ADVERTISEMENT

ಮಕ್ಕಳಸ್ನೇಹಿ ಕಲಿಕೆಯ ಸವಾಲು

ಇಂತಹ ಕಲಿಕೆಗೆ ಪೂರಕವಾಗಿ ಶಿಕ್ಷಕರ ಮನೋಭಾವದಲ್ಲೂ ಮಾರ್ಪಾಡು ಅತ್ಯಗತ್ಯ

ಡಾ.ಎಚ್.ಬಿ.ಚಂದ್ರಶೇಖರ್
Published 11 ಜನವರಿ 2021, 19:31 IST
Last Updated 11 ಜನವರಿ 2021, 19:31 IST
Sangata 12.01.2021 Resize
Sangata 12.01.2021 Resize   

1986ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ‘ಮಕ್ಕಳಸ್ನೇಹಿ’ ವಿಧಾನ ಹಾಗೂ ಕಲಿಕೆಯಲ್ಲಿ ಚಟುವಟಿಕೆ ಆಧಾರಿತ ಪ್ರಕ್ರಿಯೆಗಳ ಅಳವಡಿಕೆಯನ್ನು ಪ್ರಸ್ತಾಪಿಸಲಾಗಿದೆ. ಈ ಅಂಶದ ಸಾಕಾರಕ್ಕಾಗಿ ಅನೇಕ ಪ್ರಯತ್ನಗಳನ್ನು ಕೈಗೊಂಡಾಗ್ಯೂ ಸಂಪೂರ್ಣ ಪ್ರಗತಿ ಈವರೆಗೆ ಸಾಧ್ಯವಾಗಿಲ್ಲ ಎಂದೇ ಹೇಳಬಹುದು.

2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ಅಂಶವನ್ನು ಮತ್ತಷ್ಟು ಬಲವಾಗಿಯೇ ಪ್ರತಿಪಾದಿಸಲಾಗಿದೆ. ಕಲಿಕೆಯನ್ನು ಅನುಭವಾತ್ಮಕವಾಗಿಸುವುದು ಹಾಗೂ ಬೋಧನಾ ಪ್ರಕ್ರಿಯೆಯನ್ನು ಚಲನಶೀಲ, ಚರ್ಚೆ ಆಧಾರಿತ, ಕಥನ ನಿರೂಪಣಾ ವಿಧಾನ ಅನುಸರಿಸಿ, ಅಳವಡಿಸುವ ಕುರಿತು ತಿಳಿಸಲಾಗಿದೆ. ಇದಕ್ಕಾಗಿ ಕ್ರೀಡೆ, ಕಲೆಗಳನ್ನು ಶಿಕ್ಷಣದಲ್ಲಿ ಅಂತರ್ಗತಗೊಳಿಸಿ, ಶೈಕ್ಷಣಿಕ ಪ್ರಕ್ರಿಯೆಯನ್ನು ಆಕರ್ಷಣೀಯಗೊಳಿಸಲು ಚಿಂತಿಸಲಾಗಿದೆ.

ಮಕ್ಕಳ ಮಾನಸಿಕ ಬೆಳವಣಿಗೆಯ ಅನುಸಾರ ಪಠ್ಯಕ್ರಮ, ಪಠ್ಯಪುಸ್ತಕಗಳ ಅಭಿವೃದ್ಧಿ, ಬೋಧನಾ ಪ್ರಕ್ರಿಯೆಯಲ್ಲಿ ಮಾರ್ಪಾಡು ಹಾಗೂ ಮಕ್ಕಳ ಕಲಿಕಾ ಪ್ರಗತಿಯ ಮಾಪನಗಳಲ್ಲಿ ಅನೇಕ ಬದಲಾವಣೆಗಳನ್ನು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಪಠ್ಯಕ್ರಮದ ಹೊರೆ ತಗ್ಗಿಸಿ, ಪ್ರಮುಖ ಕಲಿಕಾಂಶಗಳನ್ನಷ್ಟೇ ಆಳವಾಗಿ ಕಲಿಸಲು ಹಾಗೂ ಅವುಗಳ ಆಧಾರದ ಮೇಲೆ ಮೌಲ್ಯಮಾಪನ ಕೈಗೊಳ್ಳಲು ಚಿಂತಿಸಲಾಗಿದೆ. ಆ ಮೂಲಕ ಮಾಹಿತಿ, ಅಂಕ ಆಧಾರಿತ ಕಲಿಕೆಯಿಂದ ಹೊರಬಂದು, ಮಕ್ಕಳಲ್ಲಿ ಸಹಜ ಕುತೂಹಲ ಆಧಾರಿತವಾದ ಕಲಿಕೆಯನ್ನು ಉದ್ದೀಪನಗೊಳಿಸಿ ಅವರಲ್ಲಿ ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣಾ ಸಾಮರ್ಥ್ಯವನ್ನು ಬೆಳೆಸುವುದು ಸ್ವಾಗತಾರ್ಹವಾದ ಸಂಗತಿಯಾಗಿದೆ.

ADVERTISEMENT

ಮಕ್ಕಳಸ್ನೇಹಿ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ ಮಾಡುವುದು ಸವಾಲಿನ ಕೆಲಸವೇ ಸರಿ. ಅಂಕ, ರ‍್ಯಾಂಕ್‍ಗಳಿಂದ ಹೊರತಾದ ಶಿಕ್ಷಣ ಪದ್ಧತಿಯನ್ನು ಕಲ್ಪಿಸಿಕೊಳ್ಳುವುದು ಕಠಿಣವೆಂದೇ ತೋರುತ್ತದೆ. ವಿದ್ಯಾರ್ಥಿ ಗಳಿಸುವ ಅಂಕಗಳು ಅವರನ್ನು ಇತರರೊಂದಿಗೆ ಸುಲಭವಾಗಿ ಹೋಲಿಕೆ ಮಾಡಲು ಅನುಕೂಲ ಕಲ್ಪಿಸುತ್ತವೆ. ಈ ಕಾರಣದಿಂದ, ಅವಳು ಬಹಳ ಉತ್ತಮ, ಇವನು ಮಧ್ಯಮ, ಸಾಧಾರಣ ಎಂಬಂತಹ ಹೋಲಿಕೆಗಳಿಲ್ಲದೆ ಶಿಕ್ಷಣ ಪದ್ಧತಿಯನ್ನು ಕಟ್ಟುವುದಾದರೂ ಹೇಗೆ? ಇಂತಹ ಹೋಲಿಕೆಗಳಿಲ್ಲದಿದ್ದಲ್ಲಿ ಮಕ್ಕಳಲ್ಲಿ ಪ್ರೇರಣೆ ಮೂಡಿಸುವುದಾದರೂ ಹೇಗೆ ಎಂಬಂತಹ ಪ್ರಶ್ನೆಗಳು ಎಲ್ಲರನ್ನೂ ಕಾಡುವುದು ಸಹಜ. ಪೋಷಕರಿಗಂತೂ ತಮ್ಮ ಮಕ್ಕಳು ನೆರೆಮನೆಯವರ ಮಕ್ಕಳಿಗಿಂತಲೂ ಬೆಸ್ಟ್ ಎಂದು ಹೇಳಿಕೊಳ್ಳದಿದ್ದಲ್ಲಿ ಸಮಾಧಾನವಾಗುವುದೇ ಇಲ್ಲ. ಇದೆಲ್ಲದರ ನಡುವೆ ನೈಜ ಕಲಿಕೆ ಸೊರಗುತ್ತದೆ ಎಂಬ ಸತ್ಯ ಎಲ್ಲರಿಗೂ ತಿಳಿಯುವುದು ಕಠಿಣ.

ಮಕ್ಕಳಸ್ನೇಹಿ ತರಗತಿಗಳನ್ನು ನಿರ್ಮಾಣ ಮಾಡಲು ಅನೇಕ ಉಪಕ್ರಮಗಳು ಅಗತ್ಯ. ತರಗತಿಗಳ ಮಾದರಿಗಳಲ್ಲಿ ಬದಲಾವಣೆ ಅಗತ್ಯ. ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮಿತಿಗೊಳ್ಳಬೇಕು. ಒಬ್ಬ ಶಿಕ್ಷಕನ ತರಗತಿಯ ವ್ಯಾಪ್ತಿಯು 25 ವಿದ್ಯಾರ್ಥಿಗಳಿಗಿಂತ ಹೆಚ್ಚಿಗೆ ಇರಬಾರದು. ಸಾಂಪ್ರದಾಯಿಕ ಆಸನ ಶೈಲಿಯಿಂದ ವಿದ್ಯಾರ್ಥಿಗಳ ನಡುವೆ ಚರ್ಚೆಗೆ ಅನುಕೂಲ ಕಲ್ಪಿಸಲು ಸಾಧ್ಯವಾಗದು. ವೃತ್ತಾಕಾರ ಅಥವಾ ಅರೆ ವೃತ್ತಾಕಾರದ ಆಸನ ವ್ಯವಸ್ಥೆಯು ತರಗತಿಯಲ್ಲಿ ಸಂವಹನ, ಚರ್ಚೆಯನ್ನು ಹುಟ್ಟುಹಾಕಲು ನೆರವಾಗುತ್ತದೆ.

ಮಕ್ಕಳಸ್ನೇಹಿ ತರಗತಿಗಳ ನಿರ್ಮಾಣಕ್ಕೆ ಪೂರಕವಾಗಿ ಶಿಕ್ಷಕರ ಮನೋಭಾವದಲ್ಲಿ ಮಾರ್ಪಾಡುಗಳು ಅತ್ಯಗತ್ಯ. ಮಕ್ಕಳಿಗೆ ಮಾತನಾಡಲು, ಅಭಿಪ್ರಾಯ ಹಂಚಿಕೊಳ್ಳಲು ಹೆಚ್ಚಿನ ಅವಕಾಶ ನೀಡಿದಲ್ಲಿ, ತರಗತಿಯಲ್ಲಿ ಶಿಸ್ತು ನಿಯಂತ್ರಣ ಕಠಿಣವಾಗುತ್ತದೆ ಹಾಗೂ ತರಗತಿಯ ಬೋಧನೆ ಸರಾಗವಾಗಿ ಆಗದು ಎಂಬ ಭಾವನೆ ನಮ್ಮ ಹೆಚ್ಚಿನ ಶಿಕ್ಷಕರಲ್ಲಿ ಇದೆ. ವಿದ್ಯಾರ್ಥಿಗಳನ್ನು ತರಗತಿಯ ಬೋಧನೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಹಾಗೂ ತರಗತಿಯಲ್ಲಿ ಸಂವಾದ, ಚರ್ಚೆಗಳನ್ನು ಹುಟ್ಟುಹಾಕುವುದರ ಮೂಲಕ ಕಲಿಕೆಯನ್ನು ಹೆಚ್ಚು ಶ್ರೀಮಂತಗೊಳಿಸಬಹುದು. ಈ ದಿಸೆಯಲ್ಲಿ ಶಿಕ್ಷಕರನ್ನು ಸಜ್ಜುಗೊಳಿಸಲು, ಅವರ ಮನಃಪರಿವರ್ತನೆಗೊಳ್ಳಲು ಅಗತ್ಯವಾದ ಪ್ರಾಯೋಗಿಕ ತರಬೇತಿಗಳು ಅಗತ್ಯ.

ಶಾಲೆ ಮತ್ತು ತರಗತಿಯ ಶಿಸ್ತಿನ ನಿಯಮಗಳನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಲ್ಲಿ ಸ್ವಯಂ ಶಿಸ್ತು ಸಾಧ್ಯ ಎಂಬುದನ್ನು ಅನೇಕ ಸಂಶೋಧನೆಗಳು ತಿಳಿಸುತ್ತವೆ. ನಿಯಮಗಳು ಉಲ್ಲಂಘನೆಯಾದಲ್ಲಿ ಅನುಸರಿಸಬೇಕಾದ ಕ್ರಮಗಳನ್ನೂ ಆ ನಿಯಮಗಳನ್ನು ರೂಪಿಸುವಾಗಲೇ ಚರ್ಚಿಸಿ, ಒಪ್ಪಿತ ನಿಯಮಗಳನ್ನು ಜಾರಿಗೊಳಿಸಿದಲ್ಲಿ ಸ್ವಯಂ ಶಿಸ್ತು ಪ್ರಾಥಮಿಕ ಹಂತದ ತರಗತಿಗಳಲ್ಲಿಯೇ ಸಾಧ್ಯ. ಇಂತಹುದೇ ಮಾದರಿಯನ್ನು ಬಳಸಿ, ತರಗತಿ ಬೋಧನೆಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಸ್ವರೂಪಗಳನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ನಿಯಮಗಳನ್ನು ರೂಪಿಸಬಹುದು.

ತರಗತಿ, ಪಠ್ಯಪುಸ್ತಕದಾಚೆಯ ಅನುಭವಾತ್ಮಕ ಕಲಿಕೆಗೆ ತರಗತಿಗಳು ಮುಕ್ತವಾಗಿ ತೆರೆದುಕೊಂಡಲ್ಲಿ ವಿದ್ಯಾರ್ಥಿಗಳು ಕಲಿಯುವ ಪರಿಕಲ್ಪನೆಗಳು ಸ್ಪಷ್ಟಗೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳ ಕಲ್ಪನೆ, ವಿಶ್ಲೇಷಣಾ ಸಾಮರ್ಥ್ಯಗಳು ಬೆಳವಣಿಗೆ ಹೊಂದುತ್ತವೆ. ವಿದ್ಯಾರ್ಥಿಗಳು ನೈಜ, ಅನುಭವಾತ್ಮಕ ಕಲಿಕೆ ಹೊಂದುವುದರ ಜೊತೆಗೆ ಕಲಿಯುವುದರಲ್ಲಿ ಆನಂದ ಮತ್ತು ಖುಷಿಯನ್ನು ಹೊಂದುತ್ತಾರೆ. ಶಿಕ್ಷಕರು ಸಹ ತಾವೂ ಕಲಿತು, ಕಲಿಸುವ ಸಂತಸವನ್ನು ಹೊಂದುತ್ತಾರೆ.

ರಾಷ್ಟ್ರೀಯ ಶಿಕ್ಷಣ ನೀತಿ– 2020ರ ನೆಪದಲ್ಲಿ, ಪೂರ್ವ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯ ಶಿಕ್ಷಣ ಹಂತದವರೆಗೆ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೊಂದಿದ ವಿದ್ಯಾರ್ಥಿಸ್ನೇಹಿ ತರಗತಿಗಳ ಸಾಕಾರದ ಸವಾಲನ್ನು ನಾವೆಲ್ಲರೂ ಸ್ವೀಕರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.