
ನುಡಿ ಬೆಳಗು
ಕಾಡೊಂದರಲ್ಲಿ ಸಿಂಹದ ಮರಿಯೊಂದು ಇತ್ತು. ಬಹಳ ಚುರುಕಿನ, ಬಲಶಾಲಿ ಮರಿಸಿಂಹವದು. ಅದಕ್ಕೆ ತನ್ನ ವೇಗದ ಬಗ್ಗೆ, ಬಲದ ಬಗ್ಗೆ ಬಹಳ ಹೆಮ್ಮೆಯಿತ್ತು. ‘ನನಗೆ ಯಾವುದರಲ್ಲೂ ಯಾರ ಸಹಾಯವೂ ಬೇಕಿಲ್ಲ, ನನ್ನಷ್ಟಕ್ಕೆ ನಾನೇ ಎಲ್ಲ ಕೆಲಸ ಮಾಡಿಕೊಳ್ಳಬಲ್ಲೆ’ ಎಂದು ಹೇಳಿಕೊಳ್ಳುತ್ತಿತ್ತು. ಬೇರೆ ಪ್ರಾಣಿಗಳಿಗೆ ಈ ಮಾತುಗಳನ್ನು ಕೇಳಿ ಕಿರಿಕಿರಿ ಅನ್ನಿಸಿದರೂ ಇನ್ನೂ ಕಿರಿಯ ಪ್ರಾಯ ಎಂದುಕೊಂಡು ಸುಮ್ಮನಾಗುತ್ತಿದ್ದವು.
ಒಂದು ದಿನ ಮರಿಸಿಂಹ ಚಿಟ್ಟೆಯೊಂದನ್ನು ಬೆನ್ನಟ್ಟುತ್ತ ಸ್ವಲ್ಪ ದಟ್ಟ ಕಾಡೊಳಗೆ ಬಂದುಬಿಟ್ಟಿತು. ಅಷ್ಟೇ ಅಲ್ಲ, ಓಡುವಾಗ ನೋಡದೇ ಅದರ ಕಾಲು ಎರಡು ಬಂಡೆಗಳ ನಡುವಿರುವ ಪುಟ್ಟ ಬಿರುಕಿನಲ್ಲಿ ಸಿಕ್ಕಿಹಾಕಿಕೊಂಡಿತು. ಎಷ್ಟು ಪ್ರಯತ್ನಪಟ್ಟರೂ ಬಿಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಸಂಜೆಯಾಗುತ್ತ ಬಂತು. ಮರಿಸಿಂಹಕ್ಕೆ ಸಣ್ಣದಾಗಿ ಭಯ ಶುರುವಾಯಿತು. ಯಾರೂ ಬಾರದೇ ಹೋದರೆ ರಾತ್ರಿಯಿಡೀ ಆ ಕಗ್ಗತ್ತಲ ದಟ್ಟ ಕಾಡಿನಲ್ಲಿ ಕಳೆಯುವ ಯೋಚನೆಯೇ ಅದಕ್ಕೆ ಭೀತಿ ಹುಟ್ಟಿಸಿತು. ತನ್ನ ಸಹಾಯಕ್ಕೆ ಯಾರೂ ಅಗತ್ಯವಿಲ್ಲ ಅಂದುಕೊಂಡಿದ್ದ ಸಿಂಹದ ಮರಿ ಈಗ ಯಾರಾದರೂ ಬಂದರೆ ಸಾಕು ಎಂದು ಕಾಯತೊಡಗಿತು. ಯಾರಿಗಾದರೂ ಕೇಳಲಿ ಎಂದು ಜೋರಾಗಿ ಬೊಬ್ಬಿಡತೊಡಗಿತು.
ಅಷ್ಟು ಹೊತ್ತಿಗೆ ದೊಡ್ಡದಾದ ಕಾಡುಬಾಳೆಯ ಗೊನೆಯೊಂದನ್ನು ಮುರಿದು ತಿನ್ನುತ್ತ ವಾಪಸ್ ಹೊರಟಿದ್ದ ಆನೆಗೆ ಮರಿಸಿಂಹದ ಕೂಗು ಕೇಳಿಸಿತು. ಓಡೋಡಿ ಬಂದು ನೋಡಿದರೆ ಸಿಂಹ ಸಿಕ್ಕಿಹಾಕಿಕೊಂಡಿದೆ. ‘ಹೆದರಬೇಡ ನಿನ್ನನ್ನು ಬಿಡಿಸೋಣ’ ಎಂದಿತು ಮೃದುವಾಗಿ. ಆನೆಯನ್ನು ನೋಡಿ ಸಿಂಹದ ಮರಿಗೆ ಹೋದ ಜೀವ ಬಂದಂತಾಯಿತು. ಅಷ್ಟು ಹೊತ್ತಿಗೆ ಆಮೆ ಮತ್ತು ಝೀಬ್ರಾ ಕೂಡ ಸೇರಿಕೊಂಡವು. ಆಮೆಯ ಸಲಹೆಯಂತೆ ಆನೆ ನಿಧಾನಕ್ಕೆ ಸಿಂಹದ ಮರಿಯ ಕಾಲನ್ನು ಬಿಡಿಸಿತು. ಝೀಬ್ರಾ ಸಿಂಹದ ಮರಿಗೆ ಸಮಾಧಾನ ಹೇಳುತ್ತ ಆನೆಯನ್ನು ಪ್ರೋತ್ಸಾಹಿಸುತ್ತಿತ್ತು. ಅಂತೂ ಸ್ವಲ್ಪ ಹೊತ್ತು ಪ್ರಯತ್ನಪಟ್ಟ ಮೇಲೆ ಸಿಂಹದ ಮರಿಯನ್ನು ಬಿಡಿಸಲು ಆನೆ ಯಶಸ್ವಿಯಾಯಿತು.
ಮರಿಸಿಂಹಕ್ಕೆ ಖುಷಿಯೋ ಖುಷಿ. ಎಲ್ಲರಿಗೂ ಧನ್ಯವಾದ ಹೇಳಿದ್ದೇ ಹೇಳಿದ್ದು. ‘ಬೇರೆಯವರ ಹತ್ತಿರ ಸಹಾಯ ಕೇಳುವುದೆಂದರೆ ಅವಮಾನ ಎಂದು ನಾನು ಅಂದುಕೊಂಡಿದ್ದೆ. ಆದರೆ ಅದರಲ್ಲಿ ತಪ್ಪೇನೂ ಇಲ್ಲವೆಂದು ಈಗ ಅರ್ಥವಾಯಿತು’ ಅಂದಿತು. ಅಂದಿನಿಂದ ಮರಿಸಿಂಹ ಅಹಂಕಾರ ಬಿಟ್ಟು ತಾನೂ ಆಗಾಗ್ಗೆ ಇತರರ ಸಹಾಯ ಪಡೆದಿದ್ದಲ್ಲದೇ ಬೇರೆಯವರಿಗೂ ಅವಶ್ಯಕತೆ ಬಿದ್ದಾಗ ಸಹಾಯ ಮಾಡತೊಡಗಿತು.
ನಾವೂ ಅಷ್ಟೇ; ಒಂದು ಒಳ್ಳೆಯ ಸಂಬಳ ತರುವ ಕೆಲಸವೋ, ಹಣ ಇರುವ ವ್ಯವಹಾರವೋ ಅಥವಾ ಆಸ್ತಿಯೋ ಇದ್ದುಬಿಟ್ಟರೆ ಬೇರೆ ಯಾರ ಸಹಾಯವೂ ಅಗತ್ಯವಿಲ್ಲ ಎಂದು ತಿಳಿದುಕೊಂಡಿರುತ್ತೇವೆ. ಬದುಕಿನ ಎಲ್ಲ ಸಂದರ್ಭಗಳೂ ಒಂದೇ ರೀತಿ ಇರುವುದಿಲ್ಲ. ನಾವು ಬಳಸುವ ಪೇಸ್ಟ್‌ನಿಂದ ಹಿಡಿದು ಪ್ರತಿಯೊಂದು ವಸ್ತುವಿನ ತಯಾರಿಕೆಯೂ ಬೇರೆಯವರದ್ದೇ ಆಗಿರುವಾಗ ನಮಗೆ ಯಾರ ಸಹಾಯವೂ ಅಗತ್ಯವಿಲ್ಲ ಎಂಬ ಮಾತು ತಮಾಷೆಯೆನಿಸುತ್ತದೆ.
ಇನ್ನು ಬದುಕಿನಲ್ಲಿ ಸಂಕಷ್ಟಗಳು ಬಂದಾಗ ಯಾರ ಹತ್ತಿರವಾದರೂ ಸಹಾಯ ಕೇಳುವುದಕ್ಕೇ ಮುಜುಗರ ಪಟ್ಟು ಬದುಕನ್ನೇ ಕೊನೆಗೊಳಿಸಿಕೊಂಡು ಕುಟುಂಬದವರನ್ನು ಬೀದಿಪಾಲು ಮಾಡುವ ಜನರೂ ಬೇಕಾದಷ್ಟು. ಸಹಾಯ ಕೇಳುವುದರಲ್ಲಿ ಅವಮಾನವೇನಿಲ್ಲ, ಕೇಳದೇ ಇರುವುದರಲ್ಲಿ ದೊಡ್ಡಸ್ತಿಕೆಯೂ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ಬದುಕಿನಲ್ಲಿ ಆತ್ಮವಿಶ್ವಾಸದಿಂದ ಮುಂದುವರಿಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.