ADVERTISEMENT

ನುಡಿ ಬೆಳಗು: ಇರುವುದೆಲ್ಲವ ಬಿಟ್ಟು

ಕಲೀಮ್ ಉಲ್ಲಾ
Published 6 ಫೆಬ್ರುವರಿ 2024, 23:36 IST
Last Updated 6 ಫೆಬ್ರುವರಿ 2024, 23:36 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಕಲೀಮ್ ಉಲ್ಲಾ

ಸಿದ್ದಾರ್ಥ ಅರಮನೆ ಬಿಟ್ಟು ಹೊರಡುವ ದಿನವೇ ಪತ್ನಿ ಯಶೋಧರೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ನಡುರಾತ್ರಿ ಚೆನ್ನನ ಜೊತೆಹೊರಡುವ ಮನ್ನ ಮಗುವನ್ನೊಮ್ಮೆ ಎತ್ತಿ ಮುದ್ದಾಡುವ ಆಸೆ ಹುಟ್ಟಿತು. ಕೊಠಡಿಗೆ ಹೋಗಿ ಮಂಚದ ಬಳಿ ನಿಂತನು.
ಹೂಹಾಸಿಗೆಯಲ್ಲಿ ತಾಯಿ– ಮಗು ಮಲಗಿದ್ದರು. ಎಚ್ಚರಗೊಳಿಸಿದರೆ ಹೋಗುವುದನ್ನು ತಡೆದಾರು. ಸನ್ಯಾಸಿಯಾಗುವ ನನ್ನದೃಢಮನಸ್ಸು ಸಡಿಲವಾದೀತೆಂದು ಎಣಿಸಿ ಮುಗುವಿಗೂ ಮುತ್ತಿಡದೆ, ಪತ್ನಿಗೂ ತಿಳಿಸದೆ ಸಿದ್ದಾರ್ಥ ಆಚೆ ಬಂದು ನಿಂತನು. ಅವನ
ಮನಸ್ಸು ಹೊಯ್ದಾಡುತ್ತಿತ್ತು.

ADVERTISEMENT

ಹೊರಗೆ ಚೆನ್ನ ಸಿದ್ದಾರ್ಥನ ಪ್ರೀತಿಯ ಕುದುರೆ ಕಂಥಕನ ಹಿಡಿದು ನಿಂತಿದ್ದ. ಅದನ್ನೇರಿ ಪಟ್ಟಣದಿಂದ ಹೊರ ಹೊರಟಾಗ ಆಸೆ, ದ್ವೇಷ, ಅಸೂಯೆ ಮುಂತಾದ ಕೆಡುಕುಗಳಿಗೆ ಪ್ರೋತ್ಸಾಹ ಕೊಡುವ ಮಾರನೆಂಬ ದೇವತೆ ಅಡ್ಡಬಂದು ನಿಂತನು. ಸಿದ್ದಾರ್ಥನಲ್ಲಿ ಆಸೆ ಹುಟ್ಟಿಸಿ, ರಾಜ್ಯ ತೊರೆಯುವ ನಿರ್ಧಾರವನ್ನು ಏನಾದರೂ ಮಾಡಿ ಬದಲಿಸುವ ಸಂಕಲ್ಪ ಅವನದಾಗಿತ್ತು. ಏಳು ದಿನದಲ್ಲಿ ನಿನಗೆ ಬೇಕಾದಷ್ಟು ರಾಜ್ಯಗಳು ಕೈವಶವಾಗುತ್ತವೆ. ನೀನು ದೊಡ್ಡ ಚಕ್ರಾಧಿಪತಿಯಾಗುವ ಅವಕಾಶವಿದೆ. ಇದನ್ನು ಹಾಳು ಮಾಡಿಕೊಳ್ಳಬೇಡ. ಅರಮನೆಗೆ ಹಿಂತಿರುಗು ಎಂದು ಅವನು ಪ್ರಲೋಭಿಸಿದನು. 

ಆಗ ಸಿದ್ದಾರ್ಥ ನಕ್ಕು ಇರುವ ರಾಜ್ಯವನ್ನೇ ಬಿಟ್ಟು ಹೊರಟಿರುವೆ. ನನಗೆ ಪ್ರಭುತ್ವದ ಆಸೆಯಿಲ್ಲ. ಸನ್ಯಾಸಿಯಾಗಿ ಜನರಿಗೆಲ್ಲಾ ಸುಖದ
ದಾರಿ ತೋರಿಸಬೇಕಾಗಿದೆ. ಬುದ್ಧನಾಗಿ ಜಗಕೆ ಶಾಂತಿ ತೋರಬೇಕಾಗಿದೆ ದಾರಿ ಬಿಡು ಎಂದು ಮುಂದೆ ಹೊರಟನು.

ರಾತ್ರಿಯೆಲ್ಲಾ ಸಾಗಿ ಬೆಳಗಿನ ಹೊತ್ತಿಗೆ ಅನುಮಾ ನದಿಯ ದಡ ತಲುಪಿದ ಸಿದ್ದಾರ್ಥ ತನ್ನ ಪಯಣ ನಿಲ್ಲಿಸಿದನು.  ಸನ್ಯಾಸಿಯಾಗುವವನಿಗೆ ರಾಜ ಪೋಷಾಕುಗಳು, ಆಭರಣಗಳು ಇರಬಾರದೆಂದು ನಿಶ್ಚಯಿಸಿ ಆಭರಣಗಳನ್ನು ಚೆನ್ನನಿಗೆ ಕೊಟ್ಟನು. ತೊಟ್ಟ ಬಟ್ಟೆ ಬರೆಗಳನ್ನು ಓರ್ವ ಭಿಕ್ಷುಕನಿಗೆ ಅರ್ಪಿಸಿದನು. ಭಿಕ್ಷುಕನಿಂದ ಹರಕು ಬಟ್ಟೆಗಳನ್ನು ಸ್ವೀಕರಿಸಿ ಹಾಕಿಕೊಂಡನು. ತನ್ನ ಸೊಗಸಾದ ತಲೆಗೂದಲನ್ನು, ಮೃದುವಾಗಿ ಬೆಳೆದ ಗಡ್ಡವನ್ನು ಕತ್ತಿಯಿಂದ ಸವರಿದನು. 

‘ಚೆನ್ನ ನೀನಿನ್ನು ಹೊರಡು. ನನ್ನ ಈ ಸನ್ಯಾಸದ ಸುದ್ಧಿಯನ್ನು ಅರಮನೆಗೆ ತಿಳಿಸಿ ಎಲ್ಲರನ್ನು ಸಮಾಧಾನ ಪಡಿಸು’ ಎಂದಾಗ ಸಿದ್ದಾರ್ಥನ ತೊರೆದು ಹೋಗಲು ಮನಸ್ಸಿಲ್ಲದ ಚೆನ್ನ ಖಿನ್ನನಾಗುತ್ತಾನೆ. ‘ನಿಮ್ಮ ಜೊತೆಗೇ ನಾನೂ ಬರುತ್ತೇನೆ ಒಪ್ಪಿಕೊಳ್ಳಿ’ ಎಂದಾಗ ಸಿದ್ಧಾರ್ಥ ನಯವಾಗಿ ತಿರಸ್ಕರಿಸುತ್ತಾನೆ. ಒಲ್ಲದ ಮನಸ್ಸಿನಿಂದ ಚೆನ್ನ ಮತ್ತು ಕುದುರೆ ಕಪಿಲವಸ್ತುವಿಗೆ ಹೊರಡುತ್ತಾರೆ. ತನ್ನ ಪ್ರೀತಿಯ ಒಡೆಯನ ಆಗಲಿಕೆ ತಾಳಲಾರದ ಕುದುರೆ ಕಂಥಕ ಮಾರ್ಗದಲ್ಲೇ ಸಾವನ್ನಪ್ಪುತ್ತದೆ.

ಇರುವ ಸುಖಗಳ ಬಿಟ್ಟು, ಅಧಿಕಾರ ಧಿಕ್ಕರಿಸಿ, ರಕ್ತ ಸಂಬಂಧಗಳ ತೊರೆದು ಹೀಗೆ ಹೊರಡುವುದು ಸಾಮಾನ್ಯ ಮನುಷ್ಯರಿಗೆ ಸಾಧ್ಯವಿಲ್ಲದ ಕೆಲಸ. ಮನುಷ್ಯನ ದುಃಖಗಳಿಗೆ ಉತ್ತರ ಹುಡುಕಲು ಹೊರಟ ಸಿದ್ಧಾರ್ಥ ತಾನೂ ದುಃಖಗಳ ನುಂಗಿಕೊಂಡೇ ನಡೆದವನು. ತುಂಬು ಸಂಸಾರವನ್ನು, ಎಳೆ ಮಗುವಿನ ಪ್ರೀತಿಯನ್ನು ನಿರಾಕರಿಸುವುದು ಸಲೀಸಾದ ಮಾತಲ್ಲ. ಆತ ತುಂಬು ಯೌವ್ವನದ ದಿನದಲ್ಲೇ ಮಾಡಿದ ವೈರಾಗ್ಯದ ಸಂಕಲ್ಪ; ಸಾವಿಗೆ ಒಂದು ಕ್ಷಣ ಬಾಕಿ ಉಳಿದಾಗಲೂ ನಮ್ಮಲ್ಲಿ ಮೂಡುವುದು ಕಷ್ಟವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.