ಶಾಲೆಗಳಲ್ಲಿ ತ್ರಿಭಾಷಾ ಕಲಿಕಾ ನೀತಿ ಅಳವಡಿಸಿಕೊಳ್ಳುವುದು ಜಾಣತನದ ನಡೆ ಎಂಬ ಅಭಿಪ್ರಾಯವುಳ್ಳ ಎಂ.ಅಬ್ದುಲ್ ರೆಹಮಾನ್ ಪಾಷ ಅವರ ಲೇಖನ (ಸಂಗತ, ಫೆ. 27), ಅವರೇ ತಿಳಿಸಿರುವ ಹಾಗೆ, ‘ಭಾಷೆಯ ಕಲಿಕೆಯು ವ್ಯಕ್ತಿಯ ಅಭ್ಯುದಯಕ್ಕೆ ಪೂರಕವಾಗಿರಬೇಕು ಎಂಬ ನೆಲೆಯಿಂದ ಮಾಡಿದ ಚಿಂತನೆ’ಯಾಗಿದೆ. ಆದರೆ ಭಾಷೆಯನ್ನೂ ಒಳಗೊಂಡಂತೆ ಶಿಕ್ಷಣದ ಗುರಿ ವ್ಯಷ್ಟಿಯ ಜೊತೆ ಜೊತೆಗೆ ಸಮಷ್ಟಿಯ ಅಭ್ಯುದಯವನ್ನೂ ಪರಿಣಾಮದಲ್ಲಿ ಸಾಧಿಸುವಂಥದ್ದಾಗಿರಬೇಕು ಅಲ್ಲವೇ?
ಭಾಷೆ ಕುರಿತ ರಾಜಕೀಯವನ್ನು ಒಂದು ಕ್ಷಣ ಬದಿಗಿರಿಸಿ ಚಿಂತನೆ ಮಾಡಬೇಕೆಂದು ಲೇಖಕರು ಸೂಚಿಸಿದ್ದಾರೆ. ಆದರೆ ಇಂದು, ಕನ್ನಡಿಗರಾದ ನಾವು ಬ್ಯಾಂಕು, ಕೇಂದ್ರ ಸರ್ಕಾರದ ಶಾಖಾ ಕಚೇರಿಗಳು, ಅಂಚೆ ಕಚೇರಿ, ವಿಮಾ ಸಂಸ್ಥೆಗಳು, ನಾನಾ ಥರದ ಮ್ಯೂಚುವಲ್ ಫಂಡ್‌ಗಳು, ರೈಲ್ವೆ, ವಿಮಾನ ನಿಲ್ದಾಣಗಳು, ಮೆಟ್ರೊ ಮತ್ತು ಖಾಸಗಿ ಸಂಸ್ಥೆಗಳಲ್ಲದೆ ದೂರದರ್ಶನ, ಆಕಾಶವಾಣಿ ಹಾಗೂ ಬೀದಿಬದಿಯ ಪಾನಿಪುರಿ ಅಂಗಡಿಗಳವರೆಗೆ ದಿನನಿತ್ಯ ಎದುರಿಸುತ್ತಿರುವ ಹಿಂದಿ ಹೇರಿಕೆ- ಇವೆಲ್ಲಕ್ಕೆ ಕೇಂದ್ರ ಸರ್ಕಾರದ ಹಿಂದಿ ಪರವಾದ ನಿಲುವುಗಳು ಕಾರಣವಾಗಿರುವುದರಿಂದ ಮತ್ತು ಆ ಕಾರಣವಾಗಿ ಕನ್ನಡದ ಕತ್ತು ಹಿಸುಕುತ್ತಿರುವಂತಹ ಪರಿಸ್ಥಿತಿ ಇರುವುದರಿಂದ ರಾಜಕೀಯವನ್ನು ಬದಿಗಿರಿಸಿ ಯೋಚಿಸಲಾದೀತೆ?!
ಅನೇಕ ಶಾಲೆಗಳು ಇತ್ತೀಚೆಗೆ ರಾಜ್ಯ ಪಠ್ಯಕ್ರಮವನ್ನು ಬಿಟ್ಟು ಸಿಬಿಎಸ್‌ಇ, ಐಸಿಎಸ್‌ಇಯಂತಹ ಪಠ್ಯಕ್ರಮಗಳನ್ನು ಅನುಸರಿಸುತ್ತಿರುವುದರಿಂದ ಕನ್ನಡದ ಕಂದಮ್ಮಗಳೇ ಕನ್ನಡವನ್ನು ತೃತೀಯ ಭಾಷೆಯಾಗಿಯೂ ಅಧ್ಯಯನ ಮಾಡದೇ ಇರುವ ಪರಿಸ್ಥಿತಿ ತಲೆದೋರಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಲಭ್ಯತೆ ಕೂಡ ಕ್ಷೀಣಿಸುತ್ತಿದೆ. ಕೊನೆಗೆ ನಾನೇ ನನ್ನ ಪುಟ್ಟದೊಂದು ಮನೆಯನ್ನು ಕಟ್ಟಿಕೊಳ್ಳಬೇಕಾದರೂ ಅಥವಾ ಕಟ್ಟಿಕೊಂಡ ಮನೆಯಲ್ಲಿ ದುರಸ್ತಿಯ ಅಗತ್ಯ ಬಿದ್ದರೂ ಕೆಲಸಗಾರರ ಹಿಂದಿಯೊಂದಿಗೆ ತಿಣುಕಾಡಬೇಕಾಗಿದೆ.
ಈ ಯಾವ ಸಮಸ್ಯೆಗಳೂ ಇಲ್ಲದೇ ಇದ್ದಿದ್ದರೆ ತ್ರಿಭಾಷಾ ಸೂತ್ರವು ಉತ್ತಮ ಆಯ್ಕೆ ಎಂಬುದರಲ್ಲಿ ಸಂಶಯವಿಲ್ಲ. ನಮ್ಮ ಕವಿ, ದಾರ್ಶನಿಕ ಕುವೆಂಪು ಅವರು ಪ್ರಾಯಶಃ ಇದನ್ನೆಲ್ಲ ಆಗಲೇ ಊಹಿಸಿದ್ದರು ಎಂದು ಕಾಣುತ್ತದೆ. ಅವರು ಒಂದು ಸಂದರ್ಭದಲ್ಲಿ ಹೇಳಿದ್ದ ಈ ಮಾತುಗಳು ಗಮನಾರ್ಹ: ‘... ಇಂಗ್ಲಿಷ್‌ಗಿಂತ ಹಿಂದಿ ಹೆಚ್ಚು ಅಪಾಯಕಾರಿ. ನಾವು ಎಂದು ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡೆವೋ ಅಂದೇ ಹಿಂದಿಯ ಉರುಳಿಗೆ ಸಿಕ್ಕಿದೆವು. ತ್ರಿಭಾಷಾ ಸೂತ್ರವನ್ನು ತಮಿಳುನಾಡು ಒಪ್ಪಿಲ್ಲ. ಈ ವಿಷಯದಲ್ಲಿ ನಾವು ತಮಿಳರನ್ನು ಅನುಸರಿಸಬೇಕು. ‘ಬಹುಭಾಷೆಗಳಲ್ಲಿ ದ್ವಿಭಾಷೆ’ ನಮ್ಮ ಸೂತ್ರವಾಗಬೇಕು. ಹಿಂದಿ ಇದುವರೆಗೆ ಪರೀಕ್ಷೆಯ ವಿಷಯವಾಗಿರಲಿಲ್ಲ. ಈಗ ಆಗಿದೆಯಂತೆ. ಇದು ತಪ್ಪು. ಹಳ್ಳಿಗಳಿಗೂ ಹಿಂದಿಯನ್ನು ವಿಸ್ತರಿಸುವುದು ಅವಿವೇಕ. ಇಂತಹುದು ಯಾವ ದೇಶದಲ್ಲೂ ಇಲ್ಲ...’
ಅಂದಿನ ನೆಹರೂ, ಗಾಂಧಿ ಅವರಂತಹ ಶ್ರೇಷ್ಠ ವ್ಯಕ್ತಿಗಳ ಆದರ್ಶಗಳನ್ನು ಉದಾರ ಬುದ್ಧಿಯಿಂದ ಅನುಸರಿಸಿದ ನಮಗೆ, ಇಂದು ಅದೇ ಹಿಂದಿ ಭಾಷೆ, ತ್ರಿಭಾಷಾ ಸೂತ್ರ ಉರುಳಾಗಿ ಪರಿಣಮಿಸಿವೆ. ನಮ್ಮ ನೆಲದಲ್ಲೇ ನಾವು ಪರಕೀಯರಾಗುತ್ತಿದ್ದೇವೆ. ಇಂತಹ ಸಂಕಟದಲ್ಲಿ ಸಿಲುಕಿಕೊಂಡಿರುವ ನಮಗೆ, ತ್ರಿಭಾಷಾ ಸೂತ್ರವನ್ನು ಒತ್ತಾಯಿಸುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ತಿರಸ್ಕರಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಆಕ್ರೋಶ ಅರ್ಥವಾಗುತ್ತದೆ. ಇಷ್ಟಕ್ಕೂ ಶಿಕ್ಷಣವು ಸಮವರ್ತಿ ಪಟ್ಟಿಗೆ ಸೇರಿದ್ದು. ಅಂದರೆ ಅಲ್ಲಿ ರಾಜ್ಯಗಳ ಅಭಿಪ್ರಾಯಕ್ಕೂ ಮನ್ನಣೆ ಇರಲೇಬೇಕು.
ಸಾಮಾನ್ಯವಾಗಿ ಎನ್ಇಪಿ ಪರವಾಗಿ ಮಾತನಾಡುವವರು ಈ ನೀತಿಯು ‘ಶಿಕ್ಷಣ ಮಾಧ್ಯಮವು ಮಾತೃಭಾಷೆ, ಪ್ರಾದೇಶಿಕ ಭಾಷೆ ಅಥವಾ ಸ್ಥಳೀಯ ಭಾಷೆ ಆಗಿರತಕ್ಕದ್ದು’ ಎಂದು ಹೇಳಿದೆ ಎಂದು ನಂಬಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಹಾಗೆ ಇಲ್ಲ. ಏಕೆಂದರೆ ಹೀಗೆಂದು ಹೇಳುವ ಮೊದಲಲ್ಲಿ ಈ ನೀತಿಯು ‘ಎಲ್ಲೆಲ್ಲಿ ಸಾಧ್ಯವೋ ಅಲ್ಲಿ’ ಎಂಬ ಜಾಣತನದ ಪದಗಳನ್ನು ಬಳಸಿದೆ. ಆದರೆ ಇಂದಿನ ವಾತಾವರಣದಲ್ಲಿ ಎಲ್ಲಿಯೂ ಸಾಧ್ಯವಾಗುವುದಿಲ್ಲ. ಎನ್‌ಇಪಿ ನಿರೂಪಕರಿಗೆ ಅದು ಗೊತ್ತಿದೆ. ಹೀಗಾಗಿ, ಪ್ರಾದೇಶಿಕ ಭಾಷಾ ಮಾಧ್ಯಮ ಎಂಬುದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಬೇಕು ಎಂಬ ಕಾರಣವನ್ನೊಡ್ಡಿ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಿದೆ ಮತ್ತು ಇನ್ನು ಮುಂದೆ ದ್ವಿಭಾಷಾ ಮಾಧ್ಯಮವನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಅವು ಕೂಡ ಇಂಗ್ಲಿಷ್ ಮೋಹಕ್ಕೆ ಬಲಿಯಾಗಿ ಬರಬರುತ್ತಾ ಪೂರ್ಣ ಇಂಗ್ಲಿಷ್ ಭಾಷಾ ಮಾಧ್ಯಮ ಆಗುವುದು ಖಚಿತ.
ಶಿಕ್ಷಣವು ಭಾರತೀಕರಣಗೊಳಿಸಲ್ಪಡಬೇಕು ಎಂಬ ತತ್ವವನ್ನು ಎನ್‌ಇಪಿಯು ಪ್ರಧಾನವಾಗಿ ಉಳ್ಳದ್ದಾಗಿದ್ದು, ರಾಜ್ಯ ಅಥವಾ ಪ್ರಾದೇಶಿಕತೆಯ ದೃಷ್ಟಿಯನ್ನು ಗೌಣಗೊಳಿಸಿದೆ. ಹೀಗಾಗಿ, ದ್ವಿಭಾಷಾ ಸೂತ್ರವನ್ನು ನಾವೂ ಅಳವಡಿಸಿಕೊಂಡು ನಮ್ಮ ಮೇಲೆ ಆಧಿಪತ್ಯ ನಡೆಸುತ್ತಿರುವ ಹಿಂದಿ ಹೇರಿಕೆಯನ್ನು ಮೆಟ್ಟಬೇಕೆ ಅಥವಾ ಇರುವ ತ್ರಿಭಾಷಾ ಸೂತ್ರದಲ್ಲಿ ಮುಂದುವರಿದು, ಹಿಂದಿ ಭಾಷೆಗಿಂತ ನಾಲ್ಕು ಪಟ್ಟು ಹೆಚ್ಚು ಇತಿಹಾಸವುಳ್ಳ ಪ್ರಬುದ್ಧ ಕನ್ನಡವನ್ನು ಬೇರೆ ಎಂತಾದರೂ ಉಳಿಸಿಕೊಳ್ಳಬೇಕೆ ಎಂಬ ಪ್ರಶ್ನೆ ಮೂಡುತ್ತದೆ. ಜನಪ್ರತಿನಿಧಿಗಳ ಜೊತೆಗೆ, ಕನ್ನಡಿಗರಾದ ನಾವೆಲ್ಲರೂ ಈ ಬಗ್ಗೆ ಗಂಭೀರವಾಗಿ ಯೋಚಿಸಿ ಕ್ರಿಯಾಶೀಲರಾಗಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.