ADVERTISEMENT

ನುಡಿ ಬೆಳಗು: ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು

ರೇಣುಕಾ ನಿಡಗುಂದಿ
Published 30 ಜನವರಿ 2026, 0:26 IST
Last Updated 30 ಜನವರಿ 2026, 0:26 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ತುಂಬಾ ಒಳ್ಳೆಯವರು ಎಂದು ಹೆಸರು ಮಾಡಿದ ಒಬ್ಬ ಮ್ಯಾನೇಜರ್ ದೀಪಾವಳಿ, ಹುಟ್ಟುಹಬ್ಬಗಳಂದು ಏನಾದರೂ ಉಡುಗೊರೆ ಕೊಡುತ್ತಿದ್ದರು. ಬೇಡವೆನ್ನಲು ಸಂಕೋಚ. ಅದು ಸಭ್ಯತೆ ಅಲ್ಲವೆಂದು ಸುಮ್ಮನಾಗುತ್ತಿದ್ದೆ. ಯಾಕೆಂದರೆ ಅವರು ತಮ್ಮ ಮನೆಯಲ್ಲಿನ ಬೇಡದ ವಸ್ತುಗಳನ್ನು, ಯಾರೋ ನೀಡಿದ ಬೇಡದ ಉಡುಗೊರೆಗಳನ್ನು ಇನ್ನೊಬ್ಬರಿಗೆ ದಾಟಿಸುತ್ತಿದ್ದರು. ‘ಒಂದು ಖರೀದಿಸಿ ಎರಡು ಪಡೆಯಿರಿ’ ಎಂಬ ಕೊಡುಗೆಯಲ್ಲಿ ಬಂದ ವಸ್ತುವನ್ನು ಉಡುಗೊರೆಯಾಗಿ ಕೊಟ್ಟು ಹತ್ತು ಸಲ, ‘ಹೇಗಿದೆ, ಇಷ್ಟವಾಯಿತೇ?’ ಎನ್ನುವವರೂ ಇದ್ದಾರೆ. ಈ ಪ್ರವೃತ್ತಿ ಇತ್ತೀಚೆಗೆ ಬಹಳಷ್ಟು ಜನರಲ್ಲಿ ಹೆಚ್ಚಾದುದನ್ನು ನೋಡುತ್ತೇವೆ. ನಿಮಗೆ ಬೇಡವಾದ ವಸ್ತು ಇನ್ನೊಬ್ಬರಿಗೂ ಬೇಡವಾಗಿರಬಹುದಲ್ಲ?

ದೀಪಾವಳಿಗೆ ಮನೆಯಲ್ಲಿ ಮಾಡಿದ ಚಕ್ಕುಲಿ, ಬೇಸನ್ ಉಂಡಿ, ಶಂಕರಪೋಳಿ, ಕೋಡುಬಳೆ ಇವನ್ನೇ ನೆರೆಹೊರೆಯವರಿಗೆ ಹಂಚಿ ಅವರು ಕಳಿಸಿದ ಫರಾಳವನ್ನು ನಾವು ಸವಿದು ಆನಂದಿಸುತ್ತಿದ್ದ ಕಾಲವಿತ್ತು. ಈಗ ದೀಪಾವಳಿಗೆ ಗೃಹೋಪಯೋಗಿ ಸಾಮಾನುಗಳನ್ನು, ಚಾಕಲೇಟ್ ಬುಟ್ಟಿಗಳನ್ನು ಉಡುಗೊರೆ ಕೊಡುವ ಸಂಪ್ರದಾಯ ಕೆಲವೊಮ್ಮೆ ಕಿರಿಕಿರಿಯುಂಟುಮಾಡುತ್ತದೆ. ಮನುಷ್ಯನ ಸಣ್ಣತನ, ಕ್ಷುಲ್ಲಕ ವರ್ತನೆಗಳು ಗೊತ್ತಾದರೆ ಹೇಗೆನಿಸಬೇಡ?

ADVERTISEMENT

ಬಯಸಿ ಬಯಸಿ ಒಮ್ಮೆ ಪಕ್ಕದ ಮನೆಯ ರಾಜಸ್ಥಾನಿ ಆಂಟಿಗೆ ಉಪ್ಪಿನಕಾಯಿ ಹಾಕಲು ಎಲ್ಲಾ ಸಾಮಗ್ರಿ ಕೊಡಿಸಿದೆ. ಆಕೆ ಹಾಕಿಕೊಟ್ಟ ಉಪ್ಪಿನಕಾಯಿ ಬೇಗ ಕೆಟ್ಟುಹೋಯಿತು. ನಾನು ಒಳ್ಳೆಯ ಗುಣಮಟ್ಟದ ಮಾವಿನಕಾಯಿ, ಮಸಾಲೆಗಳನ್ನ್ನೇ ಕೊಟ್ಟಿದ್ದೆ. ಆಕೆ ತಮ್ಮ ಉಪ್ಪಿನಕಾಯಿ ನಮ್ಮನೆಗೆ ದಾಟಿಸಿ, ಒಳ್ಳೆಯದನ್ನು ಇಟ್ಟುಕೊಂಡಿದ್ದು ನಂತರ ಗೊತ್ತಾಯ್ತು. ಹೀಗಿರುತ್ತಾರೆ ಜನ. ಇಂತಹವರನ್ನು ನೋಡಿಯೇ ಮಾನ್ಯ ಗುಂಡಪ್ಪನವರು ಈ ಕಗ್ಗ ಹೇಳಿರಬೇಕೆನಿಸುತ್ತದೆ.

ನಗು, ಮನದಿ ಲೋಗರ ವಿಕಾರಂಗಳನು ನೋಡಿ ।
ಬಿಗಿ ತುಟಿಯ, ದುಡಿವಂದು ನೋವಪಡುವಂದು ।।
ಪೊಗು, ವಿಶ್ವಜೀವನದ ಜೀವಾಂತರಂಗದಲಿ ।
ನಗುನಗುತ ಬಾಳ್, ತೆರಳು– ಮಂಕುತಿಮ್ಮ ।।

ಲೋಕದ ವಿಚಿತ್ರಗಳ ಮತ್ತು ಲೋಕದ ಜನರ ವಿಚಿತ್ರ ನಡವಳಿಕೆಯನ್ನು ಕಂಡು, ಮನದಲ್ಲೇ ನಕ್ಕುಬಿಡು. ನಿನಗೆ ಕಷ್ಟ ಬಂದು ತೀವ್ರ ಹೋರಾಟ ನಡೆಸಬೇಕಾದಾಗ ಮೌನವಾಗಿ ಅನುಭವಿಸು, ಜಗವೆಲ್ಲವನು ‘ಏಕಾತ್ಮ’ಭಾವದಲಿ ನೋಡುತ್ತಾ ನಗುನಗುತ್ತಾ ಬಾಳು ಮತ್ತು ನಗುನಗುತ್ತಲೇ ಇಲ್ಲಿಂದ ತೆರಳು ಎಂದು ಸಂತೋಷದಿಂದ ಬದುಕುವ ಮತ್ತು ನಿರ್ಗಮಿಸುವ ಉಪಾಯವನ್ನು ನಮಗೆ ತಿಳಿಸಿದ್ದಾರೆ.

ಜಗತ್ತಿನ ಜನರ ಚಿತ್ರವಿಚಿತ್ರ ಭಾವಗಳಿಂದ ಕೂಡಿದ ನಡವಳಿಕೆಯನ್ನು ಕಂಡು ಟೀಕೆ, ಕುಹಕ ಮುಂತಾದವುಗಳನ್ನು ಮಾಡದೆ ಅವುಗಳನ್ನು, ಪ್ರಕೃತಿ ಪ್ರಚೋದಿತ, ತ್ರಿಗುಣಗಳ ಆಟವೆಂದು ಬಗೆದು ಮನದಲ್ಲೇ ಒಂದು ನಗೆಯನ್ನು ನಕ್ಕು ಸುಮ್ಮನಿರಬೇಕು. ಲೋಕದ ಡೊಂಕನ್ನು ತಿದ್ದಲು ಸಾಧ್ಯವಿಲ್ಲ. ಅದು ಇರುವುದೇ ಹಾಗೆ. ನಮ್ಮ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ನಾವೇ ಬದಲಾಗುವುದು ಒಳಿತಲ್ಲವೇ? ಹೇಗೆ ಎಂದರೆ, ಬಹಳ ಸುಲಭ. ‘ಅವರು ಹೀಗಿರಬೇಕು ಅಥವಾ ಅವರು ಹೀಗಿದ್ದರೆ ಚೆನ್ನ’ ಎನ್ನುವಂತಹ ಭಾವಗಳನ್ನು ನಮ್ಮೊಳಗಿಂದ ಅಳಿಸಿ ಹಾಕಿ ‘ಅಪೇಕ್ಷಾರಹಿತ ನಿರ್ಲಿಪ್ತಿ’ಯನ್ನು ಬೆಳೆಸಿಕೊಂಡರೆ ನಮ್ಮ ಅಂತರಂಗದ ‘ಶಾಂತಿ’ಯನ್ನು ಕಾಪಾಡಿಕೊಳ್ಳಬಹುದು ಎನ್ನುತ್ತಾರೆ. ಆದರೆ ಹುಲುಮಾನವರಾದ ನಮಗೆ ಇಷ್ಟೆಲ್ಲ ನಿರ್ಲಿಪ್ತತೆ, ಸ್ಥಿತಪ್ರಜ್ಞ ಭಾವವನ್ನು ಸಿದ್ಧಿಸಿಕೊಳ್ಳುವುದು ಸುಲಭವೇ?

‘ಹಂಗಿನರಮನೆಗಿಂತ

ಇಂಗಡದ ಗುಡಿ ಲೇಸು

ಭಂಗಬಟ್ಟುಂಬ ಬಿಸಿಯನ್ನಕ್ಕಿಂತಲೂ

ತಂಗುಳವೆ ಲೇಸು’ ಎಂದಿಲ್ಲವೇ ಸರ್ವಜ್ಞ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.