ADVERTISEMENT

ವಡ್ಡಾರಾಧನೆ, ಆರಾಧನಾ ಕರ್ಣಾಟ ಟೀಕೆ :ವಿಭಿನ್ನ ಕೃತಿಗಳು

`ವಡ್ಡಾರಾಧನೆ' ಕೃತಿಯ ಹೆಸರು ಮತ್ತು ಅದರ ಕರ್ತೃವಿನ ಬಗ್ಗೆ ಇನ್ನೂ ಖಚಿತ ಅಭಿಪ್ರಾಯ ಹೊಂದಲು ಸಾಕಷ್ಟು ಆಧಾರಗಳಿಲ್ಲ. ಅವು ಇನ್ನೂ ಸಂಶೋಧನೆಗೆ ತೆರೆದ ವಿಷಯಗಳೇ ಆಗಿವೆ

ಡಾ.ಎಂ.ಎ ಜಯಚಂದ್ರ
Published 10 ಮಾರ್ಚ್ 2013, 19:59 IST
Last Updated 10 ಮಾರ್ಚ್ 2013, 19:59 IST

`ವಡ್ಡಾರಾಧನೆ' ಕನ್ನಡದಲ್ಲಿ ದೊರೆತಿರುವ ಮೊತ್ತಮೊದಲ ಗದ್ಯಕೃತಿ. ಇದೊಂದು ನಿರ್ದಿಷ್ಟ ಉದ್ದೇಶವಿಟ್ಟುಕೊಂಡು ರಚನೆಗೊಂಡ ಕಥಾಸಂಕಲನ. ಕನ್ನಡದ ಪ್ರಥಮ ಕಥಾಕೋಶವೂ ಹೌದು. ಕೃತಿಯ ಹೆಸರು, ಕರ್ತೃ, ಕಾಲ, ದೇಶಗಳ ಬಗ್ಗೆ ವಿಪುಲವಾಗಿ ಕನ್ನಡದಲ್ಲಿ ಚರ್ಚೆ ನಡೆದಿದೆ.

ಡಾ.ಎಂ.ಎಂ.ಕಲ್ಬುರ್ಗಿ ಅವರು ಇತ್ತೀಚೆಗೆ ಕೃತಿಯ ಹೆಸರು ಹಾಗೂ ಕೃತಿಕಾರನ ಹೆಸರಿನ ಬಗ್ಗೆ ವಿವರಣೆ ನೀಡಿದ್ದಾರೆ. ವಾಚಕರ ವಾಣಿಯಲ್ಲಿ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ಬ್ರಾಜಿಷ್ಣು ಕುರಿತು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.) ಹಸ್ತಪ್ರತಿಗಳ ಪುಷ್ಟಿಕೆಗಳನ್ನು (colophon) ಗಮನಿಸಿದಾಗ ಈ ಕೃತಿಯನ್ನು ಓಡ್ಯಾರಾಧನ, ವೊಡ್ಡಾರಾಧನಾ, ವಡ್ಡಾರಾಧನೆ ಎಂದು ಕರೆದಿರುವುದು ಕಂಡುಬರುತ್ತದೆ.
 

ಇವುಗಳಲ್ಲಿ `ವಡ್ಡಾರಾಧನೆ' ಸರಿಯಾದ ರೂಪವೆಂದು ನಿರ್ಧರಿಸಲಾಗಿದೆ. ಕೊಲ್ಲಾಪುರದ ಹಸ್ತಪ್ರತಿಯ ಮರದ ಪಟ್ಟಿಕೆಯ ಮೇಲೆ `ಉಪಸರ್ಗ ಕೇವಲಿಗಳ ಕಥೆ' ಎಂಬ ಹೆಸರನ್ನು ಕೆತ್ತಲಾಗಿದೆ. ಪ್ರತಿ ಹಸ್ತಪ್ರತಿಯ ಗ್ರಂಥಾಂತ್ಯದಲ್ಲಿ, “ಈ ಪೇೞ್ದ ಪತ್ತೊಂಬತ್ತು ಕಥೆಗಳಂ ಶಿವಕೋಟ್ಯಾಚಾರ‍್ಯರ್ ಪೇೞ್ದೌ ವಡ್ಡಾರಾಧನೆ ಸಂಪೂರ್ಣಂ” ಎಂದು ಬರುವುದು. ಒಂದೆರಡು ಪ್ರತಿಗಳಲ್ಲಿ `ವಡ್ಡಾರಾಧನೆಯ ಕವಚವು' `ವಡ್ಡಾರಾಧನೆಯ ಕವಚವೆಂಬಧಿಕಾರಉ' ಎಂಬ ಮಾತುಗಳು ಬಂದಿವೆ. ಇದರ ಆಧಾರದ ಮೇಲೆ ಆರು ಪ್ರತಿಗಳ ಸಹಾಯದಿಂದ ಸಮರ್ಥವಾಗಿ ಈ ಕೃತಿಯನ್ನು ಸಂಪಾದಿಸಿರುವ ಆಚಾರ್ಯ ಡಿ.ಎಲ್.ನರಸಿಂಹಾಚಾರ್ಯ ಅವರು, ಕೃತಿಯ ಹೆಸರು `ವಡ್ಡಾರಾಧನೆ' ಎಂದೂ, ಕೃತಿಕಾರ `ಶಿವಕೋಟ್ಯಾಚಾರ್ಯ' ಎಂದೂ ಪರಿಗಣಿಸಿದ್ದಾರೆ. ಇವೇ ಚಾಲ್ತಿಯಲ್ಲೂ ಬಂದಿವೆ.

ಆದರೆ ನಿಜವಾಗಿಯೂ ಕೃತಿಯ ಹೆಸರು `ವಡ್ಡಾರಾಧನೆ'ಯೇ? ಕೃತಿಕಾರ `ಶಿವಕೋಟ್ಯಾಚಾರ್ಯ'ನೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇವುಗಳ ಬಗ್ಗೆ ವಿಶೇಷ ಚರ್ಚೆಗಳು ನಡೆದಿವೆ.ಅಂತರರಾಷ್ಟ್ರೀಯ ಖ್ಯಾತಿಯ ವಿದ್ವಾಂಸರಾದ ಡಾ. ಆ.ನೇ. ಉಪಾಧ್ಯೆ ಅವರ ಪ್ರಕಾರ, ಆಚಾರ್ಯ ಶಿವಕೋಟಿಯ ಪ್ರಾಕೃತ ಭಾಷೆಯ (ಭಗವತೀ) `ಆರಾಧನಾ' ಗ್ರಂಥದಲ್ಲಿರುವ ಕವಚಾಧಿಕಾರದ 19 ಪ್ರಾಕೃತ ಗಾಹೆಗಳೇ ಕನ್ನಡ ವಡ್ಡಾರಾಧನೆಯ 19 ಕಥೆಗಳಿಗೆ ಆಧಾರವಾಗಿವೆ. `ಆರಾಧನಾ' ಗ್ರಂಥಕ್ಕೆ `ಬೃಹತ್ ಆರಾಧನಾ' ಎಂಬ ಮತ್ತೊಂದು ಹೆಸರುಂಟು.

`ಬೃಹತಾರಾಧನಾ'ದ ಪ್ರಾಕೃತ ರೂಪ `ವಡ್ಡಾರಾಧನಾ' ಆದ್ದರಿಂದ ಮೂಲಗ್ರಂಥದ ಪ್ರಾಕೃತ ಹೆಸರು ಮತ್ತು ಅದನ್ನು ಬರೆದ ಶಿವಕೋಟ್ಯಾಚಾರ್ಯರ ಹೆಸರು ಕನ್ನಡ ಗ್ರಂಥಕ್ಕೂ ಪ್ರಾಪ್ತವಾಗಿದೆ. ಆದರೆ ಆರಾಧನೆಯ ಚರ್ಚೆ ಕನ್ನಡ ಕೃತಿಯಲ್ಲಿ ಇಲ್ಲದಿರುವುದರಿಂದ `ವಡ್ಡಾರಾಧನೆ' ಕೃತಿಯ ಹೆಸರು ಮತ್ತು ಅದರ ಕರ್ತೃವಿನ ಬಗ್ಗೆ ಇನ್ನೂ ಖಚಿತ ಅಭಿಪ್ರಾಯ ಹೊಂದಲು ಸಾಕಷ್ಟು ಆಧಾರಗಳಿಲ್ಲ. ಅವು ಇನ್ನೂ ಸಂಶೋಧನೆಗೆ ತೆರೆದ ವಿಷಯಗಳೇ ಆಗಿವೆ ಎಂಬುದು ಡಾ. ಆ.ನೇ. ಉಪಾಧ್ಯೆ ಅವರ ಸ್ಪಷ್ಟ ಅಭಿಪ್ರಾಯವಾಗಿದೆ.

ಡಾ. ಆ.ನೇ. ಉಪಾಧ್ಯೆ ಅವರು ತಮ್ಮ ಹರಿಷೇಣನ ಬೃಹತ್ಕಥಾ ಕೋಶದ ಪೀಠಿಕೆಯಲ್ಲಿ ಭ್ರಾಜಿಷ್ಣುವನ್ನು ಪ್ರಸ್ತಾಪಿಸಿದ್ದಾರೆ. ಆದರವರು, `ಇದೊಂದು ಅಪೂರ್ವ ಹೆಸರು, ಕದಾಜಿತ್ ಅಪಪಾಠವೂ ಇರುವ ಸಂಭವವಿದೆ' ಎಂಬ ಅಭಿಪ್ರಾಯ ಹೊಂದಿದ್ದರು. ಆದರೆ ಆದಿತೀರ್ಥಂಕರನ ಸಹಸ್ರನಾಮಾವಳಿಯಲ್ಲಿ `ಭ್ರಾಜಿಷ್ಣು' ಹೆಸರಿರುವುದನ್ನು ಡಾ. ಹಂಪನಾ ಅವರು ಗುರುತಿಸಿದ್ದಾರೆ. ಇದರಿಂದ `ಭ್ರಾಜಿಷ್ಣು' ಅಪಪಾಠವಲ್ಲವೆಂಬುದು ಸ್ಪಷ್ಟವಾಗುವುದು.

ರಾಮಚಂದ್ರ ಮುಮುಕ್ಷು ಸಂಸ್ಕೃತ ಭಾಷೆಯ `ಪುಣ್ಯಾಸ್ರವ ಕಥಾಕೋಶ'ದಲ್ಲಿ ಬರುವ ಶ್ರೇಣಿಕನ ಕಥೆಯ ಅಂತ್ಯದಲ್ಲಿ, “ಭ್ರಾಜಿಷ್ಣೊರಾರಾಧನಾ ಶಾಸ್ತ್ರೇ ಕರ್ಣಾಟ ಟೀಕಾ ಕಥಿತ ಕ್ರಮೇಣೋಲ್ಲೇಖ ಮಾತ್ರಂ ಕಥಿತೇಯ ಕಥಾ ಇತಿ” ಎಂದಿದೆ. ಇದರಿಂದ ಭ್ರಾಜಿಷ್ಣು ಶಿವಕೋಟ್ಯಾಚಾರ್ಯನ ಆರಾಧನಾ ಶಾಸ್ತ್ರಕ್ಕೆ “ಕರ್ಣಾಟ ಟೀಕೆ” ಬರೆದಿದ್ದನೆಂದು ತಿಳಿಯಬಹುದಾಗಿದೆ. ಈ ಎಳೆಯನ್ನು ಆಧರಿಸಿದ ಡಾ. ಎಂ.ಎಂ. ಕಲಬುರ್ಗಿ ಅವರು, ವಡ್ಡಾರಾಧನೆಯ ಕಥೆಗಳು ಈ ಟೀಕೆಯ ಒಂದು ಭಾಗವೆಂದು ಭಾವಿಸಿ, “ಇನ್ನು ಮುಂದೆ ಕನ್ನಡ ಕೃತಿಯ ಹೆಸರು ವಡ್ಡಾರಾಧನೆಯಲ್ಲ, `ಆರಾಧನಾ ಕರ್ಣಾಟ ಟೀಕೆ' ಎಂದೂ, ಕರ್ತೃವಿನ ಹೆಸರು ಶಿವಕೋಟ್ಯಾಚಾರ್ಯನಲ್ಲ `ಭ್ರಾಜಿಷ್ಣು' ಎಂದೂ ಕರೆಯಬೇಕೆನಿಸುತ್ತದೆ” ಎಂದಿದ್ದಾರೆ.

ಡಾ. ಹಂಪನಾ ಅವರಿಗೆ ಲಭ್ಯವಾದ ವಡ್ಡಾರಾಧನೆಯ ಒಂದು ಓಲೆಗರಿ ಕಟ್ಟಿನಲ್ಲಿ, ಕೊನೆಯ ಕಥೆಯ ಪ್ರಾರಂಭದಲ್ಲಿರುವ, “ಮತ್ತೀ ಕಥೆಯಂ ಭ್ರಾಜಿಷ್ಣಾರಾಧನೆಯಭಿಪ್ರಾಯದೊಳ್ ಪೇೞ್ದುದು” ಎಂಬ ಒಂದು ಸಾಲಿನ ಆಧಾರದಿಂದ ಅವರು, ಡಾ. ಕಲಬುರ್ಗಿ ಅವರ ಹೇಳಿಕೆಯಲ್ಲಿರುವ ಅನುಮಾನದೆಳೆಯನ್ನು ಕೈಬಿಡಬಹುದೆಂದು ಸೂಚಿಸಿ, ವಡ್ಡಾರಾಧನೆಯ ಕರ್ತೃ ಭ್ರಾಜಿಷ್ಣು, ಇದು ಆರಾಧನಾ ಕರ್ಣಾಟ ಟೀಕೆಯ ಒಂದು ಭಾಗವೆಂದು ಖಚಿತವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆದರೆ “ಮತ್ತೀ ಕಥೆಯಂ ಭ್ರಾಜಿಷ್ಣಾರಾಧನೆಯಭಿಪ್ರಾಯದೊಳ್ ಪೇೞ್ದುದು” ಎಂಬ ವಾಕ್ಯವಿರುವ ಓಲೆಗರಿ ಹಸ್ತಪ್ರತಿಯ ಗ್ರಂಥಾಂತ್ಯದಲ್ಲಿ “ಈ ಪೇೞ್ದ ಪತ್ತೊಂಭತ್ತುಂ ಕಥೆಗಳ್ ಶಿವಕೋಟ್ಯಾಚಾರ್ಯರ್ ಪೇೞ್ದ ವಡ್ಡಾರಾಧನೆಯ ಕಥೆಗಳ್‌” ಎಂದಿದೆ. ಗ್ರಂಥ ಸಮಾಪ್ತಿಯ ಈ ಭಾಗದಲ್ಲಿ ಭ್ರಾಜಿಷ್ಣುವಿನ ಹೆಸರು ಬರದೆ, 19ನೇ ಕಥೆಯ ಮೇಲಿನ ಭಾಗದಲ್ಲಿ ಮಾತ್ರ ಆತನ ಹೆಸರು ಬರಲು ಕಾರಣವೇನು? ಎಂಬ ಪ್ರಶ್ನೆಗೆ ನಾವು ಉತ್ತರವನ್ನು ಕಂಡುಕೊಳ್ಳಬೇಕಾಗುವುದು. ಈ ಪ್ರಶ್ನೆಯನ್ನು ಸೂಕ್ಷ್ಮವಾಗಿ ಪರಿಭಾವಿಸಿದರೆ “ವಡ್ಡಾರಾಧನೆ ಮತ್ತು ಆರಾಧನಾ ಕರ್ಣಾಟ ಟೀಕೆ ಇವೆರಡು ಬೇರೆ ಬೇರೆ ಕೃತಿಗಳು. ವಡ್ಡಾರಾಧನೆಯ ಕಥೆಗಾರ ತನ್ನ ಕೊನೆಯ ಕಥೆಯನ್ನು ಮಾತ್ರ ಭ್ರಾಜಿಷ್ಣುವಿನ ಅಭಿಪ್ರಾಯದಲ್ಲಿ ಹೇಳಿದ್ದಾನೆ” ಎಂದು ಗ್ರಹಿಸಬಹುದಾಗಿದೆ. ಆಗ ಪ್ರಚಲಿತವಿರುವ `ವಡ್ಡಾರಾಧನೆ'ಯ ಕರ್ತೃ ಭ್ರಾಜಿಷ್ಣುವೆಂದು ಭಾವಿಸುವುದು ತಪ್ಪು ಎನಿಸುತ್ತದೆ.

ವಡ್ಡಾರಾಧನೆಯನ್ನು ಕೇವಲ `ವಡ್ಡಾರಾಧನೆ' ಎಂದು ಸಂಕ್ಷಿಪ್ತವಾಗಿ ಕರೆಯದೆ, `ವಡ್ಡಾರಾಧನಾ ಕವಚಾಧಿಕಾರದ ಕಥಾಕೋಶ' ಎಂದು ಕರೆಯುವುದು ಹೆಚ್ಚು ಸೂಕ್ತ ಹಾಗೂ ಹೆಚ್ಚು ಅರ್ಥಪೂರ್ಣ.

ಶಿವಕೋಟ್ಯಾಚಾರ್ಯನಆರಾಧನಾ ಗ್ರಂಥ:
ಆರಾಧನಾ ಗ್ರಂಥವು ಸಮಸ್ತ ಜೈನ ವಾಙ್ಮಯದಲ್ಲಿಯೆ ಒಂದು ಮಹತ್ವದ ಕೃತಿ. ಕ್ರಿ.ಶ. ಸುಮಾರು 1ನೇ ಶತಮಾನದಲ್ಲಿ ಆಚಾರ್ಯ ಶಿವಕೋಟಿ (ಶಿವಾರ್ಯ) ಯಿಂದ ರಚಿತವಾದ ಶೌರಸೇನಿ ಪ್ರಾಕೃತದ ಗ್ರಂಥ. ಇದರಲ್ಲಿ 2130 ಗಾಹೆಗಳಿವೆ. ಜೈನ ಪರಂಪರೆಯ ಅನೇಕ ಗಾಹೆಗಳೂ ಅನೇಕ ವಿಚಾರಗಳು ಇದರಲ್ಲಿ ಅಡಕವಾಗಿವೆ. ಇದರ ನಿಜವಾದ ಹೆಸರು `ಆರಾಧನಾ' ಎಂದು. ಈ ಗ್ರಂಥದ ಬಗ್ಗೆ ಪೂಜ್ಯ ಭಾವನೆ ಇದ್ದುದರಿಂದ `ಭಗವತೀ' ಎಂಬ ವಿಶೇಷಣ ಸೇರಿ `ಭಗವತೀ ಆರಾಧನಾ' ಆಯಿತು. ಇದಕ್ಕೆ ಈ ಗ್ರಂಥದಲ್ಲೆ ಆಧಾರಗಳು ಸಿಗುತ್ತವೆ.

ಈ ಗ್ರಂಥವನ್ನು ಆಧರಿಸಿ ಅನೇಕ ಟೀಕಾ ಗ್ರಂಥಗಳು, ಆರಾಧನಾ ಗ್ರಂಥಗಳು ಹುಟ್ಟಿಕೊಂಡವು. ಆಗ ಪ್ರಸ್ತುತ ಗ್ರಂಥವನ್ನು `ಮೂಲಾರಾಧನಾ' ಎಂದು ಕರೆದರು. ಆರಾಧನಾ ಗ್ರಂಥಗಳಲ್ಲಿ ಇದು ದೊಡ್ಡ ಗ್ರಂಥವಾಗಿರುವುದರಿಂದ ಇದಕ್ಕೆ `ಬೃಹತ್ ಆರಾಧನಾ' ಎಂಬ ಹೆಸರೂ ಪ್ರಾಪ್ತವಾಯಿತು. ಆರಾಧನಾ, ಭಗವತೀ ಆರಾಧನಾ, ಮೂಲಾರಾಧನಾ, ಬೃಹದಾರಾಧನಾ- ಈ ಹೆಸರುಗಳೆಲ್ಲ ಆಚಾರ್ಯ ಶಿವಕೋಟಿಯ ಗ್ರಂಥವನ್ನೇ ಸೂಚಿಸುತ್ತವೆ.

`ಆರಾಧನೆ'ಯ ಕರ್ತೃ ಶಿವಾರ್ಯ. ಈತ `ಪಾಣಿತಲ ಭೋಜಿ'. ಈತನ ವಿದ್ಯಾಗುರುಗಳು ಜಿನನಂದಿ, ಸರ್ವಗುಪ್ತ ಮತ್ತು ಮಿತ್ರನಂದಿ. ಶಿವಾಚಾರ್ಯನನ್ನು ಜಿನಸೇನಾಚಾರ್ಯರು ತಮ್ಮ ಆದಿಪುರಾಣದಲ್ಲಿ (1-46) ಮತ್ತು ಶ್ರೀಚಂದ್ರನು ತನ್ನ “ಕಥಾಕೋಶ''ದಲ್ಲಿ ಶಿವಕೋಟಿ ಎಂದು ಹೇಳಿದ್ದಾರೆ. ತನ್ನ ಹಿಂದಿನ ಆಚಾರ್ಯರನ್ನು ಅನುಸರಿಸಿ ಆರಾಧನಾ ಗ್ರಂಥವನ್ನು ಬರೆದಿರುವುದಾಗಿ ತಿಳಿಸಿದ್ದಾರೆ.

ಬೃಹದಾರಾಧನೆ (=ಭಗವತೀ ಆರಾಧನೆ)ಯಲ್ಲಿ ಆರಾಧನಾ ವಿಷಯದ ಚರ್ಚೆ, ವಿವರಣೆಗಳು ವಿಪುಲವಾಗಿವೆ. `ಬೃಹದಾರಾಧನಾ'ದ ಪ್ರಾಕೃತ ಭಾಷೆಯ ರೂಪ `ವಡ್ಡಾರಾಧನಾ'. ವಡ್ಡಾರಾಧನೆ ಎಂದು ಈಗ ನಾವೆಲ್ಲ ಹೆಸರಿಸುತ್ತಿರುವ ಗ್ರಂಥದಲ್ಲಿ ಆರಾಧನೆಯ ಚರ್ಚೆಯಿಲ್ಲ. ಆದ್ದರಿಂದ ಕೇವಲ ಕಥಾಸಂಕಲನಕ್ಕೆ `ವಡ್ಡಾರಾಧನೆ' ಎಂಬ ಹೆಸರು ಔಚಿತ್ಯಪೂರ್ಣವಾಗುವುದಿಲ್ಲ ಎಂದಿದ್ದಾರೆ ಡಾ. ಆ.ನೇ. ಉಪಾಧ್ಯೆ. ಅವರ ಅಭಿಪ್ರಾಯ ತರ್ಕಬದ್ಧವಾಗಿದೆ.

ಇದೇ ಸಂದರ್ಭದಲ್ಲಿ ಅವರು ಕೆಲವು ಹಸ್ತಪ್ರತಿಗಳ ಅಂತ್ಯದಲ್ಲಿ ಪ್ರಾಪ್ತವಾಗುವ `ಕವಚವೆಂಬಧಿಕಾರಉ' ಎಂಬುದನ್ನು ನಿರ್ಲಕ್ಷಿಸಬಾರದೆಂದು ಎಚ್ಚರಿಸಿದ್ದಾರೆ. ಇದು ಅರ್ಥಪೂರ್ಣ ಎಚ್ಚರಿಕೆ. ಏಕೆಂದರೆ ಕನ್ನಡದ ಈ ಕಥೆಗಳೆಲ್ಲ ಭಗವತೀ ಆರಾಧನೆಯ ಕವಚಾಧಿಕಾರದಲ್ಲಿ ಉಲ್ಲೇಖಿತ ಕಥೆಗಳೇ ಆಗಿವೆ. ಆದ್ದರಿಂದ ನಾವು ಮೊದಲೇ ಸೂಚಿಸಿದಂತೆ, ಈ ಕಥಾ ಸಂಕಲನಕ್ಕೆ `ವಡ್ಡಾರಾಧನಾ ಕವಚಾಧಿಕಾರದ ಕಥಾಕೋಶ' ಅಥವಾ `ವಡ್ಡಾರಾಧಾನಾ ಕವಚಾಧಿಕಾರದ ಕಥೆಗಳು' ಎಂದು ಹೆಸರಿಸುವುದು ಉಚಿತ. ಆಗ ಈ ಕಥೆಗಳು ಭಗವತೀ ಆರಾಧನೆಯ ಕರ್ತೃ ಶಿವಕೋಟ್ಯಾಚಾರ್ಯ ಪ್ರಣೀತ ಕಥೆಗಳಾಗುತ್ತವೆ.

ಸ್ಪಷ್ಟವಾಗಿ ಕಥಾಗಾಥೆಗಳ ಕರ್ತೃ ಆಚಾರ್ಯ ಶಿವಕೋಟಿ ಆದರೆ, ಕನ್ನಡದಲ್ಲಿ ಕಥೆಗಳನ್ನು ವಿವರಿಸಿದಾತ ಅಜ್ಞಾತ. ಈ ಅಜ್ಞಾತ ಕಥೆಗಾರ ಭ್ರಾಜಿಷ್ಣುವಿನ `ಕರ್ಣಾಟ ಆರಾಧನಾ ಟೀಕೆ'ಯನ್ನು ಆಧರಿಸಿ ಕೆಲವು ಕಥಾವಿವರವನ್ನು ನೀಡಿದ್ದಾನೆಂದು ಸದ್ಯಕ್ಕೆ ಭಾವಿಸಬಹುದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT