
ಅತ್ಯುತ್ತಮ ಪ್ರಾಂತ್ಯವೆಂದೇ ಹೆಸರಾದ ಭಾಗದ ಅತ್ಯುತ್ತಮ ನಾಯಕ ಆತ. ಹೋದೆಡೆ ಬಂದೆಡೆ ಅವನದ್ದೇ ಮಾತು–ಕತೆ. ತಾನು ಇಷ್ಟು ಸಮರ್ಥ ನಾಯಕನೆ ಎಂಬ ಅನುಮಾನ ಸದಾ ಕಾಡುತ್ತಲೇ ಇತ್ತು. ನೆರೆಹೊರೆಯ ಪ್ರಾಂತ್ಯದವರು ಅನೇಕ ಬಾರಿ ಆಹ್ವಾನಿಸಿದ್ದರೂ ಹೊಣೆಗಾರಿಕೆಯ ಒತ್ತಡದಲ್ಲಿ ಎಲ್ಲೂ ಹೋಗಲಾಗುತ್ತಿರಲಿಲ್ಲ. ಆದರೂ ತಾನೆ ತಾನಾಗಿ ನಿರ್ಧರಿಸಿ ಪಕ್ಕದ ಪ್ರಾಂತ್ಯಕ್ಕೆ ಭೇಟಿ ಕೊಡಲು ಹೊರಟ. ಪಕ್ಕದ ಪ್ರಾಂತ್ಯದ ನಾಯಕನೋ ಇನ್ನೂ ಸರಳ ಮತ್ತು ದಕ್ಷ. ಕುತೂಹಲದಿಂದಲೇ ಅವನ ಪ್ರಾಂತ್ಯವನ್ನು ಪ್ರವೇಶಿಸಿ ಅತಿಥಿ ಗೃಹದೊಳಕ್ಕೆ ಕಾಲಿಟ್ಟ. ಇಬ್ಬರೂ ದಕ್ಷ ನಾಯಕರ ಮುಖಾಮುಖಿ ಅದು. ಒಂದಿಷ್ಟು ದಣಿವನ್ನು ನಿವಾರಿಸಿಕೊಳ್ಳಲು ಚಹಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಇನ್ನೇನು ಪಕ್ಕದ ನಾಯಕ ಇವನಿಗೆ ಚಹಾ ಬಟ್ಟಲು ತುಂಬಿಸಿಕೊಡಬೇಕು ಅನ್ನುವಷ್ಟರಲ್ಲೇ ಎಲ್ಲಿಂದಲೋ ಒಂದು ನೊಣ ಹಾರಿ ಬಂದು ಚಹಾ ಮತ್ತು ಸಕ್ಕರೆಯ ಪರಿಮಳಕ್ಕೆ ಆಸೆ ಪಟ್ಟು ಚಹಾ ಕಪ್ಪಿನ ತುದಿಯಲ್ಲಿ ಕೂತುಬಿಟ್ಟಿತು. ಆತಿಥೇಯ ನಾಯಕನು ಬಹಳ ಸಂಯಮದಿಂದ ಆ ನೊಣವನ್ನು ಓಡಿಸಿ ಕಿಟಕಿಯಾಚೆ ಕಳಿಸಿದನು. ನೊಣ ಕೂತದ್ದನ್ನು ಸಹಿಸದ ಈ ನಾಯಕ ಅಸಹ್ಯ ಪಟ್ಟುಕೊಂಡು ಎಂತಹ ಅಶುದ್ಧ ವಾತಾವರಣ ಅಂತ ಕಿರುಚಾಡಿ ಎದ್ದುಬಿಟ್ಟ.
ಬಹುದೊಡ್ಡ ಮನಸ್ತಾಪವೇ ಹುಟ್ಟುಹಾಕಿದ ಘಟನೆಯಿದು. ಇಬ್ಬರೂ ಸಮರ್ಥ ನಾಯಕರೆಂದೇ ಹೆಸರು ಪಡೆದಿದ್ದರೂ ಸಣ್ಣ ನೊಣ ಬಹುದೊಡ್ಡ ಅಸಮಾಧಾನವನ್ನೇ ಹುಟ್ಟು ಹಾಕಬಹುದಿತ್ತು. ಆದರೆ ಅತಿಥಿ ನಾಯಕನಿಗೆ ಸಮಾಧಾನ ಹೇಳುತ್ತ ಕ್ಷಮೆ ಯಾಚಿಸಿದ ಆತಿಥೇಯ ನಾಯಕ ಬಹಳ ನೊಂದುಕೊಂಡನಾದರೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಪ್ರತಿಕ್ರಿಯೆ ನೀಡದಂತೆ ಇರುವುದೂ ಕೂಡ ಬಹುದೊಡ್ಡ ಕಲೆ ಇಲ್ಲಿ. ಆ ನಾಯಕ ಎಷ್ಟೇ ಅರಚಾಡಿದರೂ ಸಮಾಧಾನದ ಅರಿವಿನ ಸಮತೋಲನದಿಂದ ವಾತಾವರಣವನ್ನು ತಿಳಿಗೊಳಿಸಲು ಮುಂದಾದ. ಒಂದು ಕ್ಷುಲ್ಲಕ ನೊಣದ ಹಾರಾಟಕ್ಕೆ ಇಷ್ಟು ಸಂಯಮವನ್ನು ಕಳೆದುಕೊಂಡು ಇಡೀ ಔತಣ ಕೂಟದ ಸೌಹಾರ್ದವನ್ನು ಹಾಳು ಗೆಡಹುವ ಅಗತ್ಯವಾದರೂ ಏನಿತ್ತು. ಚಹಾದೊಳಗೆ ನೊಣ ಬಿದ್ದರೂ ಹೊಸ ಚಹಾ ಮಾಡಿಸಬಹುದಾಗಿದೆ. ಎಂತೆಂಥ ಸಂದರ್ಭಗಳನ್ನು ಅವನು ಸಂಯಮದಿಂದ ನಿಭಾಯಿಸಿ ಮಾದರಿ ನಾಯಕ ಎನಿಸಿಕೊಂಡರೂ ನೊಣದ ವಿಷಯದ ಅವನ ಪ್ರತಿಕ್ರಿಯೆ ಅವನ ಇಡೀ ವ್ಯಕ್ತಿತ್ವವನ್ನು ಗಲಿಬಿಲಿಗೊಳಿಸಿತು. ಆಮೇಲೆ ಇಬ್ಬರೂ ನಾಯಕರು ಕೂತು ಮಾತಾಡಿ ಸಂಬಂಧವನ್ನು ತಹಬದಿಗೆ ತಂದದ್ದು ಬೇರೆ ಮಾತು ಬಿಡಿ
ಅನೇಕ ಸಲ ಅನೇಕ ಸಂಗತಿ ಮತ್ತು ಕ್ರಿಯಾವಳಿಗೆ ಪ್ರತಿಕ್ರಿಯೆಯನ್ನು ನೀಡದಿರುವುದು ಕೂಡ ಬಾಳಿನ ಕಲೆ ಎನಿಸಿಕೊಳ್ಳುತ್ತದೆ. ನಿಜ ಇದು ಬಹುದೊಡ್ಡ ಕಲೆ. ಸಂಯಮವನ್ನು ಕಳೆದುಕೊಂಡು ಅರ್ಥ ಮಾಡಿಕೊಳ್ಳದೆ ಒರಟಾಗಿ ಪ್ರತಿಕ್ರಿಯಿಸುವಿಕೆ ಅನೇಕ ದುರಂತ ಮತ್ತು ಋಣಾತ್ಮಕ ಘಟನೆಗಳಿಗೆ ದಾರಿಯಾಗಿಬಿಡುತ್ತದೆ. ಉಪ್ಪು ಹೆಚ್ಚಾದರೆ, ಒಗ್ಗರಣೆ ಹೊತ್ತಿಹೋದರೆ, ಕಾಫಿ ತಣ್ಣಗಾದರೆ, ಮನೆಗೆ ಬರುವುದು ಸ್ವಲ್ಪ ತಡವಾದರೆ, ಅಲ್ಲಲ್ಲಿ ಕಸ ಬಿದ್ದಿದ್ದರೆ ರಂಪ ಮಾಡುವ ಈ ದಿನಮಾನಗಳಲ್ಲಿ ಈ ಬಗೆಯ ವಿವೇಚನಾರಹಿತ ಪ್ರತಿಕ್ರಿಯೆಗಳು ಮನೆ ಮನ ಸಂಬಂಧಗಳನ್ನೇ ಮುರಿದುಬಿಡುತ್ತವೆ. ಸಣ್ಣ ನೊಣದಂತೆ ಹಾರಿ ಬಂದು ಕೂಡುವ ಇಂತಹ ಆಗುಹೋಗುಗಳಿಗೆ ಕೊಡಲಿ ತೆಗೆದು ಕೊಳ್ಳುವ ನಮ್ಮ ಅಸಹಿಷ್ಣುತೆಗೆ ಬೇಕಾದ ಅರಿವು ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.