ADVERTISEMENT

ನುಡಿ ಬೆಳಗು | ಸುಲಭ ಸೂತ್ರ

ಪಿ. ಚಂದ್ರಿಕಾ
Published 2 ಜುಲೈ 2025, 23:02 IST
Last Updated 2 ಜುಲೈ 2025, 23:02 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ನಿವೃತ್ತ ಡಿವೈಎಸ್‌ಪಿ ರಮೇಶಣ್ಣ ಅವರನ್ನು ಮೊನ್ನೆ ಭೇಟಿಯಾದೆ. ಜೊತೆಗೆ ನನ್ನ ತಮ್ಮನಂಥ ಹುಡುಗನೂ ಇದ್ದ. ಅವನಿಗೆ ಸಕ್ಕರೆ ಕಾಯಿಲೆ. ಆಗ ತಾನೆ ಆಸ್ಪತ್ರೆಯಿಂದ ಮನೆಗೆ ಬಂದಿದ್ದ. ಆದರೂ ಅವನ ಕಡೆಗೆ ಅವನಿಗೇ ಗಮನವಿರಲಿಲ್ಲ. ಸಿಕ್ಕಿದ್ದನ್ನೆಲ್ಲಾ ತಿಂದುಬಿಡುತ್ತಿದ್ದ. ಅವನ ಹೆಂಡತಿ ಈ ಬಗ್ಗೆ ಅವರಲ್ಲಿ ಮಾತನಾಡಿದ್ದಳು ಅನ್ನಿಸುತ್ತೆ. ಈ ಹುಡುಗ ಯಾರು ಹೇಳಿದ್ದನ್ನೂ ಕೇಳುವವನಲ್ಲ ಎಂದವರಿಗೆ ಅರ್ಥವಾಗಿತ್ತು. ಇದೆಲ್ಲವನ್ನೂ ಗಮನಿಸಿದ ರಮೇಶಣ್ಣ ಅವನಿಗೆ ಒಂದು ಕಥೆಯನ್ನು ಹೇಳಿದರು.

ಒಮ್ಮೆ ಹೆಂಡತಿಯು ಗಂಡನಿಗೆ, ‘ಅಕಸ್ಮಾತ್ ನಾನು ಸತ್ತು ಹೋದರೆ ಏನು ಮಾಡುತ್ತೀರೀ’ ಎಂದಳು. ಗಂಡ ತಬ್ಬಿಬ್ಬಾಗಿ, ‘ಬದುಕಿರುವಾಗ ಸಾಯುವ ಮಾತು ಯಾಕೆ? ಸುಮ್ಮನಿರು’ ಎಂದ. ಹೆಂಡತಿ ಬಿಡಲಿಲ್ಲ, ‘ಅಲ್ಲಾರೀ ನೀವು ಏನೂ ಮಾಡಬಹುದು. ಆದರೆ ಅದನ್ನು ನೋಡಲಿಕ್ಕೆ ನಾನಿರಲ್ಲ. ಅದಕ್ಕೆ ಕೇಳ್ತ ಇದೀನಿ ಹೇಳಿ’ ಎಂದಳು. ಇದ್ಯಾಕೋ ಅತಿರೇಕಕ್ಕೆ ಹೋಯಿತು ಎಂದು ಭಾವಿಸಿದ ಗಂಡ ಅವಳನ್ನು ಇನ್ನಿಲ್ಲದಂತೆ ಮನವೊಲಿಸಲು ಯತ್ನಿಸಿದ. ಇನ್ನು ಆಗಲ್ಲ ಎಂದು ಗೊತ್ತಾದ ಮೇಲೆ, ‘ನೀನು ಸತ್ತ ಮೇಲೆ ಕೊನೆಯ ಪಯಾಣವನ್ನು ಅತ್ಯಂತ  ವಿಜೃಂಭಣೆಯಿಂದ  ಮಾಡುತ್ತೇನೆ. ನೀನು ಇಷ್ಟಪಡುವ ಎಲ್ಲವೂ ನಿನ್ನ ಜೊತೆಯಲ್ಲಿ ಆ ಕ್ಷಣದಲ್ಲಿ ಇರುವಂತೆ ನೋಡಿಕೊಳ್ಳುವೆ. ಮುಖ್ಯವಾಗಿ  ನಿನಗೆ ಇಷ್ಟವಾದ ಗುಲಾಬಿ ಹೂಗಳಿಂದ ಅಲಂಕರಿಸಿ, ನೋಡಿದ ಜನ ಮೂಗಿನ ಮೇಲೆ ಬೆರಳಿರಿಸುವಂತೆ ಮಾಡುವೆ’ ಎಂದ. ಹೆಂಡತಿ, ‘ಹೌದಾ’ ಎಂದಳು. ಅವಳ ತಲೆಮೇಲೆ ಕೈ ಇರಿಸಿ, ‘ನಿನ್ನಾಣೆಯಾಗಿಯೂ’ ಎಂದ ಗಂಡ. ‘ಅಲ್ಲಾರಿ ನನಗೆ ಗುಲಾಬಿ ಇಷ್ಟ ಅಂತ ನಿಮಗೆ ನೆನಪಿದೆ ತಾನೇ ಹಾಗಿದ್ದ ಮೇಲೆ ಐದು ರೂಪಾಯಿ ಒಂದು ಹೂ ನನಗೇ ತಂದುಕೊಟ್ಟರೆ ಎಂಥಾ ದೊಡ್ಡ ಸಮಾಧಾನ. ನಿಮ್ಮನ್ನು ನಾನು ಇನ್ನಷ್ಟು ವಿಶ್ವಾಸ ಪ್ರೀತಿಯಿಂದ ನೋಡುವೆ. ಅದರಿಂದ ನನ್ನ ಮೇಲೂ ನಿಮಗೆ ವಿಶ್ವಾಸ ಜಾಸ್ತಿಯಾಗುತ್ತದೆ ಅಲ್ಲವೇ? ಸತ್ತ ಮೇಲೆ ಬೇರೆಯವರು ನೋಡಲಿ ಎಂದು ಮಾಡುವುದಕ್ಕಿಂತ ಬದುಕಿದ್ದಾಗ ನನ್ನೊಂದಿಗೆ ಹೇಗೆ ನಡೆದುಕೊಳ್ಳಬಲ್ಲೆ ಎನ್ನುವುದು ಮುಖ್ಯ. ಇದು  ಜೀವನದ ಸುಲಭ ಸೂತ್ರ ಅಲ್ಲವೇ’ ಎಂದಳು ವಿಷಾದದಿಂದ. ಆ ಮಾತು ಕೇಳಿ ತೀವ್ರ  ಅವಮಾನದಿಂದ ಗಂಡನಿಗೆ ತಲೆ ಎತ್ತಲಿಕ್ಕೇ ಆಗಲಿಲ್ಲ.

ADVERTISEMENT

‘ಹೊಂದಾಣಿಕೆ ಎನ್ನುವುದು ಒಂದು ಪುಟ್ಟ ಗುಲಾಬಿಯಲ್ಲಿದೆ ಎಂದಾಗ ಅದನ್ನು ಕೊಡುವುದರಲ್ಲಿ ಯಾವ ನಷ್ಟವಿದೆ? ದೇಹಕ್ಕೂ ಅಷ್ಟೇ, ಅದು ಸುಖಿಯಾಗಿದ್ದರೆ ನೀನು ಏನು ಬೇಕಾದರೂ ಮಾಡುತ್ತೀಯ. ಅದನ್ನು ಕೆಡಿಸಿಕೊಂಡರೆ ಆಸ್ಪತ್ರೆಯ ವಾಸ. ದೇಹ ಮತ್ತು ಮನಸ್ಸು ಆದರೂ ಸರಿಯೆ, ಗಂಡ ಹೆಂಡತಿಯಾದರೂ ಸರಿಯೆ.. ಒಂದನ್ನೊಂದು ಅನುಸರಿಸದೇ ಇದ್ದರೆ ಕಷ್ಟವಾಗುತ್ತೆ. ನಿನ್ನ ಮನಸ್ಸು ದೇಹ ಎರಡನ್ನೂ ಸಮತೋಲಿತವಾಗಿ ಇಟ್ಟುಕೊಳ್ಳಬೇಕು ದೇಹಕ್ಕೆ ಒಳಿತಾಗುವುದನ್ನು ಮನಸ್ಸು, ಮನಸ್ಸು ಹೇಳಿದ್ದನ್ನು ದೇಹವೂ ಕೇಳಿದರೆ ಕಾಯಿಲೆಯನ್ನು ದೂರ ಇಡಬಹುದು. ಕೊನೆಯವರೆಗೂ ನಿನ್ನ ಜೊತೆ ಇರುವುದು ನಿನ್ನ ಮನಸ್ಸೇ ಹೊರತು ಹೊರಗಿನ ಜನರಲ್ಲ. ಸಂಸಾರದಲ್ಲೂ ಅಷ್ಟೇ ಹೆಂಡತಿ ಮಾತ್ರ ನಿನ್ನ ಜೊತೆ ಇರಬಲ್ಲಳು’ ಎಂದರು ರಮೇಶಣ್ಣ.      

ನಿಜ. ಸಣ್ಣ ಪುಟ್ಟ ಸಂಗತಿಗಳು ಇಡೀ ಬದುಕನ್ನೇ ರೂಪಿಸುತ್ತಿರುತ್ತದೆ. ಅರ್ಥ ಮಾಡಿಕೊಂಡರೆ ಜೀವನ ಸರಳ, ಸಲೀಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.