ADVERTISEMENT

ನುಡಿ ಬೆಳಗು: ಸಮಾನತೆಯಲ್ಲಿದೆ ಸುಖ

ಡಾ.ದಾದಾಪೀರ್ ನವಿಲೇಹಾಳ್
Published 3 ಆಗಸ್ಟ್ 2025, 20:58 IST
Last Updated 3 ಆಗಸ್ಟ್ 2025, 20:58 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ನುಡಿ ಬೆಳಗು– ದಾದಾಪೀರ್ ನವಿಲೇಹಾಳ್

ಅರಮನೆಯ ಅಪರಿಮಿತ ಸುಖದಲ್ಲಿ ನರಳುತ್ತಿದ್ದ ಸಿದ್ಧಾರ್ಥ ಹೊರಗೆ ಕಾಲಿಡಲು ತವಕಿಸುತ್ತಿದ್ದ. ಅದೊಂದು ದಿನ ಬಯಲಿಗೆ ಬಂದವನು ಆಕಸ್ಮಿಕವಾಗಿ ಭಿಕ್ಷುಕನನ್ನು ಕಂಡು ತೀವ್ರ ತಳಮಳಕ್ಕೆ ಒಳಗಾದ. ಮನುಷ್ಯನೊಬ್ಬ ಉಣ್ಣುವುದಕ್ಕೆ ಉಡುವುದಕ್ಕೆ ಇನ್ನೊಬ್ಬರತ್ತ ಕೈ ಚಾಚುವುದೇ? ಬೇಡುವ ಮನಸ್ಥಿತಿ ಹೇಗೆ ಬರುತ್ತದೆ? ಯಾಕೆ ಹೀಗೆ? ನಿಸರ್ಗದ ಪಂಚಭೂತಗಳು ಎಲ್ಲ ಜೀವಿಗಳಿಗೆ ತಾನೇ ತಾನಾಗಿ ದೊರೆಯಬೇಕಲ್ಲವೇ? ದುಡಿದು ತಿನ್ನಬೇಕಲ್ಲವೇ? ಅಂತ ಯೋಚಿಸಿದ. ಯೋಚಿಸುತ್ತಾ ಹೋದಂತೆ ಮನುಷ್ಯ ಸಮಾಜದ ತರತಮಗಳು, ದುಡಿಯುವುದಕ್ಕೆ ಇಲ್ಲದ ಅವಕಾಶಗಳು ಕಣ್ಣೆದುರು ಬಂದು ತಾನು ಅನುಭವಿಸುತ್ತಿರುವ ಸಂಪತ್ತು ತಾನು ದುಡಿದದ್ದಲ್ಲ ಅನ್ನಿಸಿ ಅವನಲ್ಲಿ ಅಸಹ್ಯ ಹುಟ್ಟಿಸಿತು.

ADVERTISEMENT

ಇಲ್ಲಿಂದ ಹೊರಡಬೇಕು ಅಂತ ಅನಿಸಿತು. ಅವನ ಮನಸ್ಸು, ಚಿಂತನೆ ಇನ್ನಷ್ಟು ಮಾಗಬೇಕಿತ್ತೋ ಏನೋ. ತಳಮಳಿಸುತ್ತಾ ಕಾಯುತ್ತಿದ್ದ. ಮನುಷ್ಯ ಹುಟ್ಟುತ್ತಾನೆ, ಸಾಯುತ್ತಾನೆ. ಇದು ನಿಲ್ಲದ ಚಕ್ರ. ಇರುವಷ್ಟು ದಿನ ಎಲ್ಲರೂ ಎಲ್ಲವನ್ನೂ ಹಂಚಿಕೊಂಡು ಬಾಳುವುದು ಸಾಧ್ಯ. ಆದರೆ ಒಂದು ಹೊತ್ತು ತಿನ್ನುವುದಕ್ಕೂ ಬೇಡುವ ಭಿಕ್ಷುಕನಿದ್ದಾನೆ. ನೂರಾರು ವರ್ಷ ಕುಳಿತು ತಿಂದರೂ ಸವೆಯದಷ್ಟು ಸಂಪತ್ತನ್ನು ಸಂಪಾದಿಸಿದವರೂ ಇದ್ದಾರೆ. ಯಾಕೆ ಹೀಗೆ? ಅಂತ ಮೊದಲು ಪ್ರಶ್ನಿಸಿ ಕೊಂಡವನು ಸಿದ್ಧಾರ್ಥ. ಇದನ್ನು ಆಧುನಿಕ ಸಮಾಜ ಆರ್ಥಿಕ ಅಸಮಾನತೆ ಅಂತ ಗುರುತಿಸುತ್ತದೆ. ಸಿದ್ಧಾರ್ಥನಿಗೆ ಇದು ಯಾಕೋ ಸರಿಯಿಲ್ಲ ಅಂತ ಅನಿಸಿತು. ಅವನ ಉದ್ದೇಶ ಸರಳವಾಗಿತ್ತು. ಹುಟ್ಟಿದವರೆಲ್ಲರಿಗೂ ಗಾಳಿ ನೀರು ಅನ್ನ ಸಹಜವಾಗಿ ಸಮಾನವಾಗಿ ದೊರೆಯಬೇಕಿತ್ತು ಅಷ್ಟೇ. ಆದರೆ, ಹಾಗೆ ದೊರೆಯುತ್ತಿಲ್ಲ ಎನ್ನುವುದು ಕ್ರೂರವಾಗಿ ಕಾಡುತ್ತಿತ್ತು. ಸಿದ್ಧಾರ್ಥನ ಒಳಗೆ ಯಾರೋ ತಿದಿ ಒತ್ತಿದಂತೆ ಇದು ಉರಿಯತೊಡಗಿತು. ಆ ಕುಲುಮೆಯಲ್ಲಿ ಬೆಂದು ಬೆಂದು ಅಸಮಾನತೆಯ ಸ್ವರೂಪ ಅಮೂರ್ತವಾಗಿ ಜೀವ ಪಡೆಯುತ್ತಾ ಹೋಯಿತು. ಸಿದ್ಧಾರ್ಥ ಗೌತಮನಾಗುವ, ಗೌತಮ ಬುದ್ಧನಾಗುವ ಪರಿ ಸ್ಪಷ್ಟವಾದಂತೆ ಅರಮನೆಯಿಂದ ಹೊರಬಂದ ಸಿದ್ಧಾರ್ಥ ಬಯಲಿನಲ್ಲಿ, ಬೀದಿಯಲ್ಲಿ ಆಕಾರ ಪಡೆಯುತ್ತಾ ಮುನ್ನಡೆದ.

ಸರಳ ಚಿಂತನೆ ಬಹಳ ಸಲ ಅನೇಕರಿಗೆ ತಲುಪುವುದಿಲ್ಲ, ಅಂದರೆ ಗ್ರಹಿಕೆಗೆ ನಿಲುಕುವುದಿಲ್ಲ.
ಮನುಷ್ಯನ ಅರಿವಿಗೆ ಬಂದದ್ದು ಮಾತ್ರ ನೋವುಂಟು ಮಾಡುತ್ತದೆ. ತನಗೆ ಮಾತ್ರ ಯಾಕೆ ಹೀಗೆ? ಅವಮಾನ ಅನ್ನುವುದು ಅರಿವಿಗೆ ಬಂದರೆ ನೋವು. ಇದು ಎಂದೂ ಅವಮಾನಕ್ಕೆ ಒಳಗಾಗದ ಸಿದ್ಧಾರ್ಥನ ಅರಿವಿಗೆ ಬಂದಿತ್ತು. ಅವನು ನರಳುತ್ತಿದ್ದ. ಅರಮನೆಯಲ್ಲಿ, ಸುಖದ ಉತ್ತುಂಗದಲ್ಲಿ, ಅಂತಃಪುರದಲ್ಲಿ ಆತ ಅವಿಶ್ರಾಂತನಾಗಿದ್ದ. ಸಮಾನತೆ ಇಲ್ಲದಿರುವುದು ಒಂದು ಸಮಾಜವೇ? ಅದೊಂದು ಬದುಕೇ? ದೀನನಾಗಿ ಬೇಡುವುದು ದೈವಲಿಖಿತವೇ? ಶಾಪವೇ? ದೇವರೋ ಹಣೆಬರಹವೋ ಇದಕ್ಕೆ ಕಾರಣವಾಗಿದ್ದರೆ ಧಿಕ್ಕಾರವಿರಲಿ. ಅವನ ಮನಸ್ಸು ತಳಮಳಿಸುತ್ತಿತ್ತು.

ಇಂಥದೇ ಕಾರಣಕ್ಕೆ ಅರಮನೆ ತೊರೆದ ಸಿದ್ಧಾರ್ಥ ಭಿಕ್ಷುಕ ಎದುರಾದ ನೆಪದಲ್ಲಿ ಅಸಮಾನತೆಗೆ ಕಾರಣಗಳನ್ನು ಹುಡುಕಲು ಬಯಲಿಗೆ ಕಾಲಿಟ್ಟ. ಅಲ್ಲಿ ಪ್ರತಿ ಹೆಜ್ಜೆಗೆ ನೂರು ಕಾರಣಗಳು ಕಂಡವು. ಸೋಮಾರಿತನ, ದುರಾಸೆ, ದರ್ಪ, ದೌರ್ಜನ್ಯ, ಮೇಲು-ಕೀಳು, ದಾಸ್ಯ ಹೀಗೆ ಮನುಷ್ಯಕುಲ ಪುಡಿ ಪುಡಿಯಾಗಿ ಹೋಗಿತ್ತು. ಇವುಗಳಿಂದ ಹೊರಬರುವ ಪ್ರೀತಿ, ದಯೆ ದಾರಿಗಳನ್ನು ಶೋಧಿಸಿಕೊಳ್ಳದೆ ಮುಕ್ತಿ ಸಾಧ್ಯವಿಲ್ಲ ಅಂತ ಅನ್ನಿಸಿಬಿಟ್ಟಿತು. ಬೀದಿ ಮತ್ತು ಬಯಲು ಸವಾಲುಗಳ ಕುಸ್ತಿ ಮನೆಯಂತೆ ಕಂಡವು. ಗೋಡೆ ಕಿಟಕಿ ಬಾಗಿಲುಗಳೇ ಇಲ್ಲದ ಸರ್ವಸ್ವತಂತ್ರ ಅಖಾಡದಲ್ಲಿ ಬಡತನವೆಂಬ ಮಂತ್ರವಾದಿಯ ಸಹವಾಸ ಆಪ್ತವೆನಿಸಿತು. ಬಯಲಿಗೆ ಬಂದ ಬುದ್ಧ ಬಡವನಾದ. ಬಡತನವನ್ನು ಉಂಡು ಹಾಸಿ ಹೊದ್ದು ಸಾಮಾನ್ಯರಲ್ಲಿ ಕರಗಿದ. ನೂರಾರು ಪೀಳಿಗೆಗೆ ಸಾಕಾಗುವಷ್ಟು ಸಂಪಾದಿಸುವ ಆಧುನಿಕ ರಾಜಕುಮಾರರು ಒಂದು ಕ್ಷಣ ಸಿದ್ಧಾರ್ಥ ಬಯಲಿಗೆ ಬಂದು ಬುದ್ಧನಾದ ಪರಿಯನ್ನು ಅನುಸಂಧಾನಿಸಬೇಕು, ಅನುಭವಿಸಬೇಕು. ಸಮಾನತೆಯಲ್ಲಿ ಸಿಗುವ ಪರಮಸುಖ ಮತ್ತೆಲ್ಲಿ ಸಿಕ್ಕೀತು? ಸಮಾನತೆ ಇಲ್ಲದೆ ಸ್ವಾತಂತ್ರ್ಯಕ್ಕೆ ಸಹೋದರತೆಗೆ ಅರ್ಥವೆಲ್ಲಿಯದು? ಅದೊಂದು ಅನುಭಾವ. ಅರ್ಥಮೀಮಾಂಸೆಯ ಮೂಲ ಚೈತನ್ಯವೆಂದು ಪರಿಭಾವಿಸಲೇಬೇಕಾದ ಬುದ್ಧ ನೈತಿಕವಾಗಿ ನಿತ್ಯ ನಿದರ್ಶನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.