ADVERTISEMENT

ಸಂಗತ | ವೈಯಕ್ತಿಕ ಆಯ್ಕೆಗೆ ನೂರೆಂಟು ತಕರಾರು

ಎಲ್ಲರ ಆಯ್ಕೆಗಳನ್ನು ಗೌರವಿಸುವ ಸಾಮಾಜಿಕ ವಾತಾವರಣ ಶಿಕ್ಷಣದಿಂದ ಸಾಧ್ಯ

ಸದಾಶಿವ ಸೊರಟೂರು
Published 12 ಜೂನ್ 2025, 22:21 IST
Last Updated 12 ಜೂನ್ 2025, 22:21 IST
..
..   

ಮೊನ್ನೆ ದೊಡ್ಡ ಹೋಟೆಲ್‌ವೊಂದರಲ್ಲಿ ಕುಟುಂಬವೊಂದು ತರಹೇವಾರಿ ಆಹಾರ ಪದಾರ್ಥಗಳನ್ನು ತರಿಸಿಕೊಂಡು, ಟೇಬಲ್ ತುಂಬಾ ಹರಡಿಕೊಂಡು ತಿನ್ನುತ್ತಿತ್ತು. ದುಬಾರಿ ಬೆಲೆಯ ಉತ್ತರ ಭಾರತೀಯ ತಿನಿಸುಗಳವು. ಅದೇ ಸಮಯಕ್ಕೆ ಆ ಕುಟುಂಬ ಕುಳಿತಿದ್ದ ಪಕ್ಕದ ಟೇಬಲ್‌ಗೆ ಬಂದ ವ್ಯಕ್ತಿ ‘ಅನ್ನ–ಸಾರು ಕೊಡಿ’ ಎಂದು ವೇಟರ್‌ಗೆ ಹೇಳಿ ಕೂತ. ವೇಟರ್‌ನ ಮುಖದಲ್ಲಿ ಅಂತಹ ಒಳ್ಳೆಯ ಪ್ರತಿಕ್ರಿಯೆ ಏನೂ ಕಾಣಿಸಲಿಲ್ಲ. ಈ ವ್ಯಕ್ತಿ ಕೂತು ತನ್ನ ಪಾಡಿಗೆ ತಾನು ಅನ್ನ–ಸಾರು ಉಣ್ಣುವಾಗ, ಪಕ್ಕದ ಟೇಬಲ್‌ನಲ್ಲಿ ದುಬಾರಿ ಆಹಾರ ಸೇವಿಸುವ ಕುಟುಂಬದವರ ಕಣ್ಣಲ್ಲಿನ ಭಾವನೆಯಿತ್ತಲ್ಲ, ಅದರಲ್ಲಿ ‘ನಾವು ಶ್ರೇಷ್ಠರು’ ಎಂಬ ಭಾವವಿತ್ತು.

ಆ ಹುಡುಗಿಗೆ ಮೊಟ್ಟೆ ತಿನ್ನುವ ಆಸೆ.‌ ಮನೆಯಲ್ಲೂ ಮೊಟ್ಟೆ ತಿನ್ನುವವರೇ ಅವರು. ಶಾಲೆಯಲ್ಲಿ ಮಾತ್ರ ಸರತಿ ಸಾಲಿನಲ್ಲಿ ಬಂದು ಮೊಟ್ಟೆಯ ಬದಲು ಬಾಳೆಹಣ್ಣು ತೆಗೆದುಕೊಂಡು ಹೋಗುತ್ತಿದ್ದಳು. ಹುಡುಗಿಗೆ ಮೊಟ್ಟೆ ಇಷ್ಟವೆಂಬುದು ಮೇಷ್ಟ್ರಿಗೂ ಗೊತ್ತು. ಈ ಹುಡುಗಿ ಮೊಟ್ಟೆ ಏಕೆ ತಿನ್ನುತ್ತಿಲ್ಲ ಎನ್ನುವ ಕುತೂಹಲ ಅವರದು. ಒಂದು ದಿನ ಕರೆದು ವಿಚಾರಿಸಿದರು. ಹುಡುಗಿ ಹೇಳಲು ಮುಜುಗರಪಟ್ಟರೂ ಮೇಷ್ಟ್ರು ಒತ್ತಾಯಕ್ಕೆ ಹೇಳಿದಳು: ‘ಸರ್, ನನ್ನ ಗೆಳತಿಯರೆಲ್ಲರೂ ಹಣ್ಣು ತಿನ್ನುವವರು. ಅವರು ಯಾರೂ ಮೊಟ್ಟೆ ತಿನ್ನಲ್ಲ. ಅವರ ಮುಂದೆ ನಾನು ಮೊಟ್ಟೆ ತಿಂದರೆ ಅವರು ನನ್ನನ್ನು ಒಂಥರ ನೋಡ್ತಾರೆ’ ಅಂದಳು. 

ಕಣ್ಣುಗಳು ನಮ್ಮವೇ ಆದರೂ ಏನನ್ನು ನೋಡಬೇಕು ಅನ್ನುವುದನ್ನು ಹೇರಲಾಗುತ್ತದೆ.‌ ಹಣ ನಮ್ಮದೇ ಆದರೂ ಏನನ್ನು ಧರಿಸಬೇಕು ಎಂದು ಯಾರೋ ನಿರ್ಧರಿಸುತ್ತಾರೆ. ರುಚಿ–ಅಭಿರುಚಿಗಳು ನಮ್ಮವೇ ಆದರೂ ಏನು ತಿನ್ನಬೇಕು, ಏನು ತಿನ್ನಬಾರದು ಎನ್ನುವುದಕ್ಕೆ ಸಂಬಂಧಿಸಿದಂತೆ ಯಾರೋ ಒತ್ತಡ ಹೇರುತ್ತಾರೆ. ಅನ್ನ–ಸಾರು ತಿನ್ನುವ ವ್ಯಕ್ತಿಗೆ ತಾನು ತಿನ್ನುತ್ತಿರುವುದು ಕನಿಷ್ಠವಾದುದೆಂದು ಮತ್ತು ಆ ಮಗು ಮೊಟ್ಟೆ ತಿನ್ನುವುದು ಅವಮಾನಕರ ಎಂದು ಭಾವಿಸುವುದಕ್ಕೆ ನಾವು ಸಲಹುತ್ತಿರುವ ಸಾಮಾಜಿಕ ಒತ್ತಡ ಮತ್ತು ವಿಚಿತ್ರ ಶ್ರೇಣೀಕರಣವೂ ಒಂದು ಕಾರಣ.  

ADVERTISEMENT

ಅನೇಕ ಕಾರಣಗಳನ್ನು ಹೇರುವುದರ ಮೂಲಕ ಜನರನ್ನು ಶ್ರೇಣೀಕರಣಕ್ಕೆ ತಳ್ಳುತ್ತಿದ್ದೇವೆ. ಧರ್ಮ, ಭಾಷೆ, ಆರ್ಥಿಕತೆ, ವಿಚಿತ್ರ ಸಾಂಸ್ಕೃತಿಕ ನೆಲೆಗಟ್ಟುಗಳು, ಪ್ರಾದೇಶಿಕತೆ ಮುಂತಾದವು ಇನ್ನೊಬ್ಬರನ್ನು ಹಣಿಯುವ ಹತಾರಗಳಂತೆ ಕಾಣಿಸುತ್ತವೆ. 

ಸಾಮಾಜಿಕ ಒತ್ತಡವು ಒಬ್ಬ ವ್ಯಕ್ತಿಯ ಆಯ್ಕೆಯ ಮೇಲೆ ಮಾತ್ರವಲ್ಲ, ಇತರರ ದೃಷ್ಟಿಕೋನದ ಮೇಲೂ ಪರಿಣಾಮ ಬೀರುತ್ತದೆ. ಮೇಲಿನ ಉದಾಹರಣೆ ಯಲ್ಲಿ ಆ ಕುಟುಂಬದ ‘ಶ್ರೇಷ್ಠ’ ಭಾವನೆಯು ತಾವು ಆಯ್ಕೆ ಮಾಡಿದ ಆಹಾರದ ದುಬಾರಿತನದಿಂದ ಉಂಟಾದ ಸಾಮಾಜಿಕ ಸ್ಥಾನಮಾನವನ್ನು ಒಪ್ಪಿಕೊಂಡಿರುವುದನ್ನು ಹೇಳುತ್ತದೆ. ಇದು, ಆರ್ಥಿಕ ಸಾಮರ್ಥ್ಯವನ್ನು ಸ್ಥಾನಮಾನದೊಂದಿಗೆ ತಳಕು ಹಾಕುವ ಸಾಮಾಜಿಕ ರಚನೆಯನ್ನು ಬಿಂಬಿಸುತ್ತದೆ. 

ವಿದ್ಯಾರ್ಥಿನಿಯ ಮುಜುಗರವು ಸಾಮಾಜಿಕ ತೀರ್ಪಿನ ಭಯ (ಇವಳು ಮೊಟ್ಟೆ ತಿನ್ನುವವಳು)
ಹಾಗೂ ಅದರಿಂದ ಉಂಟಾಗುವ ಆತಂಕವನ್ನು ವ್ಯಾಖ್ಯಾನಿಸುತ್ತದೆ. ಸಮಾಜದಲ್ಲಿ ಸ್ವೀಕಾರಕ್ಕೆ ಒಳಗಾಗಬೇಕು ಎನ್ನುವ ಕಾರಣಕ್ಕೆ ಯುವಜನರು ತಮ್ಮ ವೈಯಕ್ತಿಕ ಆಯ್ಕೆಗಳನ್ನು ಬದಲಾಯಿಸಿಕೊಳ್ಳಬೇಕಾದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. 

ವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ಸಮಾಜ ಪ್ರಭಾವ ಬೀರುತ್ತದೆ. ಅಸಮಾನ ಸಮಾಜ ಅಸಮಾನತೆ ಯನ್ನೇ ಪೋಷಿಸುತ್ತದೆ. ವ್ಯಾಧಿಗ್ರಸ್ತ ಸಮಾಜವು ಅನಾರೋಗ್ಯಕರ ವರ್ತನೆಗಳನ್ನು ಸಲಹುತ್ತದೆ. ಈ ಪ್ರಕ್ರಿಯೆಯು ಮಾನಸಿಕ ಒತ್ತಡವನ್ನೂ ನಿರ್ಣಯ ಸ್ವಾತಂತ್ರ್ಯದ ಕೊರತೆಯನ್ನೂ ಮತ್ತು ಸಾಮಾಜಿಕ ಮೌಲ್ಯವನ್ನು ಕುಸಿಯುವಂತೆಯೂ ಮಾಡಬಲ್ಲದು. ಇದರಿಂದ ವ್ಯಕ್ತಿಯ ಆತ್ಮವಿಶ್ವಾಸ ಕುಸಿಯಬಹುದು; ಆ ವ್ಯಕ್ತಿ ತನ್ನ ಆಸೆಗಳನ್ನು ನುಂಗಿಕೊಳ್ಳಬೇಕಾಗಿ ಬರಬಹುದು. ಮಕ್ಕಳಂತೂ ತುಸು ಹೆಚ್ಚೇ ಅನ್ನುವಷ್ಟು ಇದರಿಂದ ಪ್ರಭಾವಿತರಾಗುತ್ತಾರೆ. ಅವರ ವ್ಯಕ್ತಿತ್ವ ದಿಕ್ಕು ತಪ್ಪುತ್ತದೆ. 

ಅನಾರೋಗ್ಯಕರ ವರ್ತನೆಗಳಿಗೆ ಪರಿಹಾರವು ಶಿಕ್ಷಣದಲ್ಲಿದೆ ಎಂಬುದು ನಮಗೆ ಗೊತ್ತಿಲ್ಲದಿರುವ ವಿಷಯವೇನಲ್ಲ. ಅಂಬೇಡ್ಕರ್, ‘ಒಳ್ಳೆಯ ಶಿಕ್ಷಣ ಮಾತ್ರ ನಮ್ಮನ್ನು ಎಲ್ಲ ಅಸಮಾನತೆಗಳಿಂದ ಪಾರು ಮಾಡಬಲ್ಲದು’ ಎನ್ನುತ್ತಾರೆ. ಶಿಕ್ಷಣವು ಅಂಕವಲ್ಲ, ಅದೊಂದು ಜಾಗೃತಿ. ಸಂಸ್ಕೃತಿ ಕೂಡ. ಎಲ್ಲರ ಆಯ್ಕೆಗಳನ್ನೂ ಗೌರವಿಸುವ ಸಾಮಾಜಿಕ ವಾತಾವರಣ ವನ್ನು ಒಳ್ಳೆಯ ಶಿಕ್ಷಣ ಮಾತ್ರ ರೂಪಿಸಬಲ್ಲದು. 

ನಮ್ಮ ಯೋಜನೆಗಳು ಆರ್ಥಿಕ ಶ್ರೇಣೀಕರಣವನ್ನು ಕಡಿಮೆ ಮಾಡುವ ಕಡೆ ಇರಬೇಕು. ಅದು ವ್ಯಕ್ತಿಗಳಿಗೆ ತಮ್ಮ ಆದ್ಯತೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಹಾಗೂ ಸಾಮಾಜಿಕ ಒತ್ತಡವನ್ನು ಎದುರಿಸಲು ಸಹಾಯಕವಾಗುತ್ತದೆ. ಆರೋಗ್ಯಕರ ಸಾಮಾಜಿಕ ಸಂಬಂಧಗಳನ್ನು ಬೆಳೆಸುತ್ತದೆ. ವಿಶೇಷವಾಗಿ ಯುವಜನರಲ್ಲಿ ಸ್ವಾತಂತ್ರ್ಯದ ಭಾವನೆಯನ್ನು ಬಿತ್ತುತ್ತದೆ. 

ನಮ್ಮ ನೋಟ, ನಮ್ಮ ನಿರ್ಧಾರಗಳು ಇತರರ ಮಾನವೀಯತೆಯನ್ನು ಮೀರದಂತೆ ಇರಬೇಕು. ವೈಯಕ್ತಿಕ ಆಯ್ಕೆಗಳಿಗೆ ಇತರರ ದೃಷ್ಟಿ, ಟೀಕೆ, ಒತ್ತಡ ಕಡಿಮೆ ಮಾಡಿದಾಗ ಮಾತ್ರ ಸಮಾನತೆಯ ಸಮಾಜ ಸಾಧ್ಯ. ‘ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಣವಕ್ಕು’ ಎನ್ನುತ್ತಾನೆ ಸರ್ವಜ್ಞ. ಅಂತಹ ಕೈಲಾಸ ನಮ್ಮ ಕೈಯಲ್ಲೇ ಇದೆ. ಅದನ್ನು ಸಾಧ್ಯ ಮಾಡಿಕೊಳ್ಳಬೇಕಷ್ಟೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.