ADVERTISEMENT

ಶಿವಾಜಿ ಜಯಂತಿ ದಿನವನ್ನು ಇಷ್ಟ ಬಂದಂತೆ ನಿಗದಿ ಮಾಡಬಹುದೇ?

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST

ಕರ್ನಾಟಕ ಸರ್ಕಾರ ಈ ವರ್ಷದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸುವ ನಿರ್ಣಯ ತೆಗೆದುಕೊಂಡಿದೆ. ಆದರೆ, ರಾಜ್ಯ ಸರ್ಕಾರ ಪ್ರಕಟಿಸಿದ ಜಯಂತಿ ದಿನಾಂಕಕ್ಕೂ ಶಿವಾಜಿಯ ಕಾಯಕ್ಷೇತ್ರವಾಗಿದ್ದ ಮಹಾರಾಷ್ಟ್ರ ಸರ್ಕಾರ ನಿಗದಿಪಡಿಸಿದ ಜಯಂತಿ ದಿನಕ್ಕೂ ತಾಳೆಯಾಗುತ್ತಿಲ್ಲ. ಎರಡರ ಮಧ್ಯೆ ಎರಡು ತಿಂಗಳ ಅಂತರವಿದೆ.

ಅಷ್ಟೇ ಅಲ್ಲ, ತಿಥಿ ಅನುಸಾರವೂ ಮಾರ್ಚ್ 10 ರಂದು (ಮರಾಠಿಯ ಪ್ರಸಿದ್ಧ ಕ್ಯಾಲೆಂಡರ್ `ಕಾಲನಿರ್ಣಯ~ದ ಪ್ರಕಾರ) ಜಯಂತಿ ಬರುತ್ತದೆ. ಈ ತಿಥಿಗೂ ಮಾನ್ಯತೆ ಕೊಡದೆ ಬೇರೆ ದಿನದಂದು ಜನ್ಮದಿನಾಚರಣೆಗೆ ನಿರ್ಧರಿಸಿರುವುದು ಏಕೆ? ಈ ಸಂಬಂಧ ಗೊಂದಲ ನಿರ್ಮಾಣವಾಗಿದ್ದು ಜಯಂತಿಗೂ ರಾಜಕೀಯ, ಧಾರ್ಮಿಕ ಬಣ್ಣ ಬಳಿಯುವ ಹುನ್ನಾರ ನಡೆಯುತ್ತಿದೆಯೇ? ಎಂಬ ಸಂಶಯ ಬರುತ್ತಿದೆ.

ಮಹಾರಾಷ್ಟ್ರದಲ್ಲಿ ಫೆಬ್ರುವರಿ 19 ರಂದು ಜಯಂತಿ ಆಚರಿಸಲಾಯಿತು. ರಾಜ್ಯದ ಗಡಿಭಾಗದ ಬೀದರ, ವಿಜಾಪುರ, ಬೆಳಗಾವಿ ಜಿಲ್ಲೆ ಹಾಗೂ ಇತರೆಡೆಯೂ ವಿವಿಧ ಸಂಘಟನೆಗಳಿಂದ ಅಂದೇ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಕೇಂದ್ರ ಸ್ಥಾನವಾದ ವಸಂತನಗರದಲ್ಲಿನ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ಕಚೇರಿಯಲ್ಲಿಯೂ ಅದೇ ದಿನ ಸಮಾರಂಭ ನಡೆಯಿತು.
 
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸದಾನಂದಗೌಡ ಸ್ವತಃ ಉಪಸ್ಥಿತರಿದ್ದರು. ಆದರೂ ಸರ್ಕಾರದ ವತಿಯಿಂದ ಏಪ್ರಿಲ್ 23 ರಂದು ಜಯಂತ್ಯುತ್ಸವ (ಮರುದಿನ ಬಸವ ಜಯಂತಿ ಇದೆ) ಹಮ್ಮಿಕೊಳ್ಳುವ ಘೋಷಣೆ ಮಾಡಲಾಗಿದೆ.

ಸರ್ಕಾರಕ್ಕೆ ಒಂದು ವೇಳೆ ಶಿವಾಜಿಯ ಜನ್ಮದಿನದ ಬಗ್ಗೆ ಗೊತ್ತೇ ಇಲ್ಲ ಎಂದಾದರೆ, ಆ ಬಗ್ಗೆ ಸಮಗ್ರ ಮಾಹಿತಿ ತರಿಸಿಕೊಂಡು ನಂತರ ತೀರ್ಮಾನ ಪ್ರಕಟಿಸಬಹುದಿತ್ತು. ಧಾರ್ಮಿಕ ಮತ್ತು ಇತಿಹಾಸ ಪುರುಷರ ಜಾತಿ ಮತ್ತು ಜನ್ಮದಿನದ ಬಗ್ಗೆ ಮೊದಲೇ ಗೊಂದಲಗಳಿವೆ. ಈ ವಿಷಯ ಗೊತ್ತಿದ್ದರೂ ತರಾತುರಿಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಜಯಂತಿ ಆಚರಣೆಗೆ ಸರ್ಕಾರದ ಮೇಲೆ ಒತ್ತಡ ಹೇರಿದ ಮುಖಂಡರಲ್ಲಿ ಹೆಚ್ಚಿನವರು ಗಡಿ ಭಾಗದ ಜಿಲ್ಲೆಯವರೇ ಆಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಮಹಾರಾಷ್ಟ್ರಕ್ಕೆ ಸಮೀಪದ ಕ್ಷೇತ್ರದವರು. ಇವರೆಲ್ಲರಿಗೆ ಶಿವಾಜಿ ಜಯಂತಿ ದಿನಾಂಕ ಗೊತ್ತಿಲ್ಲವೆಂದೇನಲ್ಲ. ಆದರೂ ಇವರು ಏಕೆ ಮೌನವಾಗಿದ್ದಾರೆ?

ಮಹಾರಾಷ್ಟ್ರದಲ್ಲಿನ ಶಿವಸೇನೆ ಮಾತ್ರ ಪ್ರತ್ಯೇಕ ದಿನದಂದು ಜಯಂತಿ ಆಚರಿಸುತ್ತದೆ. ಶಿವಾಜಿ ಮಹಾರಾಜರ ಜನ್ಮದಿನಾಂಕದ ಬಗ್ಗೆ ಗೊಂದಲಗಳಿದ್ದ ದಿನಗಳಲ್ಲಿ `ಹಿಂದೂ ತಿಥಿ ಅನುಸಾರ ಜಯಂತಿ ನಡೆಸುತ್ತೇವೆ. ಕ್ರೈಸ್ತರ ಕ್ಯಾಲೇಂಡರನ್ನು ನಾವೇಕೆ ಅನುಸರಿಸಬೇಕು~ ಎಂದು ಈ ಸಂಘಟನೆ ಹೇಳುತ್ತಿತ್ತು. ಯಾವಾಗ ತಜ್ಞರ ಸಮಿತಿಯು ದಾಖಲೆಗಳನ್ನು ಪರಿಶೀಲಿಸಿ ತಿಥಿ ಮತ್ತು ದಿನಾಂಕ ಎರಡನ್ನೂ ಹುಡುಕಿ ತೆಗೆಯಿತೋ, ಆಗ ಪರಂಪರೆ ಅನುಸಾರ ಎಂದು ಶಿವಸೇನೆ ತಮ್ಮ ರಾಗ ಬದಲಿಸಿತು.

ಇಂಥ ಸಂಘಟನೆಗಳ ಮೊಂಡುತನ ಮತ್ತು ರಾಜಕಾರಣಿಗಳ ಕಪಟ ನಾಟಕದಿಂದಲೇ ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದ ಜೀವಂತ ಉಳಿದಿದೆ. ಸಾಮಾನ್ಯ ಜನರಿಗೂ ತಮ್ಮದೆಂದು ಅನಿಸುವ `ಸ್ವರಾಜ್ಯ~ ನಿರ್ಮಿಸಿದ ಶಿವಾಜಿ ಮಹಾರಾಜರು ನಂತರ ಕೇವಲ `ಹಿಂದೂ ಸ್ವರಾಜ್ಯ ಸಂಸ್ಥಾಪಕ~ ಆಗಿ ಉಳಿಯುತ್ತಾರೆ.

ದಲಿತ, ಹಿಂದುಳಿದ ಮತ್ತು ಮುಸ್ಲಿಮರನ್ನು ಒಳಗೊಂಡ ಸೈನ್ಯ ಪಡೆ ಕಟ್ಟಿಕೊಂಡು ಅನ್ಯಾಯದ ವಿರುದ್ಧ ಹೋರಾಡಿದರೂ ಒಂದು ಜಾತಿಗೆ ಸೀಮಿತ ಆಗುತ್ತಾರೆ. ಕೃಷಿಕರ ಪರಿಸ್ಥಿತಿ ಸುಧಾರಣೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದು `ರೈತೇಚಾ ರಾಜಾ~ ಎನಿಸಿಕೊಂಡರೂ ಅವರ ಈ ಕಾರ್ಯವನ್ನು ಯಾರೂ ಗಮನಿಸುತ್ತಿಲ್ಲ. ವಿದೇಶಿ ಇತಿಹಾಸಕಾರರೂ ಇವರ ಬಗ್ಗೆ ಇಲ್ಲಸಲ್ಲದನ್ನು ಬರೆದಿದ್ದಾರೆ.

ಇತಿಹಾಸಕಾರರು ಶಿವಾಜಿ ಬಗ್ಗೆ ನೀಡಿದ ಚಿತ್ರಣದ ಬಗ್ಗೆ ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರಿಗೂ ಬೇಸರವಿತ್ತು. 1904ರಲ್ಲಿ ಬಿಡುಗಡೆಯಾದ `ಶಿವಾಜೀರ ದೀಕ್ಷಾ~ ಎನ್ನುವ ಬಂಗಾಳಿ ಪುಸ್ತಕದಲ್ಲಿ ಪ್ರಕಟವಾದ ಅವರ `ಶಿವಾಜಿ ಉತ್ಸವ~ ಎಂಬ ದೀರ್ಘ ಕವಿತೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

`ವಿದೇಶಿಗರು ಬರೆದ ನಿನ್ನ ಇತಿಹಾಸ/ ಮಾಡುತ್ತದೆ ನಿನ್ನ ಉಪಹಾಸ/ ನಿನಗೆ ದರೋಡೆಕೋರನೆಂದು ಸಂಬೋಧಿಸಿ ಗಹಗಹಿಸಿ ನಗುತ್ತದೆ/... ಹೇ ಇತಿಹಾಸವೇ / ನಿನ್ನ ಈ ಬಡಬಡಿಸುವಿಕೆ ನಿಲ್ಲಿಸು/ ಯಾರಿಗೆ ಅಮರತ್ವದ ವರದಾನವಿದೆಯೋ/ ಯಾವುದು ಸತ್ಯವಿದೆಯೋ/ ಯಾರೂ ಆತನನ್ನು ಸ್ವರ್ಗಪ್ರವೇಶದಿಂದ ತಡೆಯಲು ಸಾಧ್ಯವಿಲ್ಲ/ ...ಹೇ ಶಿವಾಜಿ ರಾಜನೇ/ಹೇ ರಾಜತಪಸ್ವಿ ವೀರನೇ/ ನಿನ್ನ ಆ ಉದಾತ್ತ ಭಾವನೆ/ ವಿಧಾತನ ಭಂಡಾರದಲ್ಲಿ ಸಂರಕ್ಷಿಸಿ ಇಡಲಾಗಿದೆ/ ಕಾಲಕ್ಕೆ ಅದರ ಒಂದು ಕಣವೂ ನಷ್ಟ ಮಾಡಲು ಸಾಧ್ಯವಾಗಲಾರದು...? ಎಂದು ಅವರು ಬರೆದಿದ್ದಾರೆ.

ಶಿವಾಜಿ ಕೆಲವು ವರ್ಷ ಬೆಂಗಳೂರಿನಲ್ಲಿಯೂ ಇದ್ದರು. ರಾಜನಾಗಿ ಪಟ್ಟಾಭಿಷೇಕ ಮಾಡಿಕೊಂಡ ನಂತರ ಇಂದಿನ ಕರ್ನಾಟಕದಲ್ಲಿನ ಕೆಲವು ಪ್ರದೇಶವನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಂಡಿದ್ದರು. ಹೀಗಾಗಿ ಅವರು ಕನ್ನಡ ಬಲ್ಲವರಾಗಿದ್ದರು. ಅದಕ್ಕಾಗಿಯೇ ಅವರು ಚಲಾವಣೆಗೆ ತಂದ ನಾಣ್ಯಕ್ಕೆ `ಹೊನ್ನ~ ಮತ್ತು ಕೃಷಿಕರನ್ನು `ರಯತ್~ ಎಂದು ಕರೆದರು. ಅವರ ತಂದೆ ಷಹಜಿಯಂತೂ ಬೆಂಗಳೂರಿನ ಸುಬೇದಾರನಾಗಿ ಅರ್ಧ ಆಯುಷ್ಯ ಕಳೆದಿದ್ದಾರೆ. ಬೆಂಗಳೂರಿನಲ್ಲಿ ಗೌರಿಮಹಲ್, ಗವಿಗಂಗಾಧರೇಶ್ವರ ದೇವಸ್ಥಾನ ಸಮೀಪದ ಗೋಸಾಯಿ ಮಠ ಮತ್ತು ಕಾಡುಮಲ್ಲೇಶ್ವರ ದೇವಸ್ಥಾನ ನಿರ್ಮಿಸಿದ್ದಾರೆ.

ಇತರೆ ಮಹತ್ವದ ಕಾರ್ಯ ಮಾಡಿದ ಬಗ್ಗೆಯೂ ದಾಖಲೆಗಳಿವೆ. ಕೊನೆಗೆ ಇಲ್ಲಿಯೇ ಕೊನೆಯುಸಿರೆಳೆಯುತ್ತಾರೆ. ದಾವಣಗೆರೆಯ ಹೊದಿಗೆರೆಯಲ್ಲಿ ಅವರ ಸಮಾಧಿ ಇದೆ.
ಇತ್ತೀಚಿಗೆ ಮರಾಠಿಯ ಸಂಶೋಧಕ ರಾ.ಚಿ.ಢೇರೆಯವರು ಶಿವಾಜಿ ಮೂಲ ಕರ್ನಾಟಕ ನೆಲ ಎಂದು ತಮ್ಮ `ಶಿಖರ ಸಿಂಗಣಾಪುರಚಾ ಶಂಭುಮಹಾದೇವ~ ಕೃತಿಯಲ್ಲಿ ದಾಖಲೆ ಸಹಿತ ವಿವರಿಸಿದ್ದಾರೆ.

ಇಷ್ಟಾದರೂ ಗಡಿ ವಿವಾದದ ಕಾರಣ ಶಿವಾಜಿ ಮತ್ತು ಷಹಜಿ ಕರ್ನಾಟಕದವರಿಗೆ ದೂರದವರಾಗಿಯೇ ಗೋಚರಿಸುತ್ತಾರೆ. ಶಿವಾಜಿ ಜಯಂತಿ ಆಚರಣೆಯ ಮೂಲಕ ಕರ್ನಾಟಕ ಎರಡು ರಾಜ್ಯಗಳ ಜನರಲ್ಲಿನ ಇಂಥ ಭೇದಭಾವ ತೆಗೆದು ಹಾಕಲು ಮುಂದಾಗಿದೆ.

ಮುಖ್ಯಮಂತ್ರಿ ಸದಾನಂದಗೌಡರು ಸೌಹಾರ್ದತೆಯ ವಾತಾವರಣ ನಿರ್ಮಿಸುವ ಸದುದ್ದೇಶದಿಂದಲೇ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ ಜಯಂತಿ ದಿನಾಂಕದ ಬಗ್ಗೆ ಮಾತ್ರ ಪುನರ್ ವಿಚಾರ ಮಾಡುವ ಅಗತ್ಯವಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.