ADVERTISEMENT

ನುಡಿ ಬೆಳಗು | ಬವಣೆಗಳಿಗೆ ಸಡ್ಡು...

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 0:30 IST
Last Updated 18 ಜುಲೈ 2025, 0:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಉಚ್ಚಮ್ಮ ಅಷ್ಟೇನೂ ಓದು ಬರಹ ಕಲಿತ ಹೆಣ್ಣಲ್ಲ. ಓದಲು ಆಸೆಯೇನೋ ಇತ್ತು. ಆದರೆ ಊರವರ ಅಂಗಿಗಳ ಅಷ್ಟೂ ಕೊಳೆಯನ್ನು ತೊಳೆಯುವ ಶುದ್ಧ ಕಾಯಕ ಮಾಡುತ್ತಿದ್ದ ನಿಂಗಣ್ಣನ ಜೇಬಿಗೆ ಇವಳನ್ನು ಓದಿಸುವ ಕಸುವಿರಲಿಲ್ಲ. ಆದಷ್ಟೂ ಬೇಗ ಅವಳ ಕೊರಳಿಗೊಂದು ತಾಳಿ ಬಿಗಿಸಿ ತನ್ನ ಹೆಗಲ ಮೇಲಿನ ಹೊರೆಯನ್ನು ಇಳಿಸಿಕೊಂಡರೆ ಸಾಕೆಂಬ ಯೋಚನೆಯ ಆಚೆಗೆ ಅವನಿಗೆ ಹೆಚ್ಚಿನದೇನೂ ಗೊತ್ತಿರಲಿಲ್ಲ. ಅವ್ವ ನಂಜವ್ವನಿಗೆ ಮಗಳು ತಾನು ಬೆಂದ ಬೆಂಕಿಯಲ್ಲಿ ಬೇಯಲೇಬಾರದೆಂಬ ಆಸೆಯಿದ್ದರೂ ಅವಳ ಯೋಚನೆಗಾಗಲೀ, ಎತ್ತುವ ಸ್ವರಕ್ಕಾಗಲಿ ಎಲ್ಲಿಯ ಬೆಲೆಯಿತ್ತು? ಮಗಳಿಗೆ ಚೆನ್ನಾಗಿ ಒಕ್ಕತನ ಕಲಿಸಿದ್ದಷ್ಟೇ ಅವಳ ಪಾಲಿನ ಕೆಲಸ.
ನಿಂಗಣ್ಣ ಬಹಳ ಕಷ್ಟಪಟ್ಟು ಒಂದು ಸಂಬಂಧವನ್ನು ಉಚ್ಚಮ್ಮನಿಗೆ ಗೊತ್ತು ಮಾಡಿದ್ದ.

ಮದುವೆ ನಿಕ್ಕಿಯಾದ ಕ್ಷಣದಿಂದ ಉಚ್ಚಮ್ಮನ ಕಿವಿಯ ಮೇಲೆ ಗಂಡಿನ ಬಗ್ಗೆ ಬಹಳ ಯೋಗ್ಯ, ಒಳ್ಳೆಯ ಕೆಲಸಗಾರ, ಉಚ್ಚಮ್ಮ ಬಾಳ ಅದೃಷ್ಟವಂತೆ, ಸಿಕ್ಕಿದ್ದೇ ಇವಳ ಪುಣ್ಯ, ಗಂಡಿಗೆ ಅದು ಬೇಕಂತೆ, ವರೋಪಚಾರ ಇಷ್ಟಂತೆ, ಹೀಗಿರಬೇಕಂತೆ, ಹಾಗಿರಬೇಕಂತೆ, ಇಲ್ದಿದ್ರೆ ಅವ ಒಪ್ಪಲ್ವಂತೆ... ಇತ್ಯಾದಿ ಇತ್ಯಾದಿ ಮಾತುಗಳೇ ಬಿದ್ದೂ ಬಿದ್ದೂ ಅದೊಂಥರ ಭಯ, ಗೌರವ, ಹೆಮ್ಮೆ ಇತ್ಯಾದಿ ಮಿಶ್ರ ಭಾವಗಳು ಅವಳ ಮನಸ್ಸನ್ನು ತುಂಬಿ ಬಿಟ್ಟಿದ್ದವು. ಇದೇ ನಂಬುಗೆಯಲ್ಲಿ ಗಂಡನ ಮನೆ ಹೊಕ್ಕ ಉಚ್ಚಮ್ಮನ ಖುಷಿಯ ಬಲೂನು ಟುಸ್ಸೆಂದು ಉಸಿರು ಕಳೆದುಕೊಳ್ಳಲು ವರ್ಷವೂ ಬೇಕಾಗಲಿಲ್ಲ.

ADVERTISEMENT

ಮೊದಮೊದಲು ಹೊಸ ಗಂಡಿನ ಗತ್ತಿನಲ್ಲಿ ಕಂಡ ಗಂಡ ತಿಂಗಳು ಕಳೆದಂತೆ ಅದೆಂಥ ಸೋಮಾರಿ, ನಾಲಾಯಕ್, ದುಡಿಯಲಾರದವ ಕುಡುಕ, ಉರುಕ, ತಿಕ್ಕಲ, ಹೆಣ್ಣಿನ ಹುಚ್ಚಿನವ, ತಿನ್ನಲು ತಂದು ಹಾಕಲೂ ಒಲ್ಲದ ಭಂಡ ಅನ್ನುವುದು ಸ್ಪಷ್ಟವಾಗಿ ಅರ್ಥವಾಗಿ ಹೋಯಿತು. ಏಳೆಂಟು ಅಡಿಗೂ ಕಡಿಮೆ ಇರುವ ಮುರುಕಲು ಗುಡಿಸಲೊಂದನ್ನು ಬಿಟ್ಟು ಒಂದೇ ಒಂದು ಅಂಗುಲವೂ ನೆಲವಿಲ್ಲ, ವಿಷ ತರಲು ಸಾಕಾಗುವಷ್ಟೂ ಹಣವಿಲ್ಲ, ಉಡಲು ಬಟ್ಟೆ ಹೊಟ್ಟೆಗೆ ಹಿಟ್ಟು ಇವುಗಳಿಗಂತೂ ತತ್ವಾರವೇ‌. ತನ್ನಲ್ಲಿ ಓದು ಬರಹವಿಲ್ಲ, ಬೆನ್ನಿಗೆ ಹಣ ಆಸ್ತಿಯಿಲ್ಲ, ಬೆಂಬಲಿಸುವ ಜೀವವೂ ಇಲ್ಲ. ಮುಂದೆ ಉಚ್ಚಮ್ಮ ಏನು ಮಾಡಬೇಕು? ಇಲ್ಲಿಗೆ ಇದು ಈಕೆಯ ಬದುಕಿನ ಅಂತ್ಯವಾ?

ನಮ್ಮ ಹಳ್ಳಿಗಾಡಿನ ಬಹುತೇಕ ದಲಿತ ಹೆಣ್ಣುಮಕ್ಕಳ ಬದುಕು ಹೀಗೇ ಆರಂಭವಾಗುತ್ತದೆ. ಒಟ್ಟಾರೆ ಯಾವುದೇ ವಿಂಗಡಣೆಯೂ ಇಲ್ಲದೆ ನಗರ ಹಳ್ಳಿಯ ಇತರ ಸಮುದಾಯದ ಹೆಣ್ಣುಮಕ್ಕಳ ಬದುಕೂ ಹೆಚ್ಚುಕಮ್ಮಿ ಹೀಗೆಯೇ ಇರುವುದು. ಆದರೆ ಇತರೆ ಹೆಣ್ಣುಮಕ್ಕಳಿಗೆ ವಿದ್ಯೆ, ಹಣ, ಸಮಾಜ, ಜಾತಿ ಹೀಗೆ ಕೆಲವಾದರೂ ಸಹಾಯಗಳು ಒದಗುತ್ತವೆ. ಆದರೆ ಬಹುಮುಖ್ಯವಾಗಿ ಈ ಹೆಣ್ಣುಮಕ್ಕಳಿಗೆ ಅದಾವ ಬೆಂಬಲವೂ ದಕ್ಕದೇ ಹೋಗುವುದು ದುರಂತ. 

ಉಚ್ಚಮ್ಮ ಇಷ್ಟಕ್ಕೇ ಸೋತು ಬದುಕಿನ ಮುಂದೆ ಮಂಡಿಯೂರಿ ಕೂರಲಿಲ್ಲ. ಬದಲಿಗೆ ಬದುಕಿನ ಬವಣೆಗೇ ಸಡ್ಡು ಹೊಡೆದು ನಿಂತ ಗಟ್ಟಿಗಿತ್ತಿ. ಯಾರಿಗಾಗಿ ಅಲ್ಲದಿದ್ದರೂ ತನಗಾಗಿ ಒಂದು ಬದುಕಿದೆ, ನನ್ನ ಜೀವಕ್ಕೂ ಬೆಲೆಯಿದೆ ಎಂಬುದನ್ನು ಎದೆಯಲ್ಲಿ ಗಟ್ಟಿಯಾಗಿಸಿಕೊಂಡು ಬದುಕನ್ನು ತಬ್ಬಿದವಳು. ಮನೆಯನ್ನೂ ಮೀಸಿ, ಬದುಕನ್ನೂ ಈಸಿ ಇದೀಗ ತನ್ನ ಮಗಳನ್ನು ಕೆಎಎಸ್ ಓದಿಸುವ ತಯಾರಿಯಲ್ಲಿದ್ದಾಳೆ. ಇಂತಹ ಹಲವಾರು ಉಚ್ಚಮ್ಮಂದಿರು ನಮ್ಮ ಸುತ್ತಮುತ್ತ ಸವಾಲುಗಳಿಗೆ ಸಡ್ಡು ಹೊಡೆದು ಬದುಕುತ್ತಿದ್ದಾರೆ. 

ಬದುಕು ಹಲವಾರು ಸವಾಲುಗಳನ್ನು ಇದ್ದಕ್ಕಿದ್ದಂತೆ ತಂದು ಮುಂದೆ ಇಟ್ಟುಬಿಡುತ್ತದೆ. ಬದುಕೆಂದರೆ ಹೀಗೇ. ಅದೆಂತಾ ಕಷ್ಟವೇ ಆಗಲಿ ದುತ್ತೆಂದು ಎದುರುಬಂದು ನಿಂತಾಗ ನಾವು ಎದೆಗುಂದಬಾರದು. ದಿಟ್ಟವಾಗಿ ಎದುರಿಸಬೇಕು. ನೀಸಲಾಗದ ಕಷ್ಟ ಯಾವುದೂ ಇರುವುದಿಲ್ಲ. ಪರಿಹಾರದ ಕಡೆ ಸಮಾಧಾನ ಚಿತ್ತದಿಂದ ಯೋಚಿಸಿದರೆ ಒಂದಲ್ಲಾ ಒಂದು ದಾರಿ ಸಿಕ್ಕೇ ಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.