ಬಸವಣ್ಣನಿಗಿಂತಲೂ ಹೆಚ್ಚು ಸಾರ್ವಜನಿಕವಾದ ವ್ಯಕ್ತಿಯನ್ನಾಗಲಿ, ವ್ಯಕ್ತಿತ್ವವನ್ನಾಗಲಿ ಕಲ್ಪಿಸಿಕೊಳ್ಳುವುದು ಕಷ್ಟವೇ ಸರಿ. ಜನರನ್ನು ಬಿಟ್ಟು ಆತನಿಲ್ಲ, ಆತನನ್ನು ಬಿಟ್ಟು ಜನರಿಲ್ಲ. ಒಬ್ಬ ವ್ಯಕ್ತಿ ಹೀಗಾದಾಗ ಆತನ ಮಾತು– ಮನಸ್ಸು ಕೂಡ– ತನ್ನೆಲ್ಲ ಅರ್ಥಛಾಯೆಗಳಲ್ಲಿ ಸಾರ್ವಜನಿಕವಾಗದೆ ಗತ್ಯಂತರವೇ ಇಲ್ಲ. ಸಾರ್ವಜನಿಕತೆಗೆ ಒಂದು ಲೋಲುಪಗುಣ ಇದೆ. ಹೀಗಾಗಿ, ಆ ಮಾತು ಕೂಡ ಈ ಲೋಲುಪತೆಯ ಲೇಪನದಿಂದ ಪಾರಾಗುವುದು ಕಷ್ಟ. ಇದರ ‘ಸಾರ್ವಜನಿಕ’ ಪರಿಣಾಮಗಳನ್ನು ವಿವರಿಸಬೇಕಾದ ಅಗತ್ಯವಿಲ್ಲ.
‘ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ, ಕುಂದು ಹೆಚ್ಚ ನುಡಿವೆ’ ಎಂಬ ಮಾತು ಬಸವಣ್ಣನಲ್ಲೇ ಬಂದಿದೆ. ಇದು ತನ್ನ ಮಾತನ್ನೂ ಅಂತೆಯೇ ಮನವನ್ನೂ ತಾನೇ ನೋಡಿಕೊಂಡು ಆಡಿದ ಮಾತು. ಹೀಗೆ ಮಾತು ಬೇರೊಂದು ಬಗೆಯದಾಗಬೇಕಾದರೆ ಸಾರ್ವಜನಿಕವೆಂಬುದರ ಪರಿಭಾವನೆಯ ಸ್ವರೂಪವೂ ಬೇರೊಂದೇ ಆಗಬೇಕಾಗುತ್ತದೆ. ಬಸವಣ್ಣನಲ್ಲಿ ಸಾರ್ವಜನಿಕತೆ, ವೈಯಕ್ತಿಕತೆಗಳೆರಡೂ ಬೇರೊಂದು ನೆಲೆಯಲ್ಲಿ ಕಟ್ಟಲ್ಪಡುತ್ತವೆ. ಇದರ ವಿಸ್ತರಣೆ ಎಂಬಂತೆ ಮಾತಿನ ಕಟ್ಟಡವೂ ವಿಶಿಷ್ಟವೇ ಆಗುತ್ತದೆ. ಇದನ್ನು ಹೀಗೆ ವಿವರಿಸಿಕೊಳ್ಳಲು ಪ್ರಯತ್ನಿಸಬಹುದು.
ಬಸವಣ್ಣನಲ್ಲಿ ‘ಕೂಡಲಸಂಗಮ’ ಎನ್ನುವುದು ಎಲ್ಲ ಅರ್ಥಗ್ರಹಿಕೆಗಳ, ಎಲ್ಲ ಮೌಲ್ಯನಿರ್ಣಯಗಳ, ಅಷ್ಟೇಕೆ ಎಲ್ಲ ‘ಕಟ್ಟುವಿಕೆ’ಗಳ ಮೂಲಭೂತ ಮಾನದಂಡ. ಸಕಲ ಅಸ್ತಿತ್ವಗಳ ಮೂಲಸೆಲೆಯೂ ತಳಹದಿಯೂ ಆಗಿರುವ ಜಂಗಮವೆನ್ನುವಂಥದ್ದು ಕೂಡ ಕೂಡಲಸಂಗಮದ ಆಧಾರದ ಮೇಲೆಯೇ ನಿಂತಿರುವಂಥದ್ದು. ಪ್ರಾರಂಭಿಕವಾಗಿ ಕೂಡಲಸಂಗಮದೇವನು ‘ಒಡಲಿಲ್ಲದ ನಿರಾಳ ಕರ್ತೃ’ವಾದವನು. ಈತನು ತನ್ನನ್ನು ತಾನು ಪ್ರಕಟಿಸಿಕೊಳ್ಳುವುದೇ ‘ಜಂಗಮಮುಖ ಲಿಂಗ’ವಾಗುವುದರ ಮೂಲಕ. ಆದರೆ ಈ ಪ್ರಕಟಗೊಳ್ಳುವಿಕೆ ಎನ್ನುವುದು ಕೂಡ ವ್ಯಕ್ತಿನಿರಪೇಕ್ಷ ನೆಲೆಯದಲ್ಲ. ಅದು ವಾಸ್ತವಗೊಂಡು ಜೀವತಳೆಯುವುದೇ ಒಂದು ವಿಶಿಷ್ಟವಾದ ವ್ಯಕ್ತಿಗತ ನೆಲೆಯಲ್ಲಿ.
ನಿನ್ನ ನಾನರಿಯದ ಮುನ್ನ ನೀನೆಲ್ಲಿದ್ದೆ?
ಎನ್ನೊಳಗಿದ್ದು ನಿನ್ನ ತೋರಲಿಕೆ ನೀನೇ ರೂಪಾದೆ.
ಇನ್ನು ಜಂಗಮವೆ ಲಿಂಗವೆಂದು ನಂಬಿದೆ ಕೂಡಲಸಂಗಮದೇವ.
ಇಲ್ಲಿ ನೀನು–ನಾನುಗಳಿವೆ. ಆದರೆ ಇವೆರಡೂ ಪರಸ್ಪರ ಪೃಥಕ್ಕಾದವುಗಳಲ್ಲ. ನಿನ್ನೊಳಗೆ ನಾನಿದೆ, ನನ್ನೊಳಗೆ ನೀನಿದೆ. ಅರಿಯದ ಮುನ್ನ ಇಲ್ಲದಂತಿದ್ದ ‘ನೀನು’ ತೋರುವ ಹಂಬಲದಿಂದ ರೂಪವಾಗುತ್ತದೆ. ರೂಪವಾಗುವುದೆಂದರೆ ಜಂಗಮವಾಗುವುದು. ಜಂಗಮವಾಗುವುದರ ಮೂಲಕವೇ ಲಿಂಗವಾದರೂ ತನ್ನತನವನ್ನು ವಾಸ್ತವಗೊಳಿಸಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಜಂಗಮವೂ ಲಿಂಗವೂ ತನ್ನತನದ ಅನುಸಂಧಾನದ ವಿಭಿನ್ನ ಹಾಗೂ ಅಭಿನ್ನ ಆಯಾಮಗಳೇ ಆಗಿವೆ.
ಜಂಗಮದರ್ಶನಕ್ಕೆ ಸಂಬಂಧಿಸಿದಂತೆಯೇ ಬಸವಣ್ಣನ ತಾತ್ವಿಕತೆಯಲ್ಲಿ ಹಲವು ಒಳಸುಳಿಗಳಿವೆ. ಲಿಂಗವನ್ನು ಜಂಗಮವಾಗಿಯೇ ಸಂಧಿಸಬೇಕಾದ ಅನಿವಾರ್ಯವನ್ನು ಅದು ಒಂದು ತಾತ್ವಿಕ ಅಗತ್ಯವನ್ನಾಗಿ ಮಾಡುತ್ತದೆ. ಅದಕ್ಕೆ ತಕ್ಕಂತೆ ಲಿಂಗವೂ ಪ್ರತ್ಯಕ್ಷದರ್ಶನದಿಂದ ತನ್ನನ್ನು ಹೊರತುಪಡಿಸಿಕೊಳ್ಳಲು ಏನೆಲ್ಲವನ್ನೂ ಮಾಡಲು ಸಿದ್ಧವಿರುತ್ತದೆ. ಇಷ್ಟಲ್ಲದೆ ‘ಸಂಗಮದೇವ’ನನ್ನು ನೇರವಾಗಿ ಸಂಧಿಸುವೆನೆನ್ನುವುದೇ ಬಸವಣ್ಣನ ಪ್ರಕಾರ ‘ಅಹಂಕಾರವ ಮಾಡಿ’ದಂತೆ. ಏಕೆಂದರೆ ಸಂಗನು ‘ಕಂಡಹರೆಂದು ಕಣ್ಗೆ, ಕೇಳಿಹರೆಂದು ಕಿವಿಗೆ, ಮುಟ್ಟಿಹರೆಂದು ಕೈಗೆ, ನೆನೆದಹರೆಂದು ಮನಕ್ಕೆ ...’ ಮರೆಮಾಡಿಕೊಂಡುಬಿಟ್ಟಿದ್ದಾನೆ. ಇಷ್ಟಾದರೂ ‘ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ’. ಆದ್ದರಿಂದಲೇ ಬಸವಣ್ಣನಲ್ಲಿ ಲಿಂಗದ ಅಗತ್ಯಗಳೆಲ್ಲವೂ ಜಂಗಮದ ಸಮರ್ಪಣೆಯಾಗಿ ಪರಿವರ್ತಿತವಾಗುತ್ತವೆ. ಹೀಗಾಗಿಯೇ,
ನಯನದಾಹಾರವ ಜಂಗಮವ ನೋಡಿಸುವೆ
ಶ್ರೋತೃದಾಹಾರವ ಜಂಗಮವ ಕೇಳಿಸುವೆ
ಘ್ರಾಣದಾಹಾರವ ಜಂಗಮವ ವಾಸಿಸುವೆ
ಜಿಹ್ವೆಯಾಹಾರವ ಜಂಗಮವನೂಡಿಸುವೆ
ತ್ವಚದಾಹಾರವ ಜಂಗಮಕ್ಕೆ ಹೊದ್ದಿಸುವೆ...
ಲಿಂಗಜಂಗಮಗಳ ಸಮೀಕರಣದ ಮೂಲಕ ಅಂಗದ ವಿಕಾಸವು ಬಸವಣ್ಣನಲ್ಲಿ ಅತ್ಯಂತ ಸಹಜವಾದ ಮಾನವೀಕರಣದ ಸಂಗತಿಯಾಗಿರುವುದು ಒಂದು ದೊಡ್ಡ ವಿಸ್ಮಯವೆಂದೇ ಹೇಳಬೇಕಾಗಿದೆ.
ಇದರ ಮುಂದುವರಿಕೆಯಾಗಿ ಗಮನಿಸಿಕೊಳ್ಳಬೇಕಾದ ಸಂಗತಿಯೊಂದಿದೆ. ಅದೆಂದರೆ ಸಾಧಾರಣ ವ್ಯಾವಹಾರಿಕ ನೆಲೆಯಲ್ಲಿ, ಅರ್ಥಾತ್ ನಿರ್ದಿಷ್ಟಪಡಿಸಿ ಹೇಳುವುದಾದರೆ ಸಾಮಾನ್ಯ ‘ಸಾರ್ವಜನಿಕ’ದಲ್ಲಿ, ನಾವು ಯಾವುದನ್ನೆಲ್ಲ ನುಡಿಯ ವಿಭಿನ್ನ ವರಸೆಗಳೆಂದು ಗುರುತಿಸುತ್ತೇವೆಯೋ ಅವೆಲ್ಲ ಇಲ್ಲಿ ಒಂದು ಬಗೆಯ ವಿಶಿಷ್ಟ ವಿಲೀನೀಕರಣಕ್ಕೆ ಒಳಪಡುತ್ತವೆ. ನಿದರ್ಶನಕ್ಕೆ ನೋಡುವುದಾದರೆ, ಇಲ್ಲಿ ‘ಹೇಳುವುದು’ ಬೇರೆಯಲ್ಲ, ‘ಹೇಳಿಕೊಳ್ಳುವುದು’ ಬೇರೆಯಲ್ಲ. ಆದ್ದರಿಂದಲೇ ಬಸವಣ್ಣನಲ್ಲಿ ಮೇಲ್ನೋಟಕ್ಕೆ ‘ಪರಗತ’ಗಳೆಂದು ತೋರು
ವಂಥ ನುಡಿಗಳೂ ಸ್ವರೂಪತಃ ‘ಸ್ವಗತ’ಗಳೇ ಆಗಿರುತ್ತವೆ. ಕೂಡಲಸಂಗಮದೇವನೊಂದಿಗಿನ ಸಂವಾದಾ
ತ್ಮಕ ಮಾತುಕತೆಗಳಲ್ಲಿಯೂ ತನ್ನನ್ನು ತಾನು ಉದ್ದೇಶಿಸಿಕೊಳ್ಳುವ ಗುಣವೇ ತೋರುತ್ತದೆ. ‘ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’ ಎಂಬ ಮಾತಿನಲ್ಲಿಯೂ ಅನವರತವೂ ತನ್ನ ನುಡಿಯನ್ನು ತಾನೇ ಪರೀಕ್ಷಿಸಿ
ಕೊಳ್ಳುವ ನಿಕಷವೊಂದರ ಸ್ಥಾಪನೆಯಾಗುತ್ತದೆ. ಇಷ್ಟಲ್ಲದೆ ಇದು ಭಕ್ತನ ನುಡಿಯೂ ಹೌದು, ಭಕ್ತಿಯ ನುಡಿಯೂ ಹೌದು. ಬಸವಣ್ಣನೇ ‘ಹೇಳುವಂತೆ’ (!) –
ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ.
ನಡೆಯೊಳಗೆ ನುಡಿಯ ಪೂರೈಸುವೆ;
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದರೆ
ಎನ್ನನದ್ದಿ ನೀನೆದ್ದುಹೋಗು, ಕೂಡಲಸಂಗಮದೇವಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.