ADVERTISEMENT

ಕಲಿಕೆ, ಬೋಧನೆ ಮತ್ತು ಬಿಡುವು

ಬಿಂಡಿಗನವಿಲೆ ಭಗವಾನ್
Published 3 ಮೇ 2018, 19:30 IST
Last Updated 3 ಮೇ 2018, 19:30 IST

ಮನುಷ್ಯನ ಪ್ರಗತಿ, ವಿಕಾಸಕ್ಕೆ ಶಿಕ್ಷಣ ಮೂಲಭೂತ ಅಗತ್ಯಗಳಲ್ಲೊಂದು. ಶಿಕ್ಷಣ ಎಂದಕೂಡಲೇ ಸುಸಜ್ಜಿತ ಕಟ್ಟಡ, ಹೈಟೆಕ್ ಗ್ರಂಥಾಲಯ, ಪ್ರಯೋಗಾ
ಲಯ, ತರಗತಿ, ಕ್ರೀಡಾ ಮೈದಾನಗಳೇ ನಮ್ಮ ಪರಿಭಾವನೆಗೆ ಬರಬೇಕಿಲ್ಲ. ಇವು ಕಲಿಯಲು ಪ್ರೇರಣೆಯಾಗಬಲ್ಲವು, ಒಪ್ಪೋಣ. ಇವೆಲ್ಲವೂ ಇದ್ದೂ ಮಕ್ಕಳು ಓದು, ಕಲಿಕೆಗೆ ಶ್ರದ್ಧಾಸಕ್ತಿ ತೋರದಿರುವ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ. ಸಮರ್ಥ ಬೋಧನೆ ಹಾಗೂ ಮಕ್ಕಳ ಜ್ಞಾನಕುತೂಹಲವೇ ವಿದ್ಯಾಲಯದ ಶ್ರೇಷ್ಠತೆಗೆ ಆಖೈರು. ಮರದ ಕೆಳಗಾದರೂ ಅಡ್ಡಿಯಿಲ್ಲ, ಪಾಠ ಸ್ವಾರಸ್ಯಕರವಾಗಿದ್ದರೆ ಮಕ್ಕಳು ಕುಳಿತು ಸಂತೋಷದಿಂದ ಕಲಿತಾರು. ಮಕ್ಕಳು ತರಗತಿಯಿಂದ ಹೊರಗೇ ಹೆಚ್ಚು ಕಲಿಯುತ್ತಾರೆನ್ನುವುದರಲ್ಲಿ ಎರಡು ಮಾತಿಲ್ಲ. ಟಿ.ಪಿ. ಕೈಲಾಸಂ ಅವರ ನುಡಿ ‘ಮಕ್ಕಳಸ್ಕೂಲ್ ಮನೇಲಲ್ವೆ?’ ಮನನೀಯ.

ಸ್ವಭಾವತಃ ಮಕ್ಕಳು ಪಾಠಕ್ಕೂ ಬದುಕಿಗೂ ಸಂಬಂಧ ಹುಡುಕುತ್ತಾರೆ. ಶಿಕ್ಷಕರು ಈ ಗುಣವನ್ನು ತಮ್ಮ ಸಮರ್ಥ ಬೋಧನೆಗೆ ಬಳಸಿಕೊಳ್ಳಬೇಕು. ಪೋಷಕರು ಅದನ್ನು ಉತ್ತೇಜಿಸಬೇಕು. ‘ಇವೆಲ್ಲ ನಿನಗೇಕೆ? ನೀನಾಯಿತು ನಿನ್ನ ಪರೀಕ್ಷೆಯಾಯಿತು, ಚೆನ್ನಾಗಿ ನಂಬರು ತೆಗೆದುಕೊಳ್ಳುವುದರತ್ತ ನೋಡು’ ಎಂದು ಮಕ್ಕಳನ್ನು ಹೀಗಳೆಯಬಾರದು. ಅಂಕಪಟ್ಟಿಯಲ್ಲಿ ಭರ್ತಿ ಅಂಕಗಳು ತುಂಬಿದರಾಯಿತು ಎನ್ನುವ ಇರಾದೆ ಶಿಕ್ಷಣದ ಗುರಿಯನ್ನೇ ಅಯೋಮಯವಾಗಿಸುತ್ತದೆ. ಮೇ ಅಂತ್ಯದಲ್ಲಿ ಆರಂಭವಾಗುತ್ತಿದ್ದ ಪಿ.ಯು. ತರಗತಿಗಳನ್ನು ಈ ಬಾರಿ ಮೇ 2ರಂದೇ ಆರಂಭಿಸಿದ್ದರ ಕುರಿತ ಸಾಧಕ, ಬಾಧಕ ಆಲೋಚಿಸಲು ಇಷ್ಟನ್ನು ಪೀಠಿಕೆಯಾಗಿಸಿಕೊಂಡೆ. ಹೆಚ್ಚೆಚ್ಚು ತರಗತಿಗಳಲ್ಲಿ ಕೂತರೆ ವಿದ್ಯಾರ್ಥಿಗಳು ಹೆಚ್ಚು ಬುದ್ಧಿಶಾಲಿಗಳಾಗಿಬಿಡುತ್ತಾರೆ ಎನ್ನುವುದು ಒಂದು ಭ್ರಮೆ. ಕಲಿಸಲು, ಕಲಿಯಲು ಪ್ರಥಮ ವೈರಿಯೆಂದರೆ ಒತ್ತಡವೇ. ‘ರಜೆಗೆ ಕಡಿವಾಣ ಹಾಕಿ, ಸಾಕಿನ್ನು ಬಿಡುವು, ಹೊರಡಿ ತರಗತಿಗೆ’ ಎಂದು ಬೋಧಕ, ವಿದ್ಯಾರ್ಥಿಗಳನ್ನು ನಾಲ್ಕು ಗೋಡೆಗಳ ನಡುವೆ ಬಂಧಿಸಿದ ಮಾತ್ರಕ್ಕೆ ಉತ್ತಮ ಫಲಿತಾಂಶ ಬರದು. ತರಗತಿಗಳು ಭೋರ್ಗರೆಯುತ್ತಿರಲಿ, ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆಗೊಳ್ಳುತ್ತಿರಲಿ ಎಂದರೆ ಶಾಲಾ ಕಾಲೇಜುಗಳನ್ನು ಕಾರ್ಖಾನೆಗೆ ಹೋಲಿಸಿದಂತಾಗುತ್ತದೆ.

ಮಕ್ಕಳು ಜ್ಞಾನವಂತರಾಗುವುದೇ ಬೇರೆ, ಕೈಗಾರಿಕೆಗಳಿಂದ ಗುಣಮಟ್ಟದ ಉತ್ಪನ್ನಗಳು ತಯಾರಾಗುವುದೇ ಬೇರೆ. ತಮ್ಮ ಮಕ್ಕಳ ಅನುತ್ತೀರ್ಣತೆಗೆ ಶಿಕ್ಷಕರ ಮೇಲೆ ಗೂಬೆ ಕೂರಿಸುವುದು ವೈಚಾರಿಕ ನಡೆಯಲ್ಲ. ಮಕ್ಕಳ ಮಿದುಳನ್ನು ಪರೋಕ್ಷ ಮಾರ್ಗದಲ್ಲೇ ಹದ, ಚುರುಕುಗೊಳಿಸಬೇಕೇ ಹೊರತು ಅದಕ್ಕಾಗಿ ಹತ್ತಿರದ ದಾರಿ ಇಲ್ಲ.

ADVERTISEMENT

ಇತಿಹಾಸದಾದ್ಯಂತ ಕಂಡುಬರುವ ಸತ್ಯವೆಂದರೆ ಮೇಧಾವಿಗಳು, ಪ್ರತಿಭಾನ್ವಿತರ ಸಾಧನೆ ಸಿದ್ಧಿಯಾಗಿರುವುದು ತರಗತಿಯ ಹೊರಗಡೆಯೇ. ನ್ಯೂಟನ್, ಐನ್‍ಸ್ಟೀನ್ ಆಗಲೀ ರಾಮಾನುಜನ್, ಸಿ.ವಿ. ರಾಮನ್ ಆಗಲೀ ತರಗತಿಗೆ ಅಂಟಿಕೊಂಡವರಲ್ಲ. ಫ್ಯಾರೆಡೆ ಪ್ರಯೋಗಾಲಯವೊಂದರಲ್ಲಿ ಸಹಾಯಕನಾಗಿದ್ದ. ಕ್ರಮೇಣ ಅಲ್ಲಿನ ಉಪಕರಣಗಳನ್ನು ಆಮೂಲಾಗ್ರವಾಗಿ ಪರಿಚಯಿಸಿಕೊಂಡ. ಅವುಗಳ ಹಿಂದಿನ ವೈಜ್ಞಾನಿಕ ತತ್ತ್ವಗಳು ಅವನಿಗೆ ಕರಗತವಾದವು. ವಿದ್ಯುದ್ವಿಭಜನೆ ವಿಜ್ಞಾನಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ. ರಾಮಾನುಜನ್ ಗಣಿತದ ಹೊರತಾಗಿ ಉಳಿದೆಲ್ಲ ವಿಷಯ
ಗಳಲ್ಲೂ ನಪಾಸಾಗಿದ್ದರು. ಅವರ ಈ ಪರಿಯ ವಿಶಿಷ್ಟ ಆಸಕ್ತಿ, ಏಕಾಗ್ರತೆಯೇ ಮುಂದೆ ಅವರನ್ನು ವಿಶ್ವ ಖ್ಯಾತಿಯ ಗಣಿತ ತಜ್ಞರನ್ನಾಗಿಸಿತು. ಎಡಿಸನ್ ತರಗತಿಯನ್ನೇ ನೆಚ್ಚಿಕೊಂಡಿದ್ದರೆ ಸಾವಿರಾರು ಆವಿಷ್ಕಾರಗಳು ಆತನಿಂದ ಸಾಧ್ಯವಾಗುತ್ತಲೇ ಇರಲಿಲ್ಲ. ತರಗತಿಯನ್ನು ಕಡೆಗಣಿಸಬೇಕೆಂದಲ್ಲ. ತರಗತಿಯೇ ಎಲ್ಲ ಅಲ್ಲ ಎನ್ನುವುದನ್ನು ಗಮನಿಸಬೇಕು. ಮಕ್ಕಳ ಸೈದ್ಧಾಂತಿಕ ಜ್ಞಾನವು ಪ್ರಾಯೋಗಿಕ ಜ್ಞಾನದೊಂದಿಗೆ ತಳಕು ಹಾಕಿಕೊಂಡಾಗಲೇ ಅವರಿಗೆ ಪರಿಣಾಮಕಾರಿಯಾಗಿ ಕಲಿಕೆಯಲ್ಲಿ ಅಸ್ಥೆ ಮೂಡಲು ಸಾಧ್ಯ. ಹಾಗಾಗಿ ಸಂತೆ, ಜಾತ್ರೆ, ಕೃಷಿ ಪದ್ಧತಿ, ಕೈಗಾರಿಕೋದ್ಯಮ, ಹೈನುಗಾರಿಕೆ, ಪರಿಸರ ಮುಂತಾದವನ್ನು ಸ್ಥೂಲವಾಗಿ ತಿಳಿಯುವುದಕ್ಕಾದರೂ ಅವರಿಗೆ ಬಿಡುಬೀಸು ಬೇಕು. ಇಲ್ಲವಾದರೆ ಅವರಿಗೆ ಕುರುಡು ಪಾಠವೇ ಗತಿಯಾಗುವುದು. ಹದಿನೆಂಟೆಂಟ್ಲಿ ನೂರನಲವತ್ತ್ನಾಲ್ಕು ಎಂದು ಉರು ಹೊಡೆಯುವ ಬದಲಿಗೆ ಆ ಫಲಿತಾಂಶ ಹೇಗೆ ಬಂತೆಂದು ಅರಿಯುವುದು ಪರಿಣಾಮಕಾರಿ. ಪೋಷಕರು ವಿದ್ಯಾಲಯಕ್ಕೆ ಬಂದು ತಮ್ಮ ಮಕ್ಕಳು ಎಷ್ಟು ಅಂಕ ಪಡೆಯಬಲ್ಲರು ಎಂದು ವಿಚಾರಿಸುವುದುಂಟು. ಆದರೆ ತಮ್ಮ ಮಕ್ಕಳು ಹೇಗೆ ಆಲೋಚಿಸಬಲ್ಲರು ಎಂದು ಪ್ರಶ್ನಿಸುವ ಪೋಷಕರು ಅಪರೂಪ!

ವಿದ್ಯಾಲಯದಲ್ಲಿ ಮಕ್ಕಳ ಮನಸ್ಸನ್ನು ಕೇವಲ ಮಾಹಿತಿಗಳಿಂದ ತುಂಬುವುದಲ್ಲ. ಬದಲಿಗೆ ಅವರಿಗೆ ಒದಗಿಸುವ ಮಾಹಿತಿ- ಅದು ಕಡಿಮೆಯಾದರೂ ಸರಿಯೇ- ಅವರನ್ನು ಚಿಂತನೆಗೆ ಎಷ್ಟು ಪ್ರಭಾವಿಸಬಲ್ಲದು ಎನ್ನುವುದರತ್ತ ನಿಗಾ ವಹಿಸುವುದು ಮುಖ್ಯವಾಗುತ್ತದೆ. ಬೋಧನೆಯೆಂದರೆ ಏನನ್ನು ಕಲಿಸಬೇಕೆನ್ನುವುದಲ್ಲ, ಹೇಗೆ ಚಿಂತಿಸಬೇಕು ಎನ್ನುವುದನ್ನು ಕಲಿಸುವುದು. ಆಯಾ ಶೈಕ್ಷಣಿಕ ವರ್ಷ ಮುಗಿದ ನಂತರ ಬೋಧಕರಿಗೆ, ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ಅಥವಾ ಒಂದೂವರೆ ತಿಂಗಳ ಅವಧಿಯ ವಿರಾಮ ಅಗತ್ಯವಿದೆ. ವಾಸ್ತವವಾಗಿ ಇದು ವಿರಾಮವೇ ಅಲ್ಲ. ಶಿಕ್ಷಕರಿಗೆ ಮುಂದಿನ ಶೈಕ್ಷಣಿಕ ವರ್ಷದ ಬೋಧನೆಗೆ ಸಿದ್ಧತೆ, ಪುನರ್ಮನನ, ಅವಲೋಕನಕ್ಕೆ ಆಸ್ಪದವಾಗುವ ಬಿಡುಬೀಸು. ಪಠ್ಯ ವಿಷಯದ ಮಾರ್ಪಾಡಿಗೆ ತಕ್ಕಂತೆ ಅವರೂ ಅಣಿಯಾಗುವ ಅಗತ್ಯವಿದ್ದೇ ಇದೆ. ಎಲ್ಲ ಬೋಧಕರಿಗೂ ಚೆನ್ನಾಗಿ ಪಾಠ ಮಾಡಬೇಕು, ವಿದ್ಯಾರ್ಥಿಗಳ ನಡುವೆ ಒಳ್ಳೆಯ ಶಿಕ್ಷಕ ಎನ್ನಿಸಿಕೊಳ್ಳಬೇಕೆಂಬ ಸದಾಶಯವಿದ್ದೇ ಇರುತ್ತದೆ. ಬೋಧಿಸಿದ್ದು ಅರ್ಥವಾಗುತ್ತಿಲ್ಲ, ಪೂರ್ವ ತಯಾರಿ ಸಾಲದು ಎಂದು ವಿದ್ಯಾರ್ಥಿಗಳಾಗಲೀ ಪೋಷಕರಾಗಲೀ ದೂರಿದರೆ ಅದಕ್ಕಿಂತ ನೋವು, ಮಾನಸಿಕ ಯಾತನೆ ಶಿಕ್ಷಕರಿಗೆ ಮತ್ತೊಂದಿಲ್ಲ. ಹಾಗಾಗಿ ಬಿಡುಬೀಸಾಗಿ ಗ್ರಂಥಾಲಯಗಳಿಗೆ, ಸಂಶೋಧನಾ ಸಂಸ್ಥೆಗಳಿಗೆ ಭೇಟಿ ನೀಡಿ ಅವರು ಪರಾಮರ್ಶನ ನಡೆಸುವುದು, ವಿಷಯ ತಜ್ಞರಿಂದ ಸಲಹೆ ಸೂಚನೆಗಳನ್ನು ಪಡೆಯುವುದು ಅಗತ್ಯವೂ ಹೌದು. ಅನಿವಾರ್ಯಯೂ ಹೌದು. ದಕ್ಷ ಬೋಧನೆಗೆ ಸ್ಫೂರ್ತಿ ಪ್ರಾಪ್ತವಾಗುವುದು ಹೊರ ಜಗತ್ತಿನಲ್ಲೇ. ರಜೆ ಹಿಂದಿನಂತೆಯೇ ಇದ್ದಿದ್ದರೆ ಮಾಸ್ತರರು, ವಿದ್ಯಾರ್ಥಿಗಳು ಪ್ರವಾಸ ಹೋಗಬಹುದಿತ್ತು. ಕೋಟೆ, ಕೊತ್ತಲ ಸುತ್ತಿ ಸಾಕಷ್ಟು ಅರಿಯಬಹುದಿತ್ತು. ಕಾಡು, ಮೇಡು, ಹೊಳೆ ದಂಡೆ ಅಡ್ಡಾಡಬಹುದಿತ್ತು. ತರಗತಿಗೆ ಇನ್ನಷ್ಟು ಉತ್ಸಾಹ, ಹುರುಪಿನಿಂದ ಕಲಿಸುವ, ಕಲಿಯುವ ಆಕಾಂಕ್ಷಿಗಳಾಗಿ ಬರಬಹುದಿತ್ತು ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.