ADVERTISEMENT

ನುಡಿ ಬೆಳಗು: ಕ್ರೋಧವನ್ನು ಗೆಲ್ಲದವನು ಯುದ್ದ ಗೆದ್ದೇನು ಪ್ರಯೋಜನ?

ಪ್ರೊ. ಎಂ. ಕೃಷ್ಣೇಗೌಡ
Published 4 ಏಪ್ರಿಲ್ 2024, 23:47 IST
Last Updated 4 ಏಪ್ರಿಲ್ 2024, 23:47 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಅದೊಂದು ಯುದ್ಧ- ರಾಜಾ ವಿಜಯಸಿಂಹ ಮತ್ತು ಪ್ರತಾಪರುದ್ರರ ನಡುವೆ. ಇಬ್ಬರೂ ಸಮಾನ ಬಲಶಾಲಿಗಳು. ಯಾರೂ ಗೆಲ್ಲುತ್ತಿಲ್ಲ, ಸೋಲುತ್ತಿಲ್ಲ. ಹೀಗೇ ಹಲವಾರು ವರ್ಷಗಳ ಕಾಲ ಯುದ್ಧ ಮುಗಿಯಲೇ ಇಲ್ಲ.

ಹಾ....ಯುದ್ಧ ಸಮಾಪ್ತಿಯ ದಿನ ಬಂತು. ರಾಜಾ ವಿಜಯಸಿಂಹ ಕುದುರೆಯ ಮೇಲಿಂದ ಜಾರಿ ಕೆಳಗೆ ಬಿದ್ದುಬಿಟ್ಟ. ಪ್ರತಾಪರುದ್ರ ಅದನ್ನು ತನ್ನ ಕುದುರೆಯ ಮೇಲೆ ಕುಳಿತೇ ನೋಡಿದ. ಮಿಂಚಿನ ವೇಗದಿಂದ ಅಲ್ಲಿಗೆ ಬಂದ. ಬಿದ್ದಿದ್ದ ವಿಜಯಸಿಂಹನ ಮೇಲೆ ಹಾರಿ ಎದೆಯ ಮೇಲೆ ಕವೆಗಾಲಿನಲ್ಲಿ ಕೂತು ಸೊಂಟದ ಕಠಾರಿಯನ್ನು ತೆಗೆದು ಝಳಪಿಸಿದ. ಇನ್ನೇನು ಆ ಕಠಾರಿಯನ್ನು ವಿಜಯಸಿಂಹನ ಎದೆಗೆ ಚುಚ್ಚಬೇಕು. ಆಗ ಅವಮಾನದಿಂದ ಕನಲಿಹೋದ ವಿಜಯಸಿಂಹ ಪ್ರತಾಪರುದ್ರನ ಮುಖದ ಮೇಲೆ ‘ತುಪ್ಪ್’ ಅಂತ ಉಗುಳಿಬಿಟ್ಟ. ಅಹ್... ಅನಿರೀಕ್ಷಿತ ಇದು ಪ್ರತಾಪರುದ್ರನಿಗೆ.

ADVERTISEMENT

ಏನನ್ನಿಸಿತೋ ಪ್ರತಾಪರುದ್ರ ಕಠಾರಿಯಿಂದ ವೈರಿಯೆದೆಯನ್ನು ಚುಚ್ಚದೆ ಮರಳಿ ಸೊಂಟಕ್ಕಿಟ್ಟುಕೊಂಡು ಕೂತುಬಿಟ್ಟ.
ಅಚ್ಚರಿಯಾಯಿತು ವಿಜಯಸಿಂಹನಿಗೆ. ಅವನು ಕೇಳಿದ, ‘ಅಲ್ಲಯ್ಯಾ ರಾಜ, ಇಂಥದೊಂದು ಸಂದರ್ಭದಲ್ಲಿ ಹೀಗೆ ಮಾಡಿಬಿಟ್ಟೆ ಏಕೆ? ಸುಲಭದ ಬೇಟೆಯನ್ನು ಬಿಟ್ಟುಬಿಟ್ಟೆ ಏಕೆ? ಇದು ನನ್ನನ್ನು ಅವಮಾನಿಸುವುದಕ್ಕಾ? ನಿನ್ನ ಪ್ರಾಣಭಿಕ್ಷೆ ನನಗೆ ಬೇಡ. ಕೊಲ್ಲು ನನ್ನನ್ನು...’

ಆಗ ಪ್ರತಾಪರುದ್ರ ಹೇಳಿದ: ‘ರಾಜಾ, ಕ್ರೋಧ ದ್ವೇಷಗಳಿಲ್ಲದೆ ಯುದ್ಧ ಮಾಡಿದರೆ ಮಾತ್ರ ಯುದ್ಧಕ್ಕೆ ಒಂದು ಗೌರವ. ನಾನು ನಿನ್ನನ್ನು ಖಂಡಿತ ಕೊಲ್ಲುತ್ತಿದ್ದೆ, ನೀನು ನನ್ನ ಮುಖದ ಮೇಲೆ ಉಗುಳದಿದ್ದರೆ. ನೀನು ಉಗುಳಿದ್ದರಿಂದ ನನ್ನ ಮನಸ್ಸಿನಲ್ಲಿ ಒಂದು ಕ್ರೋಧ ಜನಿಸಿತು. ಕ್ರೋಧದಿಂದ ಯುದ್ಧ ಮಾಡಿದರೆ ಅದು ಧೀರರ ಯುದ್ಧವಲ್ಲ. ಅಯೋಗ್ಯರ ಯುದ್ಧ. ನೀನೇನೋ ಪ್ರಾಣಭಯದಿಂದಲೋ, ದ್ವೇಷದಿಂದಲೋ ನನ್ನ ಮುಖಕ್ಕೆ ಉಗುಳಿಬಿಟ್ಟೆ. ಆದರೆ ನಾನು? ಕ್ರೋಧ, ದ್ವೇಷಗಳಿಂದ ಯುದ್ಧ ಮಾಡುವುದಿಲ್ಲವೆಂದು ನನಗೆ‌ ನಾನೇ ವಚನ ಕೊಟ್ಟುಕೊಂಡಿದ್ದೇನೆ. ಕ್ರೋಧವನ್ನು ಗೆಲ್ಲದವನು ಯುದ್ಧ ಗೆದ್ದೇನು ಪ್ರಯೋಜನ? ಆದ್ದರಿಂದ ಈಗ ನಿನ್ನ ಮೇಲೆ, ಅದರಲ್ಲೂ ಪ್ರಾಣಭಯದಿಂದ ಧೀರಶತ್ರುವಿನ ಮುಖಕ್ಕೆ ಉಗುಳುವಂಥ ಹತಾಶನ ಮೇಲೆ ನಾನು ಯುದ್ಧ ಮಾಡುವುದಿಲ್ಲ. ನನ್ನ ಕ್ರೋಧ ಶಮನವಾದ ಮೇಲೆ, ಬಹುಶಃ ನಾಳೆ ಯುದ್ಧವನ್ನು ಮುಂದುವರಿಸೋಣ’. ವಿಜಯಸಿಂಹನಿಗೆ ನಾಚಿಕೆಯಾಯಿತು.

ಆ ನಾಳೆ ಯುದ್ಧ ನಡೆಯಲೇ ಇಲ್ಲ. ಅವರಿಬ್ಬರೂ ಗೆಳೆಯರಾದರು.

ಈ ಕತೆ ಈಗ ನೆನಪಾದದ್ದು ಏಕೆ ಅಂದರೆ, ನಮ್ಮ ದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಧೀರರ ಸ್ಪರ್ಧೆಯಾಗಬೇಕಾಗಿದ್ದ ಇದರಲ್ಲಿ ಕ್ರೋಧದ್ವೇಷಗಳೇ ವಿಜೃಂಭಿಸುತ್ತಿವೆ. ನಾವು ಕ್ರೋಧವಿಲ್ಲದೆ ಸ್ಪರ್ಧೆ ಮಾಡುವಷ್ಟು ಪ್ರಬುದ್ಧರಾಗುವುದು ಯಾವಾಗ?

(ಓಶೋ ಹೇಳಿದ ಒಂದು ಕತೆಯಿಂದ ಪ್ರೇರಿತ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.