
ಬರೀ ದಾಕ್ಷಿಣ್ಯಗಳಲ್ಲೇ ಬಾಳು ಸಾಗಿಸುವ ಜೀವಗಳಿವೆ. ಇಲ್ಲಿರಲಾರೆ, ಅಲ್ಲಿ ಹೋಗಲಾರೆ ಎಂಬ ಇಬ್ಬಂದಿಯ ದ್ವಂದ್ವ ಅದು. ಒಲ್ಲೆ ಅನ್ನದೆ ದಿಕ್ಕಾಪಾಲಾಗುವ ಸಮಯ. ಭಾರ ಹೊರುವುದಕ್ಕೂ ಒಂದು ಮಿತಿ ಇದೆ. ಒಪ್ಪಿಕೊಳ್ಳುವುದಕ್ಕೂ ಒಂದು ಮೇರೆ ಇದೆ. ಸಣ್ಣ ನಿಷ್ಠುರ ನಮ್ಮ ಮನಸನ್ನು ಒಂದಿನಿತು ತಹಬದಿಗೆ ನಿಲ್ಲಿಸಬಹುದು ಎನ್ನುವುದಾದರೆ ಅದು ಒಳ್ಳೆಯದೇ. ಆಗಲ್ಲ ಎಂದು ನೇರವಾಗಿ ಹೇಳದೆ ಕೈಲಾಗದ ಕೆಲಸವನ್ನು ಒಪ್ಪಿಕೊಂಡು ಜರ್ಜರಿತರಾಗುತ್ತಾರೆ. ಬಿಸಿತುಪ್ಪದ ಸ್ಥಿತಿ ಇದು.
ಒಂಟೆಯೊಂದನ್ನು ಸಾಕುತ್ತ ಜೀವನ ನಿರ್ವಹಣೆ ನಡೆಸುವ ವೃದ್ಧನ ಕತೆಯೂ ಇದೆ. ವೃದ್ಧನ ಒಂಟೆ ಮುಂಜಾವ ಬೀದಿಗೆ ಬಂತು ಎಂದರೆ ಕ್ರಮೇಣ ಬೆನ್ನಿನ ಮೇಲೆ ಮೂಟೆಗಳ ಭಾರ ಹೆಚ್ಚುತ್ತಾ ಹೋಗುತ್ತದೆ. ವೃದ್ಧ ತಾನು ಒಪ್ಪಿಕೊಂಡ ಹೊಣೆಯನ್ನೆಲ್ಲ ಒಂಟೆ ಬೆನ್ನ ಮೇಲೆ ಹೊರಿಸುತ್ತ ಹೋದ. ಇದು ಪ್ರತಿ ನಿತ್ಯದ ಪಾಡು. ಮೂಕ ಒಂಟೆಗೆ ಮಾತು ಬರುವುದಿಲ್ಲ. ವೃದ್ಧ ದಾಕ್ಷಿಣ್ಯದ ಮೂಟೆ. ಒಮ್ಮೊಮ್ಮೆ ಹಣದ ಆಸೆಗೆ ಒಮ್ಮೊಮ್ಮೆ ಉಪಕಾರದ ಭಾವಕ್ಕೆ ಬಿದ್ದು ಶಹರಕ್ಕೆ ಹೋಗುವ ದಾರಿಯಲ್ಲಿ ಯಾರೇ ಬಂದು ಸರಕನ್ನು ತಲುಪಿಸಲು ಹೇಳಿದರೂ ಒಪ್ಪಿಕೊಳ್ಳುವ ಮನುಷ್ಯ. ಈ ತರಹದ ದೃಷ್ಟಾಂತವು ಅದೆಷ್ಟು ಬಗೆಯ ಅನುಭವಗಳನ್ನು ಅನಾವರಣಗೊಳಿಸುತ್ತದೆ ನೋಡಿ.
ಬಂಧು ಬಳಗ ಸ್ನೇಹ ನೆಂಟಸ್ತಿಕೆ ಅಂತ ಕೆಲವೊಮ್ಮೆ ಇದ್ದ ಬದ್ದ ಚೈತನ್ಯವನ್ನೆಲ್ಲ ಬಸಿದು ಬಿಡುತ್ತದೆ. ಹತ್ತು ಹಲವರ ಚಿಂತೆಗಳನ್ನು ಮೈಮೇಲೆ ಹಾಕಿಕೊಳ್ಳುವ ಪರಿ ಇದು. ಊರ ಉಸಾಬರಿ ಅಂತಾರಲ್ಲ ಅದು. ಆದರೆ, ಎಷ್ಟು ಅಂತ ಹೆಣಗಲು ಸಾಧ್ಯ? ನಮ್ಮ ಮಿತಿ ಮತ್ತು ಸಾಧ್ಯತೆಗಳ ಬಗ್ಗೆ ಕೂಡಾ ಯೋಚಿಸಬೇಕಾಗುತ್ತದೆ. ಊರಿನ ಒಂಟೆಯ ಕತೆಯ ತರಹ. ಇಲ್ಲಿ ಆದದ್ದೂ ಹೀಗೇ. ಆ ಮುಂಜಾನೆ ವೃದ್ಧನ ಬುದ್ಧಿ ಭಾವಕ್ಕೆ ಏನು ಬಡಿದಿತ್ತೋ ಗೊತ್ತಿಲ್ಲ. ಶಹರದ ಬೀದಿಗುಂಟ ದುಡ್ಡು ಕೊಟ್ಟು ವಿನಂತಿಸಿಕೊಂಡ ವ್ಯಾಪಾರಿಗಳ ಸರಕುಗಳನ್ನು ಒಂಟೆಯ ಬೆನ್ನ ಮೇಲೆ ಹೇರುತ್ತ ಹೋದ. ತೊನೆದಾಡುತ್ತ ಹೊರಟ ಒಂಟೆ.
‘ಭಾರ ಇಲ್ಲ ಹಗುರ’ ಅಂತೆಲ್ಲ ಬಂದ ವ್ಯಾಪಾರಿಗಳ ಚೀಲಗಳನ್ನು ಹೊತ್ತು ಸಾಗಿತು. ಒಂಟೆಗೆ ಒಂದು ಹೆಜ್ಜೆಯೂ ಇಡಲು ಆಗದ ಆಯಾಸ ಏದುಸಿರು ಭಾರ. ಕಾಲುಗಳೆಲ್ಲ ಮಡಚಿಕೊಳ್ಳುತ್ತ ಕೂಡಲು ಹವಣಿಸುತ್ತಿತ್ತು. ಇನ್ನೇನು ಶಹರ ಅರ್ಧ ಮೈಲಿ ಇರಬಹುದು ಪುಟ್ಟ ಹುಡುಗಿಯೊಬ್ಬಳು ಓಡೋಡಿ ಬಂದಳು. ಸಣ್ಣ ಪೊಟ್ಟಣ ಅದು ಸ್ವಲ್ಪ ತಿಂಡಿ ತಿನಿಸು ಇರಬೇಕು. ವೃದ್ಧ ಒಲ್ಲೆ ಅನ್ನದೆ ಅದನ್ನು ಒಂಟೆಯ ಬೆನ್ನಿಗೆ ಸಿಕ್ಕಿಸಿದ. ಹತ್ತು ಹೆಜ್ಜೆ ನಡೆದಿರಬೇಕು. ಒಂಟೆ ಕುಸಿದು ಕೂತು ಬಿಟ್ಟಿತು. ಮಣಭಾರದ ಸರಕು ಇರಲಿ ಗ್ರಾಂ ತೂಕದ ಸರಕು ಇರಲಿ ಭಾರ ಭಾರವೇ ಮಿತಿ ಮಿತಿಯೇ ಶಕ್ತಿ ಶಕ್ತಿಯೇ. ‘ವೃದ್ಧ ಇಲ್ಲ ಆಗೊಲ್ಲ’ ಅಂತ ಹೇಳಿದ್ದರೆ ಒಂಟೆ ಕುಸಿದು ಕೂಡುತ್ತ ಇರಲಿಲ್ಲ. ಸಣ್ಣದೇ ಇರಬಹುದು ಅದು ಆ ಕ್ಷಣದ ಬಲು ಭಾರ.
ದುಡಿಮೆ, ಬದ್ಧತೆ ಕ್ಷಮೆತೆಗೂ ಒಂದು ಮಿತಿ ಇದೆ. ನಿರ್ದಾಕ್ಷಿಣ್ಯವಾಗಿ ಒಮ್ಮೆ ಇಲ್ಲ ಅನ್ನಲೇ ಬೇಕಾಗುತ್ತದೆ. ಇಲ್ಲ ಅನ್ನುವುದು ಸ್ವಾರ್ಥವಲ್ಲ. ಅದು ವಿವೇಕವೂ ಹೌದು. ಆಗದೆ ಇದ್ದರೂ ಹತ್ತು ಹಲವರ ಸಣ್ಣ ಪುಟ್ಟ ಚಿಂತೆಗಳನ್ನು ಹೊರುವವರು ಒಂದು ಸಲ ಇಲ್ಲ ಅನ್ನಬಾರದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.