ADVERTISEMENT

ನುಡಿ ಬೆಳಗು | ಮನದಲ್ಲಿ ದೈವೀಭಾವ ಇರಬೇಕು!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 10 ಏಪ್ರಿಲ್ 2025, 23:30 IST
Last Updated 10 ಏಪ್ರಿಲ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಒಂದು ಊರಲ್ಲಿ ಗಣಪತಿ ಇಟ್ಟಿದ್ದರು. ಆ ಗಣಪತಿ ಮುಂದೆ ಇದ್ದ ಹುಂಡಿಯನ್ನು ಯಾರೋ ಕದ್ದುಬಿಟ್ಟಿದ್ದರಂತೆ. ಆಯೋಜಕರು ಮೈಕ್‌ನಲ್ಲಿ ‘ಯಾರು ಗಣಪತಿ ಹುಂಡಿ ತೆಗೆದುಕೊಂಡು ಹೋಗಿದ್ದೀರಿ. ದಯವಿಟ್ಟು ತಂದು ಇಡಿ’ ಎಂದು ಹೇಳಿದರು. ಯಾರೂ ತಂದು ಇಡಲಿಲ್ಲ. ಆಗ ಆಯೋಜಕರಿಗೆ ಜ್ಞಾನೋದಯವಾಯಿತು. ಬೆಳಕು ಇದ್ದರೆ ಯಾರೂ ತಂದು ಇಡಲ್ಲ ಅಂತ ಬೆಳಕು ಆರಿಸಿದರು. ಸ್ವಲ್ಪ ಸಮಯದ ನಂತರ ಬೆಳಕು ಹಾಕಿದಾಗ ಗಣೇಶನ ಮೂರ್ತಿಯೇ ಇರಲಿಲ್ಲವಂತೆ. ದೇವರನ್ನೇ ಕಳವು ಮಾಡಲಾಗಿತ್ತು. ‘ಹೌದ್ರಿ, ಎಲ್ಲಾ ಬಿಡು ಅಂದರೆ ನಾವು ಆಸ್ತಿ ಮಾಡೋದು, ಹಣ ಗಳಿಸೋದೇ ಬೇಡವಾ’ ಎಂದು ನೀವು ಕೇಳುತ್ತೀರಿ. ಅದಕ್ಕೆ ಪತಂಜಲಿ ಮಹರ್ಷಿ ಹೇಳುವುದು ಏನೆಂದರೆ, ‘ನೀವು ಹೊಲ ಬಿಡಿ, ಮನೆ ಬಿಡಿ, ನೌಕರಿ ಬಿಡಿ, ಹಣ ಗಳಿಸಬೇಡಿ ಎಂದಲ್ಲ. ಎಲ್ಲವನ್ನೂ ಮಾಡಿ. ಆದರೆ ವಸ್ತುಗಳ ಮೇಲಿನ ಮೋಹ ಬಿಡಿ’ ಎಂದು. ಹೊರಗೆ ವಸ್ತುಗಳ ಬಳಕೆ ಇರಬೇಕು. ಒಳಗೆ, ‘ಇದು ನನ್ನದಲ್ಲ’ ಎಂಬ ಬೆಳಕು ಇರಬೇಕು.

ಪತಂಜಲಿ ಒಬ್ಬ ಮನಶಾಸ್ತ್ರಜ್ಞರು. ‘ನಾವು ಯಾಕೆ ಎಲ್ಲವೂ ದೇವರ ಕೊಡುಗೆ ಎಂದು ಭಾವಿಸಬೇಕು, ಹಾಗೆ ಭಾವಿಸದೆ ಇದ್ದರೆ ಏನಾಗುತ್ತದೆ’ ಎಂದು ಸಂಶೋಧನೆ ಮಾಡಿದರು. ಮನಸ್ಸನ್ನು ಬಿಡಿಸಿ ಬಿಡಿಸಿ ನೋಡಿದರು. ಮನುಷ್ಯನಿಗೆ ನಂದು ಎನ್ನುವುದು ಬಂದಾಗ ದುಃಖವಾಗುತ್ತದೆ. ನಂದು ಎನ್ನುವುದು ಎಷ್ಟು ಪ್ರಬಲವಾಗಿದೆ ಎಂದರೆ ಇಬ್ಬರು ಹುಡುಗರು ಜಗಳ ಮಾಡುತ್ತಿದ್ದಾರೆ. ಒಬ್ಬ ಹುಡುಗ ಇನ್ನೊಬ್ಬನಿಗೆ ನಾಲ್ಕು ಬಾರಿಸಿದ. ಯಾಕೆ ಎಂದು ಕೇಳಿದರೆ ‘ಅವ ನನ್ನ ಅಂಗಿಯ ಕಾಲರ್ ಹಿಡಿದು ಎಳೆದ’ ಎಂದ. ಅವನಿಗೆ ಯಾಕೆ ದುಃಖ ಆಯಿತು ಎಂದರೆ ನನ್ನ ಅಂಗಿಯ ಕಾಲರ್ ಹಿಡಿದ ಎಂಬ ಕಾರಣಕ್ಕೆ. ಕೆಲವು ದಿನಗಳ ನಂತರ ಅಂಗಿ ಹಳೆಯದಾಯಿತು. ಅದನ್ನು ಬಚ್ಚಲ ಮೂಲೆಯಲ್ಲಿ ಬಿಸಾಕಿದರು. ಆಗ ಎಲ್ಲರೂ ಅದರಲ್ಲಿ ಕಾಲು ಒರೆಸಿ ಹೋಗುತ್ತಿದ್ದರು. ಆಗ ದುಃಖ ಆಗಲಿಲ್ಲ. ಯಾಕೆಂದರೆ ಆಗ ನಂದು ಎನ್ನುವುದು ಇರಲಿಲ್ಲ. ಮನಸ್ಸಿನ ಒಳಗೆ ನಂದು ಎನ್ನುವ ಭಾವ ಬಲವಾಗಿ ಸೇರಿಕೊಂಡಿದೆಯಲ್ಲ. ಅದೇ ದುಃಖದ ಬೀಜ ಎಂದು ಪತಂಜಲಿ ಹೇಳುತ್ತಾರೆ.

ADVERTISEMENT

ನಾವು ನಂದು ಎನ್ನುವುದನ್ನು ಗಂಟು  ಹಾಕಿಕೊಂಡಿದ್ದೇವೆ. ಇವೆಲ್ಲ ಭಾವ ಬಂಧನ. ದೇಹದ ಹೊರಗೆ ಗಾಯವಾದರೆ ಅಥವಾ ಗಂಟಾದರೆ ಶಸ್ತ್ರ ಚಿಕಿತ್ಸೆ ಮಾಡಬೇಕು. ಒಳಗೆ ಅಂದರೆ ಮನಸ್ಸಿಗೆ ಗಂಟಾದರೆ ಅಥವಾ ಗಾಯವಾದರೆ ಶಾಸ್ತ್ರಗಳಿಂದ ಚಿಕಿತ್ಸೆ ಮಾಡಬೇಕು. ಅದಕ್ಕೆ ಪತಂಜಲಿ ಅವರು ‘ಮನುಷ್ಯನೇ, ಮನಸ್ಸಿನ ಒಳಗೆ ಒಂದಿಷ್ಟು ದೈವೀಭಾವ ಇರಲಿ’ ಎಂದರು. ಉಣ್ಣುವಾಗ, ಉಡುವಾಗ, ನಡೆಯುವಾಗ, ಗಳಿಸುವಾಗ ದೇವರೇ... ಇದು ನಿನ್ನ ಪ್ರಸಾದ ಎನ್ನುವ ಭಾವ ಇರಲಿ’ ಎಂದರು. ನೀವು ಹೋಳಿಗೆಯನ್ನು ದೇವರ ಬಳಿಗೆ ತೆಗೆದುಕೊಂಡು ಹೋಗಿ ನೈವೇದ್ಯ ಮಾಡಿ ತರ್ತೀರಿ. ಮನೆಯಲ್ಲಿ ಇದ್ದಾಗ ಅದು ಹೋಳಿಗೆ, ಆದರೆ ಬರುವಾಗ ಅದು ಪ್ರಸಾದ ಆಯ್ತು. ಅಂದರೆ ದೈವೀ ಭಾವ ಇದ್ದರೆ ಪದಾರ್ಥ ಪ್ರಸಾದ ಆಗುತ್ತದೆ. ಮನೆಯಲ್ಲಿರುವ ಎಲ್ಲ ವಸ್ತುಗಳಲ್ಲಿ ಇರುವ ನಂದು ಎನ್ನುವುದನ್ನು ತೆಗೆದು ದೈವೀಭಾವ ತುಂಬಿದರೆ ಎಲ್ಲವೂ ಪ್ರಸಾದವಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.