ADVERTISEMENT

ನುಡಿ ಬೆಳಗು | ಇಲ್ಲದಿರುವಿಕೆಯನ್ನು ಪ್ರೀತಿಸಿ

ಎಚ್.ಎಸ್.ನವೀನಕುಮಾರ್
Published 4 ಮಾರ್ಚ್ 2024, 0:18 IST
Last Updated 4 ಮಾರ್ಚ್ 2024, 0:18 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಒಮ್ಮೆ ಸ್ವಲ್ಪ ದುರಾಸೆ ಬುದ್ಧಿಯ ಸ್ನೇಹಿತನೊಬ್ಬ ಮುಲ್ಲಾ ನಸ್ರುದ್ದೀನ್‌ ಬಳಿ ಬಂದ. ‘ಮಿತ್ರಾ, ನಾನು ಈ ಊರನ್ನು ಬಿಟ್ಟು ಬೇರೆ ಊರಿಗೆ ಹೋಗಿ ನೆಲೆಸಲು ನಿರ್ಧಾರ ಮಾಡಿದ್ದೇನೆ. ಪ್ರಾಣ ಸ್ನೇಹಿತನಾದ ನಿನ್ನ ನೆನಪು ಸದಾ ನನಗೆ ಇರಬೇಕು. ಹೀಗಾಗಿ ನಿನ್ನ ಬೆರಳಲ್ಲಿರುವ ಉಂಗುರವನ್ನು ನನಗೆ ಕೊಡು. ಅದನ್ನು ನೋಡಿದಾಗಲೆಲ್ಲ ನಿನ್ನ ನೆನಪು ಮಾಡಿಕೊಳ್ಳುತ್ತೇನೆ’ ಎಂದು ನುಡಿದ.

ಆದರೆ ಆತ ಚಾಪೆ ಕೆಳಗೆ ನುಸಿಯುವವನಾದರೆ ನಸ್ರುದ್ದೀನ್‌ ರಂಗೋಲಿ ಕೆಳಗೆ ನುಸಿಯುವಷ್ಟು ಬುದ್ಧಿವಂತ. ‘ಅದೇನೋ ನಿಜ ಮಿತ್ರ. ಆದರೆ ಅಕಸ್ಮಾತ್ ನಾನು ನೀಡಿದ ಉಂಗುರವನ್ನು ನೀನೇನಾದರೂ ಕಳೆದುಕೊಂಡು ಬಿಟ್ಟರೆ ಆಗ ನೀನು ನನ್ನನ್ನು ಮರೆತು ಬಿಡುತ್ತೀಯಾ... ಅದಕ್ಕೆ ನಾನು ನನ್ನ ಉಂಗುರವನ್ನು ನಿನಗೆ ಕೊಡುವುದಿಲ್ಲ ಆಗ ನೀನು ನಿನ್ನ ಖಾಲಿ ಬೆರಳನ್ನು ನೋಡಿಕೊಂಡಾಗಲೆಲ್ಲ, ನಾನು ಮುಲ್ಲಾನ ಬಳಿ ಉಂಗುರ ಕೇಳಿದ್ದೆ. ಆದರೆ ಅವನು ಕೊಡಲೇ ಇಲ್ಲ, ಎಂಬುದಾಗಿ ಸದಾ ನನ್ನನ್ನು ನೆನಪಿಸಿಕೊಳ್ಳುತ್ತೀ. ಆಗ ನನ್ನನ್ನು ನೀನು ಮರೆಯುವ ಸಾಧ್ಯತೆಯೇ ಇರುವುದಿಲ್ಲ’ ಎಂದು ಉತ್ತರಿಸಿದ.

ADVERTISEMENT

ನಗು ತರಿಸುವ ಈ ಹಾಸ್ಯ ಚಟಾಕಿಯಲ್ಲಿ ಮುಲ್ಲಾ ನಸ್ರುದ್ದೀನ್‌ನ ಬುದ್ಧಿವಂತಿಕೆ ಜೊತೆಗೆ, ಬದುಕಿನ ಒಂದು ಬಹು ದೊಡ್ಡ ಸಂದೇಶ ಕೂಡ ಅಡಗಿದೆ. ನಾವು ನಮ್ಮ ಬಳಿ ಇರುವುದನ್ನು ಪ್ರೀತಿಸುತ್ತೇವೆ ಹಾಗೂ ಅದರ ಕುರಿತು ವ್ಯಾಮೋಹಿತರಾಗಿರುತ್ತೇವೆ. ಎಲ್ಲಿಯಾದರೂ ಅದು ನಮ್ಮಿಂದ ದೂರಾದರೆ ಗತಿ ಏನು ಎಂದು ಆತಂಕಿತರಾಗುತ್ತಿರುತ್ತೇವೆ. ಆದರೆ, ಇಲ್ಲದಿರುವಿಕೆಯನ್ನು ಸಹ ಪ್ರೀತಿಸಬೇಕೇ ಹೊರತು ಅದರ ಕುರಿತು ಕೊರಗಬಾರದು. 

ಏಕೆಂದರೆ ಇಲ್ಲದಿರುವಿಕೆಯ ಬಗ್ಗೆ ಕೊರಗಲಾರಂಭಿಸಿದಾಗ ಮನಸ್ಸು ಚಿಂತೆಯ ಗೂಡಾಗುತ್ತದೆ ಹಾಗೂ ಇರುವುದನ್ನು ಅನುಭವಿಸುವ ಅದರಲ್ಲಿ ಸಂತೋಷ ಪಡುವ ನೆಮ್ಮದಿಯ ಬದುಕನ್ನು ನಾವು ಕಳೆದುಕೊಳ್ಳುತ್ತೇವೆ. ‘ಇದ್ದುದ ವಂಚನೆ ಮಾಡದಿರ್ಪುದೇ ಶೀಲ, ಇಲ್ಲದ್ದಕ್ಕೆ ಕಡನ ಮಾಡದಿರ್ಪುದೇ  ಶೀಲ’ ಎಂಬುದಾಗಿ ಬಸವಣ್ಣನವರು ತಮ್ಮ ವಚನವೊಂದರಲ್ಲಿ ಹೇಳುತ್ತಾರೆ. ನಾವು ನಮ್ಮ ಬಳಿ ಇರುವ ಅಂತರಂಗದ ಸಂಪತ್ತಾದ ವ್ಯಕ್ತಿತ್ವವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅದಕ್ಕೆ ವಂಚನೆ ಮಾಡಬಾರದು. ಅದೇ ರೀತಿ ನಮ್ಮಲ್ಲಿ ಇಲ್ಲದ ಬಾಹ್ಯ ಸಂಪತ್ತಿಗಾಗಿ ಕಡ ಮಾಡಬಾರದು. ಇವೆರಡೂ ನಾವು ಅಗತ್ಯವಾಗಿ ಅಳವಡಿಸಿಕೊಳ್ಳಬೇಕಾದ ವ್ಯಕ್ತಿತ್ವ ವಿಕಸನದ ಸೂತ್ರಗಳು.

ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವಂತೆ, ಸಾಲ ಮಾಡಿದರೂ ಸರಿ ಬಾಹ್ಯದ ಆಸ್ತಿಯನ್ನು ವೃದ್ಧಿಸಿಕೊಳ್ಳುವ ಆಲೋಚನೆ ಬಹಳ ಮಂದಿಯದ್ದು. ಇದರ ಬದಲು ನಮ್ಮ ಬಳಿ ಇಲ್ಲದಿರುವುದನ್ನು ಪ್ರೀತಿಸುವುದು ಸ್ಥಿತಪ್ರಜ್ಞತೆ. ನಮಗೆ ತೀರಾ ಬೇಕಾದವರು ನಮ್ಮಿಂದ ದೂರವಾದಾಗ ಸಹ ಅವರ ಇರುವಿಕೆಯನ್ನು ಪ್ರೀತಿಸಿದಷ್ಟೇ ಇಲ್ಲದಿರುವಿಕೆಯನ್ನೂ ಪ್ರೀತಿಸಬೇಕು ಎನ್ನುತ್ತಾನೆ ಗೌತಮ ಬುದ್ಧ. ಇದು ಬಹಳ ಕಷ್ಟ ನಿಜ. ಆದರೆ ಇದೇ ತಿಳಿದವರು ಬದುಕುವ ರೀತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.