
ಸ್ವಚ್ಛತೆ ಮತ್ತು ಸರಳತೆ ಬಗ್ಗೆ ಸಾರಿ ಸಾರಿ ಹೇಳಿದ ಗಾಂಧೀಜಿಯ ಮಾತು ಕೇಳಿಸಿಕೊಳ್ಳಲು ಜಗತ್ತಿನ ಕಿವಿ ತೂತಾಗಿತ್ತು. ನಮ್ಮ ಭೂಮಿಯೆಲ್ಲ ಈಗ ತೂತು ಜರಡಿಯಾದಾಗ ಜಗತ್ತು ಎಚ್ಚೆತ್ತಿದೆ.
ಟಿ.ಆರ್. ಅನಂತರಾಮು ಅವರ ‘ಭೂಮಿ ಪರ ವಕಾಲತ್ತಿಗೆ ಗಾಂಧಿ ಅಸ್ತ್ರ’ ಎಂಬ ಲೇಖನ (ಪ್ರ.ವಾ., ಮೇ 15) ಕಿವಿಯಿಂದತುಸು ಗಿದ್ಲ ತೆಗೆದ ಹೋರಾಟ ಸೂಚಿಸುತ್ತಿದೆ.
ಹಾಗೆ ನೋಡಿದರೆ, ಸೂರ್ಯ ಮುಳುಗದ ಸಾಮ್ರಾಜ್ಯದ ಅತಿ ನಾಗರಿಕತೆಯ ಸವಾರಿ ಬ್ರಿಟನ್‌ನಿಂದಲೇ ಪ್ರಾರಂಭವಾಗಿತ್ತು. ಅಲ್ಲಿನ ಥೇಮ್ಸ್ ನದಿ ಮುಟ್ಟಲು ಈ ಹಿಂದೆ ಅಯೋಗ್ಯವಾಗಿತ್ತು. ಸರಿಮಾಡಿಕೊಂಡ ಅಲ್ಲಿನ ಸಮಾಜ ಇಂದು ಸಹ ಮ್ಯಾಂಚೆಸ್ಟರ್ ನದಿಯನ್ನು ಜಗತ್ತಿನ ಅತಿ ಕಲ್ಮಷದ ನದಿಯೆಂದೇ ಪ್ರದರ್ಶನಕ್ಕಿಟ್ಟಿದೆ. ಕಳೆದ ತಿಂಗಳು ಲಂಡನ್ನಿನ ವಾಟರ್‌ಲೂ ಸೇತುವೆ ಮೇಲೆ ಗಾಂಧಿಯವರ ಅಹಿಂಸಾ ಮಾರ್ಗದ ಮೂಲಕ ಕಾನೂನುಭಂಗ ಚಳವಳಿಗಿಳಿದ ಅಲ್ಲಿನ ಯುವಜನ, ಪ್ಯಾರಿಸ್ ಒಪ್ಪಂದದ ಜಾರಿ ಬಗ್ಗೆ ಜಾಗೃತಿಗೊಳಿಸಲು ಜೈಲ್ ಭರೊ ಚಳವಳಿ ಆರಂಭಿಸಿದ್ದಾರೆ. ‘ಇರುವುದೊಂದೇ ಭೂಮಿ’ ಉಳಿಸಲು ಈ ಚಳವಳಿ ಜಗದಾದ್ಯಂತ ಹರಡುವ ಆಶಾಭಾವನೆಯಲ್ಲಿದೆ. ಕೆಟ್ಟ ಮೇಲೆ ಬುದ್ಧಿ ಬರಬೇಕಲ್ಲವೇ ಎಂಬುದು ಗ್ರಾಮೀಣ ಗಾದೆ.
ಮಾಲಿನ್ಯ ಬಿತ್ತುತ್ತಿರುವ ದೇಶಗಳಲ್ಲಿ ಚೀನಾ, ಅಮೆರಿಕ ಹಾಗೂ ಭಾರತ ಅನುಕ್ರಮದಲ್ಲಿವೆ. ಹಿರಿಯಣ್ಣನ ಸ್ಥಾನದಲ್ಲಿರುವ ಅಮೆರಿಕವನ್ನು ಜಗತ್ತು ಕಾತರದಿಂದ ನೋಡುತ್ತಿದೆ. ಇದೇ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ಈ ಹಿಂದಿನ 50 ವರ್ಷಗಳಲ್ಲಿ ಯಾವ ರೀತಿ ಪ್ರಕೃತಿ ಬದಲಾಗಿದೆ ಎಂಬ ಅಂಕಿಅಂಶ ನೀಡಿದೆ. ಭಾರತ ಕೂಡ ಅರಣ್ಯ ಹಾಗೂ ಭೂಮಿಗೆ ನಾಗರಿಕತೆ ಎಂಬ ಮಚ್ಚು ಹಿಡಿದು ಪೆಟ್ಟು ಕೊಡುತ್ತಿದೆ.
ದೇಶಕ್ಕೆ ಬರ ಬಂದಿದೆ. ಶೇ 85ರಷ್ಟು ರಸಭರಿತ ಭೂಮಿ ಹಾಗೂ ನೀರು ಒಣಗುತ್ತಿವೆ. ವಾಯುದೇವನಿಗೆ ಉಬ್ಬಸ ಬಂದಿದೆ. ದೇಶದ ಭದ್ರತೆಯೆಂದರೆ ಶುದ್ಧ ಗಾಳಿ, ನೀರು. ನಮ್ಮ ರಾಜಕಾರಣ ಕೂಡ ಜಗದ ಮತಿಯ ಫೋಬಿಯಾ ಕಡೆ ಸೇರಿದೆ. ಎಲ್ಲರಿಗೂ ಆದದ್ದು ನಮಗೂ ಆಗುತ್ತದೆ ಎಂಬ ಸಾಮೂಹಿಕ ಆಲಸ್ಯ ಮುಂದಿನ ಪೀಳಿಗೆಯನ್ನು ನರಕ ಲೋಕಕ್ಕೆ ನೂಕುತ್ತಿದೆ.
‘ಲೋಕ ಹಿಂಸಾಮಯವಾಗಿದೆ. ಪ್ರಕೃತಿಯ ಕೈಬಾಯಿ ಎಲ್ಲಾ ಕೆಂಪಾಗಿದೆ’ ಎಂದು ಗಾಂಧೀಜಿ 1926ರಲ್ಲಿಯೇ ಹೇಳಿದ್ದರು. ಆ ಹಿಂದೆಯೇ ಬ್ರಿಟನ್ನಿನಲ್ಲಿ ನಿಸರ್ಗ ಮಹಾಕವಿ ವರ್ಡ್ಸ್‌ವರ್ತ್, ಅತಿ ನಾಗರಿಕತೆಯ ದುಷ್ಪರಿಣಾಮದ ಬಗ್ಗೆ ಜಾಥಾ ಹೊರಟಿದ್ದರು. ಡೇವಿಡ್ ಥೋರೊ, ಅಮೆರಿಕದಲ್ಲಿ ಭವಿಷ್ಯದ ಎಚ್ಚರಿಕೆ ನೀಡಿ ಕಾನೂನುಭಂಗ ಚಳವಳಿಗೆ ಬೀಜ ಹಾಕಿದ್ದಾತ. ಇಂಗ್ಲೆಂಡಿನ ರಸ್ಕಿನ್ ಸಹ ಈ ದಾರಿ ಸೃಷ್ಟಿಸಿದ. ಇವರೆಲ್ಲರಿಂದ ಒಂದೊಂದು ಎಸಳು ಕೊಯ್ದು ಮಾಲೆ ಕಟ್ಟಿದ ಈ ದಾರಿಯ ಹೂಮಾಲೆಯೇ ಗಾಂಧಿಗಿರಿ. ಅದೀಗ, ಮುಳುಗುತ್ತಿರುವ ನೌಕೆಗೆ ಅಸ್ತ್ರ ಸೇತುವೆ. ‘ಪ್ರೇಮಪೂರಿತ ಶಾಸನೋಲ್ಲಂಘನೆ ಬಾಳಿನ ಜೀವರಸ’ ಎಂದು ‘ಯಂಗ್ ಇಂಡಿಯಾ’ ಮೂಲಕ ಗಾಂಧೀಜಿ 1920ರಲ್ಲೇ ಸಾರಿದ ಈ ಅಸ್ತ್ರವೊಂದೇ ಜಗತ್ತನ್ನು ಉಳಿಸುವ ತೂಗು ಮಂಚ.
‘ಗಾಂಧಿ ಪಂಥ ಎಂಬುದೊಂದಿಲ್ಲ. ನನ್ನ ತರುವಾಯ ಯಾವ ಪಂಥವನ್ನೂ ಕಟ್ಟಿ ಹೋಗುವ ಇಚ್ಛೆ ನನಗಿಲ್ಲ… ಸತ್ಯ, ಅಹಿಂಸೆ ಈ ಭಾವಗಳು ಪರ್ವತಗಳಷ್ಟೇ ಪುರಾತನವಾದವು’ ಎಂದು ಇದೇ ‘ಯಂಗ್ ಇಂಡಿಯಾ’ದಲ್ಲಿ ಗಾಂಧೀಜಿ ಹೇಳಿ ಪದೇ ಪದೇ ಪ್ರಯೋಗಕ್ಕೊಡ್ಡಿದರು. ಈಗ ಪರ್ವತಗಳು ಬಿಕ್ಕಳಿಸುತ್ತಿರುವ ಸಮಯ. ಆಕಾಶ ಜರಡಿಯಾಗುತ್ತಿರುವ ಸಮಯ. ಭೂಮಿ ಬಿರುಕು ಬಿಡುತ್ತಿರುವ ಸಮಯ. ಸಮುದ್ರ ಕುದಿಯಾಗುತ್ತಿರುವ ಸಮಯ. ಈ ಅಂತ್ಯದ ಸಮಯಕ್ಕೆ ಗಾಂಧೀಜಿ ಅಸ್ತ್ರವೊಂದೇ ಆಸರೆ ಎಂದು ಜಗತ್ತು ಅರಿಯುತ್ತಿರುವ ಸಮಯ.
ನಾಗರಿಕತೆ ಎಂಬ ರಾಕ್ಷಸನನ್ನು ಕತ್ತರಿಸಲು ಈ ಮೊಂಡು ಅಸ್ತ್ರದಿಂದ ಸಾಧ್ಯವಿಲ್ಲ ಎನ್ನುವವರಿದ್ದಾರೆ. ಅಹಿಂಸಾ ಚಳವಳಿ ಅಸ್ತ್ರ ಎಂಬುದು ಅಣ್ವಸ್ತ್ರ ಚಳವಳಿಯ ಮಾದರಿಯದಲ್ಲ. ಕಠಿಣ ಹೃದಯಗಳಿಗೆ ಸರ್ಜರಿ ಮಾಡುವ ಮಾಯದ ಕತ್ತರಿ. ನಾಗರಿಕತೆ ಎಂಬ ರಾಕ್ಷಸನ ತಲೆ ಕಡಿದು, ಸರಳತೆ ಎಂಬ ಸ್ವಚ್ಛ ತಲೆಕಸಿ ಮಾಡುತ್ತಾ ಲಾಲಿ ಹಾಡುವ ಕಿನ್ನರಿ. ಸ್ವಚ್ಛತೆ ಹಾಗೂ ಸರಳತೆ ಮಾತ್ರ ಜೀವಜಲ ಎಂದು ಪದ ಹೇಳುವ ತಂಬೂರಿ.
ಈ ನಾದಕ್ಕೆ ಕೆಂಪಾಗಿರುವ ಗಾಯದ ಭೂತಾಯಿ ನಿದ್ದೆ ಮಾಡಿ ಸುಧಾರಿಸಬಲ್ಲಳು. ಈ ತಾಯ ಸೇವೆ ಸುಮಾರಾದದ್ದಲ್ಲ. ಅದು ಜೇನುನೊಣಗಳು ಮಕರಂದ ಹೀರಿ ಹರಡುವ ಜೀವರಸದ ಸೇವೆ. ಮಾತು ಬರದ ಜೀವಜಾಲವು ಮಾತನಾಡುವ ಮನುಷ್ಯನಿಗೆ ತಿಳಿವಳಿಕೆ ಹೇಳುವ ಜಗತ್ ಸತ್ಯ. ಭೂಮಿಯ ಕಾವು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿಗಿಲಾಗಿ ಏರದಂತೆ ತಡೆಯುವ ಮಹಾಯಾನ. ಇದರ ಅರಿವೇ ವಿಶ್ವಸಂಸ್ಥೆಯ ಮಹಾಅರಿವು. ಇದು ಪ್ರತಿ ಮಾನವನ ಹೃದಯದಿಂದ ಆಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.