ಸಂಘಜೀವಿ ಮನುಷ್ಯನಿಗೆ ನಿರ್ದಿಷ್ಟ ವ್ಯಕ್ತಿ ಅಥವಾ ಬಲಶಾಲಿ ಗುಂಪಿನ ಜೊತೆ ಗುರುತಿಸಿಕೊಂಡು ತನ್ನ ಅಸ್ತಿತ್ವ ಕಂಡುಕೊಳ್ಳುವ, ಸಮಾಧಾನಪಟ್ಟುಕೊಳ್ಳುವ ಅವಕಾಶವು ಪುರಾಣ, ಇತಿಹಾಸ ಸೇರಿದಂತೆ ಎಲ್ಲ ಕಾಲಘಟ್ಟಗಳಲ್ಲೂ ಇತ್ತು, ಈಗಲೂ ಇದೆ.
ಪ್ರಸ್ತುತ ನಾವು ರಾಜಕೀಯ ಪಕ್ಷಗಳು, ಸಿನಿಮಾ ಹೀರೊಗಳು, ಕ್ರಿಕೆಟ್ ತಂಡ ಮುಂತಾದ ಕಡೆ ಗುರುತಿಸಿಕೊಳ್ಳುವ ಅವಕಾಶಗಳಿವೆ. ಹೀಗೆ ಗುರುತಿಸಿಕೊಳ್ಳುವಿಕೆ ಒಬ್ಬ ಮನುಷ್ಯನಿಗೆ ಮಾನಸಿಕವಾಗಿ ನಿಜವಾಗಿಯೂ ಎಷ್ಟು ಅಗತ್ಯ ಎಂಬುದು ಬೇರೆ ಚರ್ಚೆ. ಆದರೆ, ನವನಾಗರಿಕತೆಯ ನವ ವ್ಯಾಪಾರಗಳು ಅದು ಅಗತ್ಯವೆಂಬ ಭ್ರಮೆಯನ್ನು ಸೃಷ್ಟಿಸಿವೆ. ಅಭಿಮಾನ ಎನ್ನುವುದು ಕುರುಡು ಉನ್ಮಾದದ ಸ್ಥಿತಿಗೆ ತಲುಪಿದಾಗ ಬುದ್ಧಿ ನಮ್ಮ ಅಂಕೆಯಲ್ಲಿರುವುದಿಲ್ಲ. ಉನ್ಮಾದವೆಂದರೆ, ಒಂದು ಬಗೆಯಲ್ಲಿ ಸಾವಿಗೂ ಹಿಂಜರಿಯದ ಸ್ಥಿತಿ.
ಕನ್ನಡ ನಾಡಿಗೂ ರಾಜ್ಯ ಸರ್ಕಾರಕ್ಕೂ ಆರ್‌ಸಿಬಿ ಕ್ರಿಕೆಟ್ ತಂಡಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಆಟಗಾರರನ್ನು ಕರೆದು ಸನ್ಮಾನಿಸುವ ಉಮೇದು ರಾಜ್ಯ ಸರ್ಕಾರಕ್ಕೆ ಯಾಕೆ ಬಂತು? ಲಕ್ಷ ಲಕ್ಷ ಜನ ಆ ತಂಡದ ಅಭಿಮಾನಿಗಳಾಗಿರುವಾಗ ತಾವು ಆ ತಂಡವನ್ನು ಕರೆದು ಗೌರವಿಸಿಬಿಟ್ಟರೆ ಅವರೆಲ್ಲರೂ ತಮ್ಮನ್ನು ಮೆಚ್ಚುತ್ತಾರೆ, ನವತರುಣರ ಮೆಚ್ಚುಗೆ ಗಳಿಸಿದರೆ ಮುಂದೆ ಸಹಾಯವಾಗಲಿದೆ ಎಂಬ ಲೆಕ್ಕಾಚಾರ ಸರ್ಕಾರವನ್ನು ಮುನ್ನಡೆಸುವವರಿಗೆ ಇದ್ದಿರಬಹುದು.
ಕ್ರಿಕೆಟ್ ವಿಜಯೋತ್ಸವದ ಉನ್ಮಾದವನ್ನು ಆಡಳಿತ ಪಕ್ಷ ತನ್ನೆಡೆಗೆ ತಿರುಗಿಸಿಕೊಳ್ಳಲು ನೋಡಿದರೆ, ಸಾವುಗಳು ಸಂಭವಿಸುತ್ತಿದ್ದಂತೆಯೇ ಪರಿಸ್ಥಿತಿಯ ಲಾಭವನ್ನು ತನ್ನ ದಿಕ್ಕಿಗೆ ತಿರುಗಿಸಿಕೊಳ್ಳಲು ವಿರೋಧ ಪಕ್ಷಗಳು ಪ್ರಯತ್ನಿಸಿದವು. ಬೀದಿ ಹೆಣಗಳಾದ ಯಾರದೋ ಮನೆಯ ಮಕ್ಕಳು ವಿರೋಧ ಪಕ್ಷಗಳಿಗೆ, ಆಡಳಿತ ಪಕ್ಷವನ್ನು ಹಣಿಯಲು ಬೇಕಾದ ಮಾತಿನ ಅಸ್ತ್ರವಾದರು.
ಇಷ್ಟೊಂದು ಜನ ಬರಬಹುದು, ಇಂತಹದೊಂದು ಸ್ಥಿತಿ ನಿರ್ಮಾಣವಾಗಬಹುದು ಎಂಬ ಕಲ್ಪನೆ ಯುವ ಅಭಿಮಾನಿಗಳಿಗೆ ಇರಲಿಲ್ಲ ಎನ್ನುವ ವಾದವಿದೆ. ಹೋಗುವಾಗ ಅಂದಾಜು ಇರಲಿಲ್ಲ ಎನ್ನುವುದನ್ನು ಒಪ್ಪಬಹುದು. ಆದರೆ, ಹೋದ ಮೇಲೆ? ಸಮುದ್ರವೇ ಮೈಮೇಲೆ ಬೀಳುವ ಸ್ಥಿತಿಯಲ್ಲೂ ಹಿಂದೆ ಸರಿಯುವ ಮನಸೇ ಯಾರೊಬ್ಬರಿಗೂ ಇದ್ದಂತಿರಲಿಲ್ಲ. ಎಲ್ಲರಿಗೂ ನುಗ್ಗುತ್ತಿರುವ ಸಮುದ್ರದ ಜೊತೆ ಗುದ್ದಾಡಿ ನಡುವೆ ಎಲ್ಲೋ ನಿಂತ ಹಡಗಿನ ಮೇಲೆ ನಡೆಯುವುದನ್ನು ಕಾಣುವ ಆಸೆ. ವಿದ್ಯಾವಂತ ಯುವಕ, ಯುವತಿಯರು ಅನಾಗರಿಕವಾಗಿ ವರ್ತಿಸಿದ್ದಾರೆ. ಹೆಣ್ಣುಮಕ್ಕಳು ಯಾವೆಲ್ಲಾ ಹೇಳಬಾರದ ಹಿಂಸೆಗಳನ್ನು ಅನುಭವಿಸಿದರೋ? ಆದರೆ, ಕೆಲವು ಹೆಣ್ಣುಮಕ್ಕಳೂ ಅನಾಗರಿಕ ವರ್ತನೆಯಲ್ಲಿ ಯಾವ ರಿಯಾಯಿತಿಯನ್ನೂ ಬಯಸಿದಂತಿರಲಿಲ್ಲ. ಅಮಲಿಗೆ, ಉನ್ಮಾದಕ್ಕೆ ಲಿಂಗಭೇದವಾದರೂ ಎಲ್ಲಿದೆ?
ಬಹುತೇಕ ಯುವಜನರ ಮನಃಸ್ಥಿತಿ ಗಮನಿಸಿ. ಈ ಭೂಮಿ ಮೇಲೆ ಜನ್ಮ ತಾಳಿರುವುದರ ಉದ್ದೇಶವೇ ಕ್ರಿಕೆಟ್ ನೋಡುವುದು; ಆಟಗಾರರ, ಸಿನಿಮಾ ನಾಯಕ ನಟರ, ರಾಜಕಾರಣಿಗಳ ಅಭಿಮಾನಿಗಳಾಗುವುದು ಎನ್ನುವಂತಾಗಿದೆ. ಅವರು ಸೋತರೆ ನಾವು ಅಳುವುದು, ಅವರು ಗೆದ್ದರೆ ನಾವು ಬೀಗುವುದು, ಅವರ ಬಗ್ಗೆ ಯಾರಾದರೂ ಮಾತಾಡಿದರೆ ಮುಗಿಬೀಳುವುದು… ಒಟ್ಟಿನಲ್ಲಿ ಭಜನೆ ಮತ್ತು ಭಂಜನೆ!
ಹನ್ನೊಂದು ಜನರ ದುರ್ಮರಣದ ಘಟನೆ ನಡೆದ ಮರುದಿನ ಬೆಂಗಳೂರಿನ ಕಂಟೋನ್ಮೆಂಟ್ ಬಳಿ ಮರ ಕಡಿಯಬಾರದೆಂದು ನಾಡಿನ ಹೋರಾಟಗಾರರು, ಸ್ವಾಮೀಜಿಗಳು, ನ್ಯಾಯಮೂರ್ತಿಗಳು ಸೇರಿದಂತೆ ಅನೇಕರು ಸಭೆ ಸೇರಿದ್ದರು. ಅಲ್ಲಿ ಸೇರಿದ್ದವರ ಉದ್ದೇಶ, ಸಂಖ್ಯೆ, ವಯಸ್ಸು ಹಾಗೂ ಗೆಲುವನ್ನು ಸಂಭ್ರಮಿಸಲು ಸೇರಿದ್ದವರ ಉದ್ದೇಶ, ಸಂಖ್ಯೆ ಮತ್ತು ವಯಸ್ಸು ನಮ್ಮ ಸಮಾಜದ ಸ್ಥಿತಿಯ ಪ್ರತಿಬಿಂಬದಂತಿದೆ.
ಸರಳ, ಸಹಜ, ನಿರುಪದ್ರವಿ ಅಭಿಮಾನ ಅಥವಾ ಭಕ್ತಿಯಾದರೆ ಅದು ಒಳ್ಳೆಯದೇ. ಅಂತಹದ್ದು ಇರಬೇಕು ಕೂಡ. ಆದರೆ, ಅಭಿಮಾನವು ಕುರುಡಾಗಿ, ಅಮಲಾಗಿ ಬದಲಾದರೆ ಕಾಲವೇ ಎಲ್ಲಿಂದಲೋ ಒಂದು ಎಚ್ಚರಿಕೆ ಕೊಡುತ್ತದೆ. ನೆಚ್ಚಿನ ಕ್ರಿಕೆಟ್ ತಂಡ ಗೆದ್ದ ಕೂಡಲೇ ಮನಸ್ಸಿನ ಮೇಲೆ ಹತೋಟಿ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾದರೆ ಹೇಗೆ? ನಾಗರಿಕ ಪ್ರಜ್ಞೆಯನ್ನೇ ಮರೆತು ಸಂವೇದನಾಹೀನರಂತೆ ನುಗ್ಗುತ್ತಾ, ಸಹ ಮನುಷ್ಯರನ್ನು ತಳ್ಳಿ, ತುಳಿದು, ಕೆಳಗೆ ಬಿದ್ದವರ ಮೇಲೆ ಹತ್ತಿ, ಒಬ್ಬ ಕ್ರಿಕೆಟ್ ಆಟಗಾರನನ್ನು ನೋಡಬೇಕೆಂದು ಬಯಸುವ ಹೀನಾಯ ಸ್ಥಿತಿಗೆ ಲಕ್ಷ ಲಕ್ಷ ಜನ ಬಂದು ನಿಂತರೆ, ಆ ಒತ್ತಡವನ್ನು ಕಾಲ ಹೇಗಾದರೂ ಭರಿಸಬೇಕು?
ಮಿತಿಮೀರುತ್ತಿದೆ ಅನ್ನುವಾಗ ಎಚ್ಚರಿಸುವ ಕೆಲಸ ಕಾಲಕ್ಕೆ ಅನಿವಾರ್ಯ ಆಗುತ್ತದೆ. ಅನಿವಾರ್ಯ ಎಚ್ಚರಕ್ಕೆ ಅವರಿವರ ಮಕ್ಕಳೆಂಬ ಭೇದವಿಲ್ಲ. ಅದು ಪ್ರವಾಹ. ಸಿಕ್ಕಿದವರನ್ನು ಕೊಚ್ಚಿಕೊಂಡು ಹೋಗುವುದು ಅದರ ಗುಣ. ಇಲ್ಲಿಯೂ ಹಾಗೆಯೇ ಆಗಿದೆ. ನಡೆದ ಘಟನೆಯಲ್ಲಿ ವ್ಯವಸ್ಥೆಯ ದೋಷದಷ್ಟೇ ಉನ್ಮಾದದ್ದೂ ಸಮಾನ ಪಾಲು ಇದೆ.
ಪ್ರತಿ ಮನೆಯನ್ನೂ ಆವರಿಸಿ ಕೂತಂತಿರುವ ಉನ್ಮಾದವನ್ನು ಈ ಮಹಾದುರಂತವೂ ಎಚ್ಚರಿಸದಿದ್ದರೆ, ನಮ್ಮ ಬದುಕಿನ ಉದ್ದೇಶ ನಮಗೆ ಈಗಲಾದರೂ ಅರ್ಥವಾಗದಿದ್ದರೆ ನಾಳೆಗಳು ಇನ್ನೂ ದುರ್ಭರವಾಗಲಿವೆ. ಎಚ್ಚರದ ಪ್ರವಾಹ ಇನ್ನಷ್ಟು ನಿರ್ದಾಕ್ಷಿಣ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.