ಆನ್‌ಲೈನ್ ವಂಚಕರಿಂದ ಹಣ ಕಳೆದುಕೊಳ್ಳುತ್ತಿರುವವರ ಸುದ್ದಿಗಳು ಇತ್ತೀಚೆಗೆ ಪತ್ರಿಕೆಗಳಲ್ಲಿ ಮತ್ತೆ ಮತ್ತೆ ಪ್ರಕಟಗೊಳ್ಳುತ್ತಿವೆ. ಹಣದ ಆಮಿಷಕ್ಕೆ ಬಲಿಯಾಗಿ ವಿದ್ಯಾವಂತರೂ ಮೋಸ ಹೋಗುತ್ತಿದ್ದಾರೆ. ಅದೇನೇ ಇರಲಿ, ಬ್ಯಾಂಕ್‌ಗಳು ನೀಡಿರುವ ಆನ್‌ಲೈನ್ ಸೇವೆ ಮತ್ತು ಜನರ ಕೈಗೆ ಸ್ಮಾರ್ಟ್ ಫೋನ್ ಬಂದ ಮೇಲೆ ಹಣ ದೋಚಲು ವಂಚಕರಿಗೆ ಸುಲಭ ಆದಂತಿದೆ.
ಆನ್‌ಲೈನ್ ವ್ಯವಸ್ಥೆ ಬರುವ ಮುಂಚೆ ಜನಸಾಮಾನ್ಯರ ಹಣ ನಗದು ರೂಪದಲ್ಲಿ ಬ್ಯಾಂಕ್‌ಗಳಲ್ಲಿ ಸುರಕ್ಷಿತವಾಗಿತ್ತು. ಒಂದು ವೇಳೆ ಬ್ಯಾಂಕ್‌ಗಳಲ್ಲಿ ದರೋಡೆ ಆಗಿ, ಗ್ರಾಹಕರ ಠೇವಣಿ ಹಣ ಕಳುವಾದರೆ, ಅದಕ್ಕೆ ಬ್ಯಾಂಕ್‌ಗಳೇ ಜವಾಬ್ದಾರಿ ಆಗಿರುತ್ತಿದ್ದವು ಮತ್ತು ಗ್ರಾಹಕರು ತಮ್ಮ ಖಾತೆಯ ನಿರ್ವಹಣೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಯಾವಾಗ ಬ್ಯಾಂಕ್‌ಗಳು ಗ್ರಾಹಕರ ಖಾತೆಯ ಸುಲಭ ನಿರ್ವಹಣೆಗಾಗಿ ಆನ್‌ಲೈನ್ ವ್ಯವಸ್ಥೆ ಅಳವಡಿಸಿಕೊಂಡವೋ ಅಂದಿನಿಂದ ವಂಚನೆಗಳೂ ಹೆಚ್ಚಾಗತೊಡಗಿವೆ.
ಕಷ್ಟಪಟ್ಟು ಸಂಪಾದಿಸಿದ ಹಣ ಬ್ಯಾಂಕ್‌ಗಳಲ್ಲಿ ಸುರಕ್ಷಿತವಾಗಿರುತ್ತದೆ ಎಂದು ನಂಬಿ, ನಮ್ಮ ಖಾತೆಯಲ್ಲಿ ಹಣ ಇರಿಸುತ್ತೇವೆ. ಬ್ಯಾಂಕಿನವರೂ ಇಪ್ಪತ್ತನಾಲ್ಕು ಗಂಟೆಯೂ ನಮ್ಮ ಖಾತೆಯ ಮೇಲೆ ನಿಗಾ ಇರಿಸುತ್ತಾರೆ ಎಂದು ನಂಬಿದ್ದೇವೆ. ಅವರು ಖಾತೆಯ ಸುರಕ್ಷತೆ ವಿಷಯದಲ್ಲಿ ಪರಿಣತಿಯನ್ನೂ ಹೊಂದಿದವರಾಗಿರುತ್ತಾರೆ. ನಮ್ಮದೇ ಆದ ಪಾಸ್‌ವರ್ಡ್, ಪ್ರೊಫೈಲ್ ಪಾಸ್‌ವರ್ಡ್, ಕ್ಯಾಪ್ಚ, ಇತ್ಯಾದಿ ಸುರಕ್ಷಿತ ಸಂಕೇತಗಳನ್ನು ನಮೂದಿಸಿ ನಮ್ಮ ಖಾತೆಯನ್ನು ನಿರ್ವಹಿಸುತ್ತಿರುತ್ತೇವೆ. ಒಂದು ವೇಳೆ, ಯಾವುದಾದರೊಂದು ಸಂಖ್ಯೆ ತಪ್ಪಾಗಿ ನಮೂದಿಸಿದರೆ ಆನ್‌ಲೈನ್ ವ್ಯವಹಾರ ಮುಂದುವರಿಸುವುದು ಸಾಧ್ಯವಿಲ್ಲ. ಹೀಗೆ ಮೂರು ಬಾರಿ ತಪ್ಪಾಗಿ ನಮೂದಿಸಿದರೆ ಖಾತೆ ಸ್ಥಗಿತಗೊಳ್ಳುತ್ತದೆ. ನಾವು ಮತ್ತೆ ಖಾತೆ ನಿರ್ವಹಣೆ ಮಾಡಬೇಕೆಂದರೆ ಒಂದು ದಿನ ಕಾಯಬೇಕು. ಇದರ ಜೊತೆಗೆ ಆರು ತಿಂಗಳಿಗೊಮ್ಮೆ ನಮ್ಮ ಪಾಸ್‌ವರ್ಡ್ ಮತ್ತು ಪ್ರೊಫೈಲ್ ಪಾಸ್‌ವರ್ಡ್ ಬದಲಾವಣೆ ಮಾಡಲು ಬ್ಯಾಂಕಿನವರೇ ಸೂಚಿಸುತ್ತಾರೆ. ಅಲ್ಲದೆ ನಮ್ಮ ಸ್ಮಾರ್ಟ್ ಫೋನನ್ನು ಕೂಡ ಆಗಾಗ ಅಪ್‌ಡೇಟ್ ಮಾಡುತ್ತಲೇ ಇರಬೇಕಾಗುತ್ತದೆ. ಸ್ಮಾರ್ಟ್ ಫೋನ್ ಹಳೆಯ ಮಾದರಿಯದಾಗಿದ್ದರೆ, ಕೆಲವು ಬ್ಯಾಂಕ್‌ಗಳ ಆ್ಯಪ್‌ಗಳು ಕಾರ್ಯ ನಿರ್ವಹಿಸದೆ ಸ್ಥಗಿತಗೊಳ್ಳುತ್ತವೆ. ಹೀಗೆ ಬ್ಯಾಂಕ್‌ನ ಆನ್‌ಲೈನ್ ವ್ಯವಹಾರದ ಸುರಕ್ಷತೆ ಹಲವು ಆಯಾಮಗಳನ್ನು ಒಳಗೊಂಡಿರುತ್ತದೆ.
ಏನೆಲ್ಲಾ ಸುರಕ್ಷತೆ ಇದ್ದರೂ ಕೇವಲ ಒಂದು ಒಟಿಪಿ ಅಥವಾ ಯಾವುದೋ ಒಂದು ಲಿಂಕಿನ ಮೇಲೆ ಒಮ್ಮೆ ಕ್ಲಿಕ್ ಮಾಡಿದರೆ ನಮ್ಮ ಖಾತೆಯಲ್ಲಿರುವ ಹಣ ಕಳುವಾಗುತ್ತದೆ ಎಂದರೆ, ವಂಚಕರು ಬ್ಯಾಂಕಿನ ಬುದ್ಧಿವಂತ ಸಿಬ್ಬಂದಿಗಿಂತ ಹೆಚ್ಚು ಚಾಲಾಕಿಗಳಾಗಿರುತ್ತಾರೆ ಎಂದು ಭಾವಿಸಬೇಕಾಗುತ್ತದೆ. ಅಂದರೆ, ಇಲ್ಲಿ ಬ್ಯಾಂಕಿನವರೇ ವಿಫಲರಾದಂತೆ. ಹೀಗಿದ್ದಾಗ ಗ್ರಾಹಕರು ಯಾವ ನಂಬಿಕೆಯ ಮೇಲೆ ಬ್ಯಾಂಕಿನಲ್ಲಿ ಹಣ ಇಡಬೇಕು?
ನಮ್ಮ ಖಾತೆಯನ್ನು ನಿರ್ವಹಿಸುವ ಬ್ಯಾಂಕ್, ಗ್ರಾಹಕರಿಂದ ಹಲವು ರೂಪದಲ್ಲಿ ಬದ್ಧತೆಯನ್ನು ಅಪೇಕ್ಷಿಸುತ್ತದೆ. ನಮ್ಮ ಖಾತೆಯಿಂದ ನಾವೇ ವಹಿವಾಟು ನಿರ್ವಹಿಸಿದರೂ, ಖಾತೆಯ ನಿರ್ವಹಣೆಗೆ ಎಂದು ಶುಲ್ಕವನ್ನು ಪಡೆಯುತ್ತಾರೆ. ನಾವು ಆನ್‌ಲೈನ್‌ನಲ್ಲಿ ಶಾಲಾ– ಕಾಲೇಜಿನ ಶುಲ್ಕ, ಸಿನಿಮಾ ಅಥವಾ ರೈಲು ಟಿಕೆಟ್ ಇತ್ಯಾದಿಗಳನ್ನು ಖರೀದಿಸಿದರೆ ಅದಕ್ಕೆ ಹೆಚ್ಚುವರಿಯಾಗಿ ಶುಲ್ಕವನ್ನು ಪಡೆಯುತ್ತದೆ. ಬ್ಯಾಂಕಿನ ಚೆಕ್‌ನಲ್ಲಿ ಸಹಿ ಮಾಡಿದವರು ಸಹಿಯ ಒಂದು ಸಣ್ಣ ಗೆರೆ ತಪ್ಪಾಗಿ ಬರೆದರೆ ಸಹಿ ಮಾಡಿದವರಿಗೂ ಮತ್ತು ಚೆಕ್ ಪಡೆದು ಸಲ್ಲಿಸಿದವರಿಗೂ ದಂಡ ವಿಧಿಸಲಾಗುತ್ತದೆ. ಖಾತೆಯಲ್ಲಿ ಕನಿಷ್ಠ ಮೊತ್ತಕ್ಕಿಂತ ಕಡಿಮೆ ಹಣ ಇದ್ದರೂ ದಂಡ ವಿಧಿಸಲಾಗುತ್ತದೆ.
ನಾವು ಬ್ಯಾಂಕಿನಿಂದ ಗೃಹಸಾಲವನ್ನೋ ವೈಯಕ್ತಿಕ ಸಾಲವನ್ನೋ ಪಡೆದಲ್ಲಿ, ಆ ಹಣದ ಭದ್ರತೆಗಾಗಿ ನಮ್ಮ ಯಾವುದಾದರೊಂದು ಆಸ್ತಿಯನ್ನು ಅಡಮಾನ ಇಟ್ಟುಕೊಳ್ಳುವುದರ ಜೊತೆಗೆ ಒಂದಿಬ್ಬರು ವ್ಯಕ್ತಿಗಳಿಂದ ಜಾಮೀನನ್ನೂ ಬ್ಯಾಂಕ್ ಪಡೆಯುತ್ತದೆ. ಅಷ್ಟಾದರೂ ನಮ್ಮ ಮೇಲೆ ನಂಬಿಕೆ ಇಡದೆ, ನಮ್ಮಿಂದ ಜೀವ ವಿಮೆಯನ್ನೂ ಮಾಡಿಸಿಕೊಳ್ಳುತ್ತಾರೆ. ತಾವು ನೀಡುವ ಹಣಕ್ಕೆ ಎಷ್ಟು ಬೇಕೋ ಅಷ್ಟು ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವ ಬ್ಯಾಂಕ್‌ಗಳು, ನಮ್ಮ ಹಣದ ನಿರ್ವಹಣೆ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಹೆಚ್ಚಿನ ಹೊಣೆಗಾರಿಕೆ ವಹಿಸುವುದಿಲ್ಲ.
ಆನ್‌ಲೈನ್ ವಂಚನೆಗಳಿಗೆ ಸಂಬಂಧಿಸಿದಂತೆ ಜನಸಾಮಾನ್ಯರಲ್ಲಿ ಕೆಲವು ಅನುಮಾನಗಳಿವೆ. ಅವುಗಳಲ್ಲಿ ಮುಖ್ಯವಾದುದು, ಗ್ರಾಹಕನೊಬ್ಬ ಆನ್‌ಲೈನ್ ವಂಚನೆಗೊಳಗಾಗುವ ಪ್ರಸಂಗಗಳಲ್ಲಿ ಬ್ಯಾಂಕೊಂದರ ಹೊಣೆಗಾರಿಕೆ ಯಾವ ಬಗೆಯದು ಎನ್ನುವುದು. ಆ ವಂಚನೆಗೆ ಬ್ಯಾಂಕ್‌ನ ಸುರಕ್ಷತಾ ಕ್ರಮಗಳಲ್ಲಿನ ಲೋಪವೂ ಒಂದು ಕಾರಣ ಆಗಿರುವುದಿಲ್ಲವೆ? ವಂಚಕರು ಬಹುತೇಕ ಸಂದರ್ಭಗಳಲ್ಲಿ ನಮ್ಮ ದೇಶದ ಯಾವುದೋ ಮೂಲೆಯಲ್ಲಿರುತ್ತಾರೆ. ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸರು ಒಟ್ಟಾಗಿ ಅವರನ್ನು ಪತ್ತೆ ಮಾಡುವುದು ಸಾಧ್ಯವಿಲ್ಲವೆ? ನಮ್ಮ ಬ್ಯಾಂಕ್ ಖಾತೆಯನ್ನು ಯಾರು ಬೇಕಾದರೂ ಹ್ಯಾಕ್ ಮಾಡಬಹುದು ಎನ್ನುವುದಾದರೆ ಬ್ಯಾಂಕ್‌ಗಳ ಬಗ್ಗೆ ಗ್ರಾಹಕರು ಯಾಕಾಗಿ ನಂಬಿಕೆ ಇಡಬೇಕು?
ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಬ್ಯಾಂಕ್‌ಗಳ ಕಾರ್ಯ ನಿರ್ವಹಣೆಯ ಪರಾಮರ್ಶೆಯೂ ಅಗತ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.