ADVERTISEMENT

ಸಂಗತ: ಜಾತಿ.. ಇದು ನಾವೇ ಎಳೆದಿರುವ ಲಕ್ಷ್ಮಣರೇಖೆ!

ಮಾತಿನಲ್ಲಿ ಮೀರುವ ಜಾತಿ–ಧರ್ಮ ಆಚರಣೆಯಲ್ಲಿ ಇಣುಕುತ್ತಿರುತ್ತದೆ. ಬಹುತೇಕ ಸಾಹಿತಿ, ಕಲಾವಿದರು ಜಾತಿವ್ಯಸನದಿಂದ ಪಾರಾಗಿಲ್ಲ.

ಬಿಂಡಿಗನವಿಲೆ ಭಗವಾನ್
Published 18 ಆಗಸ್ಟ್ 2025, 19:10 IST
Last Updated 18 ಆಗಸ್ಟ್ 2025, 19:10 IST
<div class="paragraphs"><p>ಸಂಗತ: ಜಾತಿ.. ಇದು ನಾವೇ ಎಳೆದಿರುವ ಲಕ್ಷ್ಮಣರೇಖೆ!</p></div>

ಸಂಗತ: ಜಾತಿ.. ಇದು ನಾವೇ ಎಳೆದಿರುವ ಲಕ್ಷ್ಮಣರೇಖೆ!

   

ಗಾಳಿ, ನೀರು, ಮಣ್ಣು, ಅಗ್ನಿ, ಆಕಾಶ –ಈ ಪಂಚಭೂತಗಳಿಂದ ರೂಪುಗೊಂಡ ಕಾಯ ಅಳಿದ ಮೇಲೆ ಮತ್ತೆ ಪಂಚಭೂತಗಳಲ್ಲೇ ಐಕ್ಯವಾಗಬೇಕು. ಯಾರಾದರೂ ಮೃತರಾಗಿ, ಅವರ ಅಂತ್ಯಸಂಸ್ಕಾರ ಆಗುತ್ತಲೇ ‘ಪಂಚಭೂತಗಳಲ್ಲಿ ಲೀನರಾದರು’ ಎನ್ನುತ್ತೇವೆ. ‘ಮರಣ ಹೊಂದಿದರು’, ‘ಕೊನೆಯುಸಿರೆಳೆದರು’ ಅಥವಾ ‘ಕಾಲವಶರಾದರು’ ಮುಂತಾಗಿ ಹೇಳುವುದಕ್ಕಿಂತ, ‘ಪಂಚಭೂತಗಳಲ್ಲಿ ಲೀನರಾದರು’ ಎನ್ನುವ ಹೇಳಿಕೆಯೆ ಹೆಚ್ಚು ವೈಜ್ಞಾನಿಕ ಹಾಗೂ ಅರ್ಥಪೂರ್ಣ. ‘ಮರಳಿ ಮಣ್ಣಿಗೆ’ ಎನ್ನುವ ಪರಿಕಲ್ಪನೆ ಹೇಳುವುದೂ ಇದನ್ನೇ.

ಗಣ್ಯರು, ಪ್ರತಿಷ್ಠಿತರ ನಿಧನದ ಸುದ್ದಿ ಪ್ರಕಟಗೊಳ್ಳುವುದೇ ತಡ, ಅವರ ಸಂಬಂಧಿಕರು ಮಾಧ್ಯಮ ದವರಿಂದ ಒಂದು ಸಿದ್ಧಸೂತ್ರದ ಪ್ರಶ್ನೆ ಎದುರಿಸುತ್ತಾರೆ. ಎಷ್ಟು ಹೊತ್ತಿಗೆ ಅಂತ್ಯವಿಧಿ, ವಿಧಾನಗಳು ಎನ್ನುವುದು ಹಾಗಿರಲಿ; ಯಾವ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ಎನ್ನುವ ಪ್ರಶ್ನೆಯದು.

ADVERTISEMENT

ಅಗಲಿದ ಗಣ್ಯರಿಗೆ ಸಲ್ಲುವ ಶ್ರದ್ಧಾಂಜಲಿ ಸಭೆಗಳಲ್ಲೂ ಅದೇ ಜಾಡು. ಮೃತರ ವರ್ಗಕ್ಕೆ ಸೇರಿದವರೇ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ನುಡಿನಮನ ಸಲ್ಲಿಕೆಗೆ ಆ ಪಂಗಡದವರ ಹೊರತಾಗಿ ಮತ್ತೆ ಯಾರೂ ಅರ್ಹರಲ್ಲ ಎಂಬ ಗ್ರಹಿಕೆ ಮೇಲಾಗಿರುವಂತೆ ಕಾಣಿಸುತ್ತದೆ.

ನಮ್ಮದು ಜಾತ್ಯತೀತ, ಧರ್ಮ ನಿರಪೇಕ್ಷಿತ ದೇಶ ಎಂದುಕೊಂಡರೆ ಸಾಕೆ? ಮೃತ ಶರೀರಕ್ಕೂ ಧರ್ಮ, ಜಾತಿ, ಉಪಜಾತಿ, ವರ್ಗ ಎಂಬ ಹಂಗು ತೊಡಿಸುತ್ತೇವಲ್ಲ! ವ್ಯಕ್ತಿ ಬದುಕಿದ್ದಾಗ ಅವನ ಉಸಿರು, ರಕ್ತ, ಮಾಂಸ, ಮೂಳೆಯಲ್ಲಿ ಮತ, ಧರ್ಮ ಎನ್ನುವುದಿರಲಿಲ್ಲ. ಆತನ ಕಳೇಬರದ ಅಂತ್ಯಕ್ರಿಯೆಯಲ್ಲಿ ಅವು ಗೋಚರಿಸುವುದಾದರೂ ಹೇಗೆ? ಸಾಕುಪ್ರಾಣಿಗಳು ಅಸುನೀಗಿದಾಗಲೂ ಅವಕ್ಕೆ ಸಂಪ್ರದಾಯದ ಸಂಕೇತವಿರಿಸಿ ಅವನ್ನು ವಿಲೇವಾರಿ ಮಾಡುವುದನ್ನು ಕಾಣುತ್ತೇವೆ.

ವ್ಯಕ್ತಿಯ ನಿಧನದ ನಂತರ ಅವರ ಪೂರ್ವ ನಿರ್ಧಾರದಂತೆ ಹಾಗೂ ಕುಟುಂಬದವರ ಅಪೇಕ್ಷೆಯಂತೆ ಮೃತದೇಹವನ್ನು ಅಸ್ಪತ್ರೆಗೋ, ಪ್ರಯೋಗಾಲಯಕ್ಕೋ ದಾನ ಮಾಡುವ ಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಸತ್ತವರು ಬದುಕಿದವರಿಗೆ ನೆರವಾಗುವ ಈ ಕ್ರಮ ಮೆಚ್ಚತಕ್ಕದ್ದು. ಈ ‘ದೊಡ್ಡವರ ದಾರಿ’ ಎಲ್ಲರೂ ನಡೆಯುವ ಹೆದ್ದಾರಿ ಆಗಬೇಕು. ಹಾಗೆ ದೇಹ ಒಪ್ಪಿಸುವ ಸಂದರ್ಭದಲ್ಲಿ ಜಾತಿ, ಧರ್ಮದ ನಮೂದಿನ ಅಗತ್ಯವೇ ಇರದೆನ್ನಿ.

ನಿಸ್ಸಂದೇಹವಾಗಿ ನಮ್ಮ ಸಂವಿಧಾನದಲ್ಲಿ ಆಯಾ ಧಾರ್ಮಿಕ ಪದ್ಧತಿಯ ಅನುಸರಣೆಗೆ ಅವಕಾಶವಿದೆ. ವೈಜ್ಞಾನಿಕ ಮನೋಭಾವ, ವೈಚಾರಿಕತೆಯನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ರೂಢಿಸಿಕೊಳ್ಳಬೇಕೆಂಬ ಆಶಯವೂ ಸಂವಿಧಾನದಲ್ಲಿದೆ. ಈಗೀಗ ಸ್ಥಳಾವಕಾಶದ ಕೊರತೆಯ ಕಾರಣಕ್ಕೆ ಕಳೇಬರಗಳನ್ನು ಹೂಳುವ ಬದಲು ಸುಡುವ ಪ್ರಸಂಗಗಳು ಹೆಚ್ಚುತ್ತಿವೆ. ಹೌದು, ದಿನಮಾನಗಳೇ ಔಚಿತ್ಯವನ್ನು ನಿರ್ದೇಶಿಸುವುದು ಇತಿಹಾಸದಲ್ಲಿ ಸಾಗಿಬಂದಿದೆ.

ಇಂಥ ಪದ್ಧತಿಯನ್ನು ಪಾಲಿಸಿದರೇನೆ ಗತಿಸಿದವರಿಗೆ ಮುಕ್ತಿ, ಶಾಂತಿ ಎನ್ನುವ ಭಾವೋದ್ವೇಗ ಗಳಿಂದ ನಾವು ಬಿಡಿಸಿಕೊಳ್ಳಬೇಕಿದೆ. ಚಾಮರಸನು ತನ್ನ ‘ಪ್ರಭುಲಿಂಗ ಲೀಲೆ’ ಕೃತಿಯಲ್ಲಿ ಸೊಗಸಾಗಿ ಹೀಗೆ ನುಡಿದಿದ್ದಾನೆ: ‘ದೇಹಿಯಾದವನಿಗೆ ಇರುವ ಅಂತರಂಗ ಬಹಿರಂಗ ಎಂಬ ಸ್ಥಾನಗಳಲ್ಲಿ ಬಹಿರಂಗವು ಸಕಲ ಮಾಯಾಮೋಹಗಳಿಂದ ಕೂಡಿದುದು. ಅಂತರಂಗವು ನಿಸ್ಸಂಗ ಚಿಹ್ನೆ. ಆದಕಾರಣ ಸಾಹಸಿಗ ತನದಿಂದ ಆ ನಿರ್ಮೋಹದಲಿ ನಿಲ್ಲುವವನೆ ನಿಸ್ಸೀಮ’.

ಕಲೆ, ಸಾಹಿತ್ಯ, ಸಂಗೀತ ಅಥವಾ ಅಭಿನಯ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎನ್ನಿ. ಆ ಸನ್ನಿವೇಶಕ್ಕೆ ಬಹುತೇಕ ಆಯಾ ಜಾತಿ,
ಧರ್ಮಾನುಯಾಯಿಗಳೇ ವೇದಿಕೆಯಲ್ಲಿರುತ್ತಾರೆ. ಆಮಂತ್ರಿಸಲಾಗುವ ಮಠಾಧೀಶರು, ಸಚಿವರು, ಚಿಂತಕರು, ಕಲಾವಿದರು ಸಹ ಅದೇ ಪಂಗಡದವರೇ. ಹೀಗೇಕೆ? ಆ ಮೇಧಾವಿಗಳ ಮಹತ್ಕಾರ್ಯ ಇತರರಿಗೆ ಅಪಥ್ಯವೆ? ಪ್ರತಿಭೆಗೆ ಗೋಡೆಗಳಿಲ್ಲ ಎನ್ನುವ ಮಾತು ಕೇವಲ ಮಾತಿನ ಓಘಕ್ಕೆ ಸೀಮಿತವಾಗುವುದು ದುರ್ದೈವ.

ಬಹುತೇಕ ಪುಸ್ತಕದ ಬಿಡುಗಡೆ ಕಾರ್ಯಕ್ರಮಗಳೂ ಭಿನ್ನವಲ್ಲ. ಅದೇ ಹಾಡುಪಾಡು. ಆಮಂತ್ರಣ ಪತ್ರಿಕೆಯ ದಪ್ಪ ಅಕ್ಷರಗಳ ಮೇಲೆ ಕಣ್ಣಾಡಿಸಿ ಯಾರ, ಯಾವ ಗ್ರಂಥ ಲೋಕಾರ್ಪಣೆಯಾಗುತ್ತಿದೆ ಅಂತ ಗೊತ್ತಾದರೆ ಸಾಕು. ಉಳಿದ ಸಾಲುಗಳನ್ನು  ಓದುವುದೇ ಬೇಡ. ಇಂತಹವರೇ ಅಧ್ಯಕ್ಷರು, ಮುಖ್ಯ ಅತಿಥಿಗಳು, ಇವರಿಂದಲೇ ಪುಸ್ತಕ ಕುರಿತು ಮಾತು ಎಂದು ಹೇಳಿಬಿಡಬಹುದು. ಹಾರ, ಉಡುಗೊರೆ ಹಿಡಿದು ಅಭಿನಂದಿಸಲು ಸರದಿಯಲ್ಲಿ ನಿಂತವರೂ ಅದೇ ವರ್ಗದವರೇ! ಜಮಾಯಿಸಿದ ಸಭಿಕರ ಪೈಕಿಯೆ ಒಬ್ಬರನ್ನು ಕರೆದು, ‘ಬನ್ನಿ, ಇದೋ ಇದು ನಿಮ್ಮದೇ ಪುಸ್ತಕ’ ಎಂದು ಆಯೋಜಕರು ಪ್ರೀತಿಯಿಂದ ವೇದಿಕೆಗೆ ಬರಮಾಡಿಕೊಂಡರೆ ಅದಲ್ಲವೆ ಸರ್ವರಿಗೂ ಸ್ವಾಗತವೆನ್ನುವ ಒಕ್ಕಣೆಯ ಸಾರ್ಥಕ್ಯ.  

ಸೃಜನಶೀಲತೆಯನ್ನು ಯಾವುದೇ ಮತ, ಧರ್ಮದಿಂದ ಕಟ್ಟಿಹಾಕಿದರೆ ಚಲನಶೀಲ ಮತ್ತು ನಾವೀನ್ಯದ ಸಮಾಜ ರೂಪುಗೊಳ್ಳುವುದು ಅಸಾಧ್ಯ. ತಮ್ಮ ಸಹಭಾಗಿತ್ವ, ಸಾಮರ್ಥ್ಯ ಗಮನಿಸುತ್ತಿಲ್ಲ ಎಂಬ ಭಾವನೆ ಜನರಲ್ಲಿ ಮೂಡಬಾರದು. ಜಾತಿ, ಪಂಥದ ತಾರತಮ್ಯವಿಲ್ಲದೆ ಸರ್ವರನ್ನೂ ತೊಡಗಿಸಿದರೆ ಅಲ್ಲಿ ನಿಜವಾದ ಸಾಂಸ್ಕೃತಿಕ ಪರಿಮಳದ ಹಾಜರಿ ಇರುತ್ತದೆ. ಆಗುಹೋಗುಗಳಲ್ಲಿ ವ್ಯವಸ್ಥಿತ ಪಕ್ಷಪಾತಗಳು ಮೆರೆದರೆ ಸಮಾನತೆಯು ಸೊರಗುವುದು ನಿಶ್ಚಿತ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.