ಇಂದಿನ ಮಕ್ಕಳು ಹಾಗೂ ಯುವಕ–ಯುವತಿಯರನ್ನು ಗಮನಿಸಿದಾಗ, ಈ ತಲೆಮಾರು ನಿಧಾನವಾಗಿ ಕನ್ನಡದಿಂದ ದೂರ ಸರಿಯುತ್ತಿದೆಯೇನೋ ಎಂಬ ಭಾವನೆ ಮೂಡುತ್ತದೆ. ಇವರು ಮಾತುಕತೆ, ಸಂವಹನಕ್ಕೆ ಕನ್ನಡವನ್ನೇ ಬಳಸುತ್ತಾರೆ. ಆದರೆ ಕನ್ನಡ ಭಾಷೆಯಲ್ಲಿ ಬರೆಯುವಾಗ ಕನ್ನಡ ಲಿಪಿಯನ್ನು ಉಪಯೋಗಿಸದೆ ಇಂಗ್ಲಿಷ್ ಅಕ್ಷರಗಳಲ್ಲಿ ಬರೆದುಕೊಂಡು ಓದುತ್ತಾರೆ. ಉದಾಹರಣೆಗೆ, ಶಾಲಾ ಕಾಲೇಜುಗಳಲ್ಲಿ ಕನ್ನಡ ಭಾಷಣ, ಹಾಡುಗಳನ್ನು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದುಕೊಳ್ಳುವ ಪರಿಪಾಟ ಮಕ್ಕಳಲ್ಲಿ ಬೆಳೆಯುತ್ತಿದೆ. ಇದು ಯೋಚನೆಗೆ ಈಡುಮಾಡುವ ಸಂಗತಿ.
ಇತ್ತೀಚೆಗೆ ನಮ್ಮ ನಾಟಕದ ತಾಲೀಮೊಂದರಲ್ಲಿ ನಾಲ್ಕೈದು ಮಂದಿ ಯುವಕ– ಯುವತಿಯರಿದ್ದರು. ಮಕ್ಕಳು ರಂಗಭೂಮಿಯೆಡೆಗೆ ಆಸಕ್ತಿ ತೋರುತ್ತಿರುವುದು ಸಂತಸದ ಸಂಗತಿ. ಆದರೆ ಈ ಮಕ್ಕಳು ನಾಟಕದ ಕನ್ನಡ ಸಂಭಾಷಣೆಗಳನ್ನು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದುಕೊಂಡಿದ್ದರು. ಅಚ್ಚರಿಯ ಸಂಗತಿಯೆಂದರೆ, ಈ ಎಲ್ಲ ಮಕ್ಕಳ ಮಾತೃಭಾಷೆ ಕನ್ನಡ. ‘ಮನೆಯಲ್ಲೂ ಕಾಲೇಜಿನಲ್ಲೂ ನಿರರ್ಗಳವಾಗಿ ಕನ್ನಡ ಮಾತನಾಡುವ ನೀವು, ಕನ್ನಡವನ್ನು ಇಂಗ್ಲಿಷ್ ಅಕ್ಷರ ಗಳಲ್ಲಿ ಬರೆದುಕೊಂಡಿರುವುದೇಕೆ’ ಎಂಬ ಪ್ರಶ್ನೆಗೆ ಆ ಮಕ್ಕಳು ಕೊಟ್ಟ ಉತ್ತರ ಸೋಜಿಗವೆನಿಸುವಂತಿತ್ತು. ‘ಕನ್ನಡವನ್ನು ಇಂಗ್ಲಿಷಿನಷ್ಟು ಸರಾಗವಾಗಿ ನಮಗೆ ಓದಲು ಬರುವುದಿಲ್ಲ, ಇಂಗ್ಲಿಷಿನಷ್ಟು ಕನ್ನಡ ಫೆಮಿಲಿಯರ್ (ಸುಪರಿಚಿತ) ಎನ್ನಿಸುವುದಿಲ್ಲ’ ಎಂದರು. ಒಂದು ಕ್ಷಣ ವಿಚಿತ್ರವೆನ್ನಿಸಿದರೂ ಸತ್ಯವೆನ್ನಿಸಿತ್ತು.
ಮಗು ತೊಟ್ಟಿಲಲ್ಲಿ ಇರುವಾಗಲೇ ಕುಟುಂಬದ ಸದಸ್ಯರು ಕಮ್, ಸಿಟ್, ಸ್ಲೀಪ್, ಕ್ಯಾಟ್, ಡಾಗ್... ಎಂದೆಲ್ಲ ಇಂಗ್ಲಿಷ್ ಪದಗಳನ್ನು ಬಳಸುತ್ತಾರೆ. ಮೂರ್ನಾಲ್ಕು ವರ್ಷದ ಮಗುವಿದ್ದಾಗ ಹೆತ್ತವರು ಮನೆಯಲ್ಲಿಯೇ ಇಂಗ್ಲಿಷ್ ಪಾಠ ಮಾಡತೊಡಗುತ್ತಾರೆ. ಪ್ರಾಣಿ-ಪಕ್ಷಿ, ಹೂ-ಹಣ್ಣು, ಬಣ್ಣದಂತಹವುಗಳ ವಿವರ, ಹಾಡುಗಳ ನ್ನೆಲ್ಲ ಇಂಗ್ಲಿಷ್ ಭಾಷೆಯಲ್ಲಿಯೇ ಹೇಳಿಕೊಡುತ್ತಾರೆ. ಅಕ್ಷರಗಳನ್ನು ತಿದ್ದಿಸುವಾಗಲೂ ಅಆಇಈ ಬದಲು ಎಬಿಸಿಡಿಯನ್ನೇ ತಿದ್ದಿಸುತ್ತಾರೆ. ಹೀಗಾಗಿ, ಮಗುವಿನ ಭಾಷೆ ಕನ್ನಡವಾದರೂ ಇಂಗ್ಲಿಷ್ ಭಾಷೆ ಆ ಮಗುವಿಗೆ ಹತ್ತಿರ ಎನಿಸತೊಡಗುತ್ತದೆ ಹಾಗೂ ಸುಲಲಿತವಾಗುತ್ತದೆ.
ಮಗುವಿನ ಮನಸ್ಸು ಹಸಿ ಗೋಡೆ ಇದ್ದಂತೆ. ಆರಂಭದಿಂದಲೇ ಅದರ ಮಸ್ತಿಷ್ಕಕ್ಕೆ ಇಂಗ್ಲಿಷ್ ಅಕ್ಷರ ಗಳನ್ನು ಬಿತ್ತುತ್ತಾ ಹೋದಂತೆ ಅದು ಸರಾಗವಾಗಿ ಕಲಿಯುತ್ತಾ ಹೋಗುತ್ತದೆ. ಶಾಲೆಯಲ್ಲಿ ಒಂದು ವಿಷಯವಾಗಿ ಕನ್ನಡವನ್ನು ಕಲಿಯಲಾರಂಭಿಸಿ ದಾಗ, ಕನ್ನಡದಲ್ಲಿ ಬರುವ ಕೊಂಬು, ಒತ್ತಕ್ಷರವೆಲ್ಲ ಗೊಂದಲ ಎನಿಸತೊಡಗುತ್ತವೆ. ಇಂಗ್ಲಿಷ್ ವರ್ಣಮಾಲೆಯನ್ನು ಓದುವುದು, ಬರೆಯುವುದರಲ್ಲಿ ಇರುವ ಆಸಕ್ತಿಯು ಕನ್ನಡ ಬರೆಯುವಾಗ, ಓದುವಾಗ ಮಗುವಿಗೆ ಇರುವುದಿಲ್ಲ. ಅಲ್ಲದೆ ಅಕ್ಷರಗಳ ನಡುವಿನ ವ್ಯತ್ಯಾಸ ಗಳನ್ನು ಗುರುತಿಸುವಲ್ಲಿ ಮಕ್ಕಳು ಹಿಂದೆ ಬೀಳುತ್ತಾರೆ. ಆದರೆ ಇಂಗ್ಲಿಷ್ ಅಕ್ಷರಗಳನ್ನು ಓದುವುದು, ಬರೆಯುವುದು ನೀರು ಕುಡಿದಷ್ಟು ಸುಲಭ ಈ ಮಕ್ಕಳಿಗೆ. ಶಾಲೆಯಲ್ಲಿ ದಿನದಲ್ಲಿ ಒಂದೇ ಒಂದು ಗಂಟೆ ಮಕ್ಕಳ ಕಿವಿಯ ಮೇಲೆ ಕನ್ನಡ ಭಾಷೆ ಬೀಳುತ್ತದೆ. ಎಷ್ಟೋ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಮಾತನಾಡುವುದೂ ನಿಷಿದ್ಧ. ಹೀಗಿರುವಾಗ, ಕನ್ನಡ ಭಾಷೆ ಕಲಿಯಲು ಕ್ಲಿಷ್ಟ ಎನಿಸತೊಡಗುತ್ತದೆ.
ಮಕ್ಕಳು ಶಾಲೆಯಲ್ಲಿ ತಾವು ಕಲಿಯುವ ಎಲ್ಲ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ತೆಗೆದರೂ ಕನ್ನಡದ ವಿಷಯದಲ್ಲಿ ಅನುತ್ತೀರ್ಣರಾಗುವುದು, ಅತಿ ಕಡಿಮೆ ಅಂಕಗಳನ್ನು ತೆಗೆಯುವುದು ಸಾಮಾನ್ಯ. ಇದು ಎಲ್ಲ ಪೋಷಕರು ಹಾಗೂ ಶಿಕ್ಷಕರ ಅಳಲು. ಕೆಲ ಪೋಷಕರು ಮಕ್ಕಳನ್ನು ಕನ್ನಡ ಮನೆಪಾಠಕ್ಕೆ ಕಳಿಸುತ್ತಾರೆ. ಮಕ್ಕಳ ಈ ಸ್ಥಿತಿಗೆ ಕಾರಣಕರ್ತರು ತಾವೇ ಎಂಬ ಅರಿವು ಕೂಡ ಪೋಷಕರಿಗೆ ಇರುವುದಿಲ್ಲ. ಕನ್ನಡ ವಿಷಯವನ್ನು ಮಗು ಹೇಗೋ ಕಲಿಯುತ್ತದೆ, ಮನೆಯಲ್ಲಿ ಮಾತನಾಡುವುದೇ ಕನ್ನಡ, ಅದು ಕಲಿಯಲು ಸಲೀಸು ಎಂಬ ತಪ್ಪುಕಲ್ಪನೆಯಲ್ಲಿ ಇರುತ್ತಾರೆ ಪೋಷಕರು.
ಶುರುವಿನಿಂದಲೇ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಅಷ್ಟೇ ಪರಿಣತರಾಗಿರುತ್ತಾರೆ. ಕನಿಷ್ಠ ಪ್ರಾಥಮಿಕ ಶಾಲೆಯನ್ನು ಕನ್ನಡ ಮಾಧ್ಯಮದಲ್ಲಿ ಓದಿ ನಂತರ ಇಂಗ್ಲಿಷ್ ಮಾಧ್ಯಮಕ್ಕೆ ಹೋದ ಮಕ್ಕಳು ಕೂಡ ಕನ್ನಡವನ್ನು ಓದುವಲ್ಲಿ, ಬರೆಯುವಲ್ಲಿ ಗೊಂದಲಗಳನ್ನು ಎದುರಿಸುವುದಿಲ್ಲ. ಎಲ್ಲ ಪಾಲಕರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುವುದರಿಂದ ಮಕ್ಕಳು ಕನ್ನಡದ ಜೊತೆಗಿನ ಒಡನಾಟದಿಂದ ದೂರ ಸರಿಯುತ್ತಾ ಹೋಗುತ್ತಾರೆ. ಶಾಲೆ, ಕಾಲೇಜು, ವೃತ್ತಿ ಹೀಗೆ ಎಲ್ಲೆಡೆಯೂ ಇಂಗ್ಲಿಷ್‌ನಲ್ಲಿಯೇ ವ್ಯವಹರಿಸುತ್ತ, ಕನ್ನಡವು ಮನೆಗೆ ಮಾತ್ರ ಸೀಮಿತವಾಗಿ ಬಿಡುತ್ತದೆ.
ಕನ್ನಡ ಓದಲು, ಬರೆಯಲು ಬಾರದ ಅನ್ಯ ಭಾಷಿಕರು ಕನ್ನಡವನ್ನು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದುಕೊಂಡು ಓದುವುದು ಅನಿವಾರ್ಯ. ಆದರೆ ಮಾತೃಭಾಷೆ ಕನ್ನಡವಾಗಿರುವ, ಹುಟ್ಟಿನಿಂದಲೇ ಕನ್ನಡದೊಂದಿಗೆ ಒಡನಾಡಿದ ಮಕ್ಕಳು ಕನ್ನಡ ಲಿಪಿಯಿಂದ ದೂರವಾಗುತ್ತಿರುವುದು ಯೋಚಿಸಬೇಕಾದ ವಿಷಯ. ಹೀಗಾದರೆ ನಮ್ಮ ಮುಂದಿನ ತಲೆಮಾರು ಕನ್ನಡ ಲಿಪಿಯನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಇಳಿಯಬೇಕಾದ ಪರಿಸ್ಥಿತಿ ಬಂದೊದಗಲೂಬಹುದು.
ಬಾಲ್ಯದಿಂದಲೇ ಮಗುವಿಗೆ ಇಂಗ್ಲಿಷ್ ಭಾಷೆಯನ್ನು ಮಾತ್ರ ಧಾರೆ ಎರೆಯದೆ ಕನ್ನಡಕ್ಕೂ ಅಷ್ಟೇ ಪ್ರಾಧಾನ್ಯ ವನ್ನು ಹೆತ್ತವರು ಹಾಗೂ ಶಿಕ್ಷಕರು ಕೊಡಬೇಕು. ಅಂದಾಗ ಮಗು ಕನ್ನಡದ ಬಗ್ಗೆ ಕೀಳರಿಮೆ, ಗೊಂದಲ ಗಳನ್ನು ಹೊಂದದೆ ಪ್ರೀತಿಯಿಂದ ಕಲಿಯಲು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.