ADVERTISEMENT

ಸಂಗತ: ಅಕ್ಕಿಗಾಗಿ ಹಕ್ಕಿನ ಯುದ್ಧ

ಬಾಸ್ಮತಿ ಅಕ್ಕಿಯ ಮೇಲಿನ ಹಕ್ಕುಸ್ವಾಮ್ಯಕ್ಕಾಗಿ ಭಾರತ– ಪಾಕಿಸ್ತಾನ ಹೋರಾಡುತ್ತಿವೆ

ಶ್ರೀಗುರು
Published 29 ಡಿಸೆಂಬರ್ 2020, 19:31 IST
Last Updated 29 ಡಿಸೆಂಬರ್ 2020, 19:31 IST
Sangata 30.12.2020
Sangata 30.12.2020   

ಗಡಿಯಲ್ಲಿ ನಿರಂತರವಾಗಿ ಏನಾದರೊಂದು ತಗಾದೆ ತೆಗೆಯುವ ಪಾಕಿಸ್ತಾನ, ಈಗ ಭಾರತದ ವಿರುದ್ಧ ಅಂತರರಾಷ್ಟ್ರೀಯ ಅಕ್ಕಿ ಮಾರುಕಟ್ಟೆಯಲ್ಲಿ ಹೊಸ ಯುದ್ಧ ಸಾರಿದೆ. ಹಿಮಾಲಯದ ತಪ್ಪಲಿನ ಜಮ್ಮು- ಕಾಶ್ಮೀರ, ಪಂಜಾಬ್, ಹರಿಯಾಣ, ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ ಬೆಳೆಯುವ ಸುವಾಸನೆಯುಕ್ತ ಬಾಸ್ಮತಿ ಅಕ್ಕಿಗಾಗಿ ಯುರೋಪಿನ ಮಾರುಕಟ್ಟೆಯಿಂದ ಭೌಗೋಳಿಕ ಸೂಚ್ಯಂಕ- ಜಿಐಟ್ಯಾಗ್ (ಜಿಯಾಗ್ರಫಿಕಲ್ ಇಂಡಿಕೇಶನ್ ಟ್ಯಾಗ್) ಪಡೆಯಲು ಭಾರತ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿರುವ ಪಾಕಿಸ್ತಾನ, ‘ಗುಣಮಟ್ಟದ ಬಾಸ್ಮತಿ ಅಕ್ಕಿಯನ್ನು ನಾವೂ ಬೆಳೆಯುತ್ತೇವೆ, ಜಿಐಟ್ಯಾಗ್‍ನ ಹಕ್ಕು ನಮಗೂ ಇದೆ’ ಎಂದು ಐರೋಪ್ಯ ಒಕ್ಕೂಟದ ಮುಂದೆ ಪ್ರತಿ ಅಹವಾಲು ಸಲ್ಲಿಸಿದೆ. ಲಕ್ಷಾಂತರ ಟನ್ ಅಕ್ಕಿಯನ್ನು ರಫ್ತು ಮಾಡುವ ಎರಡೂ ದೇಶಗಳ ಹಕ್ಕಿನ ಜಗಳ ಸಾರ್ವಜನಿಕವಾಗಿ ಅಪಾರ ಕುತೂಹಲ ಕೆರಳಿಸಿದೆ.

ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘದ ಪ್ರಕಾರ, ಕಳೆದ ವರ್ಷ ಅತಿ ಹೆಚ್ಚಿನ ಮೌಲ್ಯದ ಬಾಸ್ಮತಿ ಅಕ್ಕಿಯನ್ನು ಅಮೆರಿಕ, ಮಧ್ಯಪ್ರಾಚ್ಯ ದೇಶಗಳಿಗೆ ಮಾರಿರುವ ದೇಶಗಳಲ್ಲಿ ಭಾರತವೇ ನಂಬರ್ ಒನ್. ಆದರೆ ಆಹಾರ ಆಮದಿನ ವಿಷಯದಲ್ಲಿ ಅತ್ಯಂತ ಕಠಿಣ ನಿಯಮ ಅನುಸರಿಸುತ್ತಿರುವ ಯುರೋಪ್ ಸಮುದಾಯವು ಭಾರತದಿಂದ ರಫ್ತಾಗುವ ಅಕ್ಕಿಯಲ್ಲಿ ಕೀಟನಾಶಕ ಟ್ರೈಸಿಲಾಜೋಲ್‍ನ ಅಂಶ ಹೆಚ್ಚಿದೆ ಎಂದು ಹೇಳಿ, ಕಡಿಮೆ ವಿಷಕಾರಿ ಎಂಬ ಕಾರಣಕ್ಕೆ ಪಾಕಿಸ್ತಾನದಿಂದ ಬಾಸ್ಮತಿ ಅಕ್ಕಿಯನ್ನು ಮೂರು ವರ್ಷ ಗಳಿಂದ ಖರೀದಿಸುತ್ತಿದೆ. ರಫ್ತಿನಲ್ಲಿ ಎರಡನೆಯ ಸ್ಥಾನದಲ್ಲಿರುವ ಪಾಕಿಸ್ತಾನ ಪರಿಸ್ಥಿತಿಯ ಲಾಭ ಪಡೆದು ತನ್ನ ರಫ್ತಿನ ಪ್ರಮಾಣವನ್ನು ಎರಡು ಪಟ್ಟು ಹೆಚ್ಚಿಸಿಕೊಂಡಿದೆ.

ಒಂದು ವಸ್ತು ಅಥವಾ ಉತ್ಪನ್ನವು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಹುಟ್ಟಿ ಅಲ್ಲಿನ ನಿರ್ದಿಷ್ಟ ಗುಣಮಟ್ಟ, ಗೌರವ, ಸ್ಥಾನಮಾನ ಮತ್ತು ನೆಲಮೂಲದ ಗುಣಲಕ್ಷಣಗಳನ್ನು ಹೊಂದಿದ್ದರೆ ಅದಕ್ಕೆ ಜಿಐಟ್ಯಾಗ್ ಸಿಗುತ್ತದೆ. ಒಮ್ಮೆ ಸಿಗುವ ಸೂಚ್ಯಂಕದ ಮಾನ್ಯತೆ ಹತ್ತು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ಯಾವುದೇ ಉತ್ಪನ್ನಕ್ಕೆ ದೊರಕುವ ಜಿಐಟ್ಯಾಗ್, ಉತ್ಪನ್ನದ ದುರ್ಬಳಕೆಯನ್ನೂ ತಡೆಯುತ್ತದೆ. ಪೇಟೆಂಟ್, ಕಾಪಿರೈಟ್‍ನಂತೆ ಜಿಐ ಕೂಡ ಒಂದು ಬಗೆಯ ಬೌದ್ಧಿಕ ಹಕ್ಕುಸ್ವಾಮ್ಯ.

ADVERTISEMENT

ಜಿಐ ಇರುವುದು ಬರಿಯ ವಾಣಿಜ್ಯ ಉದ್ದೇಶಗಳಿಗಲ್ಲ, ಅದು ಆಯಾ ಭಾಗದ ಜನಜೀವನ, ಸಂಸ್ಕೃತಿ, ಪರಂಪರೆಯ ಭಾಗ ಎನ್ನುತ್ತಾರೆ ತಜ್ಞರು. ರಾಜ್ಯಗಳ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಸಹ ಜಿಐಟ್ಯಾಗ್ ನೀಡುತ್ತಿದ್ದು, ಬಾಸ್ಮತಿಯೂ ಸೇರಿ ಇದುವರೆಗೆ 300ಕ್ಕೂ ಹೆಚ್ಚು ವಸ್ತು-ಉತ್ಪನ್ನಗಳಿಗೆ ಜಿಐಟ್ಯಾಗ್ ನೀಡಿದೆ. ಚನ್ನಪಟ್ಟಣದ ಗೊಂಬೆ, ಡಾರ್ಜಿಲಿಂಗ್‍ನ ಚಹಾ, ಕಾಶ್ಮೀರದ ಪಶ್ಮಿನಾ, ಹೈದರಾಬಾದ್‍ನ ಹಲೀಮ್, ತಿರುಪತಿಯ ಲಡ್ಡು, ಮಹಾರಾಷ್ಟ್ರದ ವರ್ಲಿ ಚಿತ್ರಕಲೆ, ಬ್ಯಾಡಗಿ ಮೆಣಸು, ಧಾರವಾಡ ಪೇಢ, ಗೋವಾದ ಫೆನ್ನಿ... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ವಿದೇಶಗಳಿಂದ ಜಿಐ ಪಡೆಯುವುದಕ್ಕೂ ಮುಂಚೆ ತನ್ನ ದೇಶದ ಜಿಐ ಹೊಂದಿರಬೇಕೆಂಬ ನಿಯಮವಿದೆ. ಪಾಕಿಸ್ತಾನ ತನ್ನ ಬಾಸ್ಮತಿ ಅಕ್ಕಿಗೆ ಇನ್ನೂ ಜಿಐಟ್ಯಾಗ್ ನೀಡಿಲ್ಲ. ಹೆಚ್ಚಿನ ತೇವಾಂಶದ ವಾತಾವರಣ ಮತ್ತು ಅಧಿಕ ಕಾರ್ಬನ್ ಹೊಂದಿರುವ ಮಣ್ಣಿನಲ್ಲಿ ಉದ್ದನೆಯ ಎಸಳಿನ ಬಾಸ್ಮತಿ ಫಸಲು ಚೆನ್ನಾಗಿ ಬರುತ್ತದೆ. ಸಾಮಾನ್ಯ ಅಕ್ಕಿಗಿಂತ ಕಡಿಮೆ ನೀರು, ಯೂರಿಯ ಬೇಡುತ್ತದೆ ಮತ್ತು ಅದರ ಕೂಳೆಯನ್ನು ಸುಡದೆ ಮೇವನ್ನಾಗಿ ಉಪಯೋಗಿಸುವುದರಿಂದ ಬಾಸ್ಮತಿ ಬೆಳೆಯುವುದೇ ಪರಿಸರಸ್ನೇಹಿ ಕೆಲಸ ಎನ್ನಲಾಗುತ್ತದೆ.

ಜಿಐಟ್ಯಾಗ್‍ಗಾಗಿ ಒಂದೆಡೆ ಪಾಕಿಸ್ತಾನದೊಂದಿಗೆ ಹೋರಾಡುತ್ತಿದ್ದೇವೆ. ಇನ್ನೊಂದೆಡೆ, ದುಬಾರಿ ಬೆಲೆಯ ಬೀಜ, ಗೊಬ್ಬರದ ಕಾರಣದಿಂದ ಮತ್ತು ಸರ್ಕಾರದ ಬೆಂಬಲ ಬೆಲೆ ಸಿಗದಿರುವುದರಿಂದ ಹೈರಾಣಾಗಿರುವ ರೈತರು ಬಾಸ್ಮತಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ‘ಸರ್ಕಾರ ಸಾಮಾನ್ಯ ಅಕ್ಕಿಗೆ ಬೆಂಬಲ ಬೆಲೆ ನೀಡಿ ಖರೀದಿಸುತ್ತದೆ. ಬಾಸ್ಮತಿಗೆ ಆ ಭಾಗ್ಯವಿಲ್ಲ. ಬೆಳೆದ ಬೆಳೆಯನ್ನು ನಾವೇ ಮಾರಬೇಕು. ಮಾರುಕಟ್ಟೆಯ ಏರಿಳಿತಗಳಿಂದ ನಮಗೆ ಲಾಭವಾಗುವುದು ಅಷ್ಟರಲ್ಲೇ ಇದೆ. ನಾವೇನೂ ಇದನ್ನು ಹೆಮ್ಮೆಯಿಂದ ಬೆಳೆಯುತ್ತಿಲ್ಲ, ಹೊಟ್ಟೆಪಾಡಿಗಾಗಿ ಬೆಳೆಯುತ್ತೇವೆ’ ಎನ್ನುತ್ತಿದ್ದಾರೆ.

1766ರಷ್ಟು ಹಿಂದಿನ ಪಂಜಾಬಿ ಕಥಾನಕ ‘ಹೀರ- ರಾಂಜಾ’ದಲ್ಲೂ ಬಾಸ್ಮತಿ ಅಕ್ಕಿಯ ಪ್ರಸ್ತಾಪ ಇರುವುದನ್ನು ಭಾರತ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ. ತನ್ನ ಭೌಗೋಳಿಕ ಪ್ರದೇಶ, ವಾಯುಗುಣಗಳು ಬಾಸ್ಮತಿ ಬೆಳೆಗೆ ಎಷ್ಟು ಪೂರಕ ಎಂಬುದಕ್ಕೆ ವೈಜ್ಞಾನಿಕ ಕಾರಣಗಳನ್ನು ನೀಡಿದೆ. ಪಾಕಿಸ್ತಾನ ತನ್ನ ಅಕ್ಕಿಗಿನ್ನೂ ಜಿಐಟ್ಯಾಗ್ ನೀಡದಿರುವುದರಿಂದ ನಮಗೆ ಅನುಕೂಲವಾಗಲಿದೆ. ಆದರೆ ಪಾಕಿಸ್ತಾನ ‘74 ವರ್ಷಗಳಿಂದಷ್ಟೇ ನಾವು ಭಾರತದಿಂದ ಬೇರೆಯಾಗಿದ್ದೇವೆ. ಭಾರತದಲ್ಲಿರುವ ಪಂಜಾಬ್‍ನ ಒಂದು ಭಾಗ ನಮ್ಮಲ್ಲೂ ಇದೆ. ನಾವು ಸಹ ಉತ್ತಮ ಗುಣಮಟ್ಟದ ಅಕ್ಕಿಯನ್ನು ಬೆಳೆಯುತ್ತಿದ್ದೇವೆ.ಭಾರತದ ಅರ್ಜಿಯ ಬಗ್ಗೆ ನಮ್ಮ ತಕರಾರಿದೆ ಮತ್ತು ನಮಗೂ ಜಿಐಟ್ಯಾಗ್ ಪಡೆಯುವ ಹಕ್ಕಿದೆ’ ಎಂದು ವಾದಿಸುತ್ತಿದೆ.

1997ರಲ್ಲಿ ನಮ್ಮ ಬಾಸ್ಮತಿ ಅಕ್ಕಿಯ ತಳಿಯನ್ನು ಕಸಿ ಮಾಡಿ ಬೆಳೆದ ಅಕ್ಕಿಯನ್ನು ತನ್ನದೆಂದು ಹಕ್ಕುಸ್ವಾಮ್ಯ ಸಾಧಿಸಿದ್ದ ಅಮೆರಿಕದ ರೈಸ್‍ಟೆಕ್ ಕಂಪನಿಯ ವಿರುದ್ಧ ಭಾರತ- ಪಾಕಿಸ್ತಾನ ಜಂಟಿ ಸಮರ ಸಾರಿದ್ದವು. ಈಗ ಅದೇ ಹಕ್ಕಿಗಾಗಿ ಪರಸ್ಪರ ಹೋರಾಟ ನಡೆಸಿವೆ. ಯುರೋಪ್ ಒಕ್ಕೂಟ ಯಾರಿಗೆ ಜಿಐಟ್ಯಾಗ್ ನೀಡುತ್ತದೋ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.