ADVERTISEMENT

ಪ್ರಶಸ್ತಿ ಬೇಕೇ ಪ್ರಶಸ್ತಿ?!

ಪ್ರಶಸ್ತಿ ಪುರಸ್ಕಾರಕ್ಕೆ, ಅಭಿನಂದನಾ ಗ್ರಂಥ ಸಮರ್ಪಣೆಗೆ ನಾನಾ ಮುಖಗಳಿವೆ

ರಾಜಕುಮಾರ ಕುಲಕರ್ಣಿ
Published 22 ಅಕ್ಟೋಬರ್ 2021, 19:25 IST
Last Updated 22 ಅಕ್ಟೋಬರ್ 2021, 19:25 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನನ್ನ ಇ-ಮೇಲ್‍ಗೆ ಇತ್ತೀಚೆಗೆ ಒಂದು ಪತ್ರ ಬಂದಿತ್ತು. ‘ನಿಮ್ಮನ್ನು 2021ನೇ ಸಾಲಿನ ಅತ್ಯುತ್ತಮ ಸಮಾಜ ಸೇವಾಕರ್ತ ಎನ್ನುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವರ್ಣರಂಜಿತ ಸಮಾರಂಭದಲ್ಲಿ ಗಣ್ಯರಿಂದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ನಿಮ್ಮ ವೈಯಕ್ತಿಕ ವಿವರ ಕಳುಹಿಸಿಕೊಡಿ. ಜೊತೆಗೆ ನಮ್ಮ ಸಂಸ್ಥೆಯ ಬ್ಯಾಂಕ್ ಖಾತೆಗೆ ₹ 25,000 ಸಂದಾಯ ಮಾಡಿ’. ಇದಿಷ್ಟು ಆ ಪತ್ರದ ಒಕ್ಕಣೆಯಾಗಿತ್ತು. ಯಾವುದೇ ಸೇವಾಸಂಸ್ಥೆ ಯೊಂದಿಗೆ ಗುರುತಿಸಿಕೊಂಡಿರದ ನನ್ನನ್ನು ಹೀಗೆ ದಿಢೀರನೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಆಶ್ಚರ್ಯವನ್ನುಂಟು ಮಾಡಿತು. ಪ್ರಶಸ್ತಿ ಸ್ವೀಕರಿಸಲು ಹಣ ಸಂದಾಯ ಮಾಡಬೇಕಾಗಿರುವ ಸಂಗತಿ ಸಂಶಯಕ್ಕೆ ಕಾರಣವಾಗಿ, ನಾನು ಆ ಸಂಸ್ಥೆಯೊಂದಿಗೆ ಪತ್ರ ವ್ಯವಹಾರವನ್ನು ಮುಂದುವರಿಸಲಿಲ್ಲ.

ಇಂಥ ಅನುಭವ ಕೇವಲ ನನ್ನೊಬ್ಬನದಲ್ಲ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಆಗಾಗ ಈ ರೀತಿಯ ಪ್ರಶಸ್ತಿ ವಂಚನೆಯ ಪತ್ರಗಳು ಬರುತ್ತಿರುತ್ತವೆ. ಅತ್ಯುತ್ತಮ ವೈದ್ಯ, ಶಿಕ್ಷಕ, ಉದ್ಯಮಿ, ಸಾಮಾಜಿಕ ಸೇವಾಕರ್ತ ಎನ್ನುವ ಪ್ರಶಸ್ತಿಗಳನ್ನು ಒಂದು ನಿರ್ದಿಷ್ಟ ಮೊತ್ತಕ್ಕೆ ವಿತರಿಸುವ ಪರಿಪಾಟ ಚಾಲ್ತಿಗೆ ಬಂದಿದೆ. ಹೆಸರನ್ನೇ ಕೇಳಿರದ ಸಂಸ್ಥೆಗಳು ದಿಢೀರೆಂದು ಸಂಪರ್ಕಿಸಿ, ಸಂದಾಯ ಮಾಡಬೇಕಾದ ಮೊತ್ತವನ್ನು ತಿಳಿಸಿ ಪ್ರಶಸ್ತಿಗೆ ಆಯ್ಕೆಯಾದ ಕುರಿತು ಮಾಹಿತಿ ನೀಡುತ್ತವೆ. ಹಣ ಪಡೆದು ಸಮಾರಂಭ ಆಯೋಜಿಸಿ ಗಣ್ಯರಿಂದ ಪ್ರಶಸ್ತಿ ಫಲಕವನ್ನು ಕೊಡಿಸಿದ ಉದಾಹರಣೆಗಳೂ ಉಂಟು. ಹೀಗೆ ಪ್ರಶಸ್ತಿ ಸ್ವೀಕರಿಸಿ ಫಲಕವನ್ನು ಮನೆಯ ಹಜಾರದ ಗೋಡೆಯ ಮೇಲೆ ತೂಗುಹಾಕಿ ಧನ್ಯತೆ ಅನುಭವಿಸಿದ ಸಾಧಕರ ಸಂಖ್ಯೆಯೂ ಬಹಳಷ್ಟಿದೆ.

ಪ್ರಶಸ್ತಿ ಪುರಸ್ಕಾರಕ್ಕೆ ಬೇರೆ ಮುಖಗಳೂ ಇರುತ್ತವೆ. ಕೆಲವು ದಿನಗಳ ಹಿಂದೆ ಊರಿನಲ್ಲಿ ನನ್ನ ಮಿತ್ರನ ಶತಾಯುಷಿ ಅಜ್ಜನನ್ನು ಸನ್ಮಾನಿಸಿ ಅಭಿನಂದನಾ ಗ್ರಂಥವನ್ನು ಸಮರ್ಪಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಂಧುಗಳು, ಹಿತೈಷಿಗಳು, ರಾಜಕಾರಣಿಗಳ ಮಹಾದಂಡೇ ನೆರೆದಿತ್ತು. ಸನ್ಮಾನಿತ ಅಜ್ಜ ದೊಡ್ಡ ಸಾಧಕರೇನಲ್ಲ. ನೂರು ವರ್ಷಗಳನ್ನು ಪೂರೈಸಿದ್ದೇ ಅಭಿನಂದನೆಗೆ ಕಾರಣವಾಗಿತ್ತು. ಅಭಿನಂದನಾ ಗ್ರಂಥ ಗಳನ್ನು ಸಮರ್ಪಿಸುವ ಮತ್ತು ಸ್ವೀಕರಿಸುವ ವಾಂಛೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹೀಗೆ ಸಮರ್ಪಿಸಲು ವ್ಯಕ್ತಿಯೇನೂ ಯಾವುದೇ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಬೇಕೆಂದೇನಿಲ್ಲ. ಹಿಂದಿನ ದಿನಗಳಲ್ಲಿ ಮಹಾನ್ ಸಾಧಕರಿಗೆ ಅವರ ಅಭಿಮಾನಿಗಳು ಅಭಿನಂದನಾ ಗ್ರಂಥಗಳನ್ನು ಸಮರ್ಪಿಸುವ ಪರಿಪಾಟವಿತ್ತು. ಆದರೆ ಇಂದು ಸಾಧನೆಗಿಂತ ವಯೋಮಾನವೇ ಅಭಿನಂದನಾ ಗ್ರಂಥ ಸಮರ್ಪಣೆಗೆ ನಿರ್ದಿಷ್ಟ ಮಾನದಂಡವಾಗಿದೆ.

ADVERTISEMENT

ರಜತ ಮಹೋತ್ಸವ, ಷಷ್ಟ್ಯಬ್ದಿ, ಸಹಸ್ರ ಚಂದ್ರ ಮಾನ ದರ್ಶನ ಇಂಥವೇ ಕಾರಣಗಳನ್ನು ನೀಡಿ ಸಾವಿರಾರು ಸಂಖ್ಯೆಯಲ್ಲಿ ಅಭಿನಂದನಾ ಗ್ರಂಥಗಳು ಪ್ರಕಟವಾಗುತ್ತಿವೆ. ಅಭಿನಂದನೆಗೆ ಒಳಗಾಗುವ ವ್ಯಕ್ತಿಯೇ ಅಭಿಮಾನಿ ಬಳಗವನ್ನು ಹುಟ್ಟುಹಾಕಿ ಇಡೀ ಖರ್ಚುವೆಚ್ಚವನ್ನು ಭರಿಸುವ ಅನೇಕ ಉದಾಹರಣೆಗಳಿವೆ. ‘ನಾನು ನಿನ್ನನ್ನು ಅಭಿನಂದಿಸುತ್ತೇನೆ, ನೀನು ನನ್ನನ್ನು’ ಎನ್ನುವ ಕೊಡು- ಕೊಳ್ಳುವ ಸಂಪ್ರದಾಯವೂ ರೂಢಿಯಲ್ಲಿದೆ. ಇನ್ನು ಅಭಿನಂದನಾ ಗ್ರಂಥದ ಶೀರ್ಷಿಕೆಗೂ ಅಭಿನಂದನೆಗೆ ಒಳಗಾಗುವ ವ್ಯಕ್ತಿಯ ಬದುಕಿಗೂ ಸಂಬಂಧವೇ ಇರುವುದಿಲ್ಲ. ಬುದ್ಧ, ಗಾಂಧಿ, ಬಸವ, ಮಹಾವೀರರೆಲ್ಲ ಶೀರ್ಷಿಕೆಗಳಲ್ಲಿ ಮೈದಾಳುತ್ತಾರೆ.

ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಲು ಕರ್ನಾಟಕದಲ್ಲಿ ಸರ್ಕಾರ ಸೇರಿದಂತೆ ಅನೇಕ
ಪ್ರತಿಷ್ಠಾನಗಳು ಅಸ್ತಿತ್ವದಲ್ಲಿವೆ. ಇಂಥ ಘನಸಂಸ್ಥೆಗಳ ಪ್ರಶಸ್ತಿ ಪುರಸ್ಕಾರವನ್ನೇ ಅನುಮಾನದಿಂದ ನೋಡು ವಂತೆ ಪ್ರತಿವರ್ಷ ಪ್ರಕಟವಾಗುವ ಪುಸ್ತಕಗಳಿಗೆ ಪ್ರಶಸ್ತಿ ನೀಡಲು ರಾಜ್ಯದಲ್ಲಿ ನೂರಾರು ಸಣ್ಣಪುಟ್ಟ ಸಂಸ್ಥೆಗಳು ಹುಟ್ಟಿಕೊಂಡಿವೆ. ಸ್ಪರ್ಧೆಯಲ್ಲಿ ಭಾಗವಹಿಸಲು ಲೇಖಕ ತನ್ನ ಪ್ರಕಟಿತ ಪುಸ್ತಕದ ಮೂರು ಪ್ರತಿಗಳನ್ನು ಸಂಸ್ಥೆಗೆ ಕಳುಹಿಸಿಕೊಡಬೇಕು. ಇದರಲ್ಲಿ ನೂರಾರು ಲೇಖಕರು ಭಾಗವಹಿಸುತ್ತಾರೆ. ಸಂಸ್ಥೆಗೆ ಸಾವಿರಾರು ಸಂಖ್ಯೆಯಲ್ಲಿ ಪುಸ್ತಕಗಳು ಜಮೆಯಾಗುತ್ತವೆ. ಈ ನಡುವೆ ಪ್ರಶಸ್ತಿ ಗಾಗಿ ಲಾಬಿ ಮತ್ತು ಶಿಫಾರಸುಗಳು ಬೇರೆ. ಜಾತಿ, ಧರ್ಮ, ಸಮುದಾಯ, ಪ್ರಾಂತ್ಯ ನೇರವಾಗಿ ಪ್ರಶಸ್ತಿ ವಿತರಣೆಯಲ್ಲಿ ಮೇಲುಗೈ ಸಾಧಿಸುತ್ತವೆ.

ಈ ನಡುವೆ ವಿಶ್ವವಿದ್ಯಾಲಯಗಳು ಕೊಡಮಾಡುವ ಗೌರವ ಡಾಕ್ಟರೇಟುಗಳು ತಮ್ಮ ಮೌಲ್ಯವನ್ನೇ ಕಳೆದುಕೊಂಡಿವೆ. ಪ್ರಶಸ್ತಿಯೂ ಈಗ ಗ್ಲೋಬಲೀಕರಣ ಗೊಂಡಿದೆ. ವಿದೇಶಿ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆಯುವ ಭಾರತೀಯ ಸಾಧಕರ ಸಂಖ್ಯೆ ಹೆಚ್ಚುತ್ತಿದೆ. ಪ್ರಶಸ್ತಿಗಾಗಿ ಸಾವಿರಾರು ಡಾಲರ್‌ಗಳ ಮೊತ್ತ ಕೈ ಬದಲಾಯಿಸುತ್ತದೆ.

ಇನ್ನು ಸರ್ಕಾರದ ಕೆಲವು ಪ್ರಶಸ್ತಿಗಳ ಆಯ್ಕೆಯ ಕಸರತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಹಿಂದಿನ ದಿನದವರೆಗೂ ನಡೆಯುತ್ತದೆ. ಈಗ ಕೇಂದ್ರ ಸರ್ಕಾರ ‘ಪದ್ಮ’ ಪ್ರಶಸ್ತಿಗಳಿಗಾಗಿ ಸಾರ್ವಜನಿಕರೇ ಸಾಧಕರನ್ನು ನಾಮನಿರ್ದೇಶನ ಮಾಡುವ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಪರಿಣಾಮವಾಗಿ, ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಎಷ್ಟೋ ಸಾಧಕರು ಗೌರವಕ್ಕೆ ಪಾತ್ರರಾಗಲು ಸಾಧ್ಯವಾಗಬಹುದು. ಸರ್ಕಾರವಾಗಲೀ ಸಂಘ ಸಂಸ್ಥೆಗಳಾಗಲೀ ಸಾಧಕರನ್ನು ಗುರುತಿಸಿ ಗೌರವಿಸುವಂಥ ಸಂಪ್ರದಾಯವನ್ನು
ರೂಢಿಸಿಕೊಳ್ಳಬೇಕು. ಸಾಧಕರೇ ಮುಂದಾಗಿ ಪ್ರಶಸ್ತಿಗೆ ಅರ್ಜಿ ಗುಜರಾಯಿಸುವ ಪದ್ಧತಿ ಕೊನೆಗೊಳ್ಳಬೇಕು. ಪ್ರಶಸ್ತಿಗೆ ಅನರ್ಹರು ಆಯ್ಕೆಯಾಗುತ್ತಿದ್ದಾರೆ ಎನ್ನುವುದಕ್ಕಿಂತ ಅರ್ಹರು ವಂಚಿತರಾಗುತ್ತಿದ್ದಾರೆ ಎನ್ನುವ ಪ್ರಜ್ಞೆ ಸರ್ಕಾರ, ಸಂಘ ಸಂಸ್ಥೆಗಳು ಮತ್ತು ಶಿಫಾರಸು ಮಾಡುವ ರಾಜಕಾರಣಿಗಳಲ್ಲಿ ಮೂಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.