ADVERTISEMENT

ನುಡಿ ಬೆಳಗು: ಭಾರವನ್ನು ಹಗುರವಾಗಿಸಿಕೊಳ್ಳುವ ಬಗೆ

ನುಡಿ ಬೆಳಗು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 18:52 IST
Last Updated 21 ಫೆಬ್ರುವರಿ 2024, 18:52 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಹದ್ದುಗಳು ಬಲಶಾಲಿ ಹಕ್ಕಿಗಳು. ತೀಕ್ಷ್ಣ ದೃಷ್ಟಿಯ ಇವು ದೀರ್ಘ ಜೀವಿತಾವಧಿಯನ್ನು ಹೊಂದಿರುತ್ತವೆ. ಇವುಗಳ ಕುರಿತು ಒಂದು ಚಿಕ್ಕ ಪ್ರತೀತಿಯಿದೆ. ಸಣ್ಣ ಪುಟ್ಟ ಪಕ್ಷಿಗಳು ಹದ್ದಿನ ತಂಟೆಗೆ ಹೋಗುವುದಿಲ್ಲ. ಆದರೆ ಕಾಗೆ ಮಾತ್ರ ಹದ್ದಿನ ಕುತ್ತಿಗೆಯ ಮೇಲೆ ಕೂತು ಕುಕ್ಕುತ್ತದೆ. ಆದರೆ ಹದ್ದು ತಲೆಕೆಡಿಸಿಕೊಳ್ಳುವುದಿಲ್ಲ. ತನ್ನ ಕುತ್ತಿಗೆಯ ಮೇಲೆ ಕುಳಿತ ಕಾಗೆಯನ್ನು ಲೆಕ್ಕಿಸದೇ ತನ್ನಷ್ಟಕ್ಕೆತಾನು ಎತ್ತರೆತ್ತರಕ್ಕೆ ಹಾರುತ್ತಿರುತ್ತದೆ. ಹದ್ದು ಮೇಲೆ ಮೇಲೆ ಹಾರಿದಂತೆ ಕಾಗೆಗೆ ಉಸಿರಾಡಲು ಸಾಧ್ಯವಾಗುವುದಿಲ್ಲ. ಕಾಗೆ ಸುಸ್ತಾಗಿ ಬಿದ್ದುಬಿಡುತ್ತದೆ. ಹದ್ದು ಮಾಮೂಲಿಯಂತೆ ತನ್ನ ಹಾರಾಟವನ್ನು ಮುಂದುವರಿಸುತ್ತದೆ.

ಇದರರ್ಥ ನಾವು ಒಂದು ಗುರಿಯನ್ನಿಟ್ಟುಕೊಂಡು ಮುನ್ನಡೆಯುವಾಗ ಹಲವಾರು ಅಡೆತಡೆಗಳು, ಸವಾಲುಗಳು ನಮಗೆ ಎದುರಾಗುತ್ತವೆ. ಕೆಲವು ಸಮಸ್ಯೆಗಳಂತೂ ಹದ್ದಿನ ಕುತ್ತಿಗೆಯ ಮೇಲೆ ಕೂತ ಕಾಗೆಯಂತೆ ಪಟ್ಟಾಗಿ ನಮ್ಮನ್ನು ಹಿಡಿದುಕೊಂಡು ಅವುಗಳಿಂದ ಬಿಡುಗಡೆಯೇ ಇಲ್ಲವೇನೋ ಎನಿಸುವಂತೆ ಮಾಡುತ್ತವೆ. ಉದಾಹರಣೆಗೆ ಬಡತನ, ಕುಟುಂಬದ ಸದಸ್ಯರ ಮರಣ, ಆರೋಗ್ಯ ಸಮಸ್ಯೆ, ಹಳಸಿದ ಸಂಬಂಧ ಇವು ಎಷ್ಟರ ಮಟ್ಟಿಗೆ ಭಾರವಾಗುತ್ತವೆ ಎಂದರೆ ಒಂದು ಸಲ ಈ ಭಾರ ಇಳಿದರೆ ಸಾಕು
ಎನ್ನಿಸತೊಡಗಿ ತಕ್ಷಣದ ಪರಿಹಾರ ಕಂಡುಕೊಳ್ಳಲು ಹೊರಡುತ್ತೇವೆ. ಅವುಗಳಿಂದ ಬಿಡುಗಡೆ ಹೊಂದುವತ್ತ ನಮ್ಮ ಪೂರ್ತಿ ಗಮನ ಕೊಟ್ಟು ನಾವು ಮಾಡಬೇಕಾದ ಅತ್ಯಗತ್ಯವಾದ ಕೆಲಸಗಳನ್ನು ಮಾಡದೇ ಗುರಿಯಿಂದ ವಿಮುಖರಾಗಿಬಿಡುತ್ತೇವೆ.

ADVERTISEMENT

ಈ ಸಮಸ್ಯೆಗಳು ಮಾತ್ರವಲ್ಲ, ಟಿ.ವಿ, ಮೊಬೈಲು, ಸಾಮಾಜಿಕ ಜಾಲತಾಣಗಳು ನಮ್ಮ ಗಮನವನ್ನು ಸೆಳೆಯಲು ಸದಾಕಾಲ ಸಿದ್ಧವಿರುತ್ತವೆ. ಅಷ್ಟೇ ಅಲ್ಲ, ಹೊಸದನ್ನು ಮಾಡಹೊರಟಾಗಲಂತೂ ಟೀಕೆ ಟಿಪ್ಪಣಿಗಳು ಸಹಜ. ನಮ್ಮ ಬಗೆಗಿನ ಇತರರ ಅಭಿಪ್ರಾಯಗಳು, ತೀರ್ಪುಗಳಿಗೆ ವಿಚಲಿತರಾಗಿ ಸದಾ ದಿಗಿಲಿನಲ್ಲಿರುವುದು, ಮನೆಯಲ್ಲಿನ ಎಲ್ಲ ಸಮಸ್ಯೆಗಳಿಗೆ ನಾವೇ ಕಾರಣರೆಂಬತಪ್ಪಿತಸ್ಥ ಭಾವನೆಯಲ್ಲಿರುವುದು ಇಂತಹ ತಲೆಭಾರದ ಸಂಗತಿಗಳನ್ನು ಹಗುರಗೊಳಿಸಿಕೊಳ್ಳುತ್ತ ಮುನ್ನಡೆಯಬೇಕು.

ಬದುಕಿನಲ್ಲಿ ನಿರೀಕ್ಷಿತ ಅನಿರೀಕ್ಷಿತ ಸಮಸ್ಯೆಗಳು ಬರುವುದು ಅತ್ಯಂತ ಸಾಮಾನ್ಯ ಸಂಗತಿ ಎಂಬುದನ್ನು ಅರ್ಥ ಮಾಡಿಕೊಂಡುಅವುಗಳ ಕಡೆಗೆ ಅಗತ್ಯವಿದ್ದಷ್ಟು ಗಮನ ನೀಡಿ ನಿರ್ಲಿಪ್ತವಾಗಿ ನಮ್ಮ ಲಕ್ಷ್ಯದೆಡೆಗೆ ನಾವು ಮುನ್ನಡೆದರೆ ಸವಾಲುಗಳೇ ಅಂತ್ಯವಾಗುತ್ತವೆ. ಹೇಗೆ ಹದ್ದು ಕಾಗೆಯನ್ನು ನಿರ್ಲಕ್ಷಿಸಿ ರೆಕ್ಕೆ ಬಿಚ್ಚಿ ಹಾರುವುದಕ್ಕೆ ಮಾತ್ರ ಗಮನ ಕೊಡುತ್ತದೆಯೋ ಅದೇ ರೀತಿ ನಮ್ಮ ಗುರಿಯಿಂದ ವಿಮುಖರಾಗದೇ ಮುನ್ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವುದರಿಂದ ನಮ್ಮ ಲಕ್ಷ್ಯ ತಲುಪಬಹುದು.
ಇದು ಬರೀ ಗುರಿಸಾಧನೆಯ ಹಾದಿಯಲ್ಲಿ ಮಾತ್ರವಲ್ಲ, ಜೀವನದ ಪ್ರತೀ ಹಂತದಲ್ಲೂ ಅಳವಡಿಸಿಕೊಳ್ಳಬೇಕಾದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.