ADVERTISEMENT

ನುಡಿ ಬೆಳಗು: ಯಾವುದು ಕಾಯಂ?

ವಾಸುದೇವ ನಾಡಿಗ್
Published 12 ಆಗಸ್ಟ್ 2025, 23:30 IST
Last Updated 12 ಆಗಸ್ಟ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಅರ್ಜುನ ಎಷ್ಟೇ ಸಾಹಸಿ ಆಗಿದ್ದರೋ ಅಷ್ಟೇ ಭಾವುಕ ಮನುಷ್ಯ. ಹೊರಗೆ ವ್ಯವಹಾರಿಯಾಗಿದ್ದರೂ ಒಳಗೆ ಹೆಂಗರುಳು; ಕರಗಿ ಹೋಗುವ ಮನುಷ್ಯ. ಈ ಸ್ವಯಂವರ, ಅರಗಿನ ಮನೆ, ನೆಲಕ್ಕೆ ಬಡಿದಾಟ, ದುರ್ಯೋಧನ– ಶಕುನಿಯಂತಹ ಕುತಂತ್ರಿಗಳ ಲೋಲುಪತೆಯಿಂದ ಹೈರಾಣಾಗಿದ್ದ ಯೋಧ. ಹಾಗಾಗಿಯೇ ಎದುರು ಶತ್ರುಸೇನೆ ನಿಂತಿದ್ದರೂ ಒಡಹುಟ್ಟಿದವರ ಮೇಲೆ ಹೇಗೆ ಶಸ್ತ್ರಾಸ್ತ್ರ ಚಲಾಯಿಸಲಿ ಅಂತ ನಿಂತುಬಿಡುತ್ತಾನೆ. ಮಮ್ಮಲ ಮರುಗುತ್ತಾನೆ. ಕಣ್ಣ ಎದುರೇ ತನ್ನ ದಾಯಾದಿಗಳ ದಾರುಣ ಸಾವು, ಕೊಲೆಯನ್ನು ಇವ ಸಹಿಸಲಾರ. ಈ ಮನಃಸ್ಥಿತಿಯವನಿಗಾಗೇ ಕೇಶವ ಗೀತೆಯನ್ನು ಬೋಧಿಸಿದ್ದು; ಕರ್ತವ್ಯದ ವಾಸ್ತವ ಸತ್ಯವನ್ನು ಉಪದೇಶಿಸಿದ್ದು. ಅರ್ಜುನನ ಈ ಭಾವುಕತನ ಮತ್ತು ದ್ವಂದ್ವದ ಮನಸ್ಸಿಗೆ ತಕ್ಕ ಸಾಂತ್ವನವನ್ನು ಹೇಳುತ್ತಿದ್ದ ಏಕೈಕ ಗೆಳೆಯ ಕೃಷ್ಣ. ಸದಾ ಯಾವುದೋ ಚಿಂತೆಯಲ್ಲಿ ಅನ್ಯಮನಸ್ಕನಾಗಿ ಉಳಿವ ಈ ಜೀವವನ್ನು ನಿರಂತರ ಕಾಪಾಡುವ ಪಣ ತೊಟ್ಟಂತಿದ್ದ ಕೇಶವ.

ಒಮ್ಮೆ ಆಕಾಶವೇ ಕಳಚಿ ಬಿದ್ದ ಹಾಗೆ ಕೂತ ಅರ್ಜುನನ ಬಳಿ ಕೃಷ್ಣ ಬಂದು ನಿಂತಾಗ ಅರ್ಜುನ ಕೇಳಿದ್ದು ಇದು: ‘ಮಾಧವ, ಈ ಗೋಡೆಯ ಮೇಲೆ ಏನಾದರೂ ಒಂದು ವಾಕ್ಯ ಬರೆ. ಕಷ್ಟದಲ್ಲಿ ಇದ್ದಾಗ ಓದಿದರೂ ಮತ್ತು ಸುಖ ಇದ್ದಾಗ ಓದಿದರೂ ಒಂದೇ ಬಗೆಯ ಸಮಾಧಾನ ಕೊಡಬೇಕು, ಅಂತಹ ವಾಕ್ಯ ಬರೆ’. ಮಾಧವ ಕೂಡಲೇ ನಗುನಗುತ್ತಾ ಗೋಡೆಯ ಮೇಲೆ ಬರೆದುದು ಈ ವಾಕ್ಯ: ‘ಈ ಸಮಯ ಕೂಡ ಮುಗಿದು ಹೋಗುತ್ತದೆ.’

ADVERTISEMENT

ಎಂತಹ ಅಗಾಧ ವ್ಯಾಪ್ತಿಯ ಸಂದೇಶ ನೋಡಿ. ಬದುಕಿನ ಯಾವುದೂ ಶಾಶ್ವತವಲ್ಲ. ಭಾವ, ಸಂಪತ್ತು, ಬಾಂಧವ್ಯ, ಸುಖ–ದುಃಖ, ನಗು ಎಲ್ಲವೂ... ಇದ್ದಾಗ ಇದ್ದುದು ಶಾಶ್ವತವಲ್ಲ ಎಂಬ ಎಚ್ಚರ ಮತ್ತು ಬಡತನ, ಅನಾರೋಗ್ಯ, ಕಷ್ಟಕಾರ್ಪಣ್ಯ ಏನೇ ಇದ್ದರೂ ಅದೂ ಶಾಶ್ವತವಲ್ಲ ಎಂಬ ನಂಬಿಕೆಯನ್ನು ಈ ಹದಿಮೂರು ಅಕ್ಷರಗಳು ಕಟ್ಟಿಕೊಡುತ್ತವೆ. ಇರದೆಂಬ ಕೊರಗು ಮತ್ತು ಇದೆ ಎಂಬ ಗರ್ವ ಎರಡನ್ನೂ ಗುಡಿಸಿ ಹಾಕುವ ವಾಕ್ಯವಿದು.

ಇಂಗ್ಲಿಷಿನಲ್ಲಿ This too shall pass ಎನ್ನಲಾಗುತ್ತದೆ. ಸಮಚಿತ್ತ ಎಂದು ಇದನ್ನೇ ಹೇಳಲಾಗಿದೆ ಅಲ್ಲವೆ? ಸುಧಾಮನ ಬಡತನ ಕ್ಷಣ ಮಾತ್ರದಲ್ಲಿ ಕರಗಿಹೋಯಿತು. ದುರ್ಯೋಧನನ ಅಧಿಕಾರಲಾಲಸೆ, ಹುಂಬತನವನ್ನು ಕಾಲ ಹೊಸಕಿಹಾಕಿತು. ಯಾವುದೂ ಶಾಶ್ವತವಲ್ಲ ಎಂಬ ಸಮಚಿತ್ತ ಭಾವವು ಒಂದಿಷ್ಟು ಬಾಳನ್ನು ಸಹನೀಯ ಗೊಳಿಸಬಲ್ಲದು. ಅರ್ಜುನನಿಗಾಗಿ ಮಾಧವನು ಗೋಡೆಯ ಮೇಲೆ ಬರೆದ ಬರಹವನ್ನು ನಾವೂ ಆಗಾಗ ಓದಿದಾಗ ಬದುಕಿನ ಕ್ರಮವನ್ನೇ ಬದಲಾಯಿಸಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.