ADVERTISEMENT

ಸಂಗತ: ಅಭಿವೃದ್ಧಿಚಕ್ರದಲ್ಲಿ ನಾಗರಿಕರೆ ಕೇಂದ್ರಬಿಂದು

ಯಾವುದೇ ಆಡಳಿತ ವ್ಯವಸ್ಥೆಯ ಕೇಂದ್ರದಲ್ಲಿ ‘ನಾಗರಿಕ’ ಇಲ್ಲದೇ ಹೋದರೆ, ‘ಸಮಗ್ರ ಅಭಿವೃದ್ಧಿ’ಯು ಸಾಕಾರಗೊಳ್ಳದೆ ಪರಿಕಲ್ಪನೆಯಲ್ಲಷ್ಟೇ ಉಳಿಯುತ್ತದೆ.

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 22:30 IST
Last Updated 25 ಡಿಸೆಂಬರ್ 2025, 22:30 IST
_
_   

ಆಡಳಿತವು ಯಾರಿಗಾಗಿ ರೂಪುಗೊಂಡಿದೆ? ಪ್ರಜೆಗಳ ಕಾಳಜಿಯನ್ನೇ ಆಡಳಿತದ ಧ್ಯೇಯವಾಗುಳ್ಳ ಸರ್ಕಾರಗಳು ಕೇಳಿಕೊಳ್ಳಲೇಬೇಕಾದ ಪ್ರಶ್ನೆಯಿದು. ಉತ್ತಮ ಆಡಳಿತವನ್ನು ಬರೀ ಯೋಜನೆಗಳ ಪ್ರಮಾಣ ಅಥವಾ ಅನುಷ್ಠಾನದ ವೇಗದ ಆಧಾರದಲ್ಲಿ ಅಳೆಯಲು ಸಾಧ್ಯವಿಲ್ಲ. ನಾಗರಿಕರು ಆಡಳಿತ ವ್ಯವಸ್ಥೆಯ ಕೇಂದ್ರಬಿಂದು ಆಗಬೇಕಾದ ಸಮಯವಿದು. ಈ ಕುರಿತ ಚಿಂತನೆಗೆ ‘ರಾಷ್ಟ್ರೀಯ ಉತ್ತಮ ಆಡಳಿತ ದಿನ’
(ಡಿ. 25) ಉತ್ತಮ ಸಂದರ್ಭ.

ಗ್ರಾಮ ಪಂಚಾಯಿತಿಯಿಂದ ವಿಧಾನಸಭೆ ಮತ್ತು ಸಂಸತ್ತಿನವರೆಗೆ, ಹುಟ್ಟಿನಿಂದ ವೃದ್ಧಾಪ್ಯದವರೆಗೆ, ಸರ್ಕಾರದೊಂದಿಗಿನ ಸಂವಹನಗಳಲ್ಲಿ ನಾಗರಿಕರ ಜೀವನ ಅನುಭವವನ್ನು ಹೆಚ್ಚಿಸುವ ಸಂಕಲ್ಪ ತೊಟ್ಟು, ನೀತಿ ರೂಪಿಸುವುದೇ ಸರ್ಕಾರಗಳ ಆದ್ಯತೆ ಆಗಿರಬೇಕು. ನಾಗರಿಕ ಕೇಂದ್ರಿತ ಆಡಳಿತ ಮಾದರಿಯನ್ನು ಅನುಸರಿಸಿ ನಾಗರಿಕರ ಜೀವನಮಟ್ಟವನ್ನು ಸುಧಾರಿಸುವುದೇ ‘ವಿಕಸಿತ ಭಾರತ’ದ ಅರ್ಥಪೂರ್ಣ ಅಭಿವ್ಯಕ್ತಿ. ಕಳೆದ ಎರಡು ಮೂರು ದಶಕಗಳಲ್ಲಿ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಸಾರ್ವಜನಿಕ ಸೇವೆಗಳ ಕಾರ್ಯಕ್ಷಮತೆ ಮತ್ತು ನಾಗರಿಕ ತೃಪ್ತಿಯನ್ನು ಹೆಚ್ಚಿಸಲು ಪ್ರಯತ್ನಗಳು ನಡೆದಿವೆ. ನಾಗರಿಕ ಸನ್ನದುಗಳು ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು ಅಳವಡಿಸಿಕೊಳ್ಳುವುದು, ಗ್ರಾಹಕ ಸಂರಕ್ಷಣಾ ಕ್ರಮಗಳ ಅನುಷ್ಠಾನ, ಮಾಹಿತಿ ಹಕ್ಕು ಮತ್ತು ಸೇವೆಗಳ ಖಾತರಿ ಹಕ್ಕು, ಜೊತೆಗೆ ಡಿಜಿಟಲ್ ಸೇವಾ ವಿತರಣಾ ವೇದಿಕೆ
ಗಳು ಮತ್ತು ಕುಂದುಕೊರತೆ ಪರಿಹಾರವೇದಿಕೆಗಳು ನಾಗರಿಕರನ್ನು ಸಬಲೀಕರಿಸುವ ಉದ್ದೇಶದಿಂದಲೇ ರೂಪುಗೊಂಡಿವೆ. ಆದರೂ, ಈ ಉಪಕ್ರಮಗಳು ಬಹುತೇಕ ನಾಗರಿಕರ ಅನುಭವದ ಒಂದೊಂದು ಅಂಶವನ್ನಷ್ಟೇ ಸ್ಪರ್ಶಿಸಿವೆ. ಪಾರದರ್ಶಕತೆ ಮಾತ್ರವೋ, ಹಕ್ಕು ಆಧಾರಿತ ಸೇವೆಯೋ, ಅಥವಾ ಯೋಜನೆಗಳ ನಂತರದ ಲೆಕ್ಕ ಪರಿಶೋಧನೆಗಳೋ, ಇವುಗಳಲ್ಲಿ ಯಾವುದೂ ತಾನಾಗಿಯೇ ಆಡಳಿತದ ಮೇಲೆ ದೀರ್ಘಕಾಲೀನ ನಂಬಿಕೆ ಹುಟ್ಟಿಸಲು ಅಥವಾ ಹೆಚ್ಚಿಸಲು ಸಾಧ್ಯವಿಲ್ಲ. ಡಿಜಿಟಲೀಕರಣವೂ ಆಳವಾದ ಸಂಸ್ಥಾತ್ಮಕ ಕೊರತೆಗಳನ್ನು ಸರಿದೂಗಿಸಲು ಸಾಧ್ಯವಿಲ್ಲ.

ಇದೀಗ ಭಾರತಕ್ಕೆ ಬೇಕಾಗಿರುವುದು ಒಂದು ನಾಗರಿಕಕೇಂದ್ರಿತ ಆಡಳಿತದ ವ್ಯವಸ್ಥಿತ ಮಾದರಿ. ಇದು ನೀತಿರಚನೆಮತ್ತು ನಿಯಂತ್ರಣ, ಸೇವಾ ವಿತರಣೆ ಮತ್ತು ಅಭಿವೃದ್ಧಿ ಸೇರಿದಂತೆ ಸರ್ಕಾರಿ ಕಾರ್ಯಗಳ ಸಂಪೂರ್ಣ ವರ್ಣಪಟಲದಲ್ಲಿ ಮತ್ತು ಸರ್ಕಾರದ ಎಲ್ಲಾ ಹಂತಗಳಲ್ಲಿ ಸಮಗ್ರವಾಗಿ ಅನ್ವಯ
ವಾಗುವಂತಹ ಮಾದರಿ. ನಾಗರಿಕ ಕೇಂದ್ರಿತತೆಯನ್ನು ಅನುಷ್ಠಾನ ಹಂತದಲ್ಲಿ ಮಾತ್ರ ಪರಿಚಯಿಸಲು ಸಾಧ್ಯವಿಲ್ಲ. ಪರಿಕಲ್ಪನೆ, ಅಗತ್ಯಗಳ ಗುರುತಿಸುವಿಕೆಯಿಂದ ಹಿಡಿದು ವಿನ್ಯಾಸ, ಕಾರ್ಯಗತಗೊಳಿಸುವಿಕೆ ಮತ್ತು ಮೌಲ್ಯಮಾಪನದವರೆಗೆ ಕಾರ್ಯಕ್ರಮದ ಇಡೀ ಜೀವನಚಕ್ರದಲ್ಲಿ ಇದನ್ನು ಅಳವಡಿಸಬೇಕು. ಇಂತಹ ಸಮಗ್ರ ನಾಗರಿಕ ಕೇಂದ್ರಿತ ಆಡಳಿತ ಚೌಕಟ್ಟು ಐದು ಪರಸ್ಪರ ಸಂಬಂಧಿತ ಆಧಾರಸ್ತಂಭಗಳ ಮೇಲೆ
ನಿಂತಿದೆ: ಪಾರದರ್ಶಕತೆ, ಭಾಗವಹಿಸುವಿಕೆ, ಹೊಣೆಗಾರಿಕೆ, ಸ್ಪಂದಿಸುವಿಕೆ ಮತ್ತು ನಿರಂತರ ಸುಧಾರಣೆ.

ADVERTISEMENT

ಪಾರದರ್ಶಕತೆ ಎಂದರೆ ನಾಗರಿಕರು ಅರ್ಥಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗುವಂತೆ ಸರ್ಕಾರವು ಮಾಹಿತಿ ನೀಡುವ ಮತ್ತು ವಿವರಿಸುವ ಪ್ರಕ್ರಿಯೆ. ಯಾವುದೇ ನೀತಿ ಅಥವಾ ಯೋಜನೆ ರೂಪಿಸುವ ಮೊದಲು ಹಲವು ಮೂಲಭೂತ ಪ್ರಶ್ನೆಗಳನ್ನು ಉತ್ತರಿಸಬೇಕು. ನಾಗರಿಕರಿಗೆ ನೀಡುವ ಮಾಹಿತಿ ಸಮಗ್ರವಾಗಿದೆಯೇ? ಸಂಬಂಧಿತ ಸಮುದಾಯಗಳಿಗೆ ಅದು ಸುಲಭವಾಗಿ ಲಭ್ಯ ಇದೆಯೇ? ಇತ್ಯಾದಿ. ಮಾಹಿತಿ ಅಸಮತೆ ನಾಗರಿಕ ನಂಬಿಕೆಗೆ ದೊಡ್ಡ ಅಡೆತಡೆಗಳಲ್ಲಿ ಒಂದಾಗಿದೆ. 

ಸಮಸ್ಯೆ ಗುರುತಿಸುವಿಕೆ, ಯೋಜನೆ ರೂಪಿಸುವಿಕೆ, ಬಜೆಟ್ ಸಿದ್ಧಪಡಿಸುವಿಕೆ, ಅನುಷ್ಠಾನ ಮತ್ತು ಮೇಲ್ವಿಚಾರಣೆ ಸೇರಿದಂತೆ ಪ್ರತಿ ಹಂತದಲ್ಲೂ ನಾಗರಿಕರನ್ನು ಸೇರಿಸಿಕೊಳ್ಳುವುದೇ ನಿಜವಾದ ಭಾಗವಹಿಸುವಿಕೆ. ಸರ್ಕಾರಗಳು ಜನರನ್ನುಬರೀ ಫಲಾನುಭವಿಗಳು ಎಂದು ನೋಡುವ ಮನೋಭಾವ
ದಿಂದ ಹೊರಬಂದು, ಪಾಲುದಾರರನ್ನಾಗಿ ಪರಿಗಣಿಸಬೇಕು. ಅದೇ ರೀತಿಯಲ್ಲಿ, ತಂತ್ರಜ್ಞಾನವು ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸಬಹುದು; ಆದರೆ ಇದು ಗ್ರಾಮ ಸಭೆಗಳು, ವಾರ್ಡ್ ಸಮಿತಿಗಳು ಮತ್ತು ಪ್ರದೇಶ ಸಭೆಗಳಂತಹ ಸ್ಥಳ ಆಧಾರಿತ ವೇದಿಕೆಗಳಿಗೆ ಪರ್ಯಾಯವಾಗಲು ಸಾಧ್ಯವಿಲ್ಲ, ಅವು ಅನಿವಾರ್ಯವಾಗಿಯೇ ಉಳಿದಿವೆ.

ಹೊಣೆಗಾರಿಕೆಯು ನಂಬಿಕೆಯ ಬುನಾದಿಯಾಗಿದೆ. ವಿವಿಧ ಇಲಾಖೆಗಳು ಮತ್ತು ಆಡಳಿತ ಮಟ್ಟಗಳಲ್ಲಿ ಹೊಣೆ
ಗಾರಿಕೆ ಚದುರಿದಾಗ, ಫಲಿತಾಂಶಗಳಿಗೆ ಯಾರು ಜವಾಬ್ದಾರರು ಎಂಬುದು ನಾಗರಿಕರಿಗೆ ಸ್ಪಷ್ಟವಾಗಿರುವುದಿಲ್ಲ. ನಿಜವಾದ ಹೊಣೆಗಾರಿಕೆಗೆ ಸ್ಪಷ್ಟ ಸೇವಾ ಮಾನದಂಡಗಳು, ಕಾಲಬದ್ಧ ವಿತರಣೆ ಮತ್ತು ನಾಗರಿಕರು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡುವ ಕಾರ್ಯವಿಧಾನಗಳು ಅಗತ್ಯವಾಗಿವೆ. 

ಸ್ಪಂದಿಸುವಿಕೆಯು ಆಡಳಿತಕ್ಕೆ ಮಾನವೀಯ ಆಯಾಮವನ್ನು ಬೆರೆಸುತ್ತದೆ. ಸ್ಪಂದಿಸುವಿಕೆಯುಳ್ಳ ವ್ಯವಸ್ಥೆಯು ಬೇಗನೆ ಆಲಿಸುತ್ತದೆ. ನಾಗರಿಕರನ್ನು ಘನತೆಯಿಂದ ನಡೆಸಿಕೊಳ್ಳುತ್ತದೆ.

ಐದನೇ ಆಧಾರಸ್ತಂಭವಾದ ನಿರಂತರ ಸುಧಾರಣೆ ನಾಗರಿಕ ಕೇಂದ್ರಿತತೆಯನ್ನು ಕ್ಷಣಿಕ ಪ್ರಯತ್ನವಾಗದಂತೆ ನೋಡಿಕೊಳ್ಳುತ್ತದೆ. ನಾಗರಿಕ ಪ್ರತಿಕ್ರಿಯೆ ಅಳವಡಿಸುವಿಕೆ, ನಾಗರಿಕ ನೇತೃತ್ವದ ಮೇಲ್ವಿಚಾರಣೆ, ಸ್ವತಂತ್ರ ಕಾರ್ಯನಿರ್ವಹಣಾ ಮೌಲ್ಯಮಾಪನಗಳು ಮತ್ತು ಫಲಿತಾಂಶ ಆಧಾರಿತ ವಿಮರ್ಶೆಗಳು ಆಡಳಿತವನ್ನು ಸದಾ ಉತ್ತಮಗೊಳಿಸಲು ಸಹಾಯಕವಾಗಬೇಕು. ವಿಶ್ವದರ್ಜೆಯ ಜೀವನ ಗುಣಮಟ್ಟ ಮತ್ತು ನಾಗರಿಕರ ವಿಶ್ವಾಸವನ್ನೂ ಒಳಗೊಂಡ ಅಭಿವೃದ್ಧಿಯನ್ನು ಹೊಂದಬೇಕಾದರೆ, ಒಂದು ಸಮಗ್ರ ನಾಗರಿಕ ಕೇಂದ್ರಿತ ಆಡಳಿತ ಮಾದರಿ ಅತ್ಯಗತ್ಯ.

ಲೇಖಕ: ನಿರ್ದೇಶಕರು, ಪಾಲಿಸಿ ಎಂಗೇಜ್ಮೆಂಟ್, ಜನಾಗ್ರಹ ಸೆಂಟರ್ ಫಾರ್ ಸಿಟಿಜನ್‌ಷಿಪ್‌ ಅಂಡ್ ಡೆಮಾಕ್ರಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.