ADVERTISEMENT

ನುಡಿ ಬೆಳಗು: ನಿಸ್ವಾರ್ಥವಾಗಿರುವುದೇ ದೊಡ್ಡದು..

ನುಡಿ ಬೆಳಗು: ನಿಸ್ವಾರ್ಥವಾಗಿರುವುದೇ ದೊಡ್ಡದು..

ಪಿ. ಚಂದ್ರಿಕಾ
Published 11 ಡಿಸೆಂಬರ್ 2023, 18:33 IST
Last Updated 11 ಡಿಸೆಂಬರ್ 2023, 18:33 IST
ನುಡಿ ಬೆಳಗು
ನುಡಿ ಬೆಳಗು   

ತಾನ್‌ಸೇನ್‌ನ ಕುರಿತು ಅಕ್ಬರ್ ಅತ್ಯಂತ ಪ್ರೀತಿಯಿಂದ ಹೇಳಿದ: ‘ನಿನ್ನಂಥ ಹಾಡುಗಾರ ಜಗತ್ತಿನಲ್ಲೇ ಇನ್ನೊಬ್ಬನಿಲ್ಲ. ನೀನು ನನಗೆ ಸಿಕ್ಕಿದ್ದು ಪುಣ್ಯ’ ಎಂದು. ಆಗ ತಾನ್‌ಸೇನ್‌ ‘ಇಲ್ಲ ಪ್ರಭು. ನೀವು ನನ್ನ ಗುರು ಹರಿದಾಸರ ಹಾಡನ್ನು ಕೇಳಲಿಲ್ಲ ಅದಕ್ಕೆ ಹೀಗೆ ಹೇಳುತ್ತಿರುವಿರಿ. ಅವರ ಹಾಡನ್ನು ಕೇಳುತ್ತಿದ್ದರೆ ಜಗತ್ತನ್ನೇ ಮರೆಯುವಿರಿ’ ಎಂದ. 

ಅಕ್ಬರನಿಗೆ ಆಶ್ಚರ್ಯವಾಗುತ್ತದೆ- ‘ನಾನು ಕೇಳಿದ ಅತ್ಯಂತ ಮಧುರಾತಿಮಧುರ ಕಂಠದ ಗಾಯಕ ತಾನ್‌ಸೇನ್. ಬಹುಶಃ ಇವನು ಗುರುವಿನ ಬಗ್ಗೆ ಅಪಾರವಾದ ಗೌರವದಿಂದ ಈ ಮಾತನ್ನು ಹೇಳುತ್ತಿದ್ದಾನೆ ಎನ್ನಿಸಿ, ‘ಆಯ್ತಪ್ಪಾ ನಿನ್ನ ಗುರುವಿನ ಹಾಡನ್ನು ಕೇಳಿದ ಮೇಲೆ ಅದನ್ನು ನಿರ್ಧಾರ ಮಾಡೋಣ ಒಮ್ಮೆ ಕರೆಸಿಬಿಡು’ ಎಂದ.

‘ನನ್ನ ಗುರು ಹಾಗೆಲ್ಲ ಬರಲಾರರು ಮತ್ತು ಯಾರ ಎದುರೂ ಹಾಡಲಾರರು’ ಎಂದ ತಾನ್‌ಸೇನ್‌.

ADVERTISEMENT

ಅಕ್ಬರನಿಗೆ ರೇಗಿಹೋಯಿತು, ‘ಅಲ್ಲಯ್ಯ ಅವರು ಬರಲಾರರು, ನನ್ನೆದುರು ಹಾಡಲಾರರು ಎಂದರೆ ಮತ್ತೆ ನಾನು ಹೇಗೆ ಅವರ ಹಾಡನ್ನು ಕೇಳುವುದು?’ ಎಂದಾಗ ತಾನ್‌ಸೇನ್ ‘ಅವರು ಯಮುನಾ ನದಿಯ ತೀರದಲ್ಲಿ ತಮಗೆ ಇಷ್ಟ ಬಂದಾಗ ಹಾಡುತ್ತಿರುತ್ತಾರೆ. ಅವರ ಹಾಡನ್ನು ಕೇಳಲಿಕ್ಕೆ ಅಲ್ಲಿಗೇ ಹೋಗಬೇಕು’ ಎಂದ.

ಅಕ್ಬರ್ ಮತ್ತು ತಾನ್‌ಸೇನ್ ಯಮುನಾ ನದಿಯ ತೀರಕ್ಕೆ ಬಂದು ಅಲ್ಲಿ ಸಿಗುವ ಹಳ್ಳಿಗಳನ್ನು ಸುತ್ತಿ ಹರಿದಾಸನನ್ನು ಹುಡುಕುತ್ತಾರೆ. ಅವರಿಗೆ ಒಂದು ಹಳ್ಳಿಯ ಸಮೀಪ ಹರಿದಾಸ ಇರುವುದು ಗೊತ್ತಾಗುತ್ತದೆ. ಅಲ್ಲಿಗೆ ಹೋಗಿ ನೋಡುತ್ತಾರೆ. ಹರಿದಾಸ ನಿತ್ಯದ ಕೆಲಸದಲ್ಲಿ ತೊಡಗಿದ್ದಾನೆ. ಅಕ್ಬರ್ ‘ಅವನೊಡನೆ ಮಾತನಾಡಿ ಹಾಡುವಂತೆ ಕೇಳುವ ಬಾ’ ಎಂದು ತಾನ್‌ಸೇನ್‌ನಿಗೆ ಹೇಳುತ್ತಾನೆ. 

ಆಗ ತಾನ್‌ಸೇನ್ ‘ನೀವಿಲ್ಲಿಗೆ ಬಂದಿರುವುದು ಗೊತ್ತಾದರೆ ಅವರು ಹಾಡಲಿಕ್ಕೇ ಇಲ್ಲ’ ಎನ್ನುತ್ತಾನೆ. ‘ಹಾಗಾದರೆ ಹಾಡು ಕೇಳಲು ಏನು ಮಾಡೋಣ?’ ಎಂದ ಅಕ್ಬರನಿಗೆ ‘ನಾವಿಲ್ಲೇ ಅವರಿಗೆ ಕಾಣದ ಹಾಗೆ ಅವಿತಿದ್ದು ಅವರು ಯಾವಾಗ ಹಾಡುತ್ತಾರೋ ಆಗ ಕೇಳಿಕೊಂಡು ಹೊರಟುಬಿಡೋಣ’ ಎನ್ನುತ್ತಾನೆ. ಅಕ್ಬರನಿಗೆ ‘ಇದ್ಯಕೋ ತಾನ್‌ಸೇನ್ ಅತಿಯಾಗಿ ಆಡುತ್ತಿದ್ದಾನೆ ಎನ್ನಿಸಿತಾದರೂ ನೋಡೇ ಬಿಡೋಣ’ ಎಂದು ಸುಮ್ಮನಾಗುತ್ತಾನೆ. 

ಮಧ್ಯರಾತ್ರಿ ಹರಿದಾಸ ಹಾಡತೊಡಗುತ್ತಾನೆ. ಮೈಯೆಲ್ಲಾ ಕಣ್ಣಾಗಿ ಕುಳಿತು ಅಕ್ಬರ್-ತಾನ್‌ಸೇನ್ ಹಾಡನ್ನು ಕೇಳಿಸಿಕೊಳ್ಳುತ್ತಾರೆ. ಹಾಡು ಮುಗಿಯುವ ವೇಳೆಗೆ ಅಕ್ಬರ್ ಭಾವವಶನಾಗಿ ತಾನ್‌ಸೇನ್‌ನಿಗೆ ‘ನಿಜ ನಿನ್ನ ಗುರು ಮಹಾನ್ ಹಾಡುಗಾರ. ಅವರ ಶಿಷ್ಯನಾಗಿದ್ದು ನೀನು ಯಾಕೆ ಇಷ್ಟು ಚೆನ್ನಾಗಿ ಹಾಡುವುದಿಲ್ಲ’ ಎಂದ. ಆಗ ತಾನಸೇನ್‌ ‘ಪ್ರಭು ಕ್ಷಮಿಸಿ. ನಾನು ನಿಮ್ಮ ಎದುರು ಹೊಟ್ಟೆಪಾಡಿಗಾಗಿ ಹಾಡುತ್ತೇನೆ. ಆದರೆ ನನ್ನ ಗುರುವಿಗೆ ಇದರ ಹಂಗಿಲ್ಲ ಅವರು ಹಾಡುವುದು ಭಗವಂತನಿಗಾಗಿ ಮಾತ್ರ. ಅದಕ್ಕೆ ಅವರ ಧ್ವನಿಯಲ್ಲಿ ದೈವಿಕತೆ ಇದೆ. ನಮ್ಮ ಕೆಲಸ ನಿಸ್ವಾರ್ಥವಾದಷ್ಟೂ ಅದರ ಬೆಲೆ ಹೆಚ್ಚುತ್ತದೆ’ ಎಂದ. 

ತಾನ್‌ಸೇನ್‌ನ ಮಾತಿಗೆ ಅಕ್ಬರ ತಲೆದೂಗಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.