ನುಡಿ ಬೆಳಗು ಅಂಕಣ
ಸಾವು ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಾಗದ ಸಂಪತ್ತು ಗಳಿಸಬೇಕಲ್ಲ ಮನುಷ್ಯ. ಅದು ಯಾವ ಸಂಪತ್ತು? ಅನುಭಾವಿಗಳಂತಾರ, ‘ಧನಗಳಿಸಬೇಕಾದ್ದು ಎಂತಾದ್ದು, ಜನರಿಗೆ ತಿಳಿಯದಂತಾದ್ದು, ಕೊಟ್ಟರೆ ಹೋಗದಂತಾದ್ದು, ಇಟ್ಟರೆ ತೀರದಂತಾದ್ದು, ಕಟ್ಟಿದ ಗಂಟು ಬಯಲೊಳಗಿಟ್ಟರೆ ಮುಟ್ಟಲು ಬಾರದಂತಾದ್ದು’ ಅಂತಹ ಸಂಪತ್ತು ಗಳಿಸಬೇಕು ಅಂತಾರೆ. ಹೀಗೆ ನಾವು ಹೇಳಿದರೆ ‘ಜಲ್ದಿ ಹೇಳ್ರೀ ಅಜ್ಜಾರ, ಸಿಬಿಐ, ಐಟಿ, ಲೋಕಾಯುಕ್ತಾದೋರು ಬರ್ತಾರ. ಅದೇ ಟೆನ್ಷನ್‌ನಲ್ಲಿ ನಮಗೆ ಶುಗರ್ ಬಂದಾವ, ನಾವು ಕಟ್ಟಿದ ಗಂಟು ಬಯಲೊಳಗೆ ಇಟ್ಟರೆ ಮುಟ್ಟಾಕ ಬಂದಿರಬಾರದು, ಅದನ್ನು ಮೊದಲು ಹೇಳಿ’ ಅಂತೀರಿ. ಆದರೆ ಅನುಭಾವಿಗಳು ಹೇಳಿದ್ದು ಬ್ಯಾರೆ. ಅವರಂತಾರ, ‘ನಾನಿಟ್ಟ ಸಂಪತ್ತಿಗೆ ಅಣ್ಣ ತಮ್ಮಂದಿರು ಪಾಲು ಕೇಳಲು ಬರಲ್ಲ. ಲೋಕಾಯುಕ್ತರು, ಸಿಬಿಐದವರೂ ಬರಲ್ಲ, ಇನ್ ಕಂ ಟ್ಯಾಕ್ಸ್ ನವರು ಟ್ಯಾಕ್ಸ್ ಹಾಕಕೂ ಬರಲ್ಲ. ಅಂತಾ ಸಂಪತ್ತು ಅದು.
ಒಬ್ಬ ವ್ಯಕ್ತಿ ಇದ್ದ. ಅವನಿಗೆ ನಾಲ್ಕು ಮಂದಿ ಸ್ನೇಹಿತರಿದ್ದರು. ಆ ವ್ಯಕ್ತಿಯ ವಿರುದ್ಧ ಒಂದು ಕೇಸ್ ಕೋರ್ಟ್‌ನಲ್ಲಿ ನಡೀತಿತ್ತು. ಒಂದಿನ ನ್ಯಾಯಾಧೀಶರು ‘ನಿನ್ನ ಪರವಾಗಿ ಯಾರಾದರೂ ಸಾಕ್ಷಿ ಹೇಳಿದರೆ ನೀನು ಕೇಸ್ ಗೆಲ್ಲುತ್ತಿ’ ಅಂದರು. ಇವನಿಗೆ ಖುಷಿಯಾತು. ‘ನನಗೆ ನಾಲ್ಕು ಮಂದಿ ಪ್ರಾಣಕ್ಕೆ ಪ್ರಾಣ ಕೊಡೋ ಸ್ನೇಹಿತರಿದ್ದಾರೆ. ಅವರನ್ನು ಕರಕೊಂಡು ಬಂದು ಸಾಕ್ಷಿ ಹೇಳಸ್ತೀನಿ’ ಅಂದು ಹೋದ.
ಮೊದಲನೆ ದೋಸ್ತನ ಬಳಿಗೆ ಹೋಗಿ, ‘ನೀನು ನನ್ನ ಪರವಾಗಿ ಸಾಕ್ಷಿ ಹೇಳು ಬಾ’ ಎಂದ. ಅದಕ್ಕೆ ದೋಸ್ತ ‘ನಾನು ಕೋರ್ಟ್‌ವರೆಗೆ ಬಂದು ಸಾಕ್ಷಿ ಹೇಳಲು ಆಗದು. ಇಲ್ಲೇ ಇದ್ದಲ್ಲೇ ಹೇಳಬಹುದು’ ಎಂದ. ‘ಹೀಂಗಾದ್ರೆ ಹ್ಯಾಂಗೋ’ ಎಂದು ಕೇಳಿದ ವ್ಯಕ್ತಿ. ಅದಕ್ಕೆ ಮೊದಲನೆ ದೋಸ್ತ, ‘ನನಗೆ ಹೆಜ್ಜೆ ಕಿತ್ತಿಡಲು ಆಗಲ್ಲ. ಇದ್ದಲ್ಲೆ ಸಾಕ್ಷಿ ಹೇಳುವೆ’ ಎಂದ. ಅಲ್ಲಿಂದ ಎರಡನೆಯ ದೋಸ್ತನ ಬಳಿ ಹೋಗಿ ಕೇಳಿದ. ಅವ, ‘ನಾನು ಮನೆ ಬಾಗಿಲ ಮಟ ಬರಬಹುದು ಅಷ್ಟೆ. ಕೋರ್ಟ್‌ಗೆ ಬರಲ್ಲ’ ಅಂದ. ಮೂರನೇ ದೋಸ್ತ, ‘ನಾನು ಕೋರ್ಟ್ ಬಾಗಿಲವರೆಗೆ ಬರ್ತೇನೆ. ಒಳಗೆ ಬರಲ್ಲ’ ಅಂದ. ಕೊನೆಗೆ ನಾಲ್ಕನೆ ದೋಸ್ತನ ಬಳಿಗೆ ಹೋದಾಗ ಅವ ‘ನೀ ಚಿಂತಿ ಮಾಡಬೇಡ. ನಾನು ಕೋರ್ಟ್ ನೊಳಗೆ ಬಂದು ನಿನ್ನ ಪರವಾಗಿ ಸಾಕ್ಷಿ ಹೇಳಿ ನಿನ್ನ ಗೆಲ್ಲಿಸಿಕೊಂಡು ಬರ್ತೀನಿ’ ಅಂದ.
ಅಂದರೆ ಒಂದನೇ ದೋಸ್ತ ಯಾರೆಂದರೆ ನಾವು ಕಷ್ಟಪಟ್ಟು ಗಳಿಸಿದ ಹೊಲ, ಮನಿ ಮುಂತಾದ ಆಸ್ತಿ. ಅವು ಎಲ್ಲಿಗಾದರೂ ಬರ್ತಾವೇನು? ಇದ್ದಲ್ಲೇ ಇರ್ತಾವ. ಇನ್ನು ಎರಡನೆ ದೋಸ್ತ ಯಾರೆಂದರೆ ಹೆಂಡತಿ ಅಥವಾ ಗಂಡ ಅವು ಬಾಗಿಲವರೆಗೆ ಮಾತ್ರ ಬರ್ತಾರ. ಇನ್ನು ಮೂರನೇ ದೋಸ್ತರು ಯಾರೆಂದರ ನಮ್ಮ ತಂದೆ, ತಾಯಿ, ಬಂಧುಗಳು, ಸ್ನೇಹಿತರು. ಅವರು ಕೋರ್ಟಿನ ಬಾಗಿಲವರೆಗೆ, ಅಂದರ ಸ್ಮಶಾನದವರೆಗೆ ಮಾತ್ರ ಬರ್ತಾರೆ. ನಾಲ್ಕನೇ ಸ್ನೇಹಿತ ಯಾರು ಅಂದರ ಜೀವನದಲ್ಲಿ ನಾವು ಮಾಡಿದ ಒಳ್ಳೆಯ ಕಾರ್ಯಗಳು (ಪುಣ್ಯ). ಅವು ಮಾತ್ರ ಸಾಕ್ಷಿ ಹೇಳಿ ನಮ್ಮನ್ನು ಗೆಲ್ಲಿಸಿಕೊಂಡು ಬರ್ತಾವ.
ಯಾವುದು ಪುಣ್ಯ? ಸಾವಿನಿಂದ ಯಾವುದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲವೋ ಅದಕ್ಕೆ ಪುಣ್ಯ ಅಂತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.