ADVERTISEMENT

ನುಡಿ ಬೆಳಗು | ಕನ್ನಡಿಯಲ್ಲಿ ಕಂಡದ್ದು...

ವಾಸುದೇವ ನಾಡಿಗ್
Published 23 ಡಿಸೆಂಬರ್ 2025, 23:30 IST
Last Updated 23 ಡಿಸೆಂಬರ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಕಲಾವಿದ ಅ ಮ್ಯೂಸಿಯಂನ ಹಿಂಬದಿಯ ಬಾಗಿಲಿನ ಬೀಗ ಹಾಕುವುದನ್ನು ಮರೆತು ಓರೆ ಮಾಡಿ ಹೋಗಿದ್ದ. ಅಲ್ಲಿಂದ ನಾಯಿಯೊಂದು ಒಳಗೆ ಬಂದಿತ್ತು. ಆ ಇಡೀ ಮ್ಯೂಸಿಯಂ ಏಕವ್ಯಕ್ತಿ ಕಲಾವಿದನ ಗಾಜಿನ ಕಲಾಕೃತಿಗಳ ಅನಾವರಣವಾಗಿತ್ತು. ನಾಯಿ ಹೊಕ್ಕಿದ್ದ ಆ ಕೋಣೆಯಂತೂ ಅದ್ಭುತವಾದ ಕಲಾಕೃತಿಯೇ ಆಗಿತ್ತು. ಇಡೀ ಗೋಡೆಗಳಿಗೆ, ನೆಲಕ್ಕೆ ಕನ್ನಡಿಗಳನ್ನು ಅಂಟಿಸಲಾಗಿತ್ತು. ಮೇಲೆ ಕೆಳಗೆ ಅಕ್ಕಪಕ್ಕ ಎಲ್ಲ ಕಡೇ ಬರಿ ಕನ್ನಡಿಗಳೇ. ಎಲ್ಲಿ ನೋಡಿದರೂ ನಮ್ಮದೇ ಮುಖ ಕಾಣುವ ಹಾಗೆ ಕನ್ನಡಿಗಳು. ನಾಯಿ ಒಳಹೊಕ್ಕ ಕೂಡಲೇ ಕನ್ನಡಿಯನ್ನು ನೋಡಿ ಬೊಗಳಿತು, ಹಾರಿ ಗುದ್ದಿತ್ತು, ಹಲ್ಲು ಉಗುರು ತಾಕಿಸಿತು. ಎಲ್ಲಿ ನೋಡಿದರೂ ಕನ್ನಡಿಯ ಒಳಗೆ ತನ್ನ ಹಾಗೇ ಇರುವ ನಾಯಿಗಳನ್ನು ನೋಡಿ ಕ್ಯಾತೆ ತೆಗೆದು ಬೊಗಳಲು ಶುರು ಮಾಡಿತು. ಹತ್ತು ಹಲವು ಕನ್ನಡಿಗಳಲ್ಲಿ ಕಂಡ ತನ್ನದೇ ಮುಖಗಳನ್ನು ನಿಜವಾದ ನಾಯಿಗಳೇ ಅಂತ ಭಾವಿಸಿ ಬೊಗಳಲು ಶುರು ಮಾಡಿತು. ಬಿಂಬವೂ ಕೂಡಾ ಅದೇ ಬೊಗಳುವ ಶಬ್ದ ಮಾಡಿದ್ದರಿಂದ ಈ ನಾಯಿಗೆ ರೇಗಾಟ ಇನ್ನೂ ಹೆಚ್ಚೇ ಆಯಿತು. ಎಲ್ಲ ಕನ್ನಡಿಗಳಿಗೆ ತನ್ನನ್ನು ತಾನು ಗುದ್ದಿಕೊಂಡು ಸತ್ತೇ ಹೋಯಿತು. ಮರುದಿನ ಆ ಕಲಾವಿದ ಒಳಗೆ ಬಂದು ನೋಡಿದಾಗ ನಿತ್ರಾಣವಾಗಿ ಬಿದ್ದು ಉಸಿರು ಚೆಲ್ಲಿದ್ದ ನಾಯಿಯನ್ನು ಕಂಡು ನೊಂದ.

ಈ ಲೋಕವೂ ಬಹುದೊಡ್ಡ ಕನ್ನಡಿಯೇ ಅನಿಸುತ್ತದೆ. ಕ್ರಿಯೆ ಮತ್ತು ಪ್ರತಿಕ್ರಿಯೆಗಳೇ ಬಾಳನ್ನು ನಿರ್ಧರಿಸಬಲ್ಲವು. ‘ಅಯ್ಯಾ ಅಂದರೆ ಸ್ವರ್ಗ ಎಲವೋ ಎಂದರೆ ನರಕ’ ಎಂಬ ವಚನದ ಹಾಗೆ ಲೋಕಕ್ಕೆ ಕೊಡುವ ಉತ್ತರ ಮತ್ತು ಕಾಣುವ ನೋಟದ ಮೇಲೆ ಬಾಳು ಸರಿದಾಡುತ್ತಿರುತ್ತದೆ. ಯಾವುದೇ ಗಾಯ ರಕ್ತಪಾತದ ಗುರುತಿರದೇ ಆ ನಾಯಿ ಪ್ರಾಣಬಿಟ್ಟ ಹಾಗೆ ಋಣಾತ್ಮಕ ಭಾವಗಳು ಸದ್ದಿಲ್ಲದೆ ಕೊಲ್ಲಬಲ್ಲದು. ಎದುರಿನವರು ಶಾಂತವಾಗಿ ಇದ್ದರೂ ಅದಾವುದೋ ಒತ್ತಡಕ್ಕೆ ಬಿದ್ದು ರೇಗಲು ಶುರುಮಾಡುವ ಹಾಗೆ ತಣ್ಣಗಿನ ವಾತಾವರಣವನ್ನು ರಾಡಿಗೊಳಿಸುತ್ತೇವೆ. ನಾಲ್ಕು ಬೂತ್ ಇರುವ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕುವವನು ‘ಇಲ್ಲಿ ಬನ್ನಿ’ ಎಂದು ಕರೆದು ಕೀ ತೋರಿಸಿ ಅಲ್ಲಿ ಕಾರನ್ನು ನಿಲ್ಲಿಸಿದಾಗ ‘ಇಲ್ಲಿ ಬೇಡ ಆ ಅಲ್ಲಿ ಹಿಂದಿನ ಬೂತಿಗೆ ಹೋಗಿ’ ಎಂದು ಅವನು ಸಂಯಮದಿಂದ ಹೇಳಿದ್ದರೂ ಒದರಾಡಿ ಪೆಟ್ರೋಲ್ ಹಾಕಿಸಿಕೊಳ್ಳದೇ ಬಂದು ಬಿಡುವ ಶೀಘ್ರ ಕೋಪಿಗಳೂ ಇದ್ದಾರೆ. ವೃಥಾ ಗುದ್ದಾಡಿಕೊಂಡು ಸರದಿ ಸಾಲನು ಮುರಿದು ಮುನ್ನುಗ್ಗುವ ಜನರೂ ಇದ್ದಾರೆ. ಇಂತಹ ಕಡೆಗಳಲ್ಲೆಲ್ಲ ಅನಗತ್ಯವಾಗಿ ಗಾಸಿಗೊಂಡು ಬರುವವರೂ ಇದ್ದಾರೆ.

ADVERTISEMENT

ಅದು ತಾನೇ ಸೃಷ್ಟಿಸಿದ ತನ್ನ ಪ್ರತಿಕ್ರಿಯೆಯೇ ಹುಟ್ಟುಹಾಕಿದ ಗದ್ದಲ, ಜಗಳ ಎಂದು ಅರಿಯದೇ ನಿತ್ರಾಣಗೊಂಡು ಮಲಗಿದ ನಾಯಿಯ ಪಾಡು ಹಲವರ ಮನಸ್ಸು. ತನ್ನಂತೆ ಪರ ಎಂಬ ಮಾತು ಹೀಗೆ ಅನ್ವಯ ಇಲ್ಲಿ. ಲೋಕವೇ ಬೃಹತ್ ಕನ್ನಡಿಯಾಗಿರುವಾಗ ನಕ್ಕರೆ ಅದು ನಗುತ್ತದೆ, ಅತ್ತರೆ ಅಳುತ್ತದೆ, ರೇಗಾಡಿದರೆ ರೇಗುತ್ತದೆ. ಸ್ಪಂದಿಸುವ ಸಮಯದ ಪಕ್ವತೆ ಮತ್ತು ಸ್ವೀಕರಿಸುವಾಗಿನ ಸಮಚಿತ್ತ ಲೋಕವೆಂಬ ಮಾಯಾಕನ್ನಡಿಯನ್ನು ಇನ್ನೂ ಅಂದಗೊಳಿಸಬಹುದಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.