ADVERTISEMENT

ನುಡಿ ಬೆಳಗು | ಇರುವುದೆಲ್ಲ ತೊರೆಯುವುದೇ ಜೀವನವಲ್ಲ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 23:16 IST
Last Updated 29 ಜೂನ್ 2025, 23:16 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ದೇವರು ಸ್ಫುರದ್ರೂಪಿ ತರುಣ-ತರುಣಿಯ ಜೋಡಿಯೊಂದನ್ನು ಸೃಷ್ಟಿಸಿ ಅವರ ಜೀವನಕ್ಕೆ ಅಗತ್ಯವಾದ ಎಲ್ಲವೂ ದೊರಕುವ ಒಂದು ಮನೋಹರ ನಡುಗಡ್ಡೆಯಲ್ಲಿ ಜೀವಿಸಲು ಬಿಡುತ್ತಾನೆ. ಆದರೆ, ಯಾವುದೇ ಸಂದರ್ಭದಲ್ಲೂ ಪಕ್ಕದ ನಡುಗಡ್ಡೆಗೆ ಹೋಗಬಾರದೆಂದು ನಿರ್ಬಂಧಿಸಿ ಹೋಗುತ್ತಾನೆ.

ಎಲ್ಲವೂ ಚೆನ್ನಾಗಿರುತ್ತದೆ. ಕೆಲವು ದಿನಗಳು ಕಳೆಯುತ್ತವೆ. ಒಂದು ದಿನ ಆ ತರುಣ ಪಕ್ಕದ ನಡುಗಡ್ಡೆ ನೋಡಲು ಹೋಗಿ ಅಲ್ಲಿನ ಅಪೂರ್ವ ಸೌಂದರ್ಯಕ್ಕೆ ಮರುಳಾಗುತ್ತಾನೆ. ತನ್ನ ಸಂಗಾತಿಗೆ ಇದನ್ನು ತೋರಿಸಬೇಕು, ಅವಳೊಂದಿಗೆ ನಲಿಯಬೇಕು ಎಂದು ಹಿಂತಿರುಗಿ ಬಂದು ಅವಳ ಕೈ ಹಿಡಿದು ‘ಬಾ ಅಲ್ಲಿಗೆ ಹೋಗೋಣ’ ಅಂತ ಕರೆಯುತ್ತಾನೆ. ‘ದೇವರ ಆದೇಶವನ್ನು ಮೀರುವುದು ತಪ್ಪು, ಅಲ್ಲದೆ ನಮಗಿಲ್ಲಿ ಕಡಿಮೆಯಾಗಿರೋದಾದರೂ ಏನು?’ ಎಂದು ಆಕೆ ಅವನೊಂದಿಗೆ ಹೋಗಲು ನಿರಾಕರಿಸುತ್ತಾಳೆ. ‘ಏನೂ ಆಗುವುದಿಲ್ಲ, ನಾನಿದ್ದೇನೆ, ವಾಪಾಸು ಇಲ್ಲಿಗೇ ಬರೋಣ, ಬಾ’ ಎಂದು ಭರವಸೆ ತುಂಬಿ ಒತ್ತಾಯದಿಂದ ಆಕೆಯನ್ನು ಕರೆದೊಯ್ಯುತ್ತಾನೆ.

ADVERTISEMENT

ಇಬ್ಬರೂ ಪಕ್ಕದ ನಡುಗಡ್ಡೆಯಲ್ಲಿ ಕಾಲೂರುತ್ತಿದ್ದಂತೆಯೇ ಇಡೀ ನಡುಗಡ್ಡೆ ಕೆಳಕ್ಕೆ ಕುಸಿಯಲಾರಂಭಿಸುತ್ತದೆ. ಗಾಬರಿಗೊಂಡ ತರುಣ ‘ಅವಳದೇನೂ ತಪ್ಪಿಲ್ಲ, ಇದಕ್ಕೆಲ್ಲಾ ನಾನು ಕಾರಣ, ನನ್ನ ಪ್ರಾಣ ಹೋಗಲಿ, ಅವಳನ್ನು ಬದುಕಿಸು’ ಎಂದು ದೇವರಲ್ಲಿ ಮೊರೆಯಿಡುತ್ತಾನೆ. ‘ನನ್ನ ಮೇಲಿನ ಪ್ರೀತಿಯಿಂದಲೇ ಅವನು ನನ್ನನ್ನು ಕರೆದ. ನನಗೆ ಅವನನ್ನು ಬಿಟ್ಟು ಬದುಕುವುದಕ್ಕೆ ಏನಿದೆ? ಉಳಿಸುವುದಾದರೆ ಇಬ್ಬರನ್ನೂ ಉಳಿಸು’ ಎಂದು ಅವಳೂ ಬೇಡುತ್ತಾಳೆ.

ನಾವು ಮನುಷ್ಯರಾಗಿ ಬದುಕುವುದಕ್ಕೆ ಬೇಕಾಗಿರುವುದೇನು? ಗಾಳಿ- ಬೆಳಕು, ನೀರು-ನೆಲ ಹೀಗೆ ದೇವರು ಕೊಡುವುದನ್ನೆಲ್ಲಾ ಕೊಟ್ಟುಬಿಟ್ಟಿದ್ದಾನೆ. ಅವುಗಳ ಆಶ್ರಯದಲ್ಲಿ ದುಡಿದು ನಾಲ್ಕು ಜನ ಮೆಚ್ಚುವಂತೆ ಪ್ರೇಮದಿಂದ ಬದುಕುವುದು ನಮ್ಮೆಲ್ಲರ ಜವಾಬ್ದಾರಿ. ಕುಟುಂಬದ ನೆಲೆಯಿಂದ ಹಿಡಿದು ದೇಶದೇಶಾಂತರದವರೆಗೂ ಮನುಷ್ಯ ಮನುಷ್ಯರ ನಡುವೆ ಪ್ರತಿಷ್ಠೆ, ಭಯ, ಸಂಶಯಗಳಿವೆ. ಎಲ್ಲ ಇದ್ದೂ ಇನ್ನಷ್ಟು ಮತ್ತಷ್ಟು ಬೇಕು ಎನ್ನುವ ಅತಿಯಾದ ಆಸೆಯಿಂದಲೇ ಇವು ಹುಟ್ಟಿವೆ. ಇವುಗಳ ನಿವಾರಣೆಗೆ ಒಬ್ಬರಿಗೊಬ್ಬರು ಆಸರೆಯಾಗುವ ಪ್ರೀತಿ ವಿಶ್ವಾಸದ ಸೇತುವೆಗಳನ್ನು ಕಟ್ಟಬೇಕಾಗಿದೆ. ಪರಸ್ಪರ ಕೊಡು-ಕೊಳ್ಳುವ, ಒಟ್ಟಿಗೆ ಕುಳಿತು ಉಣ್ಣುವ ಸದಾಶಯವೇ ಜೀವನಕ್ರಮ ಆಗಬೇಕಾಗಿದೆ. ನಾವು ಆಡುವ ಮಾತುಗಳಲ್ಲಿ ಹೃದಯವೂ ನಡ‌ವಳಿಕೆಗಳಲ್ಲಿ ಪ್ರೇಮವೂ ಕಾಣುವಂತಿರಬೇಕು. ಇದರಿಂದ ಜೀವನದ ದುಃಖಭಾರದಲ್ಲಿ ನೊಂದವರಿಗೆ ಜಗತ್ತು ನಮ್ಮೊಂದಿಗಿದೆ ಎಂಬ ಭರವಸೆ ದೊರೆಯುತ್ತದೆ.

ಜೀವ ಜೀವಗಳು ನಿಷ್ಕಾರಣ ಪ್ರೇಮವನ್ನು ಅನುಭವಿಸಬೇಕೆಂದರೆ ದಾಂಪತ್ಯವಿರಲಿ, ನೆರೆಹೊರೆಯಿರಲಿ ಒಳ್ಳೆಯ ಕಾರಣಗಳಿಗಾಗಿ ಒಬ್ಬರನ್ನೊಬ್ಬರು ಬಿಟ್ಟು ಕೊಡಬಾರದು. ಅವರು ನಮ್ಮ ಹಾಗಿಲ್ಲ, ನಮ್ಮ ಹಾಗೆ ಆಲೋಚಿಸುವುದಿಲ್ಲ ಎನ್ನುವುದು ಅಸಹನೆಯ ಭಾಗ. ನಮ್ಮ ನಡುವಿನ ವ್ಯತ್ಯಾಸಗಳನ್ನು ಸಹಿಸಿಕೊಳ್ಳುವುದರಿಂದ ನಮ್ಮ ನೈತಿಕ ದೃಢತೆ ಹೆಚ್ಚುತ್ತದೆ. ಸಹಜೀವಿಗಳೊಂದಿಗೆ ಸಹನೆ, ಗೌರವದ ಬದುಕನ್ನು ಬಾಳಬೇಕು ಅನ್ನುವುದು ಎಷ್ಟು ಮುಖ್ಯವೋ ಇರುವುದರಲ್ಲಿ ಸಂತೃಪ್ತಿಯನ್ನು ಕಾಣುವುದೂ ಅಷ್ಟೇ ಮುಖ್ಯ. ನಂದನದ ತುಣುಕೊಂದು ಬಿದ್ದಂತಿರುವ ನಮ್ಮ ನಮ್ಮ ಮನೆ, ಸಂಸಾರ, ಊರು ಕೇರಿ, ನಾಡಿನಲ್ಲಿ ತೃಪ್ತಿಯನ್ನೂ ಆನಂದವನ್ನೂ ಸವಿಯಬೇಕು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನವಾಗಬೇಕಿಲ್ಲ. ನಾವು ಇರುವ ಜಾಗದಲ್ಲಿಯೇ ನಾಕ ನಾಚುವಂತಹ ಆಹ್ಲಾದಕರವಾದ ಸಮಾನ ಅಭಿರುಚಿಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾ ಮುಂದೆ ಸಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.