ನುಡಿ ಬೆಳಗು
‘ಅವನಿಗೆ ಮಗಳನ್ನು ಕೊಟ್ಟು ಉಪಕಾರ ಮಾಡಿದ್ದೇನೆ’ ಅಂತ ಮಾವನ ಭಾವನೆ.
‘ಕಳೆ ತೆಗೆಯಲಿಲ್ಲ, ಗೊಬ್ಬರ ಹಾಕಲಿಲ್ಲ, ಫಲ ಬಿಟ್ಟ ಮರಕ್ಕೆ ಬೊಗಸೆ ತುಂಬ ನೀರು ಬಿಟ್ಟು, ‘ನಾನೇ ಸಾಕಿದ ಮರ’ ಅಂದರೆ ಕೇಳುವವರಾರು’ ಅಂತ ಅಳಿಯನ ಪ್ರಶ್ನೆ.
ಮಾವ ಅಳಿಯನ ನಡುವಿನ ಈ ತಾಕಲಾಟದಲ್ಲಿ ವರುಷ ತುಂಬುವುದರೊಳಗೆ ಮಗಳು ಚೊಚ್ಚಲ ಹೆರಿಗೆಗಾಗಿ ತವರು ಸೇರಿದಳು. ‘ನಮ್ಮ ಕೈಲಾದ ಮಟ್ಟಿಗೆ ಆದರಾತಿಥ್ಯ ಮಾಡಿ ಗೌರವದಿಂದ ಕಳಿಸಿಕೊಡುತ್ತಿದ್ದೆವು. ನಮ್ಮನ್ನು ಒಂದು ಮಾತು ಕೇಳದೆ ಕರೆದುಕೊಂಡು ಹೋಗಿದ್ದಾರೆ. ಅವರ ಮಗಳು ಅವರ ಮನೆಯಲ್ಲಿ ಇರಲಿ ಬಿಡು, ಅವರಾಗಿ ಬಂದು ಕರೆಯುವವರೆಗೆ ಅಲ್ಲಿಗೆ ಕಾಲಿಟ್ಟರೆ ನಮ್ಮನ್ನು ಮರೆತುಬಿಡು’ ಅಂತ ಹುಡುಗನನ್ನು ಕಟ್ಟಿ ಹಾಕಿದ ತಂದೆ ತಾಯಿ.
ಹೆರಿಗೆಯ ನಂತರ ಮಗುವನ್ನಾದರೂ ನೋಡಲು ಗಂಡ ಬರುತ್ತಾನೆ ಎಂಬ ವಿಶ್ವಾಸ ಆಕೆಗಿತ್ತು. ಆತ ಬರಲಿಲ್ಲ. ನನ್ನದೇನು ತಪ್ಪು, ನಾನೇನು ಮಾಡಲಿ, ಕಡೆಯ ಪಕ್ಷ ಮಗುವಿನ ಮೇಲಾದರೂ ಮಮತೆ ಬೇಡವೇ ಎನ್ನುವುದು ಅವಳ ಕಳವಳ.
ನಿಜ; ಎತ್ತಿಕೊಳ್ಳುವವರ ತೋಳುಗಳ ಆಭರಣದಂತಿರುವ ಮಗು ತನ್ನದಲ್ಲದ ಕಾರಣಕ್ಕಾಗಿ ಸ್ವತಃ ಅಪ್ಪನ ಕಣ್ಣ ಬೆಳಕನ್ನು ಕಾಣದಂತಾಗಿದೆ. ಅಳಿಯ-ಮಾವರಿಬ್ಬರ ನಡುವಿನ ಸಣ್ಣದೊಂದು ಭಾವನಾತ್ಮಕ ವಿರೋಧ ಹಲವರ ನಡುವಿನ ವಿರೋಧವಾಗಿ ವಿಸ್ತರಣೆಗೊಂಡಿದೆ. ಒಲವು ತೀವ್ರವಾಗಬೇಕಿದ್ದ ಸಂದರ್ಭದಲ್ಲಿ ಅನಪೇಕ್ಷಿತ ವಿರಸ ಮಡುಗಟ್ಟಿದೆ. ಮುಖಕ್ಕೆ ಮುಖ ಕೊಟ್ಟು ಮಾತಾಡಲಾಗದ ಹಟ ಪ್ರತಿಷ್ಠೆಯಾಗಿ ಬದಲಾಗಿದೆ.
ಒಂದು ಸಂಸಾರವಾಗಿ, ಸಮಾಜವಾಗಿ ನಮ್ಮ ಸಂಬಂಧಗಳಲ್ಲಿ ನಾನಾ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಭಿನ್ನಾಭಿಪ್ರಾಯಗಳು ಹುಟ್ಟುತ್ತವೆ. ವ್ಯಕ್ತಿಗತ ಸಂವೇದನೆ ಮತ್ತು ಅಭಿರುಚಿಗಳು ಸದಾ ವಿಭಿನ್ನವಾಗಿರುತ್ತವೆ. ಇಂಥ ವೈವಿಧ್ಯದ ನಡುವೆ ತೀವ್ರ ಜಾಗರೂಕತೆಯಿಂದ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವವರು ಕಡಿಮೆ. ಆದರೆ, ನಾವು ನಾಗರಿಕರಾದಂತೆ ಯಾರ ಜೊತೆ ನಮ್ಮ ವಿರೋಧವಿದೆಯೋ ಅವರನ್ನು ಮಾತ್ರ ತಾತ್ವಿಕವಾಗಿಯೋ ಭಾವನಾತ್ಮಕವಾಗಿಯೋ ವ್ಯಾವಹಾರಿಕವಾಗಿಯೋ ಎದುರಿಸಬೇಕು. ಬದಲಾಗಿ ವಿರೋಧ ಹೊಂದಿರುವ ವ್ಯಕ್ತಿಗೆ ಸಂಬಂಧಿಸಿದವರನ್ನು ದೂರುವುದು, ಅವರ ಮೇಲೆ ಮುನಿಸಿಕೊಳ್ಳುವುದು ಪ್ರಬುದ್ಧತೆಯ ಲಕ್ಷಣವಲ್ಲ. ಇದು ವ್ಯಕ್ತಿಗತ ಸಂಬಂಧವನ್ನೂ ಹಲವು ಬಗೆಯ ಭಾಷೆ,ಜಾತಿ, ಧರ್ಮಗಳು ಒಟ್ಟಿಗೆ ಉಸಿರಾಡುತ್ತಿರುವ ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡಿಕೊಳ್ಳಲು ಅಗತ್ಯವಾದ ಬೌದ್ಧಿಕ ಎತ್ತರ. ಇಲ್ಲದಿದ್ದರೆ ‘ಮುನಿಸು ಮಾವನ ಮೇಲೆ ಮಗಳೇನು ಮಾಡಿದಳು’ ಎಂಬ ಪ್ರಶ್ನೆಗೆ ಉತ್ತರಿಸಲೇಬೇಕಾದ ಹೊಣೆಗಾರಿಕೆಯನ್ನು ಯಾರು ಹೊರಬೇಕು? ಮಾವನ ಮೇಲಿನ ಮುನಿಸು ತನ್ನೊಲವಿನ ಮಡದಿಯನ್ನು ಘಾತಿಸುವ ಆಯುಧವಾಗಬಾರದು.
ವೈಯಕ್ತಿಕವಾದ ಯಾವುದೋ ಕಾರಣಕ್ಕೆ ಇರುವ ವಿರೋಧವನ್ನು ವ್ಯಕ್ತಿಯ ಜೊತೆಗೆ ಆತನ ಭಾಷೆ, ಧರ್ಮ, ದೇವರು, ನಂಬಿಕೆ, ಜಾತಿಗಳಂಥ ವಿಷಯಗಳಿಗೂ ಅಂಟಿಸಿಕೊಂಡು ಮನಸ್ಸುಗಳನ್ನು ಮಲಿನಗೊಳಿಸುವುದು ನ್ಯಾಯಸಮ್ಮತವಲ್ಲ. ಯಾರದೋ ಮುನಿಸಿಗೆ ಇನ್ನಾರಿಗೋ ತಳಮಳ ಉಂಟುಮಾಡುವುದು ತರವಲ್ಲ. ಸಕಾರಣ ವಿರೋಧ ಮತ್ತು ನಿಷ್ಕಾರಣ ಪ್ರೀತಿ ನಮ್ಮ ಬದುಕಿನ ಆಶಯವಾಗಬೇಕಾಗಿದೆ.
ಸಂಸಾರದಲ್ಲಿನ ನೆಮ್ಮದಿ ಸಮಾಜದ ನೆಮ್ಮದಿಗೆ ಪ್ರೇರಣೆಯಾಗಿದೆ. ‘ಮನೆ ಗೆದ್ದು ಮಾರು ಗೆಲ್ಲು’ ಎನ್ನುವ ಮಾತನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಎಲ್ಲರೊಳಗೊಂದಾಗಿ ಬದುಕುವ ರೀತಿಗೆ ಇದು ಮಾರ್ಗವೂ ಮಾದರಿಯೂ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.