ಲಂಚ ಪಡೆದ ಆರೋಪ ಸಾಬೀತಾದ ಕಾರಣ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಇಪ್ಪಾಡಿ ಕಂದಾಯ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಕೆ.ಬಿ. ಲೋಕೇಶ್ ಎನ್ನುವವರಿಗೆ 7ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ, ₹20 ಸಾವಿರ ದಂಡ (ಆತ ಪಡೆದಿದ್ದು ಅಷ್ಟೇ ಲಂಚ) ವಿಧಿಸಿದೆ.
2021ರಲ್ಲಿ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅವರನ್ನು ಬಂಧಿಸಿದ್ದರು. ಲಂಚ ಪಡೆದ ಸರ್ಕಾರಿ ಸಿಬ್ಬಂದಿಗೆ ಶಿಕ್ಷೆ ಆಗುವುದು ಅಪರೂಪ. ಇತ್ತೀಚಿನ ದಿನಗಳಲ್ಲಂತೂ ಭ್ರಷ್ಟರಿಗೆ ಶಿಕ್ಷೆಯಾಗಿರುವ ಇಂಥ ಪ್ರಕರಣಗಳು ಅಪರೂಪದಲ್ಲೇ ಅಪರೂಪ.
ಕಾಮಗಾರಿಯೊಂದರ ಬಿಲ್ ಬಿಡುಗಡೆ ಮಾಡಲು ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುವಾಗ ಲೋಕಾಯುಕ್ತರ ದಾಳಿಯಲ್ಲಿ ಸಿಕ್ಕಿಬಿದ್ದಿದ್ದ ದಾವಣಗೆರೆ ಜಿಲ್ಲೆಯ ಹರಿಹರ ನಗರಸಭೆಯ 5ನೇ ವಾರ್ಡ್ ಸದಸ್ಯರೊಬ್ಬರ ಸದಸ್ಯತ್ವವನ್ನು ಈಚೆಗಷ್ಟೇ ರದ್ದುಪಡಿಸಲಾಗಿದೆ. ಆರೋಪ ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಪ್ರಾದೇಶಿಕ ಆಯುಕ್ತರು ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಕಲಂ 41(1)ರ ಅಡಿ ಸದಸ್ಯತ್ವ ರದ್ದುಪಡಿಸಿದ್ದಾರೆ. ಲಂಚ ಪಡೆದ ಆರೋಪದ ಪ್ರಕರಣವು ವಿಚಾರಣೆ ಹಂತದಲ್ಲಿದ್ದು, ಶಿಕ್ಷೆಯ ಬಗ್ಗೆ ನ್ಯಾಯಾಲಯದ ಆದೇಶಕ್ಕೆ ಕಾಯಬೇಕು. ಲಂಚ ಮತ್ತು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಲ್ಲಲ್ಲಿ ಶಿಕ್ಷೆ ಆಗುತ್ತಿದೆಯೇನೋ ಸರಿ. ಆದರೆ, ಅದರ ಪ್ರಮಾಣ ಅತ್ಯಂತ ಕಡಿಮೆ.
ಪೊಲೀಸರು ಎಷ್ಟೇ ಚುರುಕಾದ ತನಿಖೆ ನಡೆಸಿದರೂ ಕೊನೆಗೆ ಸಾಕ್ಷ್ಯಾಧಾರಗಳ ಕೊರತೆ ಅಥವಾ ಸಾಕ್ಷಿಗಳು ತಿರುಗಿ ಬೀಳುತ್ತಿರುವುದರಿಂದ ಭ್ರಷ್ಟರ ಹೆಡೆಮುರಿ ಕಟ್ಟುವುದು ಅಸಾಧ್ಯ ಎಂಬಂತಾಗಿದೆ. ದೂರು ಕೊಟ್ಟವರು, ಆ ಸಂದರ್ಭಕ್ಕೆ ಸಾಕ್ಷಿಯಾಗಿ ಹೇಳಿಕೆ ನೀಡಿ ಸಹಿ ಮಾಡಿದ ಇತರ ಸಿಬ್ಬಂದಿ ಹಾಗೂ ಪಂಚನಾಮೆ ವೇಳೆ ಇದ್ದ ಪಂಚರು ಸೇರಿ ಬಹುತೇಕರು ಆರೋಪಿ ಒಡ್ಡುವ ಆಮಿಷಗಳಿಗೆ ಬಲಿಯಾಗುವ ಮೂಲಕ ತಿರುಗಿ ಬೀಳುವ ಸಾಧ್ಯತೆ ಇರುವುದರಿಂದ– ಲಂಚಕ್ಕೂ, ಲಂಚ ಪಡೆಯುವ ಭ್ರಷ್ಟರಿಗೂ ಕಡಿವಾಣವೇ ಇಲ್ಲದಂತೆ ಆಗಿದೆ.
ಭ್ರಷ್ಟರಿಗೆ ಶಿಕ್ಷೆ ಆದ ನಿದರ್ಶನಗಳು ಕಣ್ಣೆದುರು ಇಲ್ಲದಿದ್ದರೆ, ‘ನಮ್ಮನ್ನು ಯಾರೇನು ಮಾಡಿಯಾರು?’ ಎಂಬ ಅಸಡ್ಡೆಯೂ, ಅಹಂಕಾರವೂ ಭ್ರಷ್ಟರಲ್ಲಿ ಮನೆಮಾಡಲು ಕಾರಣವಾಗುತ್ತಿದೆ.
ರಾಜಾರೋಷವಾಗಿ ಲಂಚ ಪಡೆದು ಸಿಕ್ಕಿಹಾಕಿಕೊಂಡವರು ಮುಂದೆಯೂ ಸಮಾಜದ ಪ್ರೀತ್ಯಾದರಗಳನ್ನು ಗಳಿಸುತ್ತ ಸಾಗಿರುವುದು ನೈತಿಕತೆಯ ಅಧಃಪತನದ ಸಂಕೇತವೂ, ಭ್ರಷ್ಟಾಚಾರವನ್ನು ಎಲ್ಲರೂ ಸಹಿಸಿಕೊಳ್ಳುತ್ತಿರುವುದರ ದ್ಯೋತಕ ಎಂಬಂತಾಗಿದೆ. ಈ ಬೆಳವಣಿಗೆ, ನೈತಿಕತೆಯ ಗಂಧ–ಗಾಳಿಯ ಸಂಪರ್ಕವೇ ಇಲ್ಲವೇನೋ ಎಂಬಂತೆ ಸಮಾಜ ಬದಲಾಗಿರುವುದನ್ನು ಸ್ಪಷ್ಟಪಡಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧೆಡೆ ತಾಲ್ಲೂಕು, ಜಿಲ್ಲಾಮಟ್ಟದ ಹಿರಿಯ, ಕಿರಿಯ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ಮಾಡುತ್ತಿರುವ ಲೋಕಾಯುಕ್ತ ಸಿಬ್ಬಂದಿ, ಭ್ರಷ್ಟರ ಅಕ್ರಮವನ್ನು ಬಯಲಿಗೆ ಎಳೆಯುತ್ತಿದ್ದಾರೆ ಹಾಗೂ ಅವರು ಸಂಪಾದಿಸಿರುವ ಅಪಾರ ಆಸ್ತಿಯ ವಿವರವನ್ನೂ ಬಹಿರಂಗಪಡಿಸುತ್ತಿದ್ದಾರೆ. ಜವಾನ ಹುದ್ದೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಕೊಪ್ಪಳ ಜಿಲ್ಲೆಯ ಒಬ್ಬರ ಬಳಿ 24 ಮನೆ, ಕೆಲವು ನಿವೇಶನ, ನಗದು, ಬ್ಯಾಂಕ್ ಖಾತೆಯಲ್ಲಿ ಅಪಾರ ಮೊತ್ತದ ಹಣ, ಭಾರಿ ಪ್ರಮಾಣದ ಚಿನ್ನ, ಒಂದೂವರೆ ಕೆ.ಜಿ ಬೆಳ್ಳಿ ಮತ್ತು ಇತರೆ ಆಸ್ತಿ– ಅಡವು ಪತ್ರಗಳು ದೊರೆತಿವೆ.
ಲೋಕಾಯುಕ್ತರು ವಶಪಡಿಸಿಕೊಂಡ ನಗದು, ಚಿನ್ನಾಭರಣ, ಆಸ್ತಿಪತ್ರಗಳು ಮುಂದೇನಾಗುತ್ತವೆ ಎಂಬುದು ಮಾತ್ರ ಯಾರಿಗೂ ಗೊತ್ತಾಗುವುದಿಲ್ಲ. ವಶಪಡಿಸಿಕೊಂಡ ಎಲ್ಲವನ್ನೂ ಲೋಕಾಯುಕ್ತ ಸಿಬ್ಬಂದಿ ನ್ಯಾಯಾಲಯದ ಸುಪರ್ದಿಗೆ ಒಪ್ಪಿಸಿ ಜಿಲ್ಲಾ ಖಜಾನೆಯಲ್ಲಿ ಇರಿಸುತ್ತಾರೆ. ದೋಷಾರೋಪ ಪಟ್ಟಿಯೂ ಸಲ್ಲಿಕೆಯಾಗುತ್ತದೆ. ಪ್ರಕರಣದ ಸಾಕ್ಷ್ಯಾಧಾರಗಳ ಪರಿಶೀಲನೆಯೇ ಸುಮಾರು ಎರಡು ವರ್ಷ ನಡೆಯುತ್ತದೆ. ನಂತರ ನ್ಯಾಯಾಲಯದಲ್ಲಿ 10–15 ವರ್ಷ ಪ್ರಕರಣದ ವಿಚಾರಣೆ ನಡೆಯುತ್ತದೆ (2008ರಲ್ಲಿ ನಡೆದ ದಾಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಳು ಇನ್ನೂ ನಡೆಯುತ್ತಿವೆಯಂತೆ). ಕೆಲವರಿಗೆ ಶಿಕ್ಷೆಯಾಗುತ್ತದೆ. ಅನೇಕರು ಖುಲಾಸೆ ಆಗುತ್ತಾರೆ. ಒಮ್ಮೆ ಖುಲಾಸೆ ಆದರೆಂದರೆ, ವಶಪಡಿಸಿಕೊಂಡ ಆಸ್ತಿ ಮತ್ತೆ ಅವರ ಕೈಸೇರುತ್ತದೆ.
ವಿಚಾರಣೆ ಮುಗಿಯುವುದರೊಳಗೆ ಲಂಚ ಪಡೆದವನು ಪಡೆದಿದ್ದನ್ನೂ, ಕೊಟ್ಟವನು ಕೊಟ್ಟಿದ್ದನ್ನೂ ಮರೆತಿರುತ್ತಾನೆ. ಜನರಂತೂ ಪ್ರಕರಣವನ್ನು ಎಂದೋ ಮರೆತಿರುತ್ತಾರೆ. ಲಂಚ ಕೊಡುವುದೂ, ಪಡೆಯುವುದೂ ಸರ್ವೇಸಾಮಾನ್ಯ ಎಂಬಂತಾಗಿದ್ದರಿಂದ ಭ್ರಷ್ಟರು ಒಂದಿನಿತೂ ಸಂಕೋಚ, ನಾಚಿಕೆ ಪಟ್ಟುಕೊಳ್ಳದೆ ತಮ್ಮ ಎಂದಿನ ಕಾಯಕವನ್ನು ಮುಂದುವರಿಸಿರುತ್ತಾರೆ. ಭ್ರಷ್ಟರನ್ನು ಹೆಡೆಮುರಿ ಕಟ್ಟುವಂಥ ಮತ್ತಷ್ಟು ಕಠಿಣ ಕಾನೂನು ಜಾರಿಯಾದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬಹುದು. ಇಲ್ಲದಿದ್ದರೆ, ‘ಕೊಟ್ಟವನು ಕೋಡಂಗಿ, ಇಸಿದುಕೊಂಡವನು ವೀರಭದ್ರ’ ಎಂಬ ಮಾತು ಮುಂದುವರಿಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.