ನುಡಿ ಬೆಳಗು
ಅಲೆಮಾರಿ ಋಷಿಯೊಬ್ಬ ಪ್ರಾಂತ್ಯ ಪ್ರಾಂತ್ಯವನ್ನೆಲ್ಲ ಅಲೆದು ಈ ಪ್ರಾಂತ್ಯದ ಗಡಿ ಭಾಗದ ವನದಲ್ಲಿ ಕಣ್ಮುಚ್ಚಿ ಕೂತ. ಬೇರೆ ಬೇರೆ ಕಡೆಯ ಜನರು ದಾನವಾಗಿ ಎಷ್ಟೇ ಹಣ ಕೊಟ್ಟರೂ ಅದನ್ನು ತೆಗೆದುಕೊಂಡು ಅಗತ್ಯ ಇರುವ ಬಡವರಿಗೆ ದಾನ ಮಾಡಿ ಮತ್ತೆ ಸುತ್ತುತ್ತಿದ್ದ.
ಈ ಪ್ರಾಂತ್ಯದ ರಾಜನಿಗೆ ಆಧಿಪತ್ಯವನ್ನು ವಿಸ್ತರಿಸುವ ದಾಹ. ಸೈನಿಕರ ಕೂಡಿಕೊಂಡು ಗಡಿಗಳನ್ನು ದಾಟಿ ಆಕ್ರಮಿಸಿಕೊಳ್ಳುವ ದಾಹ. ತಣಿಯದ ದಾಹವದು. ಮುನಿಯೊಬ್ಬ ಗಡಿಭಾಗದ ವನದಲ್ಲಿ ಕುಳಿತಿದ್ದುದನ್ನು ಕಂಡು ಸೇನೆಯ ಜೊತೆ ಹೊರಟ ರಾಜ ಆಶೀರ್ವಾದ ಪಡೆಯಲು ಬಾಗಿದ. ಆಶೀರ್ವದಿಸಿ ತನ್ನ ಬಳಿ ಉಳಿದಿದ್ದ ಒಂದು ನಾಣ್ಯವನ್ನು ರಾಜನಿಗೆ ಕೊಟ್ಟ. ಋಷಿ ಮುಗುಳ್ನಕ್ಕನು. ಹತ್ತು ಹಲವು ಪ್ರಾಂತ್ಯ, ಸಂಪತ್ತನ್ನು ಗೆದ್ದ ರಾಜನಿಗೆ ಆಶ್ಚರ್ಯ. ತನಗೆ ಒಂದು ರೂಪಾಯಿ ದಾನವಾಗಿ ಕೊಟ್ಟ ಈ ಋಷಿಯ ವರ್ತನೆ ಬಗ್ಗೆ ಯೋಚಿಸಿದ. ತನಗೇಕೆ ಈ ನಾಣ್ಯವನ್ನು ಕೊಟ್ಟದ್ದು ಎಂದು ಕೇಳಿದ.
‘ದೊರೆಯೇ ನಾನು ಒಂದು ವಾರದಿಂದ ನಿನ್ನ ಪ್ರಾಂತ್ಯದ ಹತ್ತು ಹಲವು ಊರು ಜಾಗಗಳನ್ನು ನೋಡಿದೆ. ಅನೇಕರನ್ನು ಮಾತಾಡಿಸಿದೆ. ಎಲ್ಲರ ಮುಖದಲ್ಲಿ ಸಂತಸ ಮತ್ತು ತೃಪ್ತಿ ಸಮಾಧಾನದ ಭಾವವಿತ್ತು. ನೆಮ್ಮದಿಯಿಂದ ಇದ್ದೇವೆ ಎಂದು ಉತ್ತರ ಕೊಟ್ಟರು. ಹಾಗೆ ನೋಡಿದರೆ, ಉಳಿದ ರಾಜ್ಯಗಳಲ್ಲಿ ನಾನು ನೆಲೆಯೂರಿದಾಗ ಸಾವಿರಾರು ಜನ ಬಂದು ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳುತ್ತಿದ್ದರು. ಅಲ್ಲಿನ ಆಡಳಿತ ರಾಜನ ಅದಕ್ಷತೆ ಇತ್ಯಾದಿ. ಆದರೆ ಈವರೆಗೂ ಒಬ್ಬರೂ ನನ್ನ ಬಳಿ ಬಂದಿಲ್ಲ. ಅದೇ ನನಗೂ ಸಂತೋಷದ ಸಂಗತಿ. ಆದರೆ, ನೀನು ಮಾತ್ರ ಎಷ್ಟು ಸಂಪತ್ತಿದ್ದರೂ ಅಸಮಾಧಾನದಿಂದ ಭುಸುಗುಡುತ್ತಾ ಪಕ್ಕದ ಪ್ರಾಂತ್ಯಗಳಲ್ಲಿ ದಂಗೆಗೆ ಹೊರಡ್ತಾ ಇದೀಯ’. ರಾಜ ಏನೊಂದೂ ಮಾತನಾಡದೇ ಸೈನಿಕರನ್ನು ಹುರಿದುಂಬಿಸುತ್ತ ಹೊರಟೇ ಹೋದ.
ಈ ಬಾಳೂ ಹೀಗೇ ನೋಡಿ. ಇದ್ದುದರಲ್ಲೇ ಉಂಡುಟ್ಟು ಸುಖ ಪಡದೆ ಮತ್ತಷ್ಟು ದೋಚಲು ಸಂಪಾದನೆ ಮಾಡುತ್ತೇವೆ. ಬಾಳಿನ ಎಲ್ಲೆಯನ್ನು ಅನಗತ್ಯವಾಗಿ ಹಿಗ್ಗಿಸಲು ಹೊಂಚು ಹಾಕುತ್ತೇವೆ. ಗಳಿಸಿದ ಆಸ್ತಿಯನ್ನು ಅನುಭವಿಸುತ್ತೇವೋ ಇಲ್ಲವೋ ಖಚಿತತೆ ಇಲ್ಲ. ಆದರೂ, ವಿಸ್ತರಿಸುವುದರಲ್ಲಿಯೇ ಕಳೆದುಕೊಳ್ಳುತ್ತೇವೆ. ಅಂತಃಪ್ರಜ್ಞೆ ಸತ್ಯ ಹೇಳುತ್ತದೆ ಮತ್ತು ಅದು ಪ್ರಜೆಗಳಂತೆ ಸಮಾಧಾನದಿಂದ ಉಳಿದಿರುತ್ತದೆ. ಆದರೆ, ಆಳುವ ದೊರೆಯ ತರಹದ ಭೌತಿಕ ಲಾಲಸೆ ಮತ್ತೆ ಮತ್ತೆ ದಂಡೆತ್ತಿ ಹೋಗುತ್ತಲೇ ಇರುತ್ತದೆ. ಗಡಿ ಭಾಗದ ವನದಲ್ಲಿ ಕೂತ ತಪಸ್ವಿಯಂತಹ ಸಂಗತಿಯೊಂದು ಬಂದು ತಾಗುವವರೆಗೂ ತಾಕಲಾಟ ಇದ್ದದ್ದೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.