ADVERTISEMENT

ಸಂಗತ: ಮಕ್ಕಳೆದುರು ಲಘುವಾಗುವ ಈ ಪರಿ...

ಮಕ್ಕಳು ಎಲ್ಲ ಕೆಲಸಕ್ಕೂ ಅತಿಯಾಗಿ ಪೋಷಕರನ್ನು ಅವಲಂಬಿಸುವಂತೆ ಮಾಡುವುದು ಅವರನ್ನು ಸೋಮಾರಿಗಳನ್ನಾಗಿಸುವ ನಡೆಯಲ್ಲವೇ?

ಪ್ರಜಾವಾಣಿ ವಿಶೇಷ
Published 12 ಏಪ್ರಿಲ್ 2022, 19:45 IST
Last Updated 12 ಏಪ್ರಿಲ್ 2022, 19:45 IST
   

ಶಾಲೆಯೊಂದರಲ್ಲಿ ಇತ್ತೀಚೆಗೆ ಪೋಷಕರ ಸಭೆ ನಡೆಯು ತ್ತಿತ್ತು. ಎದುರು ಸಾಲಿನಲ್ಲಿ ತನ್ನ ಹೆತ್ತವರ ಜತೆಗೆ ವಿದ್ಯಾರ್ಥಿಯೊಬ್ಬ ಕುಳಿತಿದ್ದ. ಅತಿಥಿಗಳು ಪೋಷಕರ ನ್ನುದ್ದೇಶಿಸಿ ಮಾತನಾಡುತ್ತಿರುವಾಗಲೇ ಅವನು ಬಾಯಾರಿ ನೀರು ಕುಡಿಯುವುದಕ್ಕೆ ಅನುವಾದ. ನೀರಿನ ಬಾಟಲಿಯ ಮುಚ್ಚಳ ಅವನ ಕೈಜಾರಿ ಕೆಳಗೆ ಬಿತ್ತು. ಅವನು ಎದ್ದು ಅದನ್ನು ಹೆಕ್ಕಿಕೊಳ್ಳುವುದಕ್ಕೆ ಮೊದಲೇ ಅವನ ತಂದೆ ದಡಬಡಿಸಿ ಎದ್ದು ಅದನ್ನು ಹೆಕ್ಕಿಕೊಟ್ಟರು. ಅವನು ಸಾವಕಾಶವಾಗಿ ತೆಗೆದುಕೊಂಡ.ದೂರದಿಂದ ಇದನ್ನು ಗಮನಿಸಿದ ನನಗ್ಯಾಕೋ ಕೊಂಚ ಕಸಿವಿಸಿಯೆನಿಸಿತು. ಅಲ್ಲಿ ಮಾತಾಡುವುದೋ ಪ್ರತಿಕ್ರಿಯೆ ಕೊಡುವುದೋ ನನ್ನ ವ್ಯಾಪ್ತಿಯಲ್ಲಿರಲಿಲ್ಲ.

ಈಗ ಪರೀಕ್ಷೆಗಳ ಸಮಯ. ಒಮ್ಮೆ ಪರೀಕ್ಷಾ ಕೊಠಡಿ ಯೊಳಗೆ ಇದ್ದಾಗ ಅತ್ತಿಂದಿತ್ತ ಬಾಲಸುಟ್ಟ ಬೆಕ್ಕುಗಳಂತೆ ಸುತ್ತುವುದು ಉಪನ್ಯಾಸಕರಿಗೆ ಬದ್ಧತೆ. ಹಾಗೆಯೇ ನಡೆದಾಡುತ್ತಿರುವಾಗ ವಿದ್ಯಾರ್ಥಿಯೊಬ್ಬನ ಇರೇಸರ್ ಕೆಳಗೆ ಬಿತ್ತು. ಅವನು ನನಗೆ ಸನ್ನೆ ಮಾಡಿ ಅದನ್ನು ಹೆಕ್ಕಿ ಕೊಡುವಂತೆ ತಿಳಿಸಿದ. ನನಗೆ ನಖಶಿಖಾಂತ ಉರಿಯಿತು. ಎದ್ದು ಹೆಕ್ಕಿಕೋ ಎಂದು ಅವನಿಗೆ ಸನ್ನೆ ಮಾಡಿ ಮುಂದೆ ನಡೆದೆ.

ಈ ಎರಡೂ ಘಟನೆಗಳನ್ನು ಸಮಾಧಾನದಿಂದ ಗಮನಿಸಿದರೆ ಅರ್ಥವಾಗುವುದಿಷ್ಟೆ.ಪೋಷಕರು ಮತ್ತು ಶಿಕ್ಷಕರನ್ನು ಮಕ್ಕಳು ತಮ್ಮ ಇಚ್ಛೆಗಳನ್ನು ಪೂರೈಸುವುದಕ್ಕೆ ಇರುವವರು ಅಂದುಕೊಂಡಿದ್ದಾರೆ ವಿನಾ ಬದುಕಿನಲ್ಲಿ ಅವರ ಸ್ಥಾನವೇನೆಂಬುದನ್ನು ಅರ್ಥ ಮಾಡಿಕೊಂಡಿಲ್ಲ. ತೀರಾ ಚಿಕ್ಕ ಮಕ್ಕಳಲ್ಲದೇ ಪ್ರೌಢ ಶಾಲಾ ಹಂತದಲ್ಲಿರುವ ಮಕ್ಕಳನ್ನು ಸಹ ಬಸ್ಸಿನಿಂದ ಇಳಿಸಿಕೊಳ್ಳುವ ತಾಯಂದಿರು (ಅಪ್ಪ, ಅಜ್ಜ, ಅಜ್ಜಿ ಯಾರೇ ಆದರೂ), ಮಕ್ಕಳ ಕೈಯಿಂದ ಅವರ ಭಾರದ ಪುಸ್ತಕಗಳ ಚೀಲವನ್ನೂ ಊಟದ ಚೀಲವನ್ನೂ ತಾವೇ ತೆಗೆದುಕೊಂಡು ಮಕ್ಕಳು ಹಗುರವಾಗಿ ಹಾರಿ ನಡೆಯುವುದಕ್ಕೆ ಅನುಕೂಲ ಮಾಡಿಕೊಡುತ್ತಾರೆ. ಇಂದಿನ ಮಕ್ಕಳ ಬ್ಯಾಗುಗಳೇನೋ ಭರ್ಜರಿ ಭಾರವೇ ಎನ್ನೋಣ. ಆದರೆ, ಮಕ್ಕಳು ತಾವು ಹೊರಬೇಕಾದ ಕರ್ತವ್ಯವನ್ನು ಪೋಷಕರು ತಾವು ಹೊತ್ತು ಮಕ್ಕಳಿಗೆ ಕಲಿಸುವುದೇನನ್ನು? ಕಷ್ಟವನ್ನು ಹೊರಬೇಕಾದವರು ತಂದೆ– ತಾಯಿಯೇ ವಿನಾ ತಾವಲ್ಲ ಎಂಬುದನ್ನಲ್ಲವೇ?

ADVERTISEMENT

ನಮ್ಮ ತಲೆಮಾರಿನವರ ಬಾಲ್ಯದ ಕಾಲವನ್ನೊಮ್ಮೆ ನೆನಪು ಮಾಡಿಕೊಳ್ಳೋಣ. ಶಾಲೆಗೆ ಹೋಗಬೇಕೆಂದರೆ ಹತ್ತು ಹದಿನೈದು ಕಿಲೊಮೀಟರು ನಡಿಗೆ. ಬೆನ್ನಿಗೆ ಭಾರದ ಚೀಲ. ಕೈಯಲ್ಲಿ ಬುತ್ತಿ, ಛತ್ರಿ. ನನ್ನೊಂದಿಗೆ ಜತೆಯಲ್ಲಿ ಅಪ್ಪ ನಡೆದುಬರುತ್ತಿದ್ದರು. ನಾನೆಂದೂ ನನ್ನ ಕೈಯ ಹೊರೆಯನ್ನು ಅಪ್ಪನಿಗೆ ದಾಟಿಸಿದ್ದಿಲ್ಲ. ಅಪ್ಪನ ಕೈಯಲ್ಲಿ ಇನ್ನೇನೋ ಇದ್ದೀತು ಅಂದುಕೊಳ್ಳೋಣ. ನನಗೆ ಎತ್ತಿಕೊಳ್ಳುವುದಕ್ಕೆ ಬಿಡದೇ ಅಪ್ಪ ಎತ್ತಿಕೊಳ್ಳುತ್ತಿದ್ದುದು ನನಗೆ ಮದುವೆಯಾಗಿ ಮಕ್ಕಳು ಹುಟ್ಟಿದ ಮೇಲೆ, ಅವರನ್ನು! ಎಳವೆಯಲ್ಲಿ ನಮ್ಮ ಬ್ಯಾಗುಗಳನ್ನು ಅಪ್ಪ ತೆಗೆದುಕೊಂಡು ನಡೆಯಬೇಕೆಂಬ ಕಲ್ಪನೆಯೂ ನಮಗಿರುವುದಕ್ಕೆ ಸಾಧ್ಯವಿರಲಿಲ್ಲ.

ಬದುಕು ಇಷ್ಟರಮಟ್ಟಿಗೆ ಯಾಕೆ ಬದಲಾಯಿತು? ಮಕ್ಕಳು ಹಗುರವಾದರೆ ಅವರ ವಿದ್ಯಾಭ್ಯಾಸ ಹಗುರ ವಾಗುತ್ತದೆ ಎಂಬ ಭ್ರಮೆಯೇ? ಒಬ್ಬನೇ ಮಗ, ಒಬ್ಬಳೇ ಮಗಳೆಂಬ ಅತಿಯಾದ ಮುದ್ದು, ಊಟ ತಿಂಡಿಗೆ ಕುಳಿತಾಗಲೂ ಮಕ್ಕಳಿಗೆ ಕನಿಷ್ಠ ಇಂತಿಷ್ಟು ಜವಾಬ್ದಾರಿ ಎಂದು ಕಲಿಸದೇ ಇರುವುದು, ಸರಿಯಾಗಿ ತಿನ್ನದೆ ಹಾಗೇ ಹೊರಟುಬಿಟ್ಟರೆ ಎಂಬ ಆತಂಕದಲ್ಲಿ ಮಕ್ಕಳು ಪ್ರಾಯಕ್ಕೆ ಬಂದರೂ ಅಮ್ಮನೇ ತಿನ್ನಿಸುವುದು, ಇವೆಲ್ಲವೂ ಮಕ್ಕಳನ್ನು ಸೋಮಾರಿಗಳನ್ನಾಗಿಸುವ ನಡೆಗಳಲ್ಲವೇ?

ನನ್ನ ಸ್ನೇಹಿತೆಯೊಬ್ಬರು ಸಿಕ್ಕಾಗಲೆಲ್ಲ ಅಲವತ್ತು ಕೊಳ್ಳುವ ಒಂದು ಮಹತ್ವದ ಸಂಗತಿಯೆಂದರೆ, ಪದವಿ ಓದುತ್ತಿರುವ ಅವರ ಮಗನಿಗೆ ಬೆಳಗ್ಗೆ ಅಮ್ಮನೇ ತಿಂಡಿ ತಿನ್ನಿಸಬೇಕಂತೆ, ಇಲ್ಲವಾದರೆ ಹಾಗೇ ಹೊರಟು ಬಿಡು ತ್ತಾನಂತೆ. ಇದು ಅತಿರೇಕವಲ್ಲವೇ? ನಮ್ಮ ಅಗತ್ಯಕ್ಕೆ ನಮ್ಮ ಕೈಕಾಲುಗಳೇ ಒದಗಬೇಕು, ಅವನ್ನೇ ಬಳಸಿಕೊಳ್ಳಬೇಕು ಎಂಬುದು ಕನಿಷ್ಠ ಜೀವನಪಾಠವಲ್ಲವೇ? ದೇವರಂತಿರಬೇಕಾದ ಅಪ್ಪ– ಅಮ್ಮನನ್ನು ಮಕ್ಕಳು ಚಾಕರಿಯವರಂತೆ ನಡೆಸಿಕೊಳ್ಳುವುದು ಯಾರು ಸೃಷ್ಟಿಸಿದ ತಪ್ಪು?

ಶಾಲಾ– ಕಾಲೇಜುಗಳಲ್ಲಾದರೂ ಅಷ್ಟೇ. ವಿದ್ಯಾರ್ಥಿ ಗಳು ಅರ್ಜಿ ನಮೂನೆಯಲ್ಲಿ ಯಾವುದೇ ತಪ್ಪು ಮಾಡಬಾರದೆಂದು ಒಂದೋ ಪೋಷಕರು ಇಲ್ಲವೇ ಶಾಲಾ– ಕಾಲೇಜುಗಳಲ್ಲಿ ಅದಕ್ಕಾಗಿ ನಿಯೋಜಿಸಲಾದ ಶಿಕ್ಷಕವೃಂದದವರು ಬರೆದುಕೊಡಬೇಕು. ಎಳೆಯ ಮಕ್ಕಳಿಗಾದರೆ ಸರಿ. ಕಾಲೇಜಿಗೆ ಬರುವ ಮಕ್ಕಳೂ ಇದನ್ನೇ ನಿರೀಕ್ಷಿಸಿದರೆ ಏಳುವ ಪ್ರಶ್ನೆ, ಹತ್ತನೆಯ ತರಗತಿ ದಾಟಿಯೂ ಒಂದು ಅರ್ಜಿ ತುಂಬದವರು ಪ್ರಥಮ ಪಿಯು ಓದಲು ಅರ್ಹರೇ? ಯಾವುದೇ ಹಂತದ ಕಲಿಕೆಗಾದರೂ ಒಂದು ಕನಿಷ್ಠ ಅರ್ಹತೆಯೆಂಬುದು ಇರುತ್ತದಲ್ಲ? ಅದನ್ನೆಲ್ಲ ಮೀರಿ ಅರ್ಥವಿಲ್ಲದ ಸ್ಪರ್ಧೆ ಯಲ್ಲಿ ಓಡುತ್ತಿರುವ ಯಾರಿಗೂ ಇದು ಅರ್ಥವಾಗದು. ಈ ವ್ಯವಸ್ಥೆಯನ್ನು ನೆಚ್ಚಿಕೊಂಡ ವಿದ್ಯಾರ್ಥಿಯು ಶಿಕ್ಷಕರನ್ನು ತನ್ನ ಸೇವಕರೆಂದೇ ತಿಳಿಯುತ್ತಾನಲ್ಲದೆ ‘ಗುರು ದೇವೋಭವ’ ಎನಿಸಲು ಸಾಧ್ಯವೇ?

ವ್ಯವಸ್ಥೆ ಹದಗೆಟ್ಟಿದೆ, ಕೆಡುತ್ತಿದೆಯೆಂದು ಪದೇ ಪದೇ ಆಡಿಕೊಳ್ಳುತ್ತೇವೆ. ಬದಲಾವಣೆ ಎಂಬುದು ಘಟಿಸಬೇಕಾದುದು ಎಲ್ಲಿ? ಒಬ್ಬರಿಂದ ಒಬ್ಬರಿಗೆ ಇದರ ಹೊಣೆಯನ್ನು ಜಾರಿಸಿಕೊಳ್ಳುತ್ತಾ ಎಲ್ಲರೂ ಕೈತೊಳೆದು ಕೊಂಡರೆ ಮಕ್ಕಳ ವರ್ತನೆಯನ್ನು ತಿದ್ದುವ ಪರಿ ಹೇಗೆ? ಎಲ್ಲಕ್ಕಿಂತ ಮೊದಲು ಅಗತ್ಯವಿರುವುದು ಅವರವರ ತಲೆಗೆ ಅವರವರದೇ ಕೈ ಎಂಬ ಸಣ್ಣ ಸಂಗತಿಯನ್ನು ಅವರಿಗೆ ಅರ್ಥ ಮಾಡಿಸಬೇಕಾದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.