ADVERTISEMENT

ಸಂಗತ: ಅಪಘಾತ ನಿಯಂತ್ರಣ– ಸುರಕ್ಷತೆಯೇ ಮದ್ದು

ಸ್ಲೀಪರ್‌ ಬಸ್‌ಗಳು ಮೃತ್ಯುವಾಹನಗಳಂತೆ ಕಾಣಿಸುತ್ತಿವೆ. ಸುರಕ್ಷತಾ ಕ್ರಮಗಳ ಕೊರತೆ ಹಾಗೂ ನಿರ್ಲಕ್ಷ್ಯ ಬಹುತೇಕ ರಸ್ತೆ ಅಪಘಾತಗಳಿಗೆ, ಜೀವಹಾನಿಗೆ ಕಾರಣ.

ಡಾ.ಪದ್ಮಿನಿ ನಾಗರಾಜು
Published 6 ಜನವರಿ 2026, 23:36 IST
Last Updated 6 ಜನವರಿ 2026, 23:36 IST
<div class="paragraphs"><p>ಸಂಗತ: ಅಪಘಾತ ನಿಯಂತ್ರಣ– ಸುರಕ್ಷತೆಯೇ ಮದ್ದು</p></div>

ಸಂಗತ: ಅಪಘಾತ ನಿಯಂತ್ರಣ– ಸುರಕ್ಷತೆಯೇ ಮದ್ದು

   

ದೂರದೂರಿಗೆ ಹೋಗಲು ಬೆಳಗಿನ ಬಸ್‌ಗಳ ಬದಲು, ರಾತ್ರಿಯ ಸ್ಲೀಪರ್‌ ಬಸ್‌ಗಳನ್ನು ಇಷ್ಟಪಡುವ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮಲಗಿಕೊಂಡು ಪ್ರಯಾಣಿಸಬಹುದು, ರಾತ್ರಿ ಮಲಗಿದರೆ ಬೆಳಗ್ಗೆ ಕಣ್ಣುಬಿಟ್ಟಾಗ ಊರು ಸೇರಬಹುದು ಎಂಬ ಲೆಕ್ಕಾಚಾರ ಸ್ಲೀಪರ್‌ ಬಸ್‌ಗಳಿಗೆ ಬೇಡಿಕೆ ಸೃಷ್ಟಿಸಿದೆ.

ಕರ್ನಾಟಕದಲ್ಲಿ ಮೊಟ್ಟಮೊದಲ ಸ್ಲೀಪರ್‌ ಬಸ್ ಕಾರ್ಯಾಚರಣೆ ಪ್ರಾರಂಭವಾಗಿದ್ದು 1966ರಲ್ಲಿ, ‘ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮ’ದಿಂದ. ಆ ಬಸ್‌, ಎರಡು ಕೋಚ್‌ಗಳನ್ನು ಸೇರಿಸಿದಂತೆ ವಿನ್ಯಾಸ ಮಾಡಲಾಗಿತ್ತು. ಅದಕ್ಕೆ ‘ರೋಡ್‌ ಟ್ರೈನ್‌’ ಎಂದೂ ಹೆಸರಿಸಲಾಗಿತ್ತು. ಪಳಗಿದ ಚಾಲಕ ಹಾಗೂ
ಇಬ್ಬರು ಕಂಡಕ್ಟರ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದ ಆ ಬಸ್, ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿತ್ತು. ಅಲ್ಲಿಂದ ಇಲ್ಲಿಯವರೆಗೆ ಸ್ಲೀಪರ್‌ ಬಸ್‌ಗಳಲ್ಲಿ ಅನೇಕ ಬದಲಾವಣೆಗಳು ಆಗಿವೆ; ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಅನೇಕ ಸೌಲಭ್ಯಗಳನ್ನು ಈ ಬಸ್‌ಗಳಲ್ಲಿ ತಂದಿವೆ. ಕೆಲವು ಬಸ್‌ಗಳು ಪ್ರಯಾ
ಣಿಕರಿಗೆ ರಗ್ಗು, ದಿಂಬುಗಳನ್ನು ಒದಗಿಸುತ್ತಿವೆ. ನೀರಿನ ಬಾಟಲಿ ಹಾಗೂ ‘ನಂದಿನಿ’ ತಿನಿಸುಗಳನ್ನು ಸರ್ಕಾರದ ಐಷಾರಾಮಿ ಬಸ್‌ಗಳಲ್ಲಿ ನೀಡಲಾಗುತ್ತಿದೆ. ಹವಾನಿಯಂತ್ರಿತ ಹಾಗೂ ಹವಾನಿಯಂತ್ರಿತವಲ್ಲದ ಬಸ್‌
ಗಳು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಓಡಾಡುತ್ತಿವೆ.

ADVERTISEMENT

ಸ್ಲೀಪರ್‌ ಬಸ್‌ಗಳಲ್ಲಿನ ಪ್ರಯಾಣ ಹಿತಕರವಾಗಿರುವುದಕ್ಕಿಂತ ಅಹಿತಕರವಾದ ಸುದ್ದಿಗಳನ್ನೇ ಇತ್ತೀಚೆಗೆ ಹೆಚ್ಚುಕೇಳುತ್ತಿದ್ದೇವೆ. ಬಸ್‌ಗಳಲ್ಲಿನ ಸುರಕ್ಷತಾ ಮಾರ್ಗಸೂಚಿಯ ಬಗ್ಗೆಖಾಸಗಿಯವರಿಗಾಗಲಿ, ಸರ್ಕಾರ
ಕ್ಕಾಗಲಿ ಇರುವ ನಿರ್ಲಕ್ಷ್ಯವನ್ನು ಇಂತಹ ಸಂದರ್ಭಗಳು ಮತ್ತೆ ಮುನ್ನೆಲೆಗೆ ತರುತ್ತವೆ. ಅಪಘಾತ ಅಥವಾ ಅಹಿತಕರ ಸಂದರ್ಭದಲ್ಲಿ ಈ ಬಸ್‌ಗಳಲ್ಲಿ ತುರ್ತು ನಿರ್ಗಮನ ಇರುವುದಿಲ್ಲ. ದೊಡ್ಡ ಗಾಜಿನ ಕಿಟಕಿಗಳನ್ನು ಒಡೆಯಲು ಅಗತ್ಯವಾದ ಸುತ್ತಿಗೆಗಳು ಇರುವುದಿಲ್ಲ. ಮೊಬೈಲ್‌ ಚಾರ್ಜರ್‌ ಪಾಯಿಂಟ್‌ಗಳನ್ನು ಬಸ್‌ಗಳು ಹೊಂದಿದ್ದಾಗ, ಬೆಂಕಿ ಹತ್ತಿಕೊಂಡರೆ ಬಸ್ಸಿನಲ್ಲಿ ಅಗ್ನಿಶಮನದ ವ್ಯವಸ್ಥೆ ಇರುವುದಿಲ್ಲ.

ರಾತ್ರಿ ಕಾರ್ಯಾಚರಣೆ ನಡೆಸುವ ಸ್ಲೀಪರ್‌ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದರೂ, ಲಗೇಜ್‌ ಬಾಕ್ಸ್‌ ಗಳಲ್ಲಿ ತುಂಬುವ ವಸ್ತುಗಳಿಗೆ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲ. ಕೆಲವು ಖಾಸಗಿ ಬಸ್‌ಗಳಲ್ಲಿ ಬೈಕ್‌ಗಳನ್ನು ತುಂಬುವುದನ್ನು ನೋಡಿರುವೆ. ಹುಬ್ಬಳ್ಳಿಯಿಂದ ಬರುವಾಗ ಒಬ್ಬ ಪ್ರಯಾಣಿಕ ದಿಂಬುಗಳನ್ನು ತಂದು ಲಗೇಜ್‌ ಬಾಕ್ಸಿಗೆ ಹಾಕಲು ಬಂದಾಗ ಚಾಲಕ ಆಕ್ಷೇಪಿಸಿದ. ಆಗ ಆ ಪ್ರಯಾಣಿಕ, ಅದು ಹೇಗೆ ಬಸ್‌ ಮುಂದಕ್ಕೆ ತೆಗೆಯುವೆಯೋ ನೋಡುವೆ ಎಂದು ಚಾಲಕನಿಗೆ ಸವಾಲು ಹಾಕಿದ. ಉಳಿದ ಪ್ರಯಾಣಿಕರು ಚಾಲಕನ ಪರವಾಗಿ ನಿಲ್ಲದೆ ಇದ್ದಾಗ, ಚಾಲಕ ಅನಿವಾರ್ಯವಾಗಿ ಸುಮ್ಮನಾಗಬೇಕಾಯಿತು. ಪ್ರಯಾಣಿಕರಿಗೂ ಸುರಕ್ಷತೆಯ ಬಗ್ಗೆ ಮಾರ್ಗದರ್ಶನದ ಅವಶ್ಯಕತೆಯಿದೆ.

ಚಾಲಕರೂ ನಮ್ಮಂತೆಯೇ ಮನುಷ್ಯರೇ ಆಗಿರುವುದರಿಂದ ಅವರಿಗೆ ಆರೇಳು ಗಂಟೆಗಳ ಕರ್ತವ್ಯದ ನಂತರ ವಿಶ್ರಾಂತಿ ಅತ್ಯಗತ್ಯ. ನಿದ್ದೆಗೆಟ್ಟು ವಾಹನ ಚಾಲನೆ ಮಾಡುವ ಒತ್ತಡದಲ್ಲಿ ನಸುಕಿನಲ್ಲಿ ಸಿಹಿನಿದ್ದೆಯಲ್ಲಿರುವ ಪ್ರಯಾಣಿಕರನ್ನು ಚಾಲಕರು ಚಿರನಿದ್ದೆಗೆ ಕಳಿಸಿಬಿಟ್ಟಿರುವ ಉದಾಹರಣೆಗಳಿವೆ. ಅನೇಕ ಚಾಲಕರು ತಮ್ಮ ನಿದ್ದೆಯನ್ನು ತಡೆಯಲು ಟೀ–ಕಾಫಿ ಕುಡಿಯುವ, ಗುಟ್ಕಾ ಹಾಕುವ, ಇಲ್ಲವೇ ಸಿಗರೇಟು ಸೇದಿ ನಿದ್ದೆ ಓಡಿಸಲು ಪ್ರಯತ್ನಿಸುವ ಕಸರತ್ತನ್ನು ನೋಡಿದ್ದೇನೆ. ಅತಿವೇಗ, ರಾತ್ರಿಯ ಮಬ್ಬು, ಕುಳಿರ್ಗಾಳಿ, ಏಕಾಂತದ ನೀರವತೆ, ಇವೆಲ್ಲವೂ ಚಾಲಕ ಎಡವಟ್ಟು ಮಾಡಲು ಹಾಗೂ ಅಪಘಾತ ಸಂಭವಿಸಲು ಕಾರಣಗಳಾಗಿವೆ.

ನೇತ್ರತಜ್ಞರೊಬ್ಬರು ಹಂಚಿಕೊಂಡ ವಿಷಯ ಗಾಬರಿಹುಟ್ಟಿಸುವಂತಿದೆ. ಅವರ ಬಳಿ ಪರೀಕ್ಷೆಗೆ ಬಂದ ವ್ಯಕ್ತಿ
ಯೊಬ್ಬರಿಗೆ ಒಂದು ಕಣ್ಣೇ ಕಾಣಿಸುತ್ತಿರಲಿಲ್ಲ. ಮಾತಿನ ನಡುವೆ ಆ ವ್ಯಕ್ತಿ, ‘ನಾನು ಖಾಸಗಿ ಬಸ್‌ ಚಾಲಕನಾಗಿದ್ದು, ಪ್ರತಿದಿನ ಬೆಂಗಳೂರಿನಿಂದ ಮಂಗಳೂರಿಗೆ ಬಸ್‌ ಚಲಾಯಿಸುವೆ’ ಎಂದನಂತೆ. ಹೌಹಾರಿದ ವೈದ್ಯರು, ‘ಅಲ್ಲಯ್ಯ, ನಿನ್ನ ಕಣ್ಣಿನ ದೃಷ್ಟಿಯೇ ಸರಿಯಾಗಿಲ್ಲ. ಆ ಪ್ರಯಾಣಿಕರ ಗತಿ ಏನು?’ ಎಂದಾಗ, ಆತ ನೀಡಿದ ಉತ್ತರ: ‘ಸರ್, ನಾನು ಬೆಳಗ್ಗೆ ಬಸ್ಸು ಓಡಿಸುವುದಿಲ್ಲ, ಬರೀ ರಾತ್ರಿ ಮಾತ್ರ’. ಇಂತಹ ಪ್ರಕರಣಗಳಿಗೆ ಏನು ಹೇಳುವುದು?

ಚಾಲಕರ ಆರೋಗ್ಯ ತಪಾಸಣೆ, ಚಾಲಕರಿಗೆ ಹಾಗೂ ಬಸ್ಸುಗಳಿಗೆ ಸೂಕ್ತ ಮಾರ್ಗಸೂಚಿ, ಇವೆಲ್ಲವನ್ನೂ ಸರ್ಕಾರ ಬಿಗಿಗೊಳಿಸಬೇಕಿದೆ. ಪ್ರತಿ ದಿನ ಸರಾಸರಿ 485 ಜನ ದೇಶದ ವಿವಿಧ ಭಾಗಗಳಲ್ಲಿ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ. ರಸ್ತೆ ಅಪಘಾತದಲ್ಲಿ ಭಾರತಕ್ಕೆ ವಿಶ್ವದಲ್ಲೇ ಮೊದಲ ಸ್ಥಾನ. ಈ ಕುಖ್ಯಾತಿಗೆ ಸಂಚಾರ ಪ್ರಜ್ಞೆಯ ಕೊರತೆ ಹಾಗೂ ಅದರ ಬಗೆಗಿನ ನಿರ್ಲಕ್ಷ್ಯವೇ ಕಾರಣ.

ಅತಿಯಾದ ವೇಗ, ಮದ್ಯ ಸೇವನೆ, ಮಾದಕ ವಸ್ತು ಸೇವಿಸಿ ವಾಹನ ಚಲಾಯಿಸುವುದು, ದೃಷ್ಟಿದೋಷ, ನಿದ್ದೆ, ಹವಾಮಾನ, ಚಾಲಕನ ಅಜಾಗರೂಕತೆ, ಇವೆಲ್ಲವೂ ಅಪಘಾತಗಳಿಗೆ ಕಾರಣವಾಗುತ್ತಿವೆ.

ಸರ್ಕಾರ, ಪ್ರಾದೇಶಿಕ ಸಾರಿಗೆ ಕಚೇರಿ, ಪರವಾನಗಿ ನೀಡುವಾಗ ಹಾಗೂ ನವೀಕರಿಸುವಾಗ ಚಾಲಕರನ್ನು ಕಡ್ಡಾಯ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ರಸ್ತೆಯಲ್ಲಿ ಸರಿಯಾದ ಮಾರ್ಗಸೂಚಿಗಳನ್ನು ಹಾಕುವುದು, ಹೆದ್ದಾರಿ ಗಳಲ್ಲಿ ಆ್ಯಂಬುಲೆನ್ಸ್‌ ಸೇವೆ, ವಿದೇಶಗಳಲ್ಲಿ ಇರುವಂತೆ ಸುಸಜ್ಜಿತವಾದ ಹೋಟೆಲ್‌, ಶೌಚಾಲಯಗಳನ್ನು ಒದಗಿಸುವ ಮೂಲಕ ಅಪಘಾತಗಳನ್ನು ನಿಯಂತ್ರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.