ADVERTISEMENT

ಸಂಗತ: ರಾಜಕೀಯ ಬಣ್ಣ ಬಳಿಯುವುದು ಬೇಡ

ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕುರುಬ ಸಮುದಾಯವನ್ನು ಎಸ್‌.ಟಿಗೆ ಸೇರಿಸಬೇಕೆಂಬ ಬೇಡಿಕೆಯನ್ನು ರಾಜಕೀಯಗೊಳಿಸುವುದು ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 19:30 IST
Last Updated 9 ಡಿಸೆಂಬರ್ 2020, 19:30 IST
ಸಂಗತ
ಸಂಗತ   

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌.ಟಿ) ಸೇರಿಸಬೇಕೆಂಬ ಬೇಡಿಕೆಗೆ ಸಂಬಂಧಿಸಿ ದಿನೇಶ್‌ ಅಮಿನ್‌ ಮಟ್ಟು ಅವರು ಬರೆದಿರುವ ಲೇಖನವು (ಪ್ರ.ವಾ., ನ. 30) ಈ ಬೇಡಿಕೆಯನ್ನು ರಾಜಕೀಯ ದುರ್ಬೀನಿನಿಂದ ನೋಡಿದಂತಿದೆ.

ದಕ್ಷಿಣ ಭಾರತದ ಮೂಲನಿವಾಸಿಗಳಾದ ಕುರುಬರು ಕುರಿ ಸಾಕಣೆ ವೃತ್ತಿಯಿಂದ ಜೀವನದಲ್ಲಿ ಭದ್ರತೆ ಕಂಡುಕೊಂಡವರು. ತಮ್ಮದೇ ಆದ ಭಾಷೆ ಹಾಗೂ ನಾಗರಿಕತೆಯನ್ನು ಹೊಂದಿದ್ದವರು. ಈ ಸಮುದಾಯದವರು ಪಲ್ಲವ ಹಾಗೂ ವಿಜಯನಗರ ಸಾಮ್ರಾಜ್ಯಗಳನ್ನು ಕಟ್ಟಿ ಆಳಿದ್ದಕ್ಕೆ ದಾಖಲೆ ಇದೆ. 1881ರಿಂದ 1987ರವರೆಗೆ ಪ್ರಕಟವಾದ ಗೆಜೆಟಿಯರ್‌ಗಳ ಪ್ರಕಾರ, ಕರ್ನಾಟಕದಲ್ಲಿ ಎಂಟು ಅತಿ ಮುಖ್ಯ ಗುಡ್ಡಗಾಡು ಜನಾಂಗಗಳಿದ್ದವು. ಅವುಗಳಲ್ಲಿ ಕುರುಬರು ಬಹುಸಂಖ್ಯಾತರು.

ಬ್ರಿಟಿಷ್‌ ಸರ್ಕಾರವು ಪ್ರಕಟಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪ‍ಟ್ಟಿಯಲ್ಲಿ ಮದ್ರಾಸ್‌ ಪ್ರಾಂತ್ಯದಲ್ಲಿ ಕುರುಬ ಪದಕ್ಕೆ ಸಂವಾದಿಯಾದ ‘ಕುರುಮನ್ಸ್‌’ ಮತ್ತು ‘ಕಾಟ್ಟು ನಾಯಕನ್‌’ ಪರಿಶಿಷ್ಟ ಜಾತಿಯಲ್ಲಿಯೂ ಬಾಂಬೆ ಪ್ರಾಂತ್ಯದಲ್ಲಿ ಬಳಕೆಯಲ್ಲಿದ್ದ ‘ಗೊಂಡ’, ಪರಿಶಿಷ್ಟ ಪಂಗಡದಲ್ಲಿಯೂ ಸೇರಿದ್ದವು. ಸ್ವಾತಂತ್ರ್ಯಾನಂತರ 1950ರಲ್ಲಿ ಮದ್ರಾಸ್‌ ಪ್ರಾಂತ್ಯದಲ್ಲಿ ‘ಕುರುಮನ್ಸ್‌’ ಮತ್ತು ‘ಕಾಟ್ಟು ನಾಯಕನ್‌’, ಹೈದರಾಬಾದ್‌ ಮತ್ತು ಬಾಂಬೆ ಪ್ರಾಂತ್ಯಗಳಲ್ಲಿ ‘ಗೊಂಡ’, ಮೈಸೂರು ರಾಜ್ಯದಲ್ಲಿ ಕಾಡುಕುರುಬ, ಜೇನುಕುರುಬ, ‘ಕೊಡಗಿನ ಕುರುಬ’ ಇವು ‍ಪರಿಶಿಷ್ಟ ಪಂಗಡ ಪಟ್ಟಿಯಲ್ಲಿದ್ದವು.

ADVERTISEMENT

ರಾಜ್ಯದ ದಕ್ಷಿಣ ಭಾಗದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದ ಬೋವಿ, ವಡ್ಡ, ಲಮಾಣಿ, ಕೊರಮ, ಕೊರಚ ಜಾತಿಗಳ ಮೀಸಲಾತಿಯನ್ನು 1976–77ರಲ್ಲಿ ಕರ್ನಾಟಕದ ಇತರ ಎಲ್ಲ ಪ್ರಾಂತ್ಯಗಳಿಗೂ ವಿಸ್ತರಿಸಲಾಯಿತು. ಆದರೆ, ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುವ ಕುರುಬರಿಗೆ ಇದ್ದ ಮೀಸಲಾತಿಯನ್ನು ಮಾತ್ರ ಇಡೀ ರಾಜ್ಯಕ್ಕೆ ವಿಸ್ತರಿಸದೆ, ಕೊಡಗಿಗಷ್ಟೇ ಸೀಮಿತಗೊಳಿಸಿ ಜಾರಿ ಮಾಡಲಾಯಿತು.

ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರವು ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದವರೆಂದು ಪರಿಗಣಿಸಿ ಶೈಕ್ಷಣಿಕ ಮೀಸಲಾತಿ ನೀಡಿತ್ತು. ಆದರೆ, ಯಾವುದೇ ಜಾತಿಯನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಅಥವಾ ಅಲ್ಲಿಂದ ತೆಗೆಯುವ ಅಧಿಕಾರವು ರಾಜ್ಯ ಸರ್ಕಾರಕ್ಕೆ ಇಲ್ಲ. ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಮುದಾಯವು ಒತ್ತಡ ಹೇರಬಹುದಾಗಿತ್ತು. ಸಮುದಾಯದ ಆಗಿನ ಮುಖಂಡರು ಈ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಹೀಗಾಗಿ, ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರುವ ಅವಕಾಶ ಅಂದು ತಪ್ಪಿತು.

ಮೀಸಲಾತಿ ವರ್ಗೀಕರಣ ಮಾಡುವಾಗ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾದ ಸರಾಸರಿಯನ್ನು ಆಧಾರವಾಗಿ ಇಟ್ಟುಕೊಳ್ಳಬೇಕೆಂಬ ನಿಯಮವನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿದೆ. ಚಿನ್ನಪ್ಪರೆಡ್ಡಿ ಆಯೋಗದ ವರದಿಯ ಪ್ರಕಾರ, 1988ರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹತ್ತು ಸಾವಿರ ಜನಸಂಖ್ಯೆಗೆ ಸರಾಸರಿ 39 ಜನ ಪಾಸಾಗಿದ್ದರು. ಈ ಸಂಖ್ಯೆಗಿಂತ ಹೆಚ್ಚಿಗೆ ಪಾಸಾದ ವಿದ್ಯಾರ್ಥಿಗಳನ್ನು ಹೊಂದಿದ ಸಮುದಾಯಗಳು ಮುಂದುವರಿದ ಸಮುದಾಯಗಳು ಮತ್ತು ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪಾಸಾದ ಮಕ್ಕಳನ್ನು ಹೊಂದಿರುವ ಸಮುದಾಯಗಳು ಹಿಂದುಳಿದವುಗಳು ಎಂದು ವರ್ಗೀಕರಣ ಮಾಡಲಾಯಿತು. ಕುರುಬ ಸಮುದಾಯದಲ್ಲಿ ಎಸ್ಎಸ್‌ಎಲ್‌ಸಿ ಪಾಸಾದವರ ಸಂಖ್ಯೆ ಈ ಸರಾಸರಿಯ ಅರ್ಧಕ್ಕಿಂತ ಕಡಿಮೆ ಇತ್ತು. ಅಂದರೆ, ಪಾಸಾದವರ ಸಂಖ್ಯೆ 18 ಮಾತ್ರ ಇತ್ತು. ಈ ಪ್ರಕಾರ, ಕುರುಬರನ್ನು ಅತ್ಯಂತ ಹಿಂದುಳಿದ ಮೊದಲನೇ ಗುಂಪಿಗೆ ಸೇರಿಸಬೇಕಾಗಿತ್ತು. ಆದರೆ ವೀರಪ್ಪ ಮೊಯಿಲಿ ನೇತೃತ್ವದ ಆಗಿನ ಸರ್ಕಾರವು ಅತಿ ಮುಂದುವರಿದ 115 ಜಾತಿಗಳ ಜೊತೆಗೆ ಎರಡನೇ ಗುಂಪಿಗೆ ಸೇರಿಸಿ ಅನ್ಯಾಯ ಮಾಡಿತು.

1988ರ ಸುಮಾರಿಗೆ ರಾಜ್ಯದಲ್ಲಿ ಕುರುಬರು ಹೆಚ್ಚು ಸಂಘಟಿತರಾಗಲು ತೊಡಗಿದರು. ಆಗ ಸಿದ್ದರಾಮಯ್ಯನವರು ಸಚಿವರಾಗಿದ್ದರು. 1992ರಲ್ಲಿ ಕಾಗಿನೆಲೆಯಲ್ಲಿ ಮಠ ಸ್ಥಾಪನೆಯಾಯಿತು. ಎಚ್‌.ವಿಶ್ವನಾಥ್‌ ಅವರು ಗುರುಪೀಠ ಸಮಿತಿಯ ಅಧ್ಯಕ್ಷರಾಗಿದ್ದರು. ಆನಂತರ, ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ತುಸು ಬಿರುಸು ಪಡೆಯಿತು.

ಕರ್ನಾಟಕದಾದ್ಯಂತ ಅನ್ವಯವಾಗುವಂತೆ ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಯಲ್ಲಿರುವ ‘ಕುರುಮನ್ಸ್‌’ ಮತ್ತು ಕೊಡಗಿಗೆ ಸೀಮಿತವಾಗಿ ಪರಿಶಿಷ್ಟ ಪಂಗಡವಾಗಿರುವ ‘ಕುರುಬ’ ಎರಡೂ ಒಂದೇ ಸಮುದಾಯಕ್ಕೆ ಸೇರಿವೆ. ಹೀಗಾಗಿ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಸಮಸ್ತ ಕುರುಬ ಸಮುದಾಯಕ್ಕೆ ಅನ್ವಯವಾಗುವಂತೆ ಇಡೀ ರಾಜ್ಯಕ್ಕೆ ವಿಸ್ತರಿಸಬೇಕು. ಈ ಬೇಡಿಕೆಯನ್ನು ಮುಂದಿಟ್ಟು ಕುರುಬರ ಸಂಘವು ಹಕ್ಕೊತ್ತಾಯ ಮಂಡಿಸುತ್ತಿದೆ. ಕಾಗಿನೆಲೆ ಮಠಾಧೀಶರ ನೇತೃತ್ವದಲ್ಲಿ ಕುರುಬರ ಪರಿಶಿಷ್ಟ ಪಂಗಡ ಹೋರಾಟ ಸಮಿತಿ, ಕರ್ನಾಟಕ ಪ್ರದೇಶ ಕುರುಬರ ಸಂಘವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇತ್ತೀಚೆಗೆ ಈ ಕುರಿತು ಮನವಿ ಸಲ್ಲಿಸಿವೆ. ಈಗಲೂ ಗುಡ್ಡಗಾಡಿನಲ್ಲಿ ಕುರಿ ಮೇಯಿಸುತ್ತಾ, ಊರಲ್ಲಿ ಕಂಬಳಿ ನೇಯುತ್ತಾ ಬದುಕುತ್ತಿರುವ ಈ ಸಮುದಾಯವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿರುವ ಹೊತ್ತಿನಲ್ಲಿ, ಕೆಲವರು ಅದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿರುವುದು ದುರ್ದೈವ.

ಲೇಖಕ: ಕಾರ್ಯಾಧ್ಯಕ್ಷ, ಕುರುಬರ ಎಸ್.ಟಿ. ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.