ADVERTISEMENT

ಸಂಗತ: ಚಿಂತನೆ ಇಲ್ಲ, ಇದು ‘ಸುಂದರ ನಗರಿ’!

ನಾ ದಿವಾಕರ
Published 14 ಸೆಪ್ಟೆಂಬರ್ 2022, 19:31 IST
Last Updated 14 ಸೆಪ್ಟೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸ್ವಾಭಾವಿಕ ನಿಸರ್ಗ ನೆಲೆಗಳನ್ನು ಧ್ವಂಸ ಮಾಡಿ, ಕಾಂಕ್ರೀಟ್‌ ಕಾಡು ನಿರ್ಮಿಸುವುದರ ಪರಿಣಾಮವನ್ನು ನಾವೀಗ ಎದುರಿಸುತ್ತಿದ್ದೇವೆ.

ಹಲವು ದಶಕಗಳಲ್ಲೇ ಅತಿಹೆಚ್ಚು ಮಳೆ ಈ ವರ್ಷ ಬೆಂಗಳೂರನ್ನು ಕಂಗೆಡಿಸಿದೆ. ಈ ಪ್ರಮಾಣದ ಮಳೆಯನ್ನು ತಡೆದುಕೊಳ್ಳುವ ಶಕ್ತಿ ಮತ್ತು ಸಾಮರ್ಥ್ಯ ನಮಗೆ ಇದೆಯೋ ಇಲ್ಲವೋ ಎಂದು ಯೋಚಿಸುವ ಮುನ್ನ, ನಾವೇ ಕಟ್ಟಿಕೊಂಡಿರುವ ಸುಂದರ ನಗರದ ವಿನ್ಯಾಸ, ಶೈಲಿ ಮತ್ತು ವಿಸ್ತಾರವನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

ಬೆಂಗಳೂರು ಈಗಿನ ಐದು ದಶಕಗಳಲ್ಲಿ ಕಂಡಿರುವ ಹೊರ ವರ್ತುಲ ರಸ್ತೆಗಳತ್ತ ಗಮನ ಹರಿಸಿದಾಗ ಇದು ಸ್ಪಷ್ಟವಾಗುತ್ತದೆ. ಕೃಷ್ಣರಾಜ ಪುರಂನಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ವರೆಗೆ ವಿಸ್ತರಿಸಿರುವ ಪ್ರದೇಶವು ಬೆಂಗಳೂರಿನ ಮತ್ತು ಕರ್ನಾಟಕದ ಆರ್ಥಿಕತೆಯ ಕೇಂದ್ರಬಿಂದು. ಒಂದು ಅಂದಾಜಿನ ಪ್ರಕಾರ, ಈ ವ್ಯಾಪ್ತಿಯಲ್ಲೇ ಹತ್ತು ಲಕ್ಷಕ್ಕೂ ಹೆಚ್ಚು ದುಡಿಮೆಗಾರರಿದ್ದಾರೆ. ಈ ಆಧುನಿಕ ‘ನವಿರು ಸಾಮ್ರಾಜ್ಯ’ಕ್ಕೆ ಅನುಕೂಲಗಳನ್ನು ಕಲ್ಪಿಸದೇ ಹೋದರೆ ಹರಿದುಬಂದ ಬಂಡವಾಳ ಹಾಗೆಯೇ ಹೊರಗೆ ಹರಿದುಹೋಗುತ್ತದೆ
ಎಂಬ ಭೀತಿ ಸರ್ಕಾರವನ್ನು ಸದಾ ಕಾಡುತ್ತಲೇ ಇರುತ್ತದೆ.

ADVERTISEMENT

ಈ ವಲಯದಲ್ಲಿ ಭೂಮಿ ಎಂದರೆ ಕೇವಲ ಕಾಂಕ್ರೀಟು, ಸಿಮೆಂಟು, ಗಾರೆ, ನೆಲಹಾಸು ಮತ್ತು ಗ್ರಾನೈಟ್‌ಗಳಿಂದ ಅಲಂಕೃತವಾದ ಒಂದು ಸ್ವತ್ತು ಎನ್ನುವ ಭಾವನೆ ದಟ್ಟವಾಗಿ ಬೇರೂರಿದೆ.

‘ಇಡೀ ಬೆಂಗಳೂರು ಮುಳುಗಿಲ್ಲ’ ಎಂದು ಸಮಾಧಾನಪಟ್ಟುಕೊಳ್ಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿರುವಂತೆ, ಹಲವು ದಶಕಗಳಲ್ಲೇ ಅತಿಹೆಚ್ಚು ಮಳೆ ಈ ಬಾರಿ ಅಪ್ಪಳಿಸಿದೆ. ಹಿಂದೆ ಈ ರೀತಿಯ ಮಳೆ ಬಂದಿದ್ದರೆ ಬೆಂಗಳೂರಿನ ಯಾವ ಭಾಗವೂ ಜಲಾವೃತ ಆಗುತ್ತಿರಲಿಲ್ಲ. ಏಕೆಂದರೆ ಆಗ ಬೆಂಗಳೂರಿನಲ್ಲಿ ನೂರಾರು ಕೆರೆಗಳು ಜೀವಂತಿಕೆಯಿಂದ ಇದ್ದವು. ಹಸಿರು ಅರಣ್ಯವು ನಗರಕ್ಕೆ ಹೊದಿಕೆಯಂತೆ ಕಾಣುತ್ತಿತ್ತು. ಬಹುತೇಕ ಎಲ್ಲ ಬಡಾವಣೆಗಳಲ್ಲೂ ರಸ್ತೆಯ ಇಕ್ಕೆಲಗಳಲ್ಲಿ ಹಸಿರು ಕಂಗೊಳಿಸುತ್ತಿತ್ತು.
ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಇಲ್ಲದಿದ್ದರೂ ಮಳೆ ನೀರನ್ನು ಸೆಳೆದುಕೊಳ್ಳಲು ಭೂಮಿ ಸಿದ್ಧವಾಗಿತ್ತು. ಈ ಎಲ್ಲ ಸ್ವಾಭಾವಿಕ ನಿಸರ್ಗ ನೆಲೆಗಳನ್ನೂ ಧ್ವಂಸ ಮಾಡಿ, ಶಾಖೋತ್ಪನ್ನ ಮಾಡುವಂತಹ ಕಾಂಕ್ರೀಟ್‌ ಕಾಡನ್ನು ನಿರ್ಮಿಸುವುದರ ಪರಿಣಾಮವನ್ನು ನಾವು ಈಗ ಎದುರಿಸುತ್ತಿದ್ದೇವೆ.

ಕೆರೆಗಳು ತುಂಬುವುದು ಸಹಜ, ತುಂಬಿ ಹರಿಯುವುದೂ ಸಹಜ. ಆದರೆ ಈ ಹರಿಯುವ ಹೆಚ್ಚುವರಿ ನೀರು ರಸ್ತೆಗಳಿಗೆ, ಮನೆಗಳಿಗೆ ನುಗ್ಗುವುದು ಸಹಜವಲ್ಲ. ಇದು ನಾವು ಮಾಡಿಕೊಂಡಿರುವ ಅವಾಂತರ. ‘ರಾಜಕಾಲುವೆ’ ಎಂದು ಗೌರವಯುತ ಹೆಸರು ಪಡೆದಿರುವ, ಹೆಚ್ಚುವರಿ ನೀರು, ತ್ಯಾಜ್ಯ ಮತ್ತು ವರ್ಜಿತ ಪದಾರ್ಥಗಳು ಹರಿಯುವ ಈ ಕಾಲುವೆಗಳ ಮೇಲೆ ಎಷ್ಟು ಮನೆಗಳು, ವಿಲ್ಲಾಗಳು, ಅಪಾರ್ಟ್‌ಮೆಂಟ್‌
ಗಳು, ವಿದ್ಯಾಸಂಸ್ಥೆಗಳು ನಿರ್ಮಾಣವಾಗಿವೆ ಎಂಬ ಮಾಹಿತಿಯನ್ನು ಸರ್ಕಾರ ನೀಡಬೇಕಿದೆ. ರಾಜಕಾಲುವೆಗಳ ಒತ್ತುವರಿಯ ಕಾರಣದಿಂದಲೇ ಮಳೆನೀರು ಹರಿಯಲು ಜಾಗವಿಲ್ಲದೆ ಮನೆಗಳೊಳಗೆ ನುಗ್ಗುತ್ತಿದೆ. ಕೆರೆ ಪ್ರದೇಶಗಳನ್ನು ನುಣ್ಣಗೆ ಬೋಳಿಸಿ ಕಾಂಕ್ರೀಟ್‌ ಕಾಡುಗಳನ್ನು ನಿರ್ಮಿಸುವ ಮುನ್ನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ, ಸರ್ಕಾರ, ಎಂಜಿನಿಯರುಗಳು ಸ್ವಲ್ಪಮಟ್ಟಿಗಾದರೂ
ವಿವೇಕ ಮತ್ತು ವಿವೇಚನೆಯನ್ನು ಬಳಸಿದ್ದಲ್ಲಿ, ಇಂದು ಬೆಂಗಳೂರಿನ ಬಡಾವಣೆಗಳು ಜೋರು ಮಳೆ ಬಂದಾಗ ಹೊಳೆಗಳಾಗುತ್ತಿರಲಿಲ್ಲ.

ಕೆರೆ, ಅರಣ್ಯ ಮತ್ತು ಸಾರ್ವಜನಿಕ ಭೂ ಒತ್ತುವರಿಯಾಗುತ್ತಿರುವುದು ಅಧಿಕಾರ ರಾಜಕಾರಣದ ಕೃಪಾಕಟಾಕ್ಷ ಇರುವ ರಿಯಲ್‌ ಎಸ್ಟೇಟ್‌ ಉದ್ಯಮಿ ಗಳಿಂದ. ಬೆಳೆಯುತ್ತಿರುವ ಬೃಹತ್‌ ಬೆಂಗಳೂರಿನ ಆರ್ಥಿಕ ಫಲಾನುಭವಿಗಳು ಆಧುನಿಕತೆಯ- ಐಟಿ ವಲಯದ ಫಲಾನುಭವಿಗಳು. ಆದರೆ ಈ ರೀತಿಯ ಅತಿವೃಷ್ಟಿ ಮತ್ತು ಮಳೆಹಾನಿಯಿಂದ ಇನ್ನೂ ಹಲವು ವರ್ಷಗಳ ಕಾಲ ಸಂಕಷ್ಟ ಎದುರಿಸುವುದು, ಈ ‘ಸುಂದರ ನಗರಿ’ಯನ್ನು ನಿರ್ಮಿಸಲು ಬೆವರು ಸುರಿಸುವ ದುಡಿಯುವ ವರ್ಗ.

ಭೂ ಸ್ವಾಧೀನ ಇಲ್ಲದೆ, ಒತ್ತುವರಿ ಇಲ್ಲದೆ, ಅಕ್ರಮ ನಿರ್ಮಾಣ ಇಲ್ಲದೆ ನಗರಗಳು ಬೆಳೆದ ನಿದರ್ಶನಗಳು ಕಡಿಮೆ. ಇದು ಬಂಡವಾಳಶಾಹಿ ವ್ಯವಸ್ಥೆಯ ಒಂದು ಲಕ್ಷಣ. ಅಧಿಕಾರ ರಾಜಕಾರಣಕ್ಕೆ ರಿಯಲ್‌ ಎಸ್ಟೇಟ್‌ ಮತ್ತು ಗಣಿ ಉದ್ಯಮ ಮೆಟ್ಟಿಲುಗಳಾಗಿರುವುದರಿಂದಲೇ ಇಂದು ನಗರಾಭಿವೃದ್ಧಿ ಎಂಬ ಪರಿಕಲ್ಪನೆಯೂ ಒತ್ತುವರಿ ಮತ್ತು ಅಕ್ರಮಗಳ ಮೂಲಕವೇ ಸಾಕಾರಗೊಳ್ಳುತ್ತದೆ.

ಗ್ರಾನೈಟ್‌ ಉದ್ಯಮ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ರಿಯಲ್‌ ಎಸ್ಟೇಟ್‌ ಉದ್ಯಮ ಮತ್ತು ನಗರಾಭಿವೃದ್ಧಿ ಇವೆಲ್ಲದರ ಅನೈತಿಕ ಸಂಬಂಧವನ್ನು ಈ ವರ್ಷದ ಅತಿವೃಷ್ಟಿ ಬಯಲು ಮಾಡಿದೆ.

ಬಹಳ ವರ್ಷಗಳ ಬಳಿಕ ಅತಿ ಹೆಚ್ಚು ಮಳೆಯಾಗಿರುವುದು ನಿಸರ್ಗದತ್ತ ವಿದ್ಯಮಾನ. ಈ ಮಳೆಯನ್ನು ಎದುರಿಸಲಾಗದೆ ತಿಣುಕಾಡುತ್ತಿರುವುದು ನಮ್ಮ ಆಡಳಿತ ವ್ಯವಸ್ಥೆಯ ದೌರ್ಬಲ್ಯ ಮತ್ತು ನ್ಯೂನತೆ. ಇದು ಅನಿರೀಕ್ಷಿತ ಎಂದು ಹೇಳುವುದು ಈ ವ್ಯವಸ್ಥೆಯಲ್ಲಿನ ದೂರದೃಷ್ಟಿಯ ಕೊರತೆ.

ನೈಸರ್ಗಿಕ ವಿಕೋಪಗಳಿಂದ ರಕ್ಷಿಸಿಕೊಳ್ಳುವ ವಿಧಾನಗಳನ್ನು ವಿಜ್ಞಾನ ನಮಗೆ ಕಲ್ಪಿಸುತ್ತದೆ. ಆದರೆ ಅಭಿವೃದ್ಧಿಯ ಹಾದಿಯಲ್ಲಿ ವೈಜ್ಞಾನಿಕ ಚಿಂತನೆ ಇಲ್ಲದೇ ಹೋದಾಗ ಮತ್ತಷ್ಟು ‘ಸುಂದರ ನಗರಿಗಳು’
ಸೃಷ್ಟಿಯಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.