆಯ ಮೇಲೆ ಇಟ್ಟುಕೊಂಡು ಸಂತೋಷಪಡಬೇಕಾದರೆ ಹೂವು ಅಂತಹದ್ದು ಏನು ಮಾಡಿದೆ.
ದಾರಿಯಲ್ಲಿ ಒಬ್ಬ ಯಾತ್ರಿಕ ಬಂದ. ಅಲ್ಲೊಂದು ಹೂವು ನೋಡಿದ. ಹೂವು ನೋಡಿದ್ದಕ್ಕೇ ಅವನಿಗೆ ಸಂತೋಷವಾಯಿತು. ಸಂಜೆ ಒಬ್ಬ ಕವಿ ಬಂದ. ಆ ಹೂವಿನ ಸೌಂದರ್ಯ ನೋಡಿ ಕವನಗಳನ್ನೇ ಬರೆದ. ನಂತರ ಒಂದು ದುಂಬಿ ಬಂತು. ಅದು ಹೂವಿನಲ್ಲಿರುವ ಮಕರಂದ ಹೀರಿತು. ಯಾತ್ರಿಕನಿಂದಾಗಲೀ, ಕವಿಯಿಂದಾಗಲಿ, ದುಂಬಿಯಿಂದಾಗಲಿ ಹೂವು ಯಾವುದೇ ಶುಲ್ಕ ಪಡೆಯಲಿಲ್ಲ. ಹೂವು ತನ್ನ ಬಳಿಗೆ ಯಾರು ಬಂದರೂ ಅವರಿಂದ ಏನನ್ನೂ ತೆಗೆದುಕೊಳ್ಳದೇ ಸಂತೋಷ ಹಂಚುತ್ತಿತ್ತು. ಅದಕ್ಕೇ ಅದು ದೇವರ ತಲೆ ಏರಿತು. ದೇವರಿಗೇ ದೇವರಾಗಿತ್ತು ಹೂವು.
ಯಾರು ಕೊಡುತ್ತಾರೋ ಅವರು ದೇವರಾಗುತ್ತಾರೆ. ಮನುಷ್ಯ ದೇವರ ಮನೆ ಒಳಗೆ ಹೋಗಬೇಕು ಎಂದರೆ ಸ್ನಾನ ಮಾಡಿಕೊಂಡು ಬಾ ಎನ್ನುತ್ತಾನೆ ದೇವರು. ಈಗ ಸಹ್ಯಾದ್ರಿ ಇದೆ. ನಿತ್ಯೋತ್ಸವ ತಾಯಿ ನಿತ್ಯೋತ್ಸವ ಎಂದು ಕವಿ ಹಾಡುತ್ತಾನೆ. ಅಲ್ಲೇನು ಯಾರಾದರೂ ಡೆಕೋರೇಷನ್ ಮಾಡಿದ್ದಾರೇನು? ಯಾರಾದರೂ ಲೈಟಿಂಗ್ ಹಾಕಿದ್ದಾರೇನು? ಆದರೂ ಅಲ್ಲಿ ನಿತ್ಯೋತ್ಸವ ಯಾಕಿದೆ? ಯಾಕಿದೆ ಎಂದರೆ ಗಿಡ ಯಾರೇ ಬರಲಿ, ಆ ಜಾತಿ ಈ ಜಾತಿ ಎಂದು ನೋಡಲಿಲ್ಲ. ಯಾರು ಬಂದರೂ ನೆರಳು ಕೊಟ್ಟಿತು. ಪಕ್ಷಿಗಳು ಬಂದರೆ ಹಣ್ಣು ಕೊಟ್ಟಿತು. ಎಷ್ಟೋ ಪಕ್ಷಗಳು ಗೂಡು ಕಟ್ಟಿದವು. ಅವುಗಳಿಗೆ ಆಶ್ರಯ ನೀಡಿತು. ಬಂದವರಿಗೆಲ್ಲ ತನ್ನ ಬಳಿ ಇರುವುದನ್ನು ಕೊಟ್ಟು ಸಂತೋಷಪಟ್ಟಿತು. ಅದಕ್ಕೆ ಅದರ ಬದುಕು ನಿತ್ಯೋತ್ಸವ ಆಗಿದೆ. ಅದು ಕೊಟ್ಟಿದೆ ಅದಕ್ಕೆ ನಿತ್ಯೋತ್ಸವ. ನಾವು ಕೊಟ್ಟಿಲ್ಲ ಅದಕ್ಕೆ ನಿತ್ಯೋತ್ಸವ ಇಲ್ಲ. ನಿಸರ್ಗದ್ದು ನಿತ್ಯೋತ್ಸವ ನಮ್ಮದು ಒತ್ತೋತ್ಸವ.
ನಿಸರ್ಗದಲ್ಲಿ ಒಂದು ಕಾಗೆ ಇರುತ್ತದೆ. ಆಹಾರ ಕಂಡರೆ ಅದು ತನ್ನ ಬಳಗವನ್ನೆಲ್ಲಾ ಕರೆಯುತ್ತದೆ. ಹಂಚಿಕೊಂಡು ಉಣ್ಣುತ್ತದೆ. ಕೋಳಿಯೂ ಎಲ್ಲರನ್ನು ಕರೆದು ಹಂಚಿಕೊಂಡು ತಿನ್ನುತ್ತದೆ. ಮನುಷ್ಯನೇ ನೋಡು; ಒಂದು ಹೂವು ಯಾರಿಂದಲೂ ಏನನ್ನೂ ಪಡೆದಿಲ್ಲ. ತನ್ನಲ್ಲಿ ಇರುವುದನ್ನು ಹಂಚಿಕೊಂಡಿದೆ. ಗಿಡವೂ ಹಾಗೇ ಮಾಡಿದೆ. ಕಾಗೆ, ಕೋಳಿ ತನ್ನ ಬಳಗಕ್ಕೆಲ್ಲಾ ಹಂಚಿಕೊಂಡು ತಿಂದಿವೆ. ಹಾಗೆಯೇ ಮನುಷ್ಯನೇ ನೀನು ಕೂಡ ದೇವರು ನಿನಗೆ ಕೊಟ್ಟ ಧನ ಕನಕ ವಿದ್ಯೆ ಬುದ್ಧಿ ಎಲ್ಲವನ್ನೂ ಇನ್ನೊಬ್ಬರ ಜೊತೆ ಹಂಚಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ದಾನ ಎಂದು ಕರೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.