ADVERTISEMENT

ನುಡಿ ಬೆಳಗು: ಸಹಿಸುವ ಶಕ್ತಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 0:26 IST
Last Updated 20 ನವೆಂಬರ್ 2025, 0:26 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಅನಾಥರು, ರೋಗಗ್ರಸ್ತರ ಸೇವೆಯನ್ನು ಮಾಡುತ್ತಿದ್ದ ನಿಸ್ವಾರ್ಥ ವ್ಯಕ್ತಿಯೊಬ್ಬನ ಬಗ್ಗೆ ಕೇಳಿ ತಿಳಿದು ಆತನ ಬಳಿಗೆ ಅತ್ಯಂತ ಶ್ರೀಮಂತ ಮತ್ತು ಸುಂದರಿಯಾದ ಹೆಣ್ಣೊಬ್ಬಳು ಬರುತ್ತಾಳೆ. ಅವಳಿಗೆ ಪ್ರಚಾರದ ಹುಚ್ಚು- ತನ್ನಂಥವರು ಈ ಕೆಲಸದಲ್ಲಿ ಭಾಗಿಯಾದರೆ ಜಗತ್ತು ಕೊಂಡಾಡುತ್ತದೆ ಎನ್ನುವ ಭಾವ. ಆಕೆ ಅವನ ಬಳಿಗೆ ಬಂದು, ‘ನಿನ್ನ ಹಾಗೆ ನಾನೂ ಈ ಜನರ ಸೇವೆ ಮಾಡುತ್ತೇನೆ. ಅವಕಾಶ ಕೊಡು’ ಎಂದು ಮನವಿ ಮಾಡುತ್ತಾಳೆ. ಆದರೆ, ಅವಳ ಕಣ್ಣುಗಳಲ್ಲಿ ಅಲ್ಲಿದ್ದ ಅಸಹಾಯಕರ ಬಗ್ಗೆ ತಿರಸ್ಕಾರ ಮತ್ತು ಅಸಹನೆ ಮಡುಗಟ್ಟಿರುತ್ತದೆ. ಇದನ್ನು ಗಮನಿಸಿದ ನಿಸ್ವಾರ್ಥಿಯು ಆಕೆಯನ್ನು ಉದ್ದೇಶಿಸಿ, ‘ನಿನ್ನ ಉದ್ದೇಶ ಬಹಳ ಒಳ್ಳೆಯದ್ದೇ. ಆದರೆ ಈ ಕೆಲಸ ಮಾಡಲಿಕ್ಕೆ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ’ ಎನ್ನುತ್ತಾನೆ. ಆಗ ಆ ಯುವತಿಯು ತನ್ನಂಥವಳು ಇಂಥಾ ಕೆಲಸ ಮಾಡಲಿಕ್ಕೆ ಮುಂದೆ ಬಂದಿರುವುದೇ ದೊಡ್ಡದು, ಅಂಥದ್ದರಲ್ಲಿ ನಿಯಮ ಬೇರೆ ಪಾಲಿಸಬೇಕೇ ಎಂದುಕೊಂಡು ಅಸಡ್ಡೆಯಿಂದ, ‘ಹೇಳಿ, ಅದೇನು ನಿಯಮ’ ಎಂದು ಕೇಳುತ್ತಾಳೆ. 

ಆಗ ನಿಸ್ವಾರ್ಥಿಯು, ‘ಇದು ತೋರಿಕೆಯ ಕೆಲಸವಲ್ಲ. ನಿನ್ನ ಈ ಉಡುಪುಗಳನ್ನು ನೋಡಿ ಅಸಹಾಯಕರಾದ ಈ ಜೀವಗಳು ನಿನ್ನ ಹತ್ತಿರ ಬರಲು ಅಂಜಿಕೊಳ್ಳುತ್ತಾರೆ. ನಿನ್ನ ಬೆಲೆಬಾಳುವ ಒಡವೆಗಳು ಅವರ ಕಣ್ಣುಗಳನ್ನು ಕುಕ್ಕಿ ಕಣ್ಣು ಕಾಣಿಸದಂತಾಗುತ್ತದೆ. ಅದಕ್ಕೆ ನೀನು ಸಾಮಾನ್ಯವಾದ ಉಡುಪನ್ನು ಧರಿಸಿ, ಈ ಒಡವೆಗಳನ್ನು ಕಳಚಿಟ್ಟು ಬಾ’ ಎನ್ನುತ್ತಾನೆ. ಅದನ್ನು ಕೇಳಿ ಕೋಪಗೊಂಡ ಆಕೆ, ‘ನನ್ನನ್ನು ಏನೆಂದು ತಿಳಿದಿರುವೆ? ನನ್ನ ಶ್ರೀಮಂತಿಕೆ, ವೈಭವ ನೋಡಬೇಕು ನೀನು. ನಾನು ಹುಟ್ಟುವಾಗಲೇ ನನಗಾಗಿ ಚಿನ್ನದ ತೊಟ್ಟಿಲು ಸಿದ್ಧವಾಗಿತ್ತು. ಅಂಥಾ ನಾನು ನಿನಗೆ ಸಹಾಯ ಮಾಡಲಿಕ್ಕೆ ಬಂದರೆ ನನ್ನ ಮೇಲೆ ನಿಯಮಗಳನ್ನು ಹೇರುತ್ತಿರುವೆಯಾ’ ಎಂದು ಕೂಗತೊಡಗಿದಳು.

ADVERTISEMENT

ನಸುನಕ್ಕ ನಿಸ್ವಾರ್ಥಿಯು, ‘ಇನ್ನು ಎಷ್ಟೇ ಪ್ರಯತ್ನ ಪಟ್ಟರೂ ನೀನು ಮಾತ್ರ ಈ ಜನಗಳ ಸೇವೆ ಮಾಡಲಾರೆ’ ಎನ್ನುತ್ತಾನೆ. ಈ ಮಾತುಗಳನ್ನು ಕೇಳಿದ ಶ್ರೀಮಂತ ಸುಂದರಿಯು ಕೋಪದಿಂದ, ‘ನನಗೆ ಅಸಾಧ್ಯ ಎನ್ನುವುದೇ ಇಲ್ಲ. ಅದನ್ನು ನಾನು ಒಪ್ಪಲಾರೆ’ ಎನ್ನುತ್ತಾಳೆ. ಆಗ ನಿಸ್ವಾರ್ಥಿಯು, ‘ನನ್ನ ಮಾತುಗಳನ್ನು ಸ್ವಲ್ಪ ತಾಳ್ಮೆಯಿಂದ ಕೇಳು. ನಿನ್ನ ಬಟ್ಟೆ ಮತ್ತು ಒಡವೆ ನಿನ್ನ ಅಹಂಕಾರದ ಪ್ರತೀಕ. ಅಸಹಾಯಕ ಜೀವಗಳು ಪ್ರೀತಿಯನ್ನು ಬೇಡುತ್ತವೆ. ಅಹಂಕಾರ ಯಾವತ್ತೂ ಪ್ರೀತಿಯನ್ನು ಕೊಡಲಾರದು. ನನ್ನ ಮಾತುಗಳ ಮರ್ಮವನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನವೂ ಇಲ್ಲದ ನಿನಗೆ ಸಹನೆ ಅನ್ನುವುದು ಬಹುದೂರದ ಮಾತು. ಮಾತುಗಳನ್ನೇ ಸಹಿಸಿಕೊಳ್ಳಲು ಆಗದ ನಿನಗೆ, ಈ ಜನರ ದಾರುಣ ಸ್ಥಿತಿಯಿಂದ ಉಂಟಾಗುವ ವಿಕಾರಗಳನ್ನು ಸಹಿಸಿಕೊಳ್ಳಲು ಸಾಧ್ಯವಾದೀತೇ? ನಿನ್ನ ಅಹಂಕಾರ, ಒಣಪ್ರತಿಷ್ಠೆ ಎಲ್ಲವನ್ನು ಬದಿಗಿಟ್ಟು ಬಾ. ಅವತ್ತು ನಿನಗೆ ಸೇವೆಯ ಜಗತ್ತು ತನ್ನ ಬಾಗಿಲನ್ನು ತೆರೆಯುತ್ತದೆ’ ಎಂದ. 

ನಿಸ್ವಾರ್ಥವಾಗಿ ಕೆಲಸ ಮಾಡುವುದು ಸುಲಭವಲ್ಲ. ನಾನು ಎನ್ನುವ ಅಹಂಕಾರವನ್ನು ಕಳಚಿಕೊಳ್ಳುವುದು ಅತ್ಯಂತ ಪ್ರಾಜ್ಞಸ್ಥಿತಿ. ಆ ಸ್ಥಿತಿಯಲ್ಲಿ ತಾಯೊಬ್ಬಳು ಕಾಲಿಂದ ಒದ್ದ ತನ್ನ ಮಗುವನ್ನು ಎದೆಗೆ ಆನಿಸಿಕೊಂಡ ಹಾಗೆ ಜಗತ್ತನ್ನು ಆನಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.