ADVERTISEMENT

ನುಡಿ ಬೆಳಗು | ಸಾಮಾನ್ಯರ ಅಸಾಮಾನ್ಯತೆ

ದೀಪಾ ಹಿರೇಗುತ್ತಿ
Published 8 ಡಿಸೆಂಬರ್ 2025, 22:50 IST
Last Updated 8 ಡಿಸೆಂಬರ್ 2025, 22:50 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ವರ್ಣಭೇದ ನೀತಿಯೆಂಬುದು ಮನುಷ್ಯರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದ ಒಂದು ವ್ಯವಸ್ಥೆ. ಜಗತ್ತಿನ ಅತ್ಯಂತ ಮುಂದುವರಿದ ರಾಷ್ಟ್ರವೆಂದು ಹೇಳಿಸಿಕೊಳ್ಳುವ ಅಮೆರಿಕ ಸಂಯುಕ್ತ ಸಂಸ್ಥಾನ ಈ ಅತ್ಯಂತ ಹೀನಾಯವಾದ ಪದ್ಧತಿಯನ್ನು ಕಳೆದ ಕೆಲವೇ ದಶಕಗಳ ಹಿಂದಿನವರೆಗೂ ಆಚರಿಸುತ್ತಿತ್ತು.

ಅಮೆರಿಕದ ರಾಜ್ಯ ಅಲಬಾಮಾದ ಸಾರ್ವಜನಿಕ ಬಸ್‌ಗಳಲ್ಲಿ ಒಂದು ನಿಯಮವಿತ್ತು. ಅದೇನೆಂದರೆ, ಬಸ್ಸಿನ ಮುಂದಿನ ಆಸನಗಳು ಬಿಳಿಯರಿಗಾಗಿ ಮೀಸಲಾಗಿದ್ದವು. ಕಪ್ಪು ವರ್ಣದ  ಪ್ರಯಾಣಿಕರು ಬಸ್ಸಿನ ಹಿಂದಿನ ಆಸನಗಳಲ್ಲಿ ಕೂರಬೇಕಿತ್ತು. ಬಸ್‌ ಜನರಿಂದ ತುಂಬಿ ತುಳುಕಿದಾಗ ಕಪ್ಪು ಬಣ್ಣದವರು ತಮ್ಮ ಆಸನಗಳನ್ನು ಬಿಳಿಯರಿಗೆ ಬಿಟ್ಟು ಕೊಡಬೇಕಿತ್ತು. ಅಷ್ಟೇ ಅಲ್ಲ, ಮುಂದಿನ ಸೀಟುಗಳು ಖಾಲಿಯಿದ್ದರೂ ಅವರು ಅವುಗಳಲ್ಲಿ ಕುಳಿತುಕೊಳ್ಳುವ ಹಾಗಿರಲಿಲ್ಲ. ಈ ನಿಯಮ ಅಮೆರಿಕದ ದಕ್ಷಿಣದ ಹಲವಾರು ರಾಜ್ಯಗಳಲ್ಲಿ ಇತ್ತು.

ADVERTISEMENT

1955ರ ಡಿಸೆಂಬರ್‌ ಒಂದನೇ ತಾರೀಕು ರೋಸಾ ಪಾರ್ಕ್ಸ್‌ ಎನ್ನುವ ಕಪ್ಪು ವರ್ಣದ ಮಹಿಳೆ ಅಲಬಾಮಾದ ರಾಜಧಾನಿ ಮೊಂಟ್ಗೊಮರಿಯಲ್ಲಿ ಬಸ್ಸಿನ ಹಿಂದಿನ ಭಾಗದ ಮೊದಲ ಸಾಲಿನ ಆಸನದಲ್ಲಿ ಕುಳಿತಿದ್ದರು. ಆಗ ತಾನೇ ಬಸ್‌ ಹತ್ತಿದ ಬಿಳಿಯರಿಗೆ ಸೀಟು ಕೊಡುವಂತೆ ರೋಸಾ ಮತ್ತು ಉಳಿದ ಮೂವರು ಪ್ರಯಾಣಿಕರಿಗೆ ಚಾಲಕ ಹೇಳಿದ. ಉಳಿದವರು ಎದ್ದು ಹಿಂದೆ ಹೋದರು. ಆದರೆ ರೋಸಾ ಎದ್ದೇಳಲು ನಿರಾಕರಿಸಿದರು. ತಾನು ಹಿಂದೆ ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರಾಕೆ. ಕಾನೂನು ಉಲ್ಲಂಘನೆ ಮಾಡಿದ್ದಕ್ಕೆ ಅವರನ್ನು ಬಂಧಿಸಲಾಯಿತು.

ರೋಸಾ ಅವರ ಬಂಧನ ಮೊಂಟ್ಗೊಮರಿಯ ಜನರಲ್ಲಿ ಜಾಗೃತಿಯನ್ನುಂಟು ಮಾಡಿತು. ರೋಸಾ ಅವರ ಶಾಂತಿಯುತ ಪ್ರತಿಭಟನೆ ಅವರ ಸಮುದಾಯದ ಜನರಲ್ಲಿ ಸ್ಫೂರ್ತಿ ತುಂಬಿ ಅವರು ಬಸ್‌ ಪ್ರಯಾಣವನ್ನೇ ಕೈಬಿಟ್ಟರು. ಅದೂ ಪೂರ್ತಿ ಒಂದು ವರ್ಷ. ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌ ಈ ಪ್ರತಿಭಟನೆಯನ್ನು ಮುನ್ನಡೆಸಿದರು. ಜನರು ಓಡಾಟಕ್ಕೆ ಎಷ್ಟೇ ಕಷ್ಟವಾದರೂ ಪ್ರತಿಭಟನೆ ಕೈಬಿಡಲಿಲ್ಲ. 381 ದಿನಗಳ ನಂತರ ಅಮೆರಿಕದ ಸುಪ್ರೀಂ ಕೋರ್ಟ್‌, ಬಸ್‌ನಲ್ಲಿ ಆಸನಗಳ ಪ್ರತ್ಯೇಕತೆ ಅಸಾಂವಿಧಾನಿಕ ಎಂದು ತೀರ್ಪು ಕೊಟ್ಟಿತು. ರೋಸಾ ಪಾರ್ಕ್ಸ್‌ ಅವರ ಧೈರ್ಯದ ಕೆಚ್ಚಿನ ಮತ್ತು ಆತ್ಮವಿಶ್ವಾಸದ ಒಂದು ನಡೆ ಈ ಐತಿಹಾಸಿಕ ತೀರ್ಮಾನಕ್ಕೆ ಕಾರಣವಾಯಿತು. ದೇಶಾದ್ಯಂತ ಬದಲಾವಣೆ ಜಾರಿಗೆ ಬಂತು. 

ಜಗತ್ತನ್ನು ಬದಲಾಯಿಸಲು ದೊಡ್ಡ ದೊಡ್ಡ ಕೆಲಸಗಳನ್ನೇ ಮಾಡಬೇಕೆಂದಿಲ್ಲ. ನಮಗೆ ಸರಿ ಅನ್ನಿಸದ ಸಂಗತಿಗಳನ್ನು ನಮ್ಮದೇ ಆದ ರೀತಿಯಲ್ಲಿ ವಿರೋಧಿಸಬಹುದು. ಅನ್ಯಾಯವೆಂದು ಅನ್ನಿಸಿದ ಕಡೆ ನಮ್ಮ ಧ್ವನಿ ಎತ್ತಬಹುದು. ಒಂಟಿ ಧ್ವನಿಯೂ ದೊಡ್ಡ ಪರಿಣಾಮ ಉಂಟು ಮಾಡಬಹುದು. ಹಲವಾರು ಜನರ ಬದುಕನ್ನು ಬದಲಾಯಿಸಬಹುದು. ಅಷ್ಟೇ ಅಲ್ಲ, ಈ ದೊಡ್ಡ ಪರಿಣಾಮ ಉಂಟು ಮಾಡುವ ಪುಟ್ಟ ಪುಟ್ಟ ಕೆಲಸಗಳನ್ನು ದೊಡ್ಡವರೇ ಮಾಡಬೇಕೆಂದೂ ಇಲ್ಲ. ನಮ್ಮ ನಿಮ್ಮಂತಹ ಸಾಮಾನ್ಯರೂ ಮಾಡಬಹುದು. ಬಲವಾದ ನೈತಿಕ ಮೌಲ್ಯಗಳನ್ನು ಹೊಂದಿದ ಅತ್ಯಂತ ಸಾಧಾರಣ ವ್ಯಕ್ತಿಗಳಿಗೆ ಕೂಡ ಪ್ರಭುತ್ವವನ್ನೇ ವಿರೋಧಿಸುವ ತಾಕತ್ತು ಇರುತ್ತದೆ. ಯುದ್ಧಗಳನ್ನು ಗೆಲ್ಲಲು ಕತ್ತಿ ಕೋವಿಗಳಿಂದ ಮಾತ್ರವಲ್ಲ ಅಹಿಂಸಾತ್ಮಕ ಮಾರ್ಗಗಳಿಂದಲೂ ಸಾಧ್ಯ ಎಂಬುದನ್ನು ಈ ಘಟನೆ ಸಾಬೀತು ಪಡಿಸಿತು. ರೋಸಾ ಅವರ ಈ ಮೌನ ಹೋರಾಟದ ಗೆಲುವು ಇಂದಿಗೂ ಒಂದು ಭರವಸೆಯ ಕಿರಣವಾಗುಳಿದಿದೆ. ಸ್ಫೂರ್ತಿಯ ಸೆಲೆಯೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.