ADVERTISEMENT

ಧನಕ್ಕೆ ಮನವನೊಡ್ಡಿದ ಮಠಾಧೀಶರ ಧರ್ಮದ್ರೋಹ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST

ಕರ್ನಾಟಕದ ಮಠಾಧೀಶರೇ,
ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಮಹಾನ್ ಕ್ರಾಂತಿಯನ್ನೇ ಮಾಡಿದ ಅಣ್ಣ ಬಸವಣ್ಣನವರ ಅನುಯಾಯಿಗಳೆಂದು ಬೊಬ್ಬೆ ಹೊಡೆಯುತ್ತಿರುವ ಮತ್ತು ಬಸವಣ್ಣನವರ ಹೆಸರಿಗೆ ಹಾಗೂ ಅವರು ಪ್ರತಿಪಾದಿಸಿದ ತತ್ವ ಸಿದ್ಧಾಂತಕ್ಕೆ ಮಸಿ ಬಳಿಯುತ್ತಿರುವ ನಿಮ್ಮ ವರ್ತನೆ ನೋಡಿದಾಗ ನಿಮಗೆ ಬಸವಣ್ಣನವರ ಬಗ್ಗೆ ಸ್ವಲ್ಪವಾದರೂ ಗೌರವ, ಅಭಿಮಾನವೇ ಇಲ್ಲವೆಂಬ ಅನುಮಾನ ಬಾರದೇ ಇರದು.

ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ, ಯಡಿಯೂರಪ್ಪನವರು ರಾಜ್ಯದಲ್ಲಿ ಇದ್ದಬಿದ್ದ ಮಠಗಳಿಗೆ ಅವರ ಮನೆಯ ಆಸ್ತಿಯಂತೆ ಬೇಕಾಬಿಟ್ಟಿ ಅನುದಾನ ಬಿಡುಗಡೆಯಾದ ನಂತರ ಮೂಲೆಯಲ್ಲಿ ಬಿದ್ದಿರುರುವ ಮಠಾಧೀಶರೆಲ್ಲರೂ ಎದ್ದು ರಾಜ್ಯದಲ್ಲಿ ಜಾತಿಯ ವಿಷಬೀಜ ಬಿತ್ತುವ ಮೂಲಕ ಜಾತಿವಾದಿ, ಧರ್ಮದ್ರೋಹಿ ಸ್ವಾಮಿಗಳೆಂಬ ಕುಖ್ಯಾತಿಗೆ ಪಾತ್ರರಾಗಿದ್ದೀರಿ ಎಂದರೆ ತಪ್ಪಾಗಲಿಕ್ಕಿಲ್ಲ.

ಕಾಯಕವೇ ಕೈಲಾಸವೆಂಬ ತತ್ವದಡಿ ಸ್ಥಾಪನೆಯಾದ ಅನುಭವ ಮಂಟಪದ ಪ್ರತಿರೂಪವೇ ಈಗಿನ ಮಠಗಳು ಎಂಬ ಕನಿಷ್ಠ ಜ್ಞಾನ ನಿಮಗೆ ಇಲ್ಲದಿರುವದು ಅತ್ಯಂತ ದುಃಖದ ಸಂಗತಿ. ಆದ್ದರಿಂದ ತಮಗೆ ಇಲ್ಲಿ ಕೆಲವು ನೈತಿಕವಾದ ಪ್ರಶ್ನೆಗಳಿವೆ:

1. ಸಿದ್ಧಗಂಗಾ ಸ್ವಾಮೀಜಿಗಳೇ,
ಲಿಂಗಾಯತ ಮಠಗಳಲ್ಲೇ ಅತ್ಯಂತ ಪ್ರಭಾವಿ ಮಠದ ಸ್ವಾಮಿಗಳಾದ ತಾವು ಇತ್ತೀಚಿಗೆ ತಮ್ಮ ಮಠವನ್ನು ರಾಜಕೀಯ ಕೇಂದ್ರವನ್ನಾಗಿ ಪರಿವರ್ತನೆ ಮಾಡಿದ್ದು ಎಷ್ಟರಮಟ್ಟಿಗೆ ಸರಿ?

ಇಂಥ ಇಳಿವಯಸ್ಸಿನಲ್ಲಿ ಜಾತಿ ರಾಜಕೀಯ ಹುಟ್ಟು ಹಾಕಿದ ಅಪಕೀರ್ತಿಗೆ ಗುರಿಯಾಗಿದ್ದು, ಧನಕ್ಕೆ ಮನವನೊಡ್ಡಿ ಭ್ರಷ್ಟಾಚಾರ ಆರೋಪ ಹೊತ್ತ ಯಡಿಯೂರಪ್ಪ, ರೇಣುಕಾಚಾರ್ಯ, ಸೋಮಣ್ಣ ಅವರನ್ನು ಮಠದ ಅಂಗಳಕ್ಕೆ ಬಿಟ್ಟುಕೊಂಡು ಸ್ವಜಾತಿಯ ಮಂತ್ರಿಗಳು ರಾಜ್ಯದಲ್ಲಿ ಏನೇ ತಪ್ಪು ಮಾಡಿದರೂ ಅಂಥವರನ್ನು ಬೆಂಬಲಿಸಿ ಗೌರವ ಕಳೆದುಕೊಳ್ಳುವ ಅನಿವಾರ್ಯತೆ ನಿಮಗೆ ಯಾಕೆ ಬಂತು? ನಿಮ್ಮ ಪ್ರಕಾರ ಈ ರಾಜ್ಯ ಒಂದು ಜಾತಿಯವರ ಸ್ವತ್ತೆ?

ಬಸವಣ್ಣನ ನಾಡಿನಲ್ಲಿ ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲವೇ? ಇದೇನಾ ನೀವು ಬಸವಣ್ಣನಿಗೆ ನೀಡುತ್ತಿರುವ ಗೌರವ? ಜೀವನ ಸಂಸ್ಕಾರಕ್ಕಾಗಿ ಧರ್ಮ ಬೋಧನೆ ಮಾಡಬೇಕಾದ ನೀವು ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವ ಸಮಯದಲ್ಲಿ ಲಿಂಗಾಯತರೆಂಬ ಏಕೈಕ ಕಾರಣದಿಂದ ಲಿಂಗಾಯತ ಸ್ವಾಮಿಗಳನ್ನು ಪ್ರಚೋದಿಸಿ ರಸ್ತೆಗಿಳಿಸುವ ಮೂಲಕ  ನೇರ ರಾಜಕೀಯ ಮಾಡಲು ಹೊರಟರೆ, ಇದು ಧರ್ಮ ದ್ರೋಹವಲ್ಲದೆ ಮತ್ತೇನು?

2. ಚಿತ್ರದುರ್ಗದ ಮುರುಘಾ ಶರಣರೇ,
 ನಿನ್ನೆ ಮೊನ್ನೆಯವರೆಗೆ ಕೆಲವೇ ಕೆಲವು ಪ್ರಗತಿಪರ ಸ್ವಾಮಿಗಳಲ್ಲಿ ತಾವು ಒಬ್ಬರೆಂದು ಭಾವಿಸಿದ ಅನೇಕರ ಭಾವನೆಯನ್ನು ಹುಸಿಗೊಳಿಸಿ, ನಿಮ್ಮ ಮೇಲಿರುವ ಗೌರವವನ್ನು ನೀವೇ ಕಡಿಮೆ ಮಾಡಿಕೊಂಡಿದ್ದೀರೆಂದು ತಿಳಿಸಲು ವಿಷಾದವೆನಿಸುತ್ತಿದೆ. ಯಡಿಯೂರಪ್ಪನವರ ಹುಟ್ಟುಹಬ್ಬದ ಸಮಾರಂಭದಲ್ಲಿ ಆಡಿದ ಮಾತುಗಳು ಆಘಾತಕಾರಿ.
ಭ್ರಷ್ಟ ಯಡಿಯೂರಪ್ಪನವರನ್ನು ಆ ಪರಿ ಹೊಗಳುವ ಅವಶ್ಯಕತೆಯಾದರೂ ಏನಿತ್ತು ಶರಣರೇ? ಅಧಿಕಾರದಲ್ಲಿದ್ದಾಗ ಮಾಡಬಾರದ್ದನ್ನೆಲ್ಲ ಮಾಡಿ ಜೈಲುವಾಸ ಅನುಭವಿಸಿ ಬಂದಿರುವ ಒಬ್ಬ ಭ್ರಷ್ಟ ವ್ಯಕ್ತಿ, ಇನ್ನೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಒತ್ತಾಯಿಸಿದಿರಲ್ಲಾ, ಶರಣರೇ, ತಾವು ಕೂಡಾ ಪಾಪದ ಧನಕ್ಕೆ ಮನವನೊಡ್ಡಿದಿರಾ?

ಒಂದೇ ಒಂದು ಸಲ ಯೋಚಿಸಿ, ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗಿನಿಂದ ಜಾತಿ ರಾಜಕಾರಣ ಮಾಡುತ್ತಾ ಇಡೀ ರಾಜಕೀಯ ರಂಗವನ್ನೇ ಹೊಲಸು ಮಾಡಿ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದ ಇವರು ಇನ್ನೊಮ್ಮೆ ಸಿ.ಎಂ ಆಗಿ ಪ್ರಜಾತಂತ್ರದ ವ್ಯವಸ್ಥೆಗೆ ಅಪಮಾನವಾಗುವುದು ನಿಮಗಿಷ್ಟವೇ? ಇದೇ ನಿಮ್ಮ ಪ್ರಗತಿಪರ ವಿಚಾರವೇ? ಯಡಿಯೂರಪ್ಪನವರ ಪಾಪದ ಧನಕ್ಕೆ ಮನವನೊಡ್ಡಿ ಬಸವ ಧರ್ಮದ ದ್ರೋಹಿಗಳಾಗುತ್ತೀರಾ, ಮಹಾಸ್ವಾಮೀಜಿ?

3. ದಲಿತ, ಹಿಂದುಳಿದ ಮಠಾಧೀಶರೇ,
ಬಿಜಾಪುರದಲ್ಲಿ ದಲಿತ ಹಿಂದುಳಿದವರ ಸಮಾವೇಶ ಮಾಡಿ ಸದಾನಂದಗೌಡರಿಗೆ ಹತ್ತಿರವಾಗಲು ಹವಣಿಸುತ್ತಿರುವ ದಲಿತ-ಹಿಂದುಳಿದ ವರ್ಗದ ಸ್ವಾಮೀಜಿಗಳೇ, ನಿಮಗೇನಾದರೂ ಪ್ರಜ್ಞೆ ಇದೆಯಾ?

ಯಾವ ಪುರುಷಾರ್ಥಕ್ಕಾಗಿ ಸದಾನಂದಗೌಡರಿಗೆ  ದಲಿತ-ಹಿಂದುಳಿದವರು ಅಭಿನಂದನೆ ಸಲ್ಲಿಸಬೇಕು? ಸಂಪದ್ಭರಿತ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡು ಕೆಲಸಕ್ಕೆ ಬಾರದ ಖಾತೆಗಳನ್ನು ದಲಿತ-ಹಿಂದುಳಿದ ವರ್ಗಕ್ಕೆ ನೀಡಿದ ಕೀರ್ತಿಗೆ ಅಭಿನಂದನೆ ಸಲ್ಲಿಸಬೇಕೋ?

ತಾವೊಬ್ಬ ಹಿಂದುಳಿದ ವರ್ಗದವನೆಂಬ ಪರಿಜ್ಞಾನವಿಲ್ಲದೆ, ಸಂಘ ಪರಿವಾರದ ತುಣುಕಿನಂತೆ ವರ್ತಿಸುತ್ತಾ, ಗೋಮಾಂಸ ತಿನ್ನುವ ದಲಿತರ-ಮುಸ್ಲಿಮರ ನಾಲಿಗೆಯನ್ನು ಕತ್ತರಿಸಿ ಹಾಕಿ ಎಂದು ಹೇಳಿಕೆ ನೀಡುತ್ತಿರುವ, ಸಾಮಾಜಿಕ ಕಳಕಳಿಯೂ ಇಲ್ಲದ ಕೆ.ಎಸ್.ಈಶ್ವರಪ್ಪ ಅಂಥವರಿಗೆ ಯಾವ ಕಾರಣಕ್ಕಾಗಿ ಅಭಿನಂದನೆ ಸಲ್ಲಿಸಬೇಕೆಂದು ಸ್ಪಷ್ಟಪಡಿಸುವಿರಾ ಸ್ವಾಮಿಗಳೇ? ಹಿಂದುಳಿದ ವರ್ಗಕ್ಕೆ ಇವರಿಬ್ಬರೂ ನೀಡಿದ ಕೊಡುಗೆಯಾದರೂ ಏನು?

ಸ್ವಾಮೀಜಿಗಳೇ, ನಿಮ್ಮ ಸ್ವಾರ್ಥಕ್ಕಾಗಿ ಮುಗ್ಧ ಸಮಾಜವನ್ನು ಬಲಿಕೊಡಬೇಡಿ. ಈಗಾಗಲೇ ಕಪಟ ರಾಜಕಾರಣಿಗಳು ದಲಿತ-ಹಿಂದುಳಿದ ಸಮಾಜವನ್ನು ಬಲಿಕೊಟ್ಟು ತಮ್ಮ ತಮ್ಮ ಬೇಳೆ ಬೇಯಿಸಿಕೊಂಡದ್ದಾಗಿದೆ.

ಈಗ ನೀವು ಧರ್ಮದ ಹೆಸರಿನಲ್ಲಿ ಮುಗ್ಧ ಜನರನ್ನು ಬಲಿಕೊಡುವ ದುಸ್ಸಾಹಸಕ್ಕೆ ಕೈಹಾಕಬೇಡಿರಿ. ದಲಿತ- ಹಿಂದುಳಿದವರ ಮೀಸಲಾತಿ ವಿಷಯ ಬಂದಾಗಲೆಲ್ಲ ಪ್ರತಿರೋಧ ಮಾಡುವ ಭಾರತೀಯ ಜನತಾ ಪಾರ್ಟಿಗೆ ನಮ್ಮ ಸಮಾಜದ ಮುಗ್ಧ ಜನರನ್ನು ತೋರಿಸಿ ನಿಮ್ಮ ಸ್ವಾರ್ಥಕ್ಕಾಗಿ ಶಕ್ತಿ ಪ್ರದರ್ಶನ ಮಾಡಲು ಹವಣಿಸುತ್ತಿರುವ ನಿಮಗೆ ನಾಚಿಗೆಯಾಗುತ್ತಿಲ್ಲವೇ?

ಮಂಡಲ ವರದಿ ಜಾರಿಯಾಗಬೇಕೆಂದು ಆಗಿನ ಪ್ರಧಾನಿ ವಿ.ಪಿ.ಸಿಂಗ್ ಪ್ರತಿಪಾದಿಸಿದಾಗ ಇದೇ ಭಾರತೀಯ ಜನತಾ ಪಾರ್ಟಿ ದೇಶದಾದ್ಯಂತ ಯಾತ್ರೆ ಮಾಡಿ, ಸರ್ಕಾರವನ್ನು ಬೀಳಿಸಿದ ಇತಿಹಾಸದ ಪರಿಜ್ಞಾನ ನಿಮಗಿಲ್ಲವೇ?

ಇಂಥ ಪಕ್ಷದವರಿಗೆ ಅಭಿನಂದನೆ ಸಲ್ಲಿಸುವ ಹೇಳಿಕೆ ನೀಡುತ್ತಿರುವ ನಿಮಗೆ ಕನಿಷ್ಠ ಜ್ಞಾನ ಬೇಡವೆ? ಒಂದು ವೇಳೆ ಮಠಾಧೀಶರು ರಾಜಕೀಯ ಮಾಡಲೇಬೇಕಾದಲ್ಲಿ ಖಾವಿ ಬಿಚ್ಚಿ, ಖಾದಿ ತೊಟ್ಟು ಬಿಡಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.