
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
‘ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು’ ಎನ್ನುವ ಗಾದೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಚೆನ್ನಾಗಿ ಒಪ್ಪುತ್ತದೆ. ವರ್ಷವಿಡೀ ನಿದ್ರಾವಸ್ಥೆಯಲ್ಲಿರುವ ಅಕಾಡೆಮಿ, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಯದಲ್ಲಿ ನಿದ್ದೆಯಿಂದ ಎಚ್ಚರಗೊಂಡಂತೆ ಜಾಗೃತಗೊಳ್ಳುತ್ತದೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು 2011ರಿಂದ ನಡೆಸುವ ಹೊಣೆಗಾರಿಕೆಯನ್ನು ವಹಿಸಿಕೊಂಡ ಅಕಾಡೆಮಿಗೆ ಇದೊಂದು ವರ್ಷಾವಧಿ ಆಚರಣೆ.
ಬೆಂಗಳೂರು ಚಲನಚಿತ್ರೋತ್ಸವಕ್ಕೆ ಮೊದಲಿನಿಂದಲೂ ವಿವಾದಗಳ ನಂಟು. ಚಿತ್ರೋತ್ಸವವನ್ನು ಚಲನಚಿತ್ರ ಅಕಾಡೆಮಿ ವಹಿಸಿಕೊಳ್ಳುವ ಮೊದಲು, ಸುಚಿತ್ರಾ ಫಿಲ್ಮ್ ಸೊಸೈಟಿ ಚಿತ್ರೋತ್ಸವಗಳನ್ನು ನಡೆಸುತ್ತಿತ್ತು. ಆ ಬಳಿಕವೂ ಕೆಲವು ವರ್ಷಗಳ ಕಾಲ ಮಾತೃಸಂಸ್ಥೆಯ ನೆರಳಿನಲ್ಲಿಯೇ ಚಿತ್ರೋತ್ಸವಗಳು ನಡೆಯುತ್ತಿದ್ದವು. ಈಗಲೂ ಆ ನೆರಳು ಸ್ವಲ್ಪಮಟ್ಟಿಗೆ ಇದ್ದೇಇದೆ.
ಅಂತರರಾಷ್ಟ್ರೀಯ ಚಿತ್ರೋತ್ಸವಗಳ ಆಯೋಜನೆಗೆ ದಿನ ನಿಗದಿ ಮಾಡುವ ‘ಅಂತರರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರ ಸಂಘಗಳ ಒಕ್ಕೂಟ’ (ಎಫ್‌ಐಎಪಿಫ್) ನಿರ್ದೇಶನದ ಅನುಸಾರ ನಿರ್ದಿಷ್ಟ ದಿನ, ತಿಂಗಳಲ್ಲಿ ಚಲನಚಿತ್ರೋತ್ಸವಗಳನ್ನು ನಡೆಸಬೇಕು. ಆದರೆ ಈವರೆಗೂ ಚಿತ್ರೋತ್ಸವಕ್ಕೆ ಕಾಯಂ ದಿನ ನಿಗದಿಪಡಿಸಲು ಸಾಧ್ಯವಾಗಿಲ್ಲ. ಡಿಸೆಂಬರ್, ಜನವರಿ, ಫೆಬ್ರುವರಿ, ಮಾರ್ಚ್– ಹೀಗೆ ಬೇರೆ ಬೇರೆ ತಿಂಗಳುಗಳಲ್ಲಿ, ಸರ್ಕಾರದ ಮರ್ಜಿ ಮತ್ತು ಅಕಾಡೆಮಿ ಎಚ್ಚರಗೊಂಡಿರುವ ಸಮಯವನ್ನು ಅನುಸರಿಸಿ ಚಿತ್ರೋತ್ಸವ ನಡೆಸುತ್ತಾ ಬರಲಾಗಿದೆ. ಪ್ರತಿ ವರ್ಷವೂ ಈ ತಿಂಗಳೇ, ಈ ದಿನವೇ ಕಾಯಂ ಎಂದು ಅಕಾಡೆಮಿ ಹೇಳುತ್ತಲೇ ಬಂದಿದೆ. ಈ ಬಾರಿಯೂ ಹಳೆಯ ಹೇಳಿಕೆಯನ್ನೇ ಪುನರುಚ್ಚರಿಸಲಾಗಿದೆ.
ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಸಿನಿಮಾಗಳ ಆಯ್ಕೆ ಹಾಗೂ ಪ್ರಶಸ್ತಿಗಳು ಬಹಳ ಸಲ ಟೀಕೆಗೆ ಗುರಿಯಾಗಿವೆ. ಹಲವು ಚಿತ್ರೋತ್ಸವಗಳಲ್ಲಿ ಪುರಸ್ಕಾರ ಪಡೆದಿರುವ ನಟೇಶ್
ಹೆಗ್ಡೆ ನಿರ್ದೇಶನದ ‘ಪೆದ್ರೊ’ ಮತ್ತು ಕೇಸರಿ ಹರವು ಅವರ ರೈತ ಸತ್ಯಾಗ್ರಹ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿತ್ತು. ದಲಿತರ ಮೇಲಿನ ದೌರ್ಜನ್ಯವನ್ನು ಹೇಳುವ ‘ಪಾಲಾರ್’ ಚಿತ್ರವನ್ನು ಪ್ರತಿಭಟನೆಯ ನಂತರ ಪ್ರದರ್ಶಿಸಲಾಯಿತು. ಕೋವಿಡ್ ಕಾಲದ ದುರಂತವನ್ನು ಪರಿಣಾಮ
ಕಾರಿಯಾಗಿ ಚಿತ್ರಿಸಿದ ‘ಫೋಟೋ’ಗೆ ನೆಪದ ಮಾತ್ರದ ಪ್ರಶಸ್ತಿಯಷ್ಟೇ ದೊರಕಿತು. ಇದೇ ತಾರತಮ್ಯವನ್ನು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಿನಿಮಾಗಳ ಆಯ್ಕೆಯಲ್ಲೂ
ಕಾಣಬಹುದು. ಕನ್ನಡ ಸಿನಿಮಾಗಳ ಆಯ್ಕೆಗೆ ಸಂಬಂಧಿಸಿದಂತೆಯೂ ಆಕ್ಷೇಪಗಳು ನಿರಂತರವಾಗಿವೆ. ಅತ್ಯುತ್ತಮ ಚಿತ್ರಗಳನ್ನು ಪ್ರಾಥಮಿಕ ಹಂತದಲ್ಲೇ ಹೊರಗಿಟ್ಟಿರುವ ಉದಾಹರಣೆಗಳೂ ಇವೆ.
ಹಲವು ವರ್ಷಗಳಿಂದ ಕೆಲವೇ ವ್ಯಕ್ತಿಗಳನ್ನು ಕಲಾ ನಿರ್ದೇಶಕರಾಗಿ ಆರಿಸುವುದು ಆಕ್ಷೇಪಗಳಿಗೆ ಕಾರಣ ಆಗಿತ್ತು. ಪ್ರತಿ ಸಲವೂ ಒಬ್ಬರೇ ನೇತೃತ್ವ ವಹಿಸುವುದು ಸರಿಯಲ್ಲ ಎಂದು ಕೆಲವರ ವಾದ. ಈ ಬಾರಿ ಹೊಸ, ಯುವ ಕಲಾ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ; ಹೊಸಬರ ಸಮಿತಿಯನ್ನೂ ರಚಿಸಲಾಗಿದೆ. ಅದರ ಫಲಶ್ರುತಿಯನ್ನು ಕಾದು ನೋಡಬೇಕಾಗಿದೆ.
ಈ ವರ್ಷ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಕೆಲವು ವರ್ಷಗಳಿಂದ ಬೆಂಗಳೂರು ಚಲನಚಿತ್ರೋತ್ಸವ ಒರಾಯನ್ ಮಾಲ್‌ನಲ್ಲಿ ನಡೆಯುತ್ತಿತ್ತು. ಸಿನಿಮಾ ಪ್ರೇಮಿಗಳು ಕೂಡ ಆ ಪರಿಸರಕ್ಕೆ ಹೊಂದಿಕೊಂಡಿದ್ದರು. ಈ ವರ್ಷ ಏಕಾಏಕಿ ‘ಸಾಧು’ವಾದ ಯಾವ ಕಾರಣವನ್ನೂ ನೀಡದೆ
ಲುಲು ಮಾಲ್‌ಗೆ ಬದಲಾಯಿಸಲಾಗಿದೆ. ಈ ಬದಲಾವಣೆಯಿಂದ ಅನನುಕೂಲವೇ ಹೆಚ್ಚು. ಲುಲು ಮಾಲ್‌ಗಿಂತ ಒರಾಯನ್ ಮಾಲ್‌ಗೆ ಬಸ್ ಹಾಗೂ ಮೆಟ್ರೊ ಸಂಪರ್ಕ ಸುಲಭ. ಒರಾಯನ್‌ಗೆ ಹೋಲಿಸಿದರೆ ಲುಲು ಮಾಲ್‌ನಲ್ಲಿ ಆಸನಗಳು ಕಡಿಮೆ. ಹೆಚ್ಚುವರಿಯಾಗಿ ಒಂದು ದಿನದ ಪ್ರದರ್ಶನ ಮಾಡುವುದರಿಂದ ಈ ಕೊರತೆಯನ್ನು ನೀಗಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರೂ, ಹೆಚ್ಚು ಜನ ನೋಡಲು ಬಯಸುವ ಸಿನಿಮಾಕ್ಕೆ ವ್ಯವಸ್ಥೆಯನ್ನು ಮಾಡುವುದಾದರೂ ಹೇಗೆ?
ಈವರೆಗಿನ ಚಿತ್ರೋತ್ಸವಗಳನ್ನು ಗಮನಿಸಿದರೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಾ ಹೋಗಿದೆ. ಸೌಲಭ್ಯಗಳನ್ನು ಕಲ್ಪಿಸುವುದೂ ಅಷ್ಟೇ ಮುಖ್ಯ. ಗೋವಾ ಮತ್ತು ಕೇರಳ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಸಿನಿಮಾಕ್ತರಿಗೆ ಸರಿಯಾದ ವ್ಯವಸ್ಥೆ ಇದೆ. ಸಿನಿಮಾಆಸಕ್ತರು ಆಯ್ಕೆಯಾಗುವ ಸಿನಿಮಾಗಳ ಗುಣಮಟ್ಟವನ್ನೂ ಪರಿಶೀಲಿಸುತ್ತಾರೆ. ಸಣ್ಣ ರಾಜ್ಯವಾದ ಕೇರಳದಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್ ಅಲ್ಪಾವಧಿಯಲ್ಲಿ ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮನ್ನಣೆ ಪಡೆದಿದೆ. ಆದರೆ, ಹೆಚ್ಚು ಸಂಪನ್ಮೂಲ ಹೊಂದಿರುವ ಕರ್ನಾಟಕದಲ್ಲಿ ಚಲನಚಿತ್ರೋತ್ಸವ ದೂರದೃಷ್ಟಿಕೊರತೆ ಹಾಗೂ ದಿನಾಂಕ–ಜಾಗಗಳ ಅಸ್ಪಷ್ಟತೆಯಿಂದಾಗಿ ಜಾಗತಿಕ ಗಮನವನ್ನು ಸೆಳೆಯಲು ವಿಫಲವಾಗಿದೆ.
ಹಾಗೆ ನೋಡಿದರೆ, ಚಿತ್ರೋತ್ಸವ ಸಂಘಟನೆಯ ಮಾತೃಸಂಸ್ಥೆ ವಾರ್ತಾ ಇಲಾಖೆ. ಅದರ ನೆರಳಿನಲ್ಲಿ ತನಗಿರುವ ಒಂದಷ್ಟು ಹೊಣೆಗಾರಿಕೆಯನ್ನು ಅಕಾಡೆಮಿ ಸಮರ್ಥವಾಗಿ ನಿಭಾಯಿಸದೆ ಹೋದರೆ ಅಕಾಡೆಮಿ ಅಸ್ತಿತ್ವಕ್ಕೆ ಅರ್ಥವೇ ಇಲ್ಲದಂತಾಗುತ್ತದೆ.
ಕೇರಳ ಫಿಲ್ಮ್ ಫೆಸ್ಟಿವಲ್ ಮುಗಿದ ಬಳಿಕ ಅಲ್ಲಿ ಪ್ರದರ್ಶಿತವಾದ ಕೆಲವು ಚಿತ್ರಗಳನ್ನು ತ್ರಿಶೂರ್, ಎರ್ನಾಕುಲಂಗಳಲ್ಲಿ ತೋರಿಸಲಾಗುತ್ತದೆ. ಕರ್ನಾಟಕದಲ್ಲಿಯೂ ಅಂತಹ ವ್ಯವಸ್ಥೆಯನ್ನು ಮಾಡಿ, ಆಯ್ದ ಜಿಲ್ಲಾ ಕೇಂದ್ರಗಳಲ್ಲಿ ಮಿನಿ ಚಿತ್ರೋತ್ಸವಗಳನ್ನು ನಡೆಸಬಹುದು. ಆ ಮೂಲಕ ಒಳ್ಳೆಯ ಸಿನಿಮಾಗಳ ಬಗ್ಗೆ ಜನರ ಅಭಿರುಚಿಯನ್ನೂ, ಯುವ ತಂತ್ರಜ್ಞರಿಗೆ ಸಿನಿಮಾ ಅರಿವು ಮೂಡಿಸುವ ಪ್ರಯತ್ನ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.