ADVERTISEMENT

ತೊಗರಿ ಬೆಲೆಕುಸಿತಕ್ಕೆ ಪರಿಹಾರ ನೀಡಿ ರೈತರನ್ನು ರಕ್ಷಿಸಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 19:30 IST
Last Updated 6 ಫೆಬ್ರುವರಿ 2011, 19:30 IST

ಗುಲ್ಬರ್ಗ ಮತ್ತು ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತೊಗರಿ ಬೆಲೆ ಕುಸಿದಿದ್ದರಿಂದ ಜೇವರ್ಗಿ ತಹಶೀಲ್ದಾರ್ ಕಚೇರಿ ಎದುರು 12 ಜನ ರೈತರು ಆತ್ಮಹತ್ಯೆಗೆ ಪ್ರಯತ್ನಿಸಿದ ದುರ್ಘಟನೆ ನಡೆದಿದೆ. ಕಷ್ಟಪಟ್ಟು ಬೆಳೆದ ತಮ್ಮ ಉತ್ಪನ್ನಕ್ಕೆ ನಷ್ಟ ಸಂಭವಿಸಿದ್ದರಿಂದ ಹತಾಶರಾದ ರೈತರು ಹಲವು ದಿನಗಳ ಕಾಲ ಧರಣಿ ಮಾಡಿ ನಂತರ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಹೋದವರ್ಷ ರಾಯಚೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ತೊಗರಿ ಬೆಳೆ 15,000 ಹೆಕ್ಟೇರ್ ಪ್ರದೇಶದಲ್ಲಿತ್ತು. 94,000 ಕ್ವಿಂಟಲ್ ಉತ್ಪಾದನೆಯಾಗಿತ್ತು. ಪ್ರತಿ ಕ್ವಿಂಟಲ್‌ಗೆ ಬೆಲೆ 5,500 ರೂ. ದೊರೆತು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಈ ವರ್ಷವು ಉತ್ತಮ ಬೆಲೆ ಸಿಗುತ್ತದೆ ಎಂಬ ಭರವಸೆ ಇಟ್ಟ ರೈತರು, ತೊಗರಿಯನ್ನು 55,000 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಿದರು. ಉತ್ಪನ್ನ 3,07.036 ಕ್ವಿಂಟಲ್‌ಗೆ ಅಧಿಕಗೊಂಡಿತು. ಆದರೆ ಪ್ರತಿ ಕ್ವಿಂಟಲ್ ತೊಗರಿ ಬೆಲೆ 3,500 ರೂ.ಗೆ ಕುಸಿದಿದ್ದು, ಪ್ರತಿ ಕ್ವಿಂಟಲ್‌ಗೆ 2,000 ರೂ. ನಷ್ಟ ಸಂಭವಿಸುತ್ತಿದೆ. ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಷ್ಟ ಎದುರಾದುದು ಅವರ  ಆತಂಕಕ್ಕೆ ಕಾರಣ.

ಬೇಸಾಯ, ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಕೆಸಲದಾಳುಗಳ ಕೂಲಿ ಇತ್ಯಾದಿ ಸೇರಿದಂತೆ ಉತ್ಪಾದನಾ ವೆಚ್ಚ ಏರುತ್ತಿದೆ. ಕ್ವಿಂಟಲ್‌ಗೆ ಕನಿಷ್ಠ ಐದು ಸಾವಿರ ರೂಪಾಯಿ ರೈತರಿಗೆ ಖರ್ಚು ಬರುತ್ತಿದೆ ಎನ್ನುವ ಅಂದಾಜಿದೆ. ಆದರೆ ಸರ್ಕಾರ ನಾಲ್ಕು ಸಾವಿರ ರೂ.
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು ತೀರ್ಮಾನಿಸಿದೆ. ಪ್ರತಿ ದಿನ ಮಾರುಕಟ್ಟೆಗೆ ಬರುವ ನೂರಾರು ಚೀಲಗಳ ಪೈಕಿ ಕೇವಲ ಶೇ. 10 ರಷ್ಟನ್ನು ಮಾತ್ರ ತೊಗರಿ ಖರೀದಿ ಮಂಡಳಿ ಖರೀದಿಸುತ್ತದೆ. ಉಳಿದದ್ದನ್ನು ಮಧ್ಯವರ್ತಿಗಳೇ ಖರೀದಿಸಬೇಕು. ಸರ್ಕಾರವೇ ಕ್ವಿಂಟಲ್‌ಗೆ ನಾಲ್ಕು ಸಾವಿರ ರೂ. ನಿಗದಿಪಡಿಸಿದಾಗ ದಲ್ಲಾಳಿಗಳು 4100 ಕೊಟ್ಟು ಖರೀದಿಸುತ್ತಾರೆ. ರೈತರಿಗೆ ನಷ್ಟ ಉಂಟಾಗಲು ಸರ್ಕಾರದ ಅವೈಜ್ಞಾನಿಕ ಬೆಂಬಲ ಬೆಲೆ ನೀತಿಯೇ ಕಾರಣವಾಗಿದೆ ಎಂಬುದನ್ನು ಅಲ್ಲಗಳೆಯಲಾಗದು.

ಸಹಸ್ರಾರು ರೈತರು ಬೆಳೆದ ತೊಗರಿಯನ್ನು ಖರೀದಿಸಲು ಈ ಮಾರುಕಟ್ಟೆಗಳಲ್ಲಿರುವ ದಲ್ಲಾಳಿಗಳು ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿರುವುದು ಸಮಸ್ಯೆಯ ಮೂಲ. ಬಹುತೇಕ ದಲ್ಲಾಳಿಗಳು ಬಹುರಾಷ್ಟ್ರೀಯ ಕಂಪೆನಿಗಳ, ದೊಡ್ಡ ದೊಡ್ಡ ಮಾಲ್‌ಗಳ ಏಜೆಂಟರಾಗಿರುತ್ತಾರೆ. ಬೇಕಂತಲೆ ಬೆಲೆ ಇಳಿಸಿ, ಎಲ್ಲಾ ಉತ್ಪನ್ನವನ್ನು ಖರೀದಿಸಿ ರೈತರನ್ನು ಶೋಷಿಸುತ್ತಾರೆ. ಮತ್ತೊಂದುಕಡೆ ನಿಗೂಢ ಸ್ಥಳದಲ್ಲಿ ತೊಗರಿಯನ್ನು ಸಂಗ್ರಹಿಸಿ, ಕೃತಕ ಅಭಾವ ಸೃಷ್ಟಿಸಿ, ಪ್ರತಿ ಕೆ.ಜಿ. ಉತ್ಪನ್ನಕ್ಕೆ ಅಧಿಕ ಬೆಲೆ ನಿಗದಿಪಡಿಸಿ, ಗ್ರಾಹಕರನ್ನು ಸುಲಿಗೆ ಮಾಡುತ್ತಾ ಲಾಭಗಳಿಸುತ್ತಾರೆ. ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ದಲ್ಲಾಳಿಗಳಿಗೆ ಗುತ್ತಿಗೆ ಕೊಟ್ಟು, ಅನ್ಯಾಯ ನಡೆಯುತ್ತಿದ್ದರು ಸರ್ಕಾರ ಕೈಕಟ್ಟಿಕೂತಿದೆ. ಇವರು ತೊಗರಿ ಖರೀದಿಸಿ ಬೇಳೆ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಸಂಪಾದಿಸಲು ಸರ್ಕಾರ ಕೋಟಿಗಟ್ಟಲೆ ಹಣಸುರಿದು ಮಾರುಕಟ್ಟೆಗಳನ್ನು ನಿರ್ಮಿಸಿದೆ.

ಕೃಷಿ ಉತ್ಪನ್ನಗಳ ಮೌಲ್ಯ ನಿರ್ಧರಿಸುವುದು ಹರಾಜು ಹಾಕುವ ಮೂಲಕ. ಗ್ರಾಮೀಣ ಪ್ರದೇಶದಲ್ಲಿ ಆಹಾರ ಧಾನ್ಯಗಳನ್ನು ಹರಾಜು ಹಾಕುವುದು ಎಂದರೆ ಅವಮಾನಕರ ಸಂಗತಿ. ವರ್ಷಪೂರ್ತಿ ಶ್ರಮಪಟ್ಟು ಬೆಳೆದ ಉತ್ಪನ್ನಕ್ಕೆ ರೈತನೆ ಬೆಲೆ ನಿಗದಿಪಡಿಸುವುದು ಸೂಕ್ತ. ಇಲ್ಲವೆ ತಜ್ಞರ ಸಮಿತಿ ಉತ್ಪಾದನಾ ವೆಚ್ಚ ಆಧರಿಸಿ ಬೆಲೆ ತೀರ್ಮಾನಿಸಬೇಕು. ಸ್ವಾತಂತ್ರ್ಯ ಬಂದು ಆರೂವರೆ ದಶಕ ಕಳೆದರೂ ಕೃಷಿ ಉತ್ಪನ್ನಗಳ ಬೆಲೆ ನಿರ್ಧರಿಸುವ ಸುವ್ಯವಸ್ಥಿತ ಪದ್ಧತಿ ರೂಪುಗೊಂಡಿಲ್ಲ. ಮಧ್ಯವರ್ತಿಗಳು ಕೃಷಿ ಉತ್ಪನ್ನಗಳ ಬೆಲೆ ನಿರ್ಧರಿಸುವ ಕರಾಳ ಪದ್ಧತಿ ಜಾರಿಯಲ್ಲಿರುವುದು ರೈತರ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂಬುದರ ಸ್ಪಷ್ಟ ಸಂಕೇತ.

ರೈತರು ಬೆಳೆದ ಒಟ್ಟು ಉತ್ಪನ್ನವನ್ನು ಒಟ್ಟಿಗೆ ತೂಕ ಮಾಡುವ ವ್ಯವಸ್ಥೆ ಜಾರಿಗೆ ಬಂದಿಲ್ಲ. ಇಂದಿಗೂ 10, 20 ಕೆ.ಜಿ. ತೂಕ ಹಾಕಿ ಪ್ರತಿ ತೂಕದಲ್ಲೂ ಮೋಸದ ವ್ಯವಹಾರ ನಡೆಯುತ್ತಿದೆ. ವೈಬ್ರಿಡ್ಜ್‌ಗಳಲ್ಲಿ ಒಂದು ಲಾರಿ ಸರಕನ್ನು ಕ್ಷಣಾರ್ಧದಲ್ಲಿ ತೂಕ ಮಾಡಲಾಗುತ್ತದೆ. ಕೃಷಿ ಉತ್ಪನ್ನಗಳನ್ನು ತೂಕ ಮಾಡಲು ಇಂತಹ ತಾಂತ್ರಿಕ ಸಾಧನಗಳನ್ನು ಅಳವಡಿಸದಿರುವುದು ದಲ್ಲಾಳಿಗಳಿಗೆ ವರವಾಗಿದೆ.

ಮಾರುಕಟ್ಟೆಗಳಲ್ಲಿ ತೊಗರಿ ಬೆಲೆ ಪ್ರತಿ ಕ್ವಿಂಟಲ್‌ಗೆ 3500 ರೂ.ಗಳಿಗೆ ಕುಸಿದಿದೆ. ಕಳೆದ ವರ್ಷದ ಬೆಲೆಗೆ ಹೋಲಿಸಿದರೆ ಈ ವರ್ಷ ರೈತರಿಗೆ ಪ್ರತಿ ಕ್ವಿಂಟಲ್‌ಗೆ 2000 ರೂ. ನಷ್ಟ ಸಂಭವಿಸುತ್ತಿದೆ. ಸರ್ಕಾರ ಈ ನಷ್ಟವನ್ನು ಪರಿಹಾರ ಧನದ ಮೂಲಕ ರೈತರಿಗೆ ವಿತರಿಸುವಂತಾಗಬೇಕು. ರೈತರು ಮಾರುವ ಸಂದರ್ಭದಲ್ಲಿ ಬೆಲೆ ಕುಸಿದಿದೆ. ಆದರೆ ಗ್ರಾಹಕ ಹೆಚ್ಚಿನ ಬೆಲೆ ಕೊಟ್ಟು ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ರೈತರಿಂದ ಖರೀದಿಸಿ ಗ್ರಾಹಕರಿಗೆ ನಿಗದಿತ ಬೆಲೆಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಿ ಬೆಲೆ ತಾರತಮ್ಯದಿಂದ ರೈತರು ಮತ್ತು ಗ್ರಾಹಕರ ಶೋಷಣೆಯನ್ನು ತಪ್ಪಿಸಬೇಕು. ಸರ್ಕಾರ ತೊಗರಿಯನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ, ರಿಯಾಯಿತಿ ದರದಲ್ಲಿ ನ್ಯಾಯ ಬೆಲೆ ಅಂಗಡಿಗಳ ಮೂಲಕ ಬಿ.ಪಿ.ಎಲ್. ಮತ್ತು ಎ.ಪಿ.ಎಲ್. ಕಾರ್ಡುದಾರರಿಗೆ ವಿತರಿಸಬೇಕು. ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದ ಯೋಜನೆಗೆ ತೊಗರಿಬೇಳೆಯನ್ನು ಬಳಸಬಹುದು. ದಳ್ಳಾಳಿಗಳಿಂದ ಹೆಚ್ಚು ಬೆಲೆಕೊಟ್ಟು ಖರೀದಿಸುವ ಬದಲು ನೇರವಾಗಿ ರೈತರಿಂದಲೇ ಕೊಂಡರೆ ಎರಡೂ ಕಡೆಗೂ ಅನುಕೂಲ.

ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಉತ್ಪಾದನಾ ವೆಚ್ಚ ಆಧಾರಿತ ನೇರ ಪರಿಹಾರ ನೀಡುವ ಯೋಜನೆ ಕೈಗೊಳ್ಳಬೇಕು. ಒಂದು ಎಕರೆ ತೊಗರಿ ಬೆಳೆಯಲು ತಗಲುವ ವೆಚ್ಚವನ್ನು ಅಂದಾಜು ಮಾಡಿ ರೈತರಿಗೆ ನಗದು ಪರಿಹಾರ ನೀಡಬೇಕು. ಮಾರುಕಟ್ಟೆಯಲ್ಲಿ ಬೆಲೆ ಕುಸಿದು ನಷ್ಟಕ್ಕೊಳಗಾದ ರೈತ ಬೆಳೆ ಬೆಳೆಯಲು ಮಾಡಿದ ಸಾಲ ತೀರಿಸಲಾಗದೆ, ಮುಂದಿನ ಬೆಳೆಗೆ ಬಂಡವಾಳವೂ ಲಭ್ಯವಿಲ್ಲದಿದ್ದಾಗ ವಿಧಿಯಿಲ್ಲದೆ ಆತ್ಮಹತ್ಯೆಯ ಕಡೆಗೆ ಆಲೋಚಿಸುತ್ತಾನೆ. ಇಲ್ಲವೇ ಮುಂದಿನ ವರ್ಷ ತೊಗರಿ ಬೆಳೆಯುವುದನ್ನು ಬಿಟ್ಟು ಬೇರೆ ಬೆಳೆ ಬೆಳೆಯುತ್ತಾನೆ. ಆಗ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಏರಿಕೆಯಾಗಿ ಗ್ರಾಹಕರು ಪರದಾಡುವ ಸ್ಥಿತಿ ಉದ್ಭವವಾಗುತ್ತದೆ. ಆದ ಕಾರಣ ಸರ್ಕಾರ ಬೆಲೆ ಕುಸಿತದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯದಿದ್ದರೆ ರೈತರ ಸರಣಿ ಆತ್ಮಹತ್ಯೆಗಳನ್ನು ತಡೆಯುವುದು ಅಸಾಧ್ಯ.  ಈ ದಿಶೆಯಲ್ಲಿ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.