ADVERTISEMENT

ನುಡಿ ಬೆಳಗು: ಬುದ್ಧನಿಗೆ ತಲುಪಿದ ಹೂವು

ಪಿ. ಚಂದ್ರಿಕಾ
Published 17 ಡಿಸೆಂಬರ್ 2025, 23:30 IST
Last Updated 17 ಡಿಸೆಂಬರ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಶ್ರೀಮಂತನೊಬ್ಬ ಬುದ್ಧನನ್ನು ಕಾಣಲು ಹೊರಟಿದ್ದ. ಅವನಿಗೆ ಅರಿವಿತ್ತು, ತಾನು ಕಾಣಲು ಹೊರಟಿರುವುದು ಕಾಲಮಾನದ ಮಹಾನ್ ಪುರುಷನನ್ನು ಎಂಬುದು. ಆತನೋ ಎಲ್ಲವನ್ನೂ ತ್ಯಜಿಸಿದ ಪರಮ ವಿರಾಗಿ. ಆತನಿಗೆ ಕೊಡಲು ತನ್ನಲ್ಲಿ ಏನೂ ಇಲ್ಲ. ಇಷ್ಟು ಹಣವಿದ್ದೂ ತಾನು ಬಡವನಾದೆ ಎಂದವನಿಗೆ ಅನ್ನಿಸಿಬಿಟ್ಟಿತ್ತು. ಆಗ ಜೊತೆಯಲ್ಲಿದ್ದವ ಹೇಳಿದ, ‘ದಾರಿಯಲ್ಲಿ ಹೂವಿನ ತೋಟವಿದೆ. ಅಲ್ಲಿ ರೈತ ಬೆಳೆದ ಹೂಗಳನ್ನು ಮಾರುತ್ತಿರುತ್ತಾನೆ. ಅಂಥಾ ತೋಟವನ್ನೂ ನಾನು ಕಂಡಿಲ್ಲ, ಅಂಥಾ ಹೂಗಳನ್ನೂ ಕಂಡಿಲ್ಲ. ಅಲ್ಲಿ ಬುದ್ಧನಿಗೆ ಹೂಗಳನ್ನು ತೆಗೆದುಕೊಳ್ಳಬಹುದು. ನಿಮಗೆ ಕೊಟ್ಟ ಹಾಗೂ ಇರುತ್ತದೆ, ಬುದ್ಧನಿಗೆ ತಾನೇನೋ ಯಾರಿಂದಲೋ ಸ್ವೀಕರಿಸಿದೆ ಎನ್ನುವ ಹಾಗೂ ಇರುವುದಿಲ್ಲ’ ಎಂದನು. 

ಶ್ರೀಮಂತನಿಗೆ ಏನಿಲ್ಲವೆಂದರೂ ಹೂಗಳನ್ನಾದರೂ ತೆಗೆದುಕೊಂಡು ಹೋಗಬಹುದಲ್ಲಾ ಎನ್ನುವ ಸಮಾಧಾನದಿಂದ ಹೂವಿನ ತೋಟ ಸಿಗುವುದನ್ನೇ ಕಾಯುತ್ತಿದ್ದ, ಅತ್ಯಂತ ಉತ್ಕೃಷ್ಟವಾದ ಹೂಗಳನ್ನು ಬುದ್ಧನಿಗೆ ಅರ್ಪಿಸುವ ತವಕದಲ್ಲಿ. ಆ ಗಳಿಗೆ ಬಂದೇ ಬಿಟ್ಟಿತು. ರೈತ ತಾನು ಬೆಳದ ಹೂಗಳನ್ನು ಹಿಡಿದು ರಸ್ತೆ ಬದಿಯಲ್ಲಿ ನಿಂತಿದ್ದ. ಅವನನ್ನು ನೋಡುತ್ತಲೇ ಶ್ರೀಮಂತ ಗಾಡಿಯಿಂದ ಇಳಿದು ರೈತನ ಕಡೆಗೆ ಧಾವಿಸಿ, ‘ಎಷ್ಟು ಹಣವಾದರೂ ಸರಿಯೇ, ಅತ್ಯಂತ ಉತ್ಕೃಷ್ಟ ಹೂಗಳನ್ನು ಕೊಡು. ನಾನು ಬುದ್ಧನಿಗೆ ಅರ್ಪಿಸಬೇಕಿದೆ’ ಎಂದ. ರೈತ ನಕ್ಕ, ‘ಎಷ್ಟು ಹಣವಾದರೂ ಸರಿಯೇ ಕೊಡುವಿರಾ’ ಎಂದ. ‘ಹೌದು ಕೇಳು. ನಿನಗೆ ಈವರೆಗೂ ಯಾರೂ ಕೊಟ್ಟಿರಬಾರದು ಅಷ್ಟು ಹಣವನ್ನು ನೀಡುವೆ’ ಎಂದ ಶ್ರೀಮಂತ. ರೈತ  ನಗುತ್ತಾ, ‘ಇಲ್ಲ ನೀನು ಎಷ್ಟು ಹಣ ಕೊಟ್ಟರೂ ನಾನು ನಿನಗೆ ಹೂಗಳನ್ನು ಕೊಡಲಾರೆ’ ಎಂದ. ಶ್ರೀಮಂತನಿಗೆ ಅಚ್ಚರಿ, ‘ಯಾಕೆ ನೀನು ಹೂಗಳನ್ನು ನೀಡಲಾರೆ? ನೀನು ನಿಂತಿರುವುದು ಮಾರಲಿಕ್ಕೆ ಅಲ್ಲವೇ’ ಎಂದ ಶ್ರೀಮಂತ. 

ADVERTISEMENT

‘ಹೌದು ಮಾರಲಿಕ್ಕೆ. ಆದರೆ, ಬುದ್ಧನಿಗೆ ಕೊಡುವ ಹೂವಿಗೆ ಯಾವ ಅಹಂಕಾರಿಯ ಕೈಗಳೂ ತಾಕಬಾರದು ಎನ್ನುವ ನಿಲುವು ನನ್ನದು. ನಾನು ಬಿತ್ತಿದ ಬೀಜಕ್ಕೆ ಗೊತ್ತಿಲ್ಲ ಅದು ಬುದ್ಧನಿಗೆ ತಲುಪಲಿವೆ ಎಂದು- ಹಾಗೆಯೇ ಬೆಳೆದ ಭೂಮಿಗೆ ಮತ್ತು ನನ್ನ ಬೆವರ ಹನಿಗೂ. ಅವು ತಮ್ಮ ಪಾಡಿಗೆ ತಾವು ಇವನ್ನು ನನ್ನ ಕೈಗೆ ಇಟ್ಟಿವೆ. ಇಂಥಾ ಹೂಗಳನ್ನು ಅಹಂಕಾರಿಯ ಕೈಗಳ ಮೂಲಕ ಬುದ್ಧನಿಗೆ ಹೇಗೆ ತಲುಪಿಸಲಿ’ ಎಂದ. ಅಷ್ಟು ಹೊತ್ತಿನ ತನಕ ತಾನು ಹಣವನ್ನು ಕೊಟ್ಟು ಏನನ್ನಾದರೂ ಖರೀದಿಸಬಹುದು ಎಂದುಕೊಂಡಿದ್ದ ಶ್ರೀಮಂತನಿಗೆ ಹಣ ಕೊಟ್ಟರೂ ಆ ವಸ್ತು ಸಿಗಲಾರದು ಎನ್ನುವ ಕಲ್ಪನೆಯೂ ಇರಲಿಲ್ಲ. ಅವನು ಅತ್ಯಂತ ದೀನನಾಗಿ ಕೇಳಿದ, ‘ಈಗ ನೀನು ಹೂವನ್ನು ಕೊಡದೆ ಹೋದರೆ ನಾನು ಬುದ್ಧನಿಗೆ ಏನು ಕೊಡಲಿ.’ ರೈತ ನಗುತ್ತಾ, ‘ಅಲ್ಲಿಗೆ ಹೋಗುವಷ್ಟರಲ್ಲಿ ನಿನಗೆ ಹೊಳೆಯುತ್ತದೆ ಏನನ್ನು ಕೊಡಬೇಕೆಂದು’ ಎಂದು ಹೇಳಿದ. ದಾರಿಯುದ್ದಕ್ಕೂ ಶ್ರೀಮಂತ ಯೋಚಿಸಿದ, ತಲುಪುವ ಹಾದಿ ಸ್ವಲ್ಪವಾದರೂ ದೂರವಿರಲಿ ಎಂದು ಪ್ರಾರ್ಥಿಸಿದ. ಕೊನೆಗೂ ಕಾಲ ಅವನನ್ನು ಬುದ್ಧನ ಎದುರು ನಿಲ್ಲಿಸಿತ್ತು. ಕೈಮುಗಿದು ಹೇಳಿದ, ‘ತಂದೆ, ಅಹಂಕಾರವನ್ನು ಕಳೆದ ನನ್ನನ್ನು ಒಪ್ಪಿಸಿಕೋ’. 

ರೈತನ ಕೈಲಿದ್ದ ಹೂಗಳೆಲ್ಲವೂ ನಕ್ಕವು, ತೆಳುವಾದ ಸುಗಂಧ ಬುದ್ಧನ ಸುತ್ತಲೂ ಹರಡಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.