ADVERTISEMENT

ನುಡಿ ಬೆಳಗು | ಬದುಕುವುದಕ್ಕೆ ಬದುಕೇ ಸ್ಫೂರ್ತಿಯಾಗಬೇಕು

ಡಾ.ದಾದಾಪೀರ್ ನವಿಲೇಹಾಳ್
Published 15 ಫೆಬ್ರುವರಿ 2026, 22:30 IST
Last Updated 15 ಫೆಬ್ರುವರಿ 2026, 22:30 IST
   

ಎಂಬಿಬಿಎಸ್ ಮುಗಿಸಿ ಎಂ.ಡಿ ಅಧ್ಯಯನಕ್ಕಾಗಿ ಕೇವಲ ಎರಡು ವಾರಗಳ ಹಿಂದೆ ಸೇರಿದ್ದ ಪ್ರಜ್ಞಾ ಆತ್ಮಹತ್ಯೆ ಮಾಡಿಕೊಂಡಳು. ಪ್ರಾಧ್ಯಾಪಕರಾದ ತಂದೆ ತಾಯಿಗೆ ಒಬ್ಬಳೇ ಮಗಳು. ಯಾವುದಕ್ಕೂ ಕೊರತೆಯಿರಲಿಲ್ಲ. ನೀಟ್ ಪಿ.ಜಿ ಪರೀಕ್ಷೆಯನ್ನು ಎದುರಿಸಿ ಸರ್ಕಾರಿ ಕೋಟಾದಲ್ಲಿ ಎಂ.ಡಿ ಸೀಟು ಪಡೆದ ಪ್ರತಿಭಾವಂತೆ. ಮೊದಲ ಬಾರಿಗೆ ಹೆತ್ತವರಿಂದ ದೂರವಿದ್ದು ಓದಲು ಹೋದವಳು ಒಂದೇ ವಾರಕ್ಕೆ ನನ್ನಿಂದ ಆಗುವುದಿಲ್ಲ ಅಂತ ವಾಪಾಸು ಬಂದಳು. ಅವಳನ್ನು ಸಂತೈಸಿ ಮನವೊಲಿಸಿದರು. ಒಂದೆರಡು ದಿನ ಅವಳ ಜೊತೆಯಲ್ಲಿದ್ದು ಭರವಸೆ ತುಂಬಿ ಬಿಟ್ಟು ಬಂದರು. ಅವರು ಊರು ತಲುಪುವ ಮೊದಲು ಮಗಳ ಆತ್ಮಹತ್ಯೆ ಸುದ್ದಿ ಕೇಳಿ ಕುಸಿದು ಹೋದರು. ರೆಪ್ಪೆ ಬಡಿದರೆ ಸಾಕು ಕಂಬನಿ ಕರಗಿ ಕೋಡಿಯಾಗಿ ಹರಿವ ದುಃಖದಲ್ಲಿ ಮುದ್ದಿನ ಮಗಳ ಶವವನ್ನು ಮಣ್ಣುಮಾಡಿ ಬಂದರು. ಇಬ್ಬರೂ ಕುಕ್ಕುರುಗಾಲಲ್ಲಿ ಕುಳಿತು ಗದ್ದಕ್ಕೆ ಕೈ ಕೊಟ್ಟಿದ್ದ ಅವರ ಕಣ್ಣಿನಲ್ಲಿ ಒಂದೇ ಒಂದು ಪ್ರಶ್ನೆ ಕಾಡುತ್ತಿತ್ತು: ‘ಮಕ್ಕಳನ್ನು ಹೇಗೆ ಸಾಕಬೇಕು?'

ಹೌದು, ಇವತ್ತಿನ ಮಕ್ಕಳಿಗೆ ಕಷ್ಟ ಎಂಬುದು ಅವರ ಆಯ್ಕೆಯಾಗಿಲ್ಲ. ಹೊರೆಯಾಗಿದೆ.  ಎರಡು –ಮೂರು ದಶಕಗಳ ಹಿಂದಿನವರಿಗೆ ಓದು ಎಂಬುದು ಅವರ ಬದುಕಿನ ಒಂದು ಭಾಗ ಮಾತ್ರವಾಗಿತ್ತು. ಅದೇ ಬದುಕಾಗಿರಲಿಲ್ಲ. ಅವರಿಗೆ ಹೊಲಮನೆಯ ಇತರೆ ಕೆಲಸಗಳನ್ನು ನಿಭಾಯಿಸುತ್ತಲೇ ಓದುವುದು ಸಹಜವಾಗಿತ್ತು. ಹಾಗಾಗಿ ಓದುವುದು ಅವರಲ್ಲಿ ಒತ್ತಡವನ್ನು ತುಂಬುತ್ತಿರಲಿಲ್ಲ. ಇವತ್ತು ಏನಾಗಿದೆ? ಅಂಬೆಗಾಲಿಡುವ ಮಗುವಿಗೆ ತಾಯಿಯಾದವಳು ತನ್ನದಲ್ಲದ ಭಾಷೆಯಲ್ಲಿ ಮಾತಾಡಿಸುತ್ತಾಳೆ. ತರಕಾರಿ, ಪ್ರಾಣಿ ಪಕ್ಷಿಗಳ ಹೆಸರುಗಳನ್ನು ಅದೇ ಭಾಷೆಯಲ್ಲಿ ಹೇಳಿಕೊಡುತ್ತಾ ಮಕ್ಕಳನ್ನು ಅಪರಿಚಿತರಂತೆ ಬೆಳೆಸಲಾಗುತ್ತದೆ. ಮದುವೆ ವಯಸ್ಸಿಗೆ ಬಂದರೂ ಬಾಯಿಗೆ ತುತ್ತಿಡುತ್ತಾ ಮುದ್ದಾಡುವ ತಾಯಂದಿರ ವಾತ್ಸಲ್ಯವನ್ನು ನಿಯಂತ್ರಿಸುವ ಅಜ್ಜ ಅಜ್ಜಿಯರು ಮನೆಯಲ್ಲಿಲ್ಲ. ಹೀಗೆ ಬೆಳೆದ ಮಗುವಿಗೆ ಅಂಗಡಿಗೆ ಹೋಗಿ ಹಾಲು, ತರಕಾರಿ ತರುವ ಸಣ್ಣ ಕೆಲಸಕ್ಕೂ ಹಚ್ಚುವುದಿಲ್ಲ. ಮಗು ಬಿಸಿಲಿಗೆ ಕಾಲಿಟ್ಟರೆ ಸಾಕು, ಅಮ್ಮನಿಗೆ ಉಷ್ಣವಾಗುತ್ತದೆ. ಮಕ್ಕಳಿಗೆ ಶೂ ಸಾಕ್ಸ್ ಹಾಕುವುದರಿಂದ ಹಿಡಿದು ಹೋಂ ವರ್ಕ್‌ವರೆಗೆ ಎಲ್ಲದಕ್ಕೂ ಅಪ್ಪ ಅಮ್ಮ ಇದ್ದಾರಲ್ಲ ಎನ್ನುವ ಭರವಸೆ ಹುಟ್ಟುತ್ತದೆ. 

ಅತಿಯಾದ ಮುದ್ದು ಮಕ್ಕಳಿಗೆ ಕಷ್ಟಗಳನ್ನು ಸಹಿಸುವ ಮನಃಸ್ಥಿತಿ ರೂಪುಗೊಳ್ಳುವುದಕ್ಕೆ ಅಡ್ಡಿಯಾಗುತ್ತಿದೆ. ದೊಡ್ಡವರಾದಂತೆ ಅವರಿಗೆ ಓದು ಎನ್ನುವುದೇ ಬದುಕಿನ ಮಹಾಸಾಧನೆ ಅಂತ ಅನಿಸುತ್ತದೆ. ಮಾರ್ಕ್ಸು, ರ‍್ಯಾಂಕು, ಡಿಸ್ಟಿಂಕ್ಷನ್ನುಗಳ ಅತಿಯಾದ ನಿರೀಕ್ಷೆಯಲ್ಲಿ ಸರಿಯಾದ ನಿದ್ದೆ, ಊಟ, ಸಂಬಂಧಗಳೂ ಇಲ್ಲದೆ ಅಶಿಸ್ತು ರೂಢಿಯಾಗಿ ಆರೋಗ್ಯ ಕೈಕೊಡುತ್ತದೆ. ತಾವು ಅಂದುಕೊಂಡದ್ದು ಕೈಗೂಡದ ಹತಾಶೆಯಿಂದಾಗಿ ಆತ್ಮಹತ್ಯೆ ಸುಲಭದ ದಾರಿಯಾಗಿ ಕಾಣುತ್ತದೆ. ಇದು ಬದುಕನ್ನು ಅದು ಬಂದ ಹಾಗೆ ಸ್ವೀಕರಿಸುವ ಮನೋಧರ್ಮಕ್ಕೆ ವಿರುದ್ಧವಾದುದು. ಹುಟ್ಟಿದ ಜೀವ ಒಂದಲ್ಲ ಒಂದು ದಿನ ಸಾಯುತ್ತದೆ ನಿಜ, ಆದರೆ ಎಂದೋ ಏನೋ ಬಂದೇ ಬರುವ ಸಾವನ್ನು ಹುಡುಕಿಕೊಂಡು ಹೋಗಬಾರದು. ಆತ್ಮಹತ್ಯೆ! ಅದಕ್ಕೇನು ಕಡಿಮೆ ಧೈರ್ಯ ಬೇಕೇ? ಸಾಯುವುದಕ್ಕೆ ಬೇಕಾದ ಅರ್ಧದಷ್ಟು ಧೈರ್ಯವಿದ್ದರೂ ಸಾಕು ಬೇಕಾದಂತೆ ಬದುಕಬಹುದು! ಕಷ್ಟಗಳನ್ನು ಎದುರಿಸಲು ಮಕ್ಕಳ ಮನಸ್ಸನ್ನು ಟ್ಯೂನಪ್ ಮಾಡಬೇಕೆಂದರೆ ಅವರೊಂದಿಗೆ ಕುಳಿತು ನಡೆದು ನಗಿಸಿ ಸಮಯ ಕಳೆಯಬೇಕು. ಮಕ್ಕಳು ಯಂತ್ರಗಳಲ್ಲ, ಹೂವಾಗಿ ಅರಳಬೇಕಾದ ಮೊಗ್ಗುಗಳು. 

ADVERTISEMENT

ಟೆನ್ಸಿಂಗ್‌ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಸಲ ಹತ್ತಿ ಇಳಿದಾಗ ಯಾರೋ ಕೇಳಿದರಂತೆ: ‘ಈ ಪರ್ವತವನ್ನು ಹತ್ತಲು ನಿಮಗೇನು ಪ್ರೇರಣೆಯಾಯಿತು?' ಆತ ಕೊಟ್ಟ ಉತ್ತರ: ಈ ಪರ್ವತ ಇಲ್ಲಿದೆಯಲ್ಲಾ, ಅದೇ ಸ್ಫೂರ್ತಿ! ನಮಗೂ ಹಾಗೆಯೇ, ಈ ಬದುಕು ಇದೆಯಲ್ಲಾ, ಬದುಕುವುದಕ್ಕೆ ಅದೇ ಸ್ಫೂರ್ತಿಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.